6,6,6,6,4,6: ಸ್ಪೋಟಕ ಬ್ಯಾಟಿಂಗ್ ಮೂಲಕ ಹೊಸ ದಾಖಲೆ ಬರೆದ ಜಿಂಬಾಬ್ವೆ ಬ್ಯಾಟ್ಸ್ಮನ್
Ryan Burl: ಮೂರನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತು. ರಿಯಾನ್ ಬರ್ಲ್ 28 ಎಸೆತಗಳಲ್ಲಿ 54 ರನ್ ಸಿಡಿಸಿದರು.
ಬಾಂಗ್ಲಾದೇಶ್ ವಿರುದ್ದದ 3ನೇ ಟಿ20 ಸರಣಿಯಲ್ಲಿ ಜಿಂಬಾಬ್ವೆ ತಂಡವು ಭರ್ಜರಿ ಜಯ ಸಾಧಿಸಿದೆ. ಈ ಜಯದೊಂದಿಗೆ 3 ಪಂದ್ಯಗಳ ಸರಣಿಯನ್ನು ಜಿಂಬಾಬ್ವೆ 2-1 ಅಂತರದಿಂದ ಗೆದ್ದುಕೊಂಡಿದೆ. ಇನ್ನು ನಿರ್ಣಾಯಕವಾಗಿದ್ದ 3ನೇ ಪಂದ್ಯದ ಗೆಲುವಿನ ರೂವಾರಿ ರಿಯಾನ್ ಬರ್ಲ್. ಏಕೆಂದರೆ ಈ ಪಂದ್ಯದಲ್ಲಿ ರಿಯಾನ್ ಬರ್ಲ್ ಒಂದೇ ಓವರ್‌ನಲ್ಲಿ 34 ರನ್ ಬಾರಿಸಿದ್ದರು. ಬಾಂಗ್ಲಾದೇಶ್ ಸ್ಪಿನ್ನರ್ ನಾಸುಮ್ ಅಹಮದ್ ಎಸೆದ ಪಂದ್ಯದ 15ನೇ ಓವರ್‌ನಲ್ಲಿ ರಿಯಾನ್ ಬರ್ಲ್ ಬ್ಯಾಕ್ ಟು ಬ್ಯಾಕ್ 4 ಸಿಕ್ಸ್ ಬಾರಿಸಿದರು. ಇನ್ನು ಐದನೇ ಎಸೆತದಲ್ಲಿ ಫೋರ್ ಹೊಡೆದರು . ಹಾಗೆಯೇ ಕೊನೆಯ ಎಸೆತದಲ್ಲಿ ಮತ್ತೊಂದು ಸಿಕ್ಸ್ ಸಿಡಿಸಿದರು. ಈ ಮೂಲಕ ಒಂದೇ ಓವರ್‌ನಲ್ಲಿ 34 ರನ್ ಬಾರಿಸಿ ಹೊಸ ದಾಖಲೆ ಬರೆದರು.
ಅಂದರೆ ಜಿಂಬಾಬ್ವೆ ಪರ ಒಂದೇ ಓವರ್‌ನಲ್ಲಿ ಅತ್ಯಧಿಕ ರನ್ ಬಾರಿಸಿದ ದಾಖಲೆ ಇದೀಗ ರಿಯಾನ್ ಬರ್ಲ್ ಪಾಲಾಗಿದೆ. ಹಾಗೆಯೇ ಟಿ20 ಕ್ರಿಕೆಟ್‌ನಲ್ಲಿ ಓಂದೇ ಓವರ್‌ನಲ್ಲಿ ಅತ್ಯಧಿಕ ರನ್ ಬಾರಿಸಿದ ವಿಶ್ವದ ಮೂರನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಓಂದೇ ಓವರ್‌ನಲ್ಲಿ 6 ಸಿಕ್ಸ್ ಬಾರಿಸಿದ ಯುವರಾಜ್ ಸಿಂಗ್ ಅಗ್ರಸ್ಥಾನದಲ್ಲಿದ್ದರೆ, ಆರು ಎಸೆತಗಳಿಗೆ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿದ ಕೀರನ್ ಪೋಲಾರ್ಡ್ 2ನೇ ಸ್ಥಾನದಲ್ಲಿದ್ದಾರೆ. ಇದೀಗ 5 ಸಿಕ್ಸ್ ಹಾಗೂ 1 ಫೋರ್ನೊಂದಿಗೆ ರಿಯಾನ್ ಬರ್ಲ್ 3ನೇ ಸ್ಥಾನ ಅಲಂಕರಿಸಿದ್ದಾರೆ. ಈ ಮೂಲಕ ಸಿಕ್ಸ್ಗಳ ಮೂಲಕ ವಿಶ್ವ ದಾಖಲೆ ಬರೆದ ಆಟಗಾರರ ಪಟ್ಟಿಗೆ ಜಿಂಬಾಬ್ವೆ ಆಟಗಾರ ಕೂಡ ಎಂಟ್ರಿ ಕೊಟ್ಟಿದ್ದಾನೆ.
ನಾಸುಮ್ ಕಳಪೆ ದಾಖಲೆ:
ಇದು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೂರನೇ ದುಬಾರಿ ಓವರ್ ಎಂಬುದು ವಿಶೇಷ. ಈ ಪಟ್ಟಿಯಲ್ಲಿ ಇಂಗ್ಲೆಂಡ್‌ನ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಮೊದಲ ಸ್ಥಾನದಲ್ಲಿದ್ದರೆ, ಶ್ರೀಲಂಕಾದ ಸ್ಪಿನ್ನರ್ ಅಕಿಲಾ ಧನಂಜಯ್ ಎರಡನೇ ಸ್ಥಾನದಲ್ಲಿದ್ದಾರೆ.
2007 ರ T20 ವಿಶ್ವಕಪ್‌ನಲ್ಲಿ, ಭಾರತದ ಸ್ಟಾರ್ ಆಲ್‌ರೌಂಡರ್ ಯುವರಾಜ್ ಸಿಂಗ್ ಸ್ಟುವರ್ಟ್ ಬ್ರಾಡ್ ಅವರ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸಿದ್ದರು. ಇನ್ನು ಶ್ರೀಲಂಕಾದ ಅಕಿಲ ಧನಂಜಯ್ ಓವರ್‌ನಲ್ಲಿ ಪೊಲಾರ್ಡ್ 6 ಸಿಕ್ಸ್ ಸಿಡಿಸಿ ಯುವಿಯ ದಾಖಲೆಯನ್ನು ಸರಿಗಟ್ಟಿದ್ದರು. ಇದೀಗ 34 ರನ್ ನೀಡುವ ಮೂಲಕ ನಾಸುಮ್ ಅಹ್ಮದ್ ದುಬಾರಿ ಓವರ್ ಎಸೆದ ಬೌಲರ್ಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.
ಅಷ್ಟೇ ಅಲ್ಲದೆ ಬಾಂಗ್ಲಾದೇಶ್ ತಂಡದ ಪರ ಅತ್ಯಧಿಕ ರನ್ ನೀಡಿದ ಬೌಲರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ 2017 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯದಲ್ಲಿ ಸೈಫುದ್ದೀನ್ ಅಹ್ಮದ್ 31 ರನ್ ನೀಡಿದ್ದರು. ಇದೀಗ 34 ರನ್ ನೀಡುವ ಮೂಲಕ ಸೈಫುದ್ದೀನ್ ಕಳಪೆ ದಾಖಲೆಯನ್ನು ದಾಟಿ ನಾಸುಮ್ ಅಹ್ಮದ್ ಕೆಟ್ಟ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ.
ಜಿಂಬಾಬ್ವೆಗೆ ಸರಣಿ ಜಯ: ಮೂರನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತು. ರಿಯಾನ್ ಬರ್ಲ್ 28 ಎಸೆತಗಳಲ್ಲಿ 54 ರನ್ ಸಿಡಿಸಿದರು. ಈ ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ್ ತಂಡವು ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 146 ರನ್ಗಳಿಸಲಷ್ಟೇ ಶಕ್ತರಾದರು. ಇನ್ನು ಸ್ಪೋಟಕ ಅರ್ಧಶತಕ ಸಿಡಿಸಿ ಮಿಂಚಿದ್ದ ರಿಯಾನ್ ಬರ್ಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.