IND vs PAK: ಪಾಕ್ ಪಡೆಯನ್ನು ಬಗ್ಗು ಬಡಿದ ಟೀಮ್ ಇಂಡಿಯಾ

| Updated By: ಝಾಹಿರ್ ಯೂಸುಫ್

Updated on: Sep 11, 2023 | 11:11 PM

Pakistan vs India: ಟೀಮ್ ಇಂಡಿಯಾ ಬ್ಯಾಟರ್​ಗಳಾದ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಅಕ್ಷರಶಃ ಅಬ್ಬರಿಸಿದರು. ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಕಿಂಗ್ ಕೊಹ್ಲಿ 84 ಎಸೆತಗಳಲ್ಲಿ ಶತಕ ಪೂರೈಸಿದರೆ, ಕೆಎಲ್ ರಾಹುಲ್ 100 ಎಸೆತಗಳಲ್ಲಿ ಸೆಂಚುರಿ ಸಿಡಿಸಿದರು. ಈ ಮೂಲಕ ಪಾಕ್ ಬೌಲರ್​ಗಳ ಬೆಂಡೆತ್ತಿದರು. ಅಷ್ಟೇ ಅಲ್ಲದೆ ಭಾರತ ತಂಡವು ಬೃಹತ್ ಮೊತ್ತ ಪೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.

IND vs PAK: ಪಾಕ್ ಪಡೆಯನ್ನು ಬಗ್ಗು ಬಡಿದ ಟೀಮ್ ಇಂಡಿಯಾ
ಟೀಮ್ ಇಂಡಿಯಾ
Follow us on

ಏಷ್ಯಾಕಪ್​ನ ಸೂಪರ್-4 ಹಂತದ 3ನೇ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ದ ಟೀಮ್ ಇಂಡಿಯಾ 228 ರನ್​ಗಳ ಅಮೋಘ ಗೆಲುವು ದಾಖಲಿಸಿದೆ. ಕೊಲಂಬೊದ ಆರ್​. ಪ್ರೇಮದಾಸ ಮೈದಾನದಲ್ಲಿ ಭಾನುವಾರ ಆರಂಭವಾದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಝಂ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾಗೆ ರೋಹಿತ್ ಶರ್ಮಾ ಹಾಗೂ ಶುಭ್​ಮನ್ ಗಿಲ್ ಸಿಡಿಲಬ್ಬರದ ಆರಂಭ ಒದಗಿಸಿದ್ದರು.

ಶಾಹೀನ್ ಅಫ್ರಿದಿಯ ಮೊದಲ ಓವರ್​ನಲ್ಲಿ ಸಿಕ್ಸ್ ಸಿಡಿಸುವ ಮೂಲಕ ರನ್ ಖಾತೆ ತೆರೆದ ರೋಹಿತ್ ಶರ್ಮಾ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಮತ್ತೊಂದೆಡೆ ಯುವ ದಾಂಡಿಗ ಶುಭ್​ಮನ್ ಗಿಲ್ ಕೂಡ ಭರ್ಜರಿಯಾಗಿ ಬ್ಯಾಟ್ ಬೀಸಿದರು.

ಪರಿಣಾಮ ಗಿಲ್ ಬ್ಯಾಟ್​ನಿಂದ 37 ಎಸೆತಗಳಲ್ಲಿ ಅರ್ಧಶತಕ ಮೂಡಿಬಂದರೆ, ರೋಹಿತ್ ಶರ್ಮಾ 42 ಎಸೆತಗಳಲ್ಲಿ ಹಾಫ್ ಸೆಂಚುರಿ ಪೂರೈಸಿದರು. ಅಲ್ಲದೆ 16.3 ಓವರ್​ಗಳಲ್ಲಿ 121 ರನ್​ಗಳ​ ಜೊತೆಯಾಟವಾಡಿದರು.

ಈ ಹಂತದಲ್ಲಿ ಶಾದಾಬ್ ಖಾನ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ರೋಹಿತ್ ಶರ್ಮಾ (56 ರನ್, 49ಎಸೆತ, 4 ಸಿಕ್ಸ್, 6 ಫೋರ್) ಕ್ಯಾಚ್ ನೀಡಿ ನಿರ್ಗಮಿಸಿದರು. ಇದರ ಬೆನ್ನಲ್ಲೇ 52 ಎಸೆತಗಳಲ್ಲಿ 10 ಫೋರ್​ಗಳೊಂದಿಗೆ 58 ರನ್​ಗಳಿಸಿದ್ದ ಶುಭ್​ಮನ್ ಗಿಲ್ ಶಾಹೀನ್ ಅಫ್ರಿದಿ ಎಸೆತದಲ್ಲಿ ಔಟಾದರು.

ಈ ಹಂತದಲ್ಲಿ ಜೊತೆಗೂಡಿದ ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ತಂಡದ ಮೊತ್ತಕ್ಕೆ 24 ರನ್ ಸೇರಿಸಿದರು. ಟೀಮ್ ಇಂಡಿಯಾ 24.1 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು 147 ರನ್​ ಕಲೆಹಾಕಿದ್ದ ವೇಳೆ ಮಳೆ ಬಂದಿದ್ದರಿಂದ ಪಂದ್ಯವನ್ನು ಮೀಸಲು ದಿನವಾದ ಸೋಮವಾರಕ್ಕೆ ಮುಂದೂಡಲಾಯಿತು.

ಮೀಸಲು ದಿನದಾಟದಲ್ಲಿ ಭಾರತೀಯರ ಪರಾಕ್ರಮ:

ಸೋಮವಾರ 24.1 ಓವರ್​ನಿಂದ ಶುರುವಾದ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟರ್​ಗಳಾದ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಅಕ್ಷರಶಃ ಅಬ್ಬರಿಸಿದರು. ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಕಿಂಗ್ ಕೊಹ್ಲಿ 84 ಎಸೆತಗಳಲ್ಲಿ ಶತಕ ಪೂರೈಸಿದರೆ, ಕೆಎಲ್ ರಾಹುಲ್ 100 ಎಸೆತಗಳಲ್ಲಿ ಸೆಂಚುರಿ ಸಿಡಿಸಿದರು. ಇದರೊಂದಿಗೆ ಟೀಮ್ ಇಂಡಿಯಾ ಸ್ಕೋರ್ 300 ರ ಗಡಿದಾಟಿತು.

ಇನ್ನು ಶತಕದ ಬಳಿಕ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ಕೆಎಲ್ ರಾಹುಲ್ ಹಾಗೂ ಕಿಂಗ್ ಕೊಹ್ಲಿ ಪಾಕಿಸ್ತಾನ್ ಬೌಲರ್​ಗಳ ಬೆಂಡೆತ್ತಿದರು. ಈ ಮೂಲಕ 106 ಎಸೆತಗಳಲ್ಲಿ 2 ಭರ್ಜರಿ ಸಿಕ್ಸ್ ಹಾಗೂ 12 ಫೋರ್​ಗಳೊಂದಿಗೆ ಕೆಎಲ್ ರಾಹುಲ್ ಅಜೇಯ 111 ರನ್ ಬಾರಿಸಿದರು.

ಮತ್ತೊಂದೆಡೆ ಸಿಡಿಲಬ್ಬರದೊಂದಿಗೆ ವಿರಾಟ್ ಕೊಹ್ಲಿ 94 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 9 ಫೋರ್​ಗಳೊಂದಿಗೆ ಅಜೇಯ 122 ರನ್​ ಸಿಡಿಸಿದರು. ಇದರೊಂದಿಗೆ 50 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಟೀಮ್ ಇಂಡಿಯಾ ಮೊತ್ತ 356 ರನ್​ಗೆ ಬಂದು ನಿಂತಿತು.

ಪಾಕ್ ತಂಡಕ್ಕೆ ಕಠಿಣ ಗುರಿ:

357 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಪಾಕಿಸ್ತಾನ್ ತಂಡಕ್ಕೆ ಜಸ್​ಪ್ರೀತ್ ಬುಮ್ರಾ ಆರಂಭಿಕ ಆಘಾತ ನೀಡಿದರು. 5ನೇ ಓವರ್​ನಲ್ಲಿ ಇಮಾಮ್ ಉಲ್ ಹಕ್ (6) ವಿಕೆಟ್ ಪಡೆದ ಬುಮ್ರಾ ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಬಾಬರ್ ಆಝಂ (10) ಕ್ಲೀನ್ ಬೌಲ್ಡ್ ಆದರು. ಇನ್ನು ಮೊಹಮ್ಮದ್ ರಿಝ್ವಾನ್ 2 ರನ್​ಗಳಿಸಿ ಶಾರ್ದೂಲ್ ಠಾಕೂರ್​ಗೆ ವಿಕೆಟ್ ಒಪ್ಪಿಸಿದರು.

ಈ ಹಂತದಲ್ಲಿ ದಾಳಿಗಿಳಿದ ಕುಲ್ದೀಪ್ ಯಾದವ್ ಪಾಕಿಸ್ತಾನ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳನ್ನು ಸ್ಪಿನ್ ಬಲೆಗೆ ಕೆಡವಿದರು. ಫಖರ್ ಝಮಾನ್ (27) ರನ್ನು ಕ್ಲೀನ್ ಬೌಲ್ಡ್ ಮಾಡಿದ ಕುಲ್ದೀಪ್, ಇದರ ಬೆನ್ನಲ್ಲೇ ಸಲ್ಮಾನ್ ಆಘಾ (23) ವಿಕೆಟ್ ಪಡೆದರು.

ಆ ಬಳಿಕ ಇಫ್ತಿಕರ್ ಅಹ್ಮದ್ (23), ಶಾದಾಬ್ ಖಾನ್ (6) ಹಾಗೂ ಫಹೀಮ್ ಅಶ್ರಫ್ ವಿಕೆಟ್ ಕಬಳಿಸುವ ಮೂಲಕ ಕುಲ್ದೀಪ್ ಯಾದವ್ 5 ವಿಕೆಟ್​ಗಳ ಸಾಧನೆ ಮಾಡಿದರು. ಅತ್ತ ಗಾಯಗೊಂಡಿದ್ದ ಹ್ಯಾರಿಸ್ ರೌಫ್ ಹಾಗೂ ನಸೀಮ್ ಶಾ ಬ್ಯಾಟಿಂಗ್​ಗೆ ಇಳಿಯದ ಕಾರಣ ಪಾಕಿಸ್ತಾನ್ ತಂಡವು 128 ರನ್​ಗಳಿಗೆ ಇನಿಂಗ್ಸ್ ಅಂತ್ಯಗೊಳಿಸಿತು. ಈ ಮೂಲಕ ಟೀಮ್ ಇಂಡಿಯಾ 228 ರನ್​ಗಳ ಅಮೋಘ ಗೆಲುವು ದಾಖಲಿಸಿತು.

ಭಾರತದ ಪರ ಕುಲ್ದೀಪ್ ಯಾದವ್ 8 ಓವರ್​ಗಳಲ್ಲಿ 25 ರನ್ ನೀಡಿ 5 ವಿಕೆಟ್ ಕಬಳಿಸಿದರೆ, ಜಸ್​ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಹಾಗೂ ಶಾರ್ದೂಲ್ ಠಾಕೂರ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.

ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಜಸ್​ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್.

ಇದನ್ನೂ ಓದಿ: ಕಿಂಗ್ ಕೊಹ್ಲಿಯ 1 ಶತಕಕ್ಕೆ 10 ದಾಖಲೆಗಳು ಉಡೀಸ್..!

ಪಾಕಿಸ್ತಾನ್ ಪ್ಲೇಯಿಂಗ್ 11: ಫಖರ್ ಝಮಾನ್, ಇಮಾಮ್ ಉಲ್ ಹಕ್, ಬಾಬರ್ ಆಝಂ (ನಾಯಕ), ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಸಲ್ಮಾನ್ ಆಘಾ, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಫಹೀಮ್ ಅಶ್ರಫ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಹ್ಯಾರಿಸ್ ರೌಫ್.

 

Published On - 11:05 pm, Mon, 11 September 23