Asia Cup 2025: ಟೀಮ್ ಇಂಡಿಯಾಗೆ ‘ಎಡ’ ಬಲ

India Squad For asia cup 2025: ಈ ಬಾರಿಯ ಏಷ್ಯಾಕಪ್​ನಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಅದರಂತೆ ಭಾರತ, ಪಾಕಿಸ್ತಾನ್, ಯುಎಇ, ಒಮಾನ್ ತಂಡಗಳು ಗ್ರೂಪ್ ಎ ನಲ್ಲಿ ಕಣಕ್ಕಿಳಿದರೆ, ಬಾಂಗ್ಲಾದೇಶ್, ಶ್ರೀಲಂಕಾ, ಅಫ್ಘಾನಿಸ್ತಾನ್ ಹಾಗೂ ಹಾಂಗ್​ಕಾಂಗ್ ತಂಡಗಳು ಗ್ರೂಪ್ ಬಿ ನಲ್ಲಿ ಸೆಣಲಿಸಲಿದೆ. ಈ ತಂಡಗಳಲ್ಲಿ 4 ಟೀಮ್​ಗಳು ಸೂಪರ್-4 ಹಂತಕ್ಕೇರಲಿದೆ.

Asia Cup 2025: ಟೀಮ್ ಇಂಡಿಯಾಗೆ ಎಡ ಬಲ
Team India

Updated on: Aug 20, 2025 | 1:30 PM

ಏಷ್ಯಾಕಪ್​ಗಾಗಿ ಭಾರತ ತಂಡವನ್ನು ಹೆಸರಿಸಲಾಗಿದೆ. 15 ಸದಸ್ಯರುಗಳ ಈ ತಂಡದಲ್ಲಿ 7 ಎಡಗೈ ಆಟಗಾರರು ಇರುವುದು ವಿಶೇಷ. ಅಂದರೆ ಈ ಬಾರಿ ಎಡಗೈ-ಬಲಗೈ ಆಟಗಾರರನ್ನು ಒಳಗೊಂಡ ಸಮತೋಲಿತ ತಂಡವನ್ನು ರೂಪಿಸುವಲ್ಲಿ ಆಯ್ಕೆ ಸಮಿತಿ ಯಶಸ್ವಿಯಾಗಿದೆ. ಅದರಲ್ಲೂ ಐವರು ಎಡಗೈ ದಾಂಡಿಗರ ಆಯ್ಕೆಯು ಟೀಮ್ ಇಂಡಿಯಾದ ಬ್ಯಾಟಿಂಗ್ ಬಲವನ್ನು ಹೆಚ್ಚಿಸಿದೆ ಎಂದರೆ ತಪ್ಪಾಗಲಾರದು.

ಇಲ್ಲಿ ಎಡಗೈ ದಾಂಡಿಗರಾಗಿ ಕಾಣಿಸಿಕೊಂಡಿರುವುದು ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ರಿಂಕು ಸಿಂಗ್, ಅಕ್ಷರ್ ಪಟೇಲ್ ಹಾಗೂ ಶಿವಂ ದುಬೆ. ಇವರಲ್ಲಿ ಮೂವರು ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವುದು ಖಚಿತ.

ಅಂದರೆ ಅಭಿಷೇಕ್ ಶರ್ಮಾ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ತಿಲಕ್ ವರ್ಮಾ ಕಾಣಿಸಿಕೊಳ್ಳಲಿದ್ದಾರೆ. ಇದರ ಜೊತೆಗೆ ಆಲ್​ರೌಂಡರ್​ಗಳಾಗಿ ಅಕ್ಷರ್ ಪಟೇಲ್ ಹಾಗೂ ಶಿವಂ ದುಬೆ ಪ್ಲೇಯಿಂಗ್ ಇಲೆವೆನ್​ನಲ್ಲಿ ಕಾಣಿಸಿಕೊಳ್ಳಬಹುದು.

ಅದೇ ರೀತಿ ಎಡಗೈ ಬೌಲರ್​ಗಳಾಗಿ ಅರ್ಷದೀಪ್ ಸಿಂಗ್ ಹಾಗೂ ಕುಲ್ದೀಪ್ ಯಾದವ್ ತಂಡದಲ್ಲಿದ್ದಾರೆ. ಅತ್ತ ಜಸ್​ಪ್ರೀತ್ ಬುಮ್ರಾ ಜೊತೆ ಎರಡನೇ ವೇಗಿಯಾಗಿ ಅರ್ಷದೀಪ್ ಸಿಂಗ್ ಕಾಣಿಸಿಕೊಳ್ಳುವುದು ಖಚಿತ. ಇನ್ನು ಪೂರ್ಣ ಪ್ರಮಾಣದ ಸ್ಪಿನ್ನರ್ ರೂಪದಲ್ಲಿ ಕುಲ್ದೀಪ್ ಯಾದವ್​ಗೂ ಚಾನ್ಸ್ ಸಿಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹೀಗಾಗಿ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್​ನಲ್ಲಿ ಕನಿಷ್ಠ 5 ಎಡಗೈ ಆಟಗಾರರು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಇನ್ನುಳಿದಂತೆ ಟೀಮ್ ಇಂಡಿಯಾದಲ್ಲಿರುವ ಬಲಗೈ ಆಟಗಾರರೆಂದರೆ…ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ಶುಭ್​ಮನ್ ಗಿಲ್,  ಹಾರ್ದಿಕ್ ಪಾಂಡ್ಯ, ಜಸ್​ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ಜಿತೇಶ್ ಶರ್ಮಾ, ಹರ್ಷಿತ್ ರಾಣಾ. 

ಇದನ್ನೂ ಓದಿ: ಆಸ್ಟ್ರೇಲಿಯಾ ಪಡೆಯ ಗರ್ವಭಂಗ: 34 ವರ್ಷಗಳ ಬಳಿಕ ಅತ್ಯಂತ ಹೀನಾಯ ಸೋಲು

ಇವರಲ್ಲಿ ಸೂರ್ಯಕುಮಾರ್ ಯಾದವ್, ಶುಭ್​ಮನ್ ಗಿಲ್, ಹಾರ್ದಿಕ್ ಪಾಂಡ್ಯ, ಜಸ್​ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ವಿಕೆಟ್ ಕೀಪರ್ ಆಗಿ ಸಂಜು ಸ್ಯಾಮ್ಸನ್​ಗೂ ಅವಕಾಶ ಸಿಗಲಿದೆ ಎನ್ನಬಹುದು.  ಈ ಮೂಲಕ ಟೀಮ್ ಇಂಡಿಯಾ ಎಡ-ಬಲ ಸಂಯೋಜನೆಯೊಂದಿಗೆ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ರೂಪಿಸಲಿದ್ದಾರೆ.

ಏಷ್ಯಾ ಕಪ್​ಗೆ ಭಾರತ ತಂಡ:

  1. ಸಂಜು ಸ್ಯಾಮ್ಸನ್ 
  2. ಅಭಿಷೇಕ್ ಶರ್ಮಾ
  3. ತಿಲಕ್ ವರ್ಮಾ
  4.  ಸೂರ್ಯಕುಮಾರ್ ಯಾದವ್ (ನಾಯಕ)
  5. ಶುಭ್​ಮನ್ ಗಿಲ್
  6.  ಹಾರ್ದಿಕ್ ಪಾಂಡ್ಯ
  7. ಶಿವಂ ದುಬೆ
  8. ಅಕ್ಷರ್ ಪಟೇಲ್
  9.  ಜಸ್ಪ್ರೀತ್ ಬುಮ್ರಾ
  10.  ಅರ್ಷದೀಪ್ ಸಿಂಗ್
  11.  ವರುಣ್ ಚಕ್ರವರ್ತಿ
  12. ಜಿತೇಶ್ ಶರ್ಮಾ
  13. ಕುಲ್ದೀಪ್ ಯಾದವ್
  14. ಹರ್ಷಿತ್ ರಾಣಾ
  15. ರಿಂಕು ಸಿಂಗ್.