ಸಂಜು ಸ್ಯಾಮ್ಸನ್ನ ಕೈ ಬಿಟ್ಟು ಸಂಕಷ್ಟಕ್ಕೆ ಸಿಲುಕಿದ ಟೀಮ್ ಇಂಡಿಯಾ
Asia Cup 2023: ಕೆಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾ ಇಶಾನ್ ಕಿಶನ್ ಅವರನ್ನು ವಿಕೆಟ್ ಕೀಪರ್ ಬ್ಯಾಟರ್ ಆಗಿ ಕಣಕ್ಕಿಳಿಸಲಿದೆ. ಇಲ್ಲಿ ಕಿಶನ್ ಕಣಕ್ಕಿಳಿದರೆ ಟೀಮ್ ಇಂಡಿಯಾದ ಬ್ಯಾಟಿಂಗ್ ಕ್ರಮಾಂಕದಲ್ಲೂ ಬದಲಾವಣೆಯಾಗಲಿದೆ. ಏಕೆಂದರೆ ಇಶಾನ್ ಕಿಶನ್ ಆರಂಭಿಕ ಆಟಗಾರ. ಅತ್ತ ಕೆಎಲ್ ರಾಹುಲ್ ಮಧ್ಯಮ ಕ್ರಮಾಂಕದ ಬ್ಯಾಟರ್.
ಏಷ್ಯಾಕಪ್ ಆರಂಭಕ್ಕೂ ಮುನ್ನವೇ ಟೀಮ್ ಇಂಡಿಯಾಗೆ ಹೊಸ ಚಿಂತೆ ಶುರುವಾಗಿದೆ. ಈ ಚಿಂತೆಗೆ ಕಾರಣ ಕೆಎಲ್ ರಾಹುಲ್ ಅವರು ಮೊದಲೆರಡು ಪಂದ್ಯಗಳಿಂದ ಹೊರಗುಳಿದಿರುವುದು. ಪಾಕಿಸ್ತಾನ್ ಹಾಗೂ ನೇಪಾಳ ವಿರುದ್ಧದ ಪಂದ್ಯದಲ್ಲಿ ಫಿಟ್ನೆಸ್ ಸಮಸ್ಯೆಯ ಕಾರಣ ಕೆಎಲ್ ರಾಹುಲ್ ಕಣಕ್ಕಿಳಿಯುವುದಿಲ್ಲ.
ಇತ್ತ ಕೆಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾ ಇಶಾನ್ ಕಿಶನ್ ಅವರನ್ನು ವಿಕೆಟ್ ಕೀಪರ್ ಬ್ಯಾಟರ್ ಆಗಿ ಕಣಕ್ಕಿಳಿಸಲಿದೆ. ಇಲ್ಲಿ ಕಿಶನ್ ಕಣಕ್ಕಿಳಿದರೆ ಟೀಮ್ ಇಂಡಿಯಾದ ಬ್ಯಾಟಿಂಗ್ ಕ್ರಮಾಂಕದಲ್ಲೂ ಬದಲಾವಣೆಯಾಗಲಿದೆ. ಏಕೆಂದರೆ ಇಶಾನ್ ಕಿಶನ್ ಆರಂಭಿಕ ಆಟಗಾರ. ಅತ್ತ ಕೆಎಲ್ ರಾಹುಲ್ ಮಧ್ಯಮ ಕ್ರಮಾಂಕದ ಬ್ಯಾಟರ್.
ಇಲ್ಲಿ ಕಿಶನ್ ಆಡುವ ಬಳಗದಲ್ಲಿ ಕಾಣಿಸಿಕೊಂಡರೆ ಟೀಮ್ ಇಂಡಿಯಾದ ಬ್ಯಾಟಿಂಗ್ ಕ್ರಮಾಂಕದಲ್ಲೂ ಬದಲಾವಣೆ ಮಾಡಬೇಕಾಗುತ್ತದೆ. ಅಂದರೆ ಇಲ್ಲಿ ಎಡಗೈ ದಾಂಡಿಗನನ್ನು ಆರಂಭಿಕನಾಗಿ ಬಳಸಿಕೊಂಡರೆ, ಶುಭ್ಮನ್ ಗಿಲ್ 3ನೇ ಕ್ರಮಾಂಕದಲ್ಲಿ ಆಡಬೇಕಾಗುತ್ತದೆ. ಇದರಿಂದ ಕೊಹ್ಲಿ ಸೇರಿದಂತೆ ಎಲ್ಲರ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆಯಾಗಲಿದೆ.
ಇನ್ನು ಶಾನ್ ಕಿಶನ್ ಮೂರನೇ ಕ್ರಮಾಂಕದಲ್ಲಿ ಆಡಿದರೂ ಇದೇ ಸಮಸ್ಯೆ ಎದುರಾಗಲಿದೆ. ಅಂದರೆ ಪ್ರಮುಖ ಆಟಗಾರ ವಿರಾಟ್ ಕೊಹ್ಲಿ 4ನೇ ಕ್ರಮಾಂಕದಲ್ಲಿ ಆಡಬೇಕಾಗುತ್ತದೆ. ಇಲ್ಲಿ ಏಷ್ಯಾಕಪ್ ತಂಡದ ಆಯ್ಕೆ ವೇಳೆ ಮಾಡಿದ ಎಡವಟ್ಟಿನಿಂದಾಗಿ ಇದೀಗ ಟೀಮ್ ಇಂಡಿಯಾ ಪರಿತಪಿಸುವಂತಾಗಿದೆ.
ಸ್ಯಾಮ್ಸನ್ನ ಕೈ ಬಿಟ್ಟು ಸಂಕಷ್ಟಕ್ಕೆ ಸಿಲುಕಿದ ಟೀಮ್ ಇಂಡಿಯಾ:
ಟೀಮ್ ಇಂಡಿಯಾ ಆಯ್ಕೆ ಸಮಿತಿ 2ನೇ ವಿಕೆಟ್ ಕೀಪರ್ ಬ್ಯಾಟರ್ ಆಗಿ ಸಂಜು ಸ್ಯಾಮ್ಸನ್ ಬದಲಿಗೆ ಇಶಾನ್ ಕಿಶನ್ ಅವರನ್ನು ಆಯ್ಕೆ ಮಾಡಿಕೊಂಡಿತ್ತು. ಒಂದು ವೇಳೆ ಕಿಶನ್ ಬದಲು ಸ್ಯಾಮ್ಸನ್ ಅವರನ್ನು 17 ಸದಸ್ಯರ ಬಳಗದಲ್ಲಿ ಆಯ್ಕೆ ಮಾಡಿದ್ದರೆ ಈಗ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾದ ಅನಿವಾರ್ಯತೆಯೇ ಬರುತ್ತಿರಲಿಲ್ಲ.
ಏಕೆಂದರೆ ಸ್ಯಾಮ್ಸನ್ 4ನೇ ಮತ್ತು ಅದಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಆದರೆ ಅವರು ಪ್ರಸ್ತುತ ತಂಡದ ಭಾಗವಾಗಿರದ ಕಾರಣ ಅವರನ್ನು ವಿಕೆಟ್ ಕೀಪರ್ ಆಗಿ ಬಳಸಿಕೊಳ್ಳುವಂತಿಲ್ಲ. ಇತ್ತ ವಿಕೆಟ್ ಕೀಪರ್ ಸ್ಥಾನದಲ್ಲಿ ತಂಡಕ್ಕೆ ಆಯ್ಕೆಯಾಗಿರುವ ಇಶಾನ್ ಕಿಶನ್ ಮಧ್ಯಮ ಕ್ರಮಾಂಕದಲ್ಲಿ ಆಡಿದ ಅನುಭವ ಹೊಂದಿಲ್ಲ. ಇದಾಗ್ಯೂ ಅವರನ್ನು ಮಿಡಲ್ ಆರ್ಡರ್ನಲ್ಲಿ ಆಡಿಸಲಿದ್ದಾರಾ ಎಂಬುದೇ ಪ್ರಶ್ನೆ.
ಏಕೆಂದರೆ ಟೀಮ್ ಇಂಡಿಯಾದ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ತರದೆ ಪ್ಲೇಯಿಂಗ್ ಇಲೆವೆನ್ ರೂಪಿಸಬೇಕಿದ್ದರೆ ಇಶಾನ್ ಕಿಶನ್ 5ನೇ ಕ್ರಮಾಂಕದಲ್ಲಿ ಆಡಿಸಲೇಬೇಕು. ಇದರ ಬದಲು ಟೀಮ್ ಇಂಡಿಯಾ ಮುಂದೆ ಬೇರೆ ಯಾವುದೇ ಆಯ್ಕೆ ಇಲ್ಲ. ಇದುವೇ ಈಗ ಭಾರತ ತಂಡದ ಚಿಂತೆಯನ್ನು ಹೆಚ್ಚಿಸಿದೆ.
ಸ್ಯಾಮ್ಸನ್ ಮೀಸಲು ಆಟಗಾರ:
ಏಷ್ಯಾಕಪ್ಗೆ ಸಂಜು ಸ್ಯಾಮ್ಸನ್ ಮೀಸಲು ಆಟಗಾರನಾಗಿ ಆಯ್ಕೆಯಾಗಿದ್ದಾರೆ. ಅಂದರೆ ಟೀಮ್ ಇಂಡಿಯಾದಿಂದ ಯಾವುದಾದರೂ ಆಟಗಾರ ಹೊರಗುಳಿದರೆ ಮಾತ್ರ ಸ್ಯಾಮ್ಸನ್ 17 ಸದಸ್ಯರ ತಂಡದಲ್ಲಿ ಸ್ಥಾನ ಪಡೆಯಬಹುದು. ಆದರೆ ಇದೀಗ ಕೆಎಲ್ ರಾಹುಲ್ ಅವರನ್ನು ತಂಡದಿಂದ ಕೈ ಬಿಡಲಾಗಿಲ್ಲ. ಬದಲಾಗಿ ಮೊದಲೆರಡು ಪಂದ್ಯಗಳಿಂದ ಹೊರಗುಳಿಯುತ್ತಿದ್ದಾರೆ. ಹೀಗಾಗಿ ಸಂಜು ಸ್ಯಾಮ್ಸನ್ ಅವರನ್ನು ವಿಕೆಟ್ ಕೀಪರ್ ಆಗಿ ಬಳಸಿಕೊಳ್ಳುವ ಅವಕಾಶ ಕೂಡ ಟೀಮ್ ಇಂಡಿಯಾಗೆ ಇಲ್ಲ.
ಪಾಕ್ ವಿರುದ್ಧ ಪ್ರಯೋಗ..!
ಏಷ್ಯಾಕಪ್ನಲ್ಲಿ ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನ್ ವಿರುದ್ಧ ಆಡಲಿದೆ. ಈ ಮಹತ್ವದ ಪಂದ್ಯದಲ್ಲೇ ತಂಡದ ಬ್ಯಾಟಿಂಗ್ ಕ್ರಮಾಂಕದ ಬದಲಾವಣೆಗೆ ಕೈ ಹಾಕಿದರೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಹೀಗಾಗಿಯೇ ಇಶಾನ್ ಕಿಶನ್ ಅವರನ್ನು ಯಾವ ಕ್ರಮಾಂಕದಲ್ಲಿ ಆಡಿಸುವುದು ಎಂಬ ಚಿಂತೆಯೊಂದು ಟೀಮ್ ಇಂಡಿಯಾಗೆ ಶುರುವಾಗಿದೆ.
ಇದನ್ನೂ ಓದಿ: ಏಷ್ಯಾಕಪ್ನಲ್ಲಿ ನಿರ್ಧಾರವಾಗಲಿದೆ ಯಾರು ನಂಬರ್ 1
ಈ ಚಿಂತೆಗೆ ಸದ್ಯದ ಉತ್ತರ 5ನೇ ಕ್ರಮಾಂಕ. ಅಂದರೆ ಕೆಎಲ್ ರಾಹುಲ್ಗೆ ಮೀಸಲಾಗಿದ್ದ ಸ್ಥಾನದಲ್ಲೇ ಇಶಾನ್ ಕಿಶನ್ ಕೂಡ ಆಡಬೇಕಾಗುತ್ತದೆ. ಇದರ ಹೊರತಾಗಿಯೂ ಕಿಶನ್ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸಿ ಟೀಮ್ ಇಂಡಿಯಾ ಪಾಕಿಸ್ತಾನ್ ವಿರುದ್ಧವೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡಿಕೊಳ್ಳಲಿದೆಯಾ ಕಾದು ನೋಡಬೇಕಿದೆ.