
ಏಷ್ಯಾಕಪ್ನ ಸೂಪರ್-4 ಹಂತದ 4ನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡವು ಏಷ್ಯಾಕಪ್ ಫೈನಲ್ ಆಡುವುದನ್ನು ಖಚಿತ ಪಡಿಸಿಕೊಂಡಿದೆ. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಶುಭ್ಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಭಾರತ ತಂಡಕ್ಕೆ ಅತ್ಯುತ್ತಮ ಆರಂಭ ಒದಗಿಸಿದ್ದರು.
ಮೊದಲ ವಿಕೆಟ್ಗೆ 80 ರನ್ಗಳ ಜೊತೆಯಾಟವಾಡುವ ಮೂಲಕ ಈ ಜೋಡಿಯು ಬೃಹತ್ ಮೊತ್ತ ಪೇರಿಸುವ ಭರವಸೆ ಮೂಡಿಸಿದ್ದರು. ಆದರೆ 12ನೇ ಓವರ್ನಲ್ಲಿ ದಾಳಿಗಿಳಿದ 20 ರ ಹರೆಯದ ಯುವ ಸ್ಪಿನ್ನರ್ ದುನಿತ್ ವೆಲ್ಲಾಲಗೆ ಸ್ಪಿನ್ ಮೋಡಿಗೆ ಟೀಮ್ ಇಂಡಿಯಾ ತತ್ತರಿಸಿತು.
ಮೊದಲ ಎಸೆತದಲ್ಲೇ ಶುಭ್ಮನ್ ಗಿಲ್ (19) ಅವರನ್ನು ಬೌಲ್ಡ್ ಮಾಡಿದ ದುನಿತ್, ಮರು ಓವರ್ನಲ್ಲೇ ವಿರಾಟ್ ಕೊಹ್ಲಿಯ (3) ವಿಕೆಟ್ ಪಡೆದರು. ಇದರ ಬೆನ್ನಲ್ಲೇ ಅರ್ಧಶತಕ ಬಾರಿಸಿದ್ದ ರೋಹಿತ್ ಶರ್ಮಾ (53) ವೆಲ್ಲಾಲಗೆ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.
ಆ ಬಳಿಕ ಕೆಎಲ್ ರಾಹುಲ್ (39) ಹಾಗೂ ಹಾರ್ದಿಕ್ ಪಾಂಡ್ಯ (5) ವಿಕೆಟ್ ಕಬಳಿಸಿದರು. ಈ ಮೂಲಕ ಕೇವಲ 40 ರನ್ ನೀಡಿ 5 ವಿಕೆಟ್ ಕಬಳಿಸಿದರು.
ಮತ್ತೊಂದೆಡೆ ವೆಲ್ಲಾಲಗೆ ಉತ್ತಮ ಸಾಥ್ ನೀಡಿದ ಪಾರ್ಟ್ ಟೈಮ್ ಸ್ಪಿನ್ನರ್ ಚರಿತ್ ಅಸಲಂಕಾ ಇಶಾನ್ ಕಿಶನ್ (33) ಹಾಗೂ ರವೀಂದ್ರ ಜಡೇಜಾ (5) ವಿಕೆಟ್ ಕಬಳಿಸಿದರು. ಅಲ್ಲದೆ ಒಟ್ಟು 4 ವಿಕೆಟ್ ಉರುಳಿಸುವ ಮೂಲಕ ಟೀಮ್ ಇಂಡಿಯಾ ಪಾಲಿಗೆ ಮಾರಕವಾಗಿ ಪರಿಣಮಿಸಿದರು. ಪರಿಣಾಮ 49.1 ಓವರ್ಗಳಲ್ಲಿ ಟೀಮ್ ಇಂಡಿಯಾ 213 ರನ್ಗಳಿಸಿ ಆಲೌಟ್ ಆಯಿತು.
ಭಾರತದ ಭರ್ಜರಿ ಬೌಲಿಂಗ್:
214 ರನ್ಗಳ ಸುಲಭ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡಕ್ಕೆ ಆರಂಭದಲ್ಲೇ ಬುಮ್ರಾ ಡಬಲ್ ಶಾಕ್ ನೀಡಿದರು. ತಂಡದ ಮೊತ್ತ 25 ಆಗುವಷ್ಟರಲ್ಲಿ ಪಾತುಮ್ ನಿಸ್ಸಂಕಾ (6) ಹಾಗೂ ಕುಸಾಲ್ ಮೆಂಡಿಸ್ (15)ಗೆ ಬುಮ್ರಾ ಪೆವಿಲಿಯನ್ ಹಾದಿ ತೋರಿಸಿದರು. ಇದರ ಬೆನ್ನಲ್ಲೇ ಮೊಹಮ್ಮದ್ ಸಿರಾಜ್ ದಿಮುತ್ ಕರುಣರತ್ನೆ (2) ವಿಕೆಟ್ ಪಡೆದರು.
ಆ ಬಳಿಕ ದಾಳಿಗಿಳಿದ ಕುಲ್ದೀಪ್ ಯಾದವ್ ಸದೀರ ಸಮರವಿಕ್ರಮ (17) ಹಾಗೂ ಚರಿತ್ ಅಸಲಂಕಾ (22) ವಿಕೆಟ್ ಉರುಳಿಸಿದರು. ಇನ್ನು ದಸುನ್ ಶಾನಕ (9) ಜಡೇಜಾಗೆ ವಿಕೆಟ್ ಒಪ್ಪಿಸಿ ಬಂದ ವೇಗದಲ್ಲೇ ಹಿಂತಿರುಗಿದರು. ಈ ಹಂತದಲ್ಲಿ ಜೊತೆಗೂಡಿದ ಧನಜಂಯ ಡಿಸಿಲ್ವಾ ಹಾಗೂ ದುನಿತ್ ವೆಲ್ಲಾಲಗೆ ಅರ್ಧಶತಕದ ಜೊತೆಯಾಟವಾಡಿದರು. ಅಲ್ಲದೆ ತಂಡದ ಮೊತ್ತವನ್ನು 150 ರ ಗಡಿದಾಟಿಸಿದರು.
26ನೇ ಓವರ್ನಲ್ಲಿ 6 ವಿಕೆಟ್ ಪಡೆದಿದ್ದ ಟೀಮ್ ಇಂಡಿಯಾಗೆ ರವೀಂದ್ರ ಜಡೇಜಾ 38ನೇ ಓವರ್ನಲ್ಲಿ 7ನೇ ಯಶಸ್ಸು ತಂದು ಕೊಟ್ಟರು. ಟೀಮ್ ಇಂಡಿಯಾ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸಿದ್ದ ಧನಂಜಯ ಡಿಸಿಲ್ವಾ (41) ಅವರಿಗೆ ಕೊನೆಗೂ ಪೆವಿಲಿಯನ್ ಹಾದಿ ತೋರಿಸುವಲ್ಲಿ ಜಡೇಜಾ ಯಶಸ್ವಿಯಾದರು.
ಇದರ ಬೆನ್ನ್ಲಲೇ ಹಾರ್ದಿಕ್ ಪಾಂಡ್ಯ ಮಹೀಶ್ ತೀಕ್ಷಣ ವಿಕೆಟ್ ಪಡೆದರೆ, ಕುಲ್ದೀಪ್ ಯಾದವ್ ಕೊನೆಯ ಎರಡು ವಿಕೆಟ್ಗಳನ್ನು ಕಬಳಿಸಿದರು. ಇದರೊಂದಿಗೆ ಶ್ರೀಲಂಕಾ ತಂಡವು 41.3 ಓವರ್ಗಳಲ್ಲಿ 172 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ ಟೀಮ್ ಇಂಡಿಯಾ 41 ರನ್ಗಳಿಂದ ಭರ್ಜರಿ ಜಯ ಸಾಧಿಸಿದೆ.
ಸೂಪರ್-4 ಹಂತದ ಮೊದಲೆರಡು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಟೀಮ್ ಇಂಡಿಯಾ ಏಷ್ಯಾಕಪ್ನ ಫೈನಲ್ಗೆ ಪ್ರವೇಶಿಸಿದೆ. ಇನ್ನು ತಲಾ 2 ಅಂಕಗಳನ್ನು ಹೊಂದಿರುವ ಪಾಕಿಸ್ತಾನ್ ಹಾಗೂ ಶ್ರೀಲಂಕಾ ತಂಡಗಳು ಮುಂದಿನ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದು, ಅದರಲ್ಲಿ ಗೆದ್ದ ತಂಡ ಫೈನಲ್ಗೆ ಅರ್ಹತೆ ಪಡೆಯಲಿದೆ.
ಇತ್ತ ಟೀಮ್ ಇಂಡಿಯಾ ತನ್ನ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡವನ್ನು ಎದುರಿಸಲಿದ್ದು, ಅದರಲ್ಲಿ ಸೋತರೂ ಗೆದ್ದರೂ ಭಾರತ ತಂಡವು ಫೈನಲ್ ಆಡುವುದು ಖಚಿತ. ಏಕೆಂದರೆ ಪಾಕಿಸ್ತಾನ್ ಮತ್ತು ಶ್ರೀಲಂಕಾ ನಡುವಣ ಪಂದ್ಯವು ಉಭಯ ತಂಡಗಳಿಗೂ ನಿರ್ಣಾಯಕ. ಇದರಲ್ಲಿ ಗೆದ್ದ ತಂಡ 4 ಅಂಕಗಳೊಂದಿಗೆ ಫೈನಲ್ಗೆ ಪ್ರವೇಶಿಸಲಿದೆ.
ಆದರೆ ಇತ್ತ ಟೀಮ್ ಇಂಡಿಯಾ ಈಗಾಗಲೇ 4 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಹೀಗಾಗಿ ಪಾಕಿಸ್ತಾನ್-ಶ್ರೀಲಂಕಾ ನಡುವಣ ಪಂದ್ಯದ ಫಲಿತಾಂಶ ಪಾಯಿಂಟ್ಸ್ ಟೇಬಲ್ನಲ್ಲಿ ಮೊದಲ ಸ್ಥಾನದಲ್ಲಿರುವ ಭಾರತದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅದರಂತೆ ಕೊನೆಯ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಫೈನಲ್ಗೆ ಅರ್ಹತೆ ಪಡೆದುಕೊಂಡಿದೆ.
ಶ್ರೀಲಂಕಾ ಪ್ಲೇಯಿಂಗ್ 11: ಪಾತುಮ್ ನಿಸ್ಸಂಕಾ, ದಿಮುತ್ ಕರುಣಾರತ್ನೆ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ದಸುನ್ ಶಾನಕ (ನಾಯಕ), ದುನಿತ್ ವೆಲ್ಲಲಾಗೆ, ಮಹೀಶ್ ತೀಕ್ಷಣ, ಕಸುನ್ ರಜಿತ, ಮತೀಶ ಪತಿರಾಣ.
ಇದನ್ನೂ ಓದಿ: ಕಿಂಗ್ ಕೊಹ್ಲಿಯ 1 ಶತಕಕ್ಕೆ 10 ದಾಖಲೆಗಳು ಉಡೀಸ್..!
ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಅಕ್ಷರ್ ಪಟೇಲ್.
Published On - 10:59 pm, Tue, 12 September 23