Asia Cup 2022: ಏಷ್ಯಾಕಪ್ನ ಸೂಪರ್-4 ಹಂತದ 5ನೇ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಮೈದಾನದಲ್ಲಿ ಪಾಕಿಸ್ತಾನ್-ಅಫ್ಘಾನಿಸ್ತಾನ್ (Pakistan vs Afghanistan) ಆಟಗಾರರು ಕಾಳಗಕ್ಕೆ ಇಳಿದರೆ, ಸ್ಟೇಡಿಯಂನಲ್ಲಿ ಉಭಯ ತಂಡಗಳ ಅಭಿಮಾನಿಗಳು ಕೂಡ ಹೊಡೆದಾಡಿಕೊಂಡರು. ಭಾರೀ ರೋಚಕತೆಗೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ್ ತಂಡವು 6 ವಿಕೆಟ್ ನಷ್ಟಕ್ಕೆ 129 ರನ್ ಕಲೆಹಾಕಿತ್ತು. ಈ ಸುಲಭ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ತಂಡಕ್ಕೆ ಅಂತಿಮ ಹಂತದಲ್ಲಿ ಆಘಾತ ನೀಡುವಲ್ಲಿ ಅಫ್ಘಾನಿಸ್ತಾನ್ ಬೌಲರ್ಗಳು ಯಶಸ್ವಿಯಾಗಿದ್ದರು.
ಅದರಂತೆ 19 ಓವರ್ ಮುಕ್ತಾಯದ ವೇಳೆಗೆ 9 ವಿಕೆಟ್ ಉರುಳಿಸಿದ ಅಫ್ಘಾನ್ ತಂಡವು ಗೆಲ್ಲುವ ನಿರೀಕ್ಷೆಯಲ್ಲಿತ್ತು. ಪಾಕಿಸ್ತಾನ್ ತಂಡಕ್ಕೆ ಅಂತಿಮ ಓವರ್ನಲ್ಲಿ 11 ರನ್ಗಳ ಅವಶ್ಯಕತೆಯಿತ್ತು. ಇತ್ತ ಅಫ್ಘಾನಿಸ್ತಾನ್ ತಂಡಕ್ಕೆ ಕೇವಲ 1 ಒಂದು ವಿಕೆಟ್ ಬೇಕಿತ್ತು. ಆದರೆ ಕೊನೆಯ ಓವರ್ನ ಮೊದಲೆರಡು ಎಸೆತಗಳಲ್ಲಿಯೇ ಭರ್ಜರಿ ಸಿಕ್ಸ್ಗಳನ್ನು ಸಿಡಿಸುವ ಮೂಲಕ ನಸೀಮ್ ಶಾ ಪಾಕಿಸ್ತಾನ್ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.
ಈ ಭರ್ಜರಿ ಗೆಲುವಿನ ಬೆನ್ನಲ್ಲೇ ಪಾಕಿಸ್ತಾನ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಇದರ ನಡುವೆ ಅಫ್ಘಾನ್ ಅಭಿಮಾನಿಗಳನ್ನು ಹೀಯಾಳಿಸಿದ್ದಾರೆ ಎನ್ನಲಾಗಿದೆ. ಇದರಿಂದ ರೊಚ್ಚಿಗೆದ್ದ ಅಫ್ಘಾನಿಸ್ತಾನ್ ತಂಡದ ಕೆಲ ಅಭಿಮಾನಿಗಳು ಸ್ಟೇಡಿಯಂನಲ್ಲಿನ ಕುರ್ಚಿಗಳನ್ನು ಕಿತ್ತು ಪಾಕ್ ಫ್ಯಾನ್ಸ್ ಮೇಲೆಸೆದರು. ಅಲ್ಲದೆ ಕೆಲ ಅಭಿಮಾನಿಗಳೊಂದಿಗೆ ಹೊಡೆದಾಡಿಕೊಂಡರು.
ಇದರಿಂದ ಉಭಯ ತಂಡಗಳ ಅಭಿಮಾನಿಗಳ ನಡುವೆ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಇದೀಗ ಪಾಕ್-ಅಫ್ಘಾನ್ ಅಭಿಮಾನಿಗಳ ಕಿತ್ತಾಟದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋಗೆ ಅನೇಕರು ಸೋಲು-ಗೆಲುವನ್ನು ಕ್ರೀಡಾಸ್ಪೂರ್ತಿಯಿಂದ ತೆಗೆದುಕೊಳ್ಳುವಂತೆ ಪ್ರತಿಕ್ರಿಯಿಸಿದ್ದಾರೆ.
ಅಂದಹಾಗೆ ಅಫ್ಘಾನಿಸ್ತಾನ್ ಹಾಗೂ ಪಾಕಿಸ್ತಾನ್ ಕ್ರಿಕೆಟ್ ಪ್ರೇಮಿಗಳು ಹೊಡೆದಾಡಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ 2019 ರ ವಿಶ್ವಕಪ್ ವೇಳೆಯೂ ಅಫ್ಘಾನಿಸ್ತಾನ್ ಫ್ಯಾನ್ಸ್ ಹಾಗೂ ಪಾಕ್ ಅಭಿಮಾನಿಗಳು ಸ್ಟೇಡಿಯಂನಲ್ಲೇ ಕೈ ಮಿಲಾಯಿಸಿದ್ದರು. ಇದೀಗ ಶಾರ್ಜಾ ಸ್ಟೇಡಿಯಂನಲ್ಲೂ ಉಭಯ ತಂಡಗಳ ಅಭಿಮಾನಿಗಳು ಕಿತ್ತಾಡಿಕೊಂಡಿದ್ದಾರೆ.