ಪಾಕ್​ ವಿರುದ್ಧ ಮೋಡಿ ಮಾಡಲಿದ್ದಾರಾ ನೇಪಾಳಿ ಸ್ಪಿನ್ನರ್..!

| Updated By: ಝಾಹಿರ್ ಯೂಸುಫ್

Updated on: Aug 29, 2023 | 11:02 PM

Asia Cup 2023: 23 ವರ್ಷದ ಯುವ ಸ್ಪಿನ್ನರ್ ಸಂದೀಪ್ ಲಾಮಿಚಾನೆ ಐಪಿಎಲ್ ಸೇರಿದಂತೆ ವಿಶ್ವದ ಹಲವು ಲೀಗ್​ಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಹೀಗಾಗಿಯೇ ಯುವ ಸ್ಪಿನ್ನರ್ ಪಾಕ್ ವಿರುದ್ಧ ಮೋಡಿ ಮಾಡುವ ನಿರೀಕ್ಷೆಯಲ್ಲಿದ್ದಾರೆ ನೇಪಾಳ ಕ್ರಿಕೆಟ್ ಪ್ರೇಮಿಗಳು.

ಪಾಕ್​ ವಿರುದ್ಧ ಮೋಡಿ ಮಾಡಲಿದ್ದಾರಾ ನೇಪಾಳಿ ಸ್ಪಿನ್ನರ್..!
ಸಚಿನ್ ಜೊತೆ ಸಂದೀಪ್
Follow us on

ಏಷ್ಯಾಕಪ್ ಆರಂಭಕ್ಕೆ ಕೌಂಟ್ ಡೌನ್ ಶುರುವಾಗಿದೆ. ಬುಧವಾರ ಮುಲ್ತಾನ್​ನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ್ ಟೀಮ್ ನೇಪಾಳ ತಂಡವನ್ನು ಎದುರಿಸಲಿದೆ. ಇಲ್ಲಿ ನೇಪಾಳ ತಂಡಕ್ಕೆ ಇದು ಚೊಚ್ಚಲ ಏಷ್ಯಾಕಪ್. ಅತ್ತ ಬಲಿಷ್ಠ ಪಾಕಿಸ್ತಾನ್ ತಂಡಕ್ಕೆ 16ನೇ ಏಷ್ಯಾಕಪ್ ಟೂರ್ನಿ. ಹೀಗಾಗಿಯೇ ನೇಪಾಳ ತಂಡ ಪ್ರದರ್ಶನ ಹೇಗಿರಲಿದೆ ಎಂಬುದನ್ನು ವೀಕ್ಷಿಸಲು ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಈ ಕೌತುಕದ ಕಾಯುವಿಕೆಗೆ ಕಿಚ್ಚು ಹಚ್ಚುವ ವಿಶ್ವಾಸದಲ್ಲಿದ್ದಾರೆ ನೇಪಾಳ ಆಟಗಾರರು. ಏಕೆಂದರೆ ಬಲಾಬಲದಲ್ಲಿ ನೇಪಾಳ ಹಿಂದೆ ಉಳಿದರೂ ತಂಡದಲ್ಲಿ ಪಂದ್ಯ ಗೆಲ್ಲಿಸಿಕೊಡಬಲ್ಲ ಆಟಗಾರನೊಬ್ಬನಿದ್ದಾರೆ. ಆತನೇ ಸಂದೀಪ್ ಲಾಮಿಚಾನೆ.

23 ವರ್ಷದ ಯುವ ಸ್ಪಿನ್ನರ್ ಸಂದೀಪ್ ಲಾಮಿಚಾನೆ ಐಪಿಎಲ್ ಸೇರಿದಂತೆ ವಿಶ್ವದ ಹಲವು ಲೀಗ್​ಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಹೀಗಾಗಿಯೇ ಯುವ ಸ್ಪಿನ್ನರ್ ಪಾಕ್ ವಿರುದ್ಧ ಮೋಡಿ ಮಾಡುವುದನ್ನು ಎದುರು ನೋಡುತ್ತಿದ್ದಾರೆ ನೇಪಾಳ ಕ್ರಿಕೆಟ್ ಪ್ರೇಮಿಗಳು.

ಏಕೆಂದರೆ ಸಂದೀಪ್ ಲಾಮಿಚಾನೆ ಇದುವರೆಗೆ 90 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 89 ಇನಿಂಗ್ಸ್​ಗಳಿಂದ ಬರೋಬ್ಬರಿ 192 ವಿಕೆಟ್ ಕಬಳಿಸಿದ್ದಾರೆ. ರೈಟ್ ಆರ್ಮ್ ಲೆಗ್ ಬ್ರೇಕ್ ಮೂಲಕ ಮೋಡಿ ಮಾಡುವ ಈ ನೇಪಾಳಿ ಸ್ಪಿನ್ನರ್ ಏಕದಿನ ಮಾದರಿಯಲ್ಲಿ 111 ಮತ್ತು ಟಿ20 ಮಾದರಿಯಲ್ಲಿ 81 ವಿಕೆಟ್‌ಗಳನ್ನು ಪಡೆದಿದ್ದಾರೆ.

ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶ ಎಂದರೆ ಸಂದೀಪ್ ಲಾಮಿಚಾನೆ ಏಕದಿನ ಕ್ರಿಕೆಟ್​ನಲ್ಲಿ 48 ಇನ್ನಿಂಗ್ಸ್‌ಗಳಲ್ಲಿ 17.26 ಸರಾಸರಿಯಲ್ಲಿ 111 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಂದರೆ 50 ಓವರ್​ಗಳ ಕ್ರಿಕೆಟ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ.

ಇನ್ನು ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ 9 ಪಂದ್ಯಗಳಲ್ಲಿ ಬೌಲಿಂಗ್ ಮಾಡಿರುವ ಲಾಮಿಚಾನೆ ಒಟ್ಟು 13 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಲ್ಲದೆ ವೆಸ್ಟ್ ಇಂಡೀಸ್​ನ ಕೆರಿಬಿಯನ್ ಪ್ರೀಮಿಯರ್ ಲೀಗ್, ಆಸ್ಟ್ರೇಲಿಯಾ ಬಿಗ್ ಬ್ಯಾಷ್ ಲೀಗ್ ಹಾಗೂ ಪಾಕಿಸ್ತಾನ್ ಸೂಪರ್ ಲೀಗ್​ ಸೇರಿದಂತೆ ವಿಶ್ವದ ಹಲವು ಮೇಜರ್ ಲೀಗ್​ಗಳಲ್ಲಿ ಸಂದೀಪ್ ಲಾಮಿಚಾನೆ ಕಣಕ್ಕಿಳಿದಿದ್ದಾರೆ.

ಅಂದರೆ ವಿಶ್ವದ ಪ್ರಮುಖ ಬ್ಯಾಟ್ಸ್​ಮನ್​ಗಳಿಗೆ ಬೌಲಿಂಗ್ ಮಾಡಿದ ಅನುಭವ ಹೊಂದಿದ್ದಾರೆ. ಹೀಗಾಗಿಯೇ ಸಂದೀಪ್ ಲಾಮಿಚಾನೆ ಕಡೆಯಿಂದ ಮ್ಯಾಜಿಕ್ ಸ್ಪಿನ್ ಮೋಡಿಯನ್ನು ನಿರೀಕ್ಷಿಸಲಾಗುತ್ತಿದೆ. ಈ ನಿರೀಕ್ಷೆಯೊಂದಿಗೆ ಪಾಕಿಸ್ತಾನ್ ವಿರುದ್ಧ ಚೊಚ್ಚಲ ಪಂದ್ಯದಲ್ಲಿ ಗೆಲ್ಲುವ ವಿಶ್ವಾಸದಲ್ಲಿದೆ ನೇಪಾಳ ತಂಡ.

ಇದನ್ನೂ ಓದಿ: Asia Cup 2023: ಏಷ್ಯಾಕಪ್ 6 ತಂಡಗಳ ಆಟಗಾರರ ಪಟ್ಟಿ ಇಲ್ಲಿದೆ

ನೇಪಾಳ ತಂಡ: ರೋಹಿತ್ ಪೌಡೆಲ್ (ನಾಯಕ), ಮಹಮದ್ ಆಸಿಫ್ ಶೇಖ್, ಕುಶಾಲ್ ಭುರ್ಟೆಲ್, ಲಲಿತ್ ರಾಜ್‌ಬಂಶಿ, ಭೀಮ್ ಶಾರ್ಕಿ, ಕುಶಾಲ್ ಮಲ್ಲಾ, ದೀಪೇಂದ್ರ ಸಿಂಗ್ ಐರಿ, ಸಂದೀಪ್ ಲಾಮಿಚಾನೆ, ಕರಣ್ ಕೆಸಿ, ಗುಲ್ಶನ್ ಕುಮಾರ್ ಝಾ, ಆರಿಫ್ ಶೇಖ್, ಸೋಂಪಾಲ್ ಕಾಮಿ, ಪ್ರತೀಶ್ ಜಿಸಿ, ಕಿಶೋರ್ ಮಹತೋ, ಸಂದೀಪ್ ಜೊರ , ಅರ್ಜುನ್ ಸೌದ್, ಶ್ಯಾಮ್ ಧಾಕಲ್.