Asia Cup 2025: ಏಷ್ಯಾಕಪ್ ಕುರಿತಾದ ನಿಮ್ಮೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
Asia Cup 2025: ಈ ಬಾರಿಯ ಏಷ್ಯಾಕಪ್ ಅನ್ನು ಟಿ20 ಮಾದರಿಯಲ್ಲಿ ಆಯೋಜಿಸಲು ಮುಖ್ಯ ಕಾರಣ ಮುಂಬರುವ ಟಿ20 ವಿಶ್ವಕಪ್. ಅಂದರೆ ಐಸಿಸಿ ಟೂರ್ನಿಗೂ ಮುನ್ನ ಏಷ್ಯಾಕಪ್ ಆಯೋಜಿಸುವಾಗ ಆ ಟೂರ್ನಿಯ ಫಾರ್ಮ್ಯಾಟ್ನಲ್ಲೇ ಏಷ್ಯಾಕಪ್ ಅನ್ನು ಆಯೋಜಿಸಲಾಗುತ್ತದೆ. ಅದರಂತೆ ಈ ಬಾರಿ 20 ಓವರ್ಗಳ ಪಂದ್ಯಾವಳಿ ನಡೆಯಲಿದೆ.

ಬಹುನಿರೀಕ್ಷಿತ ಏಷ್ಯಾಕಪ್ಗಾಗಿ ಕ್ಷಣಗಣನೆ ಶುರುವಾಗಿದೆ. ಸೆಪ್ಟೆಂಬರ್ 9 ರಿಂದ ಶುರುವಾಗಲಿರುವ 17ನೇ ಆವೃತ್ತಿಯ ಏಷ್ಯಾಕಪ್ನ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ್ ಹಾಗೂ ಹಾಂಗ್ಕಾಂಗ್ ತಂಡಗಳು ಮುಖಾಮುಖಿಯಾಗಲಿದೆ. ಭಾರತ ತಂಡವು ಸೆಪ್ಟೆಂಬರ್ 10 ರಂದು ಯುಎಇ ವಿರುದ್ಧ ಕಣಕ್ಕಿಳಿಯುವ ಮೂಲಕ ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ. ಇನ್ನು ಈ ಬಾರಿಯ ಏಷ್ಯಾಕಪ್ನಲ್ಲಿ ಹಲವು ಬದಲಾವಣೆಗಳು ಕಂಡು ಬರಲಿದೆ. ಆ ಬದಲಾವಣೆಗಳಾವುವು ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…
ಏಷ್ಯಾಕಪ್ ನಡೆಯುವುದು ಎಲ್ಲಿ?
ಈ ಬಾರಿಯ ಏಷ್ಯಾಕಪ್ ಆಯೋಜನೆಯ ಹಕ್ಕು ಬಿಸಿಸಿಐ ಕೈಯಲ್ಲಿದೆ. ಆದರೆ ಪಾಕಿಸ್ತಾನ್ ಭಾರತಕ್ಕೆ ಬರಲು ಹಿಂದೇಟು ಹಾಕಿರುವುದರಿಂದ ಟೂರ್ನಿಯನ್ನ ಯುಎಇನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಅದರಂತೆ ದುಬೈ ಹಾಗೂ ಅಬುಧಾಬಿ ಕ್ರಿಕೆಟ್ ಸ್ಟೇಡಿಯಂಗಳಲ್ಲಿ ಏಷ್ಯಾಕಪ್ ಪಂದ್ಯಾವಳಿ ನಡೆಯಲಿದೆ.
ಎಷ್ಟು ಓವರ್ಗಳ ಪಂದ್ಯಾವಳಿ?
ಈ ಬಾರಿಯ ಏಷ್ಯಾಕಪ್ ಟಿ20 ಮಾದರಿಯಲ್ಲಿ ನಡೆಯಲಿದೆ. ಅಂದರೆ ಕಳೆದ ಬಾರಿ ಏಕದಿನ ಮಾದರಿಯಲ್ಲಿ ಏಷ್ಯಾಕಪ್ ಆಯೋಜಿಸಲಾಗಿತ್ತು. ಆದರೆ ಈ ಬಾರಿ 20 ಓವರ್ಗಳ ಟೂರ್ನಿ ನಡೆಯಲಿದೆ.
ಫಾರ್ಮ್ಯಾಟ್ ಬದಲಾವಣೆ ಯಾಕೆ?
ಈ ಸಲ ಏಷ್ಯಾಕಪ್ ಅನ್ನು ಟಿ20 ಮಾದರಿಯಲ್ಲಿ ಆಯೋಜಿಸಲು ಮುಖ್ಯ ಕಾರಣ ಟಿ20 ವಿಶ್ವಕಪ್. ಅಂದರೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಐಸಿಸಿ ಟೂರ್ನಿಯನ್ನು ಪರಿಗಣಿಸಿ ಅದೇ ಮಾದರಿಯಲ್ಲಿ ಏಷ್ಯಾಕಪ್ ಫಾರ್ಮ್ಯಾಟ್ ಅನ್ನು ಬದಲಿಸುತ್ತದೆ. 2023ರ ಏಕದಿನ ವಿಶ್ವಕಪ್ ಹಿನ್ನಲೆಯಲ್ಲಿ ಏಷ್ಯಾಕಪ್ ಅನ್ನು ಏಕದಿನ ಸ್ವರೂಪದಲ್ಲಿ ಆಯೋಜಿಸಲಾಗಿತ್ತು. ಇದೀಗ 2026ರ ಟಿ20 ವಿಶ್ವಕಪ್ ಹಿನ್ನಲಡೆಯಲ್ಲಿ ಏಷ್ಯಾಕಪ್ ಅನ್ನು ಟಿ20 ಮಾದರಿಯಲ್ಲಿ ಆಯೋಜಿಸಲಾಗುತ್ತಿದೆ.
ಎಷ್ಟನೇ ಏಷ್ಯಾಕಪ್ ಟೂರ್ನಿ?
ಈ ಬಾರಿ ನಡೆಯುತ್ತಿರುವುದು 17ನೇ ಆವೃತ್ತಿಯ ಏಷ್ಯಾಕಪ್ ಟೂರ್ನಿ. 1984 ರಲ್ಲಿ ಶುರುವಾದ ಏಷ್ಯಾಕಪ್ ಟೂರ್ನಿಯಲ್ಲಿ 16 ಆವೃತ್ತಿಗಳನ್ನು ಆಡಲಾಗಿದ್ದು, ಇದೀಗ ಹದಿನೇಳನೇ ಟೂರ್ನಿಯ ಹೊಸ್ತಿಲಲ್ಲಿದ್ದೇವೆ.
ಹಾಲಿ ಏಷ್ಯನ್ ಚಾಂಪಿಯನ್ ಯಾರು?
2023 ರ ಏಷ್ಯಾಕಪ್ ಫೈನಲ್ನಲ್ಲಿ ಶ್ರೀಲಂಕಾವನ್ನು ಸೋಲಿಸಿದ ಭಾರತ ತಂಡ ಹಾಲಿ ಚಾಂಪಿಯನ್ ಪಟ್ಟದೊಂದಿಗೆ ಕಣಕ್ಕಿಳಿಯಲಿದೆ.
ಅತೀ ಹೆಚ್ಚು ಬಾರಿ ಏಷ್ಯಾಕಪ್ ಗೆದ್ದ ತಂಡ ಯಾವುದು?
ಏಷ್ಯಾಕಪ್ ಇತಿಹಾಸದಲ್ಲೇ ಅತ್ಯಧಿಕ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದು ಭಾರತ. ಟೀಮ್ ಇಂಡಿಯಾ 8 ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡರೆ, ಶ್ರೀಲಂಕಾ 6 ಸಲ ಟ್ರೋಫಿ ಗೆದ್ದುಕೊಂಡಿದೆ. ಇನ್ನು ಪಾಕಿಸ್ತಾನ್ 2 ಬಾರಿ ಕಪ್ ಗೆದ್ದಿದೆ.
ಈ ವರ್ಷ ಕಣಕ್ಕಿಳಿಯುವ ತಂಡಗಳಾವುವು?
- ಭಾರತ
- ಅಫ್ಘಾನಿಸ್ತಾನ್
- ಬಾಂಗ್ಲಾದೇಶ್
- ಪಾಕಿಸ್ತಾನ್
- ಶ್ರೀಲಂಕಾ
- ಒಮಾನ್
- ಯುಎಇ
- ಹಾಂಗ್ಕಾಂಗ್
ಒಮಾನ್ ಏಷ್ಯಾಕಪ್ ಆಡಿದೆಯೇ?
ಒಮಾನ್ ತಂಡವು ಇದೇ ಮೊದಲ ಬಾರಿಗೆ ಏಷ್ಯಾಕಪ್ಗೆ ಅರ್ಹತೆ ಪಡೆದುಕೊಂಡಿದೆ. ಅದರಲ್ಲೂ ಚೊಚ್ಚಲ ಟೂರ್ನಿಯಲ್ಲೇ ಪಾಕಿಸ್ತಾನ್ ಹಾಗೂ ಭಾರತದ ವಿರುದ್ಧ ಆಡುವ ಅವಕಾಶ ಸಿಕ್ಕಿರುವುದು ವಿಶೇಷ.
ಟೂರ್ನಿಯ ಸ್ವರೂಪ ಹೇಗಿರಲಿದೆ?
ಏಷ್ಯಾಕಪ್ನಲ್ಲಿ 8 ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಎ ಗುಂಪಿನಲ್ಲಿ ಭಾರತ, ಯುಎಇ, ಒಮಾನ್ ಮತ್ತು ಪಾಕಿಸ್ತಾನ್ ತಂಡಗಳಿವೆ. ಇನ್ನು ಬಿ ಗುಂಪಿನಲ್ಲಿ ಅಫ್ಘಾನಿಸ್ತಾನ್, ಬಾಂಗ್ಲಾದೇಶ್, ಹಾಂಗ್ಕಾಂಗ್ ಮತ್ತು ಶ್ರೀಲಂಕಾ ತಂಡಗಳಿವೆ.
ಪ್ರತಿ ತಂಡವು ತಮ್ಮ ಗುಂಪಿನ ಇತರೆ ತಂಡಗಳ ವಿರುದ್ಧ ಒಂದೊಂದು ಪಂದ್ಯವನ್ನಾಡಲಿದೆ. ಅಲ್ಲದೆ ಈ ಪಂದ್ಯಗಳಲ್ಲಿ ಗೆದ್ದು ಅಂಕ ಪಟ್ಟಿಗಳಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆಯುವ ತಂಡಗಳು ಸೂಪರ್ ಫೋರ್ ಹಂತಕ್ಕೇರಲಿದೆ.
ಸೂಪರ್-4 ಎಂದರೇನು?
ಹೆಸರೇ ಸೂಚಿಸುವಂತೆ ನಾಲ್ಕು ತಂಡಗಳ ಹಣಾಹಣಿ. ಅಂದರೆ ಮೊದಲ ಸುತ್ತಿನಿಂದ ನಾಲ್ಕು ತಂಡಗಳು ಸೂಪರ್-4 ಗೆ ಅರ್ಹತೆ ಪಡೆಯಲಿದೆ. ಇಲ್ಲಿ ನಾಲ್ಕು ತಂಡಗಳು ಪರಸ್ಪರ ಒಂದೊಂದು ಪಂದ್ಯಗಳನ್ನಾಡಲಿದೆ. ಈ ಪಂದ್ಯಗಳ ಬಳಿಕ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಫೈನಲ್ ಆಡಲಿದೆ. ಅಂದರೆ ಇಲ್ಲಿ ಯಾವುದೇ ಸೆಮಿಫೈನಲ್ ಇರುವುದಿಲ್ಲ.
ಏಷ್ಯಾಕಪ್ ಫೈನಲ್ ಯಾವಾಗ?
ಸೆಪ್ಟೆಂಬರ್ 9 ರಿಂದ ಶುರುವಾಗಲಿರುವ ಟೂರ್ನಿಯು ಸೆಪ್ಟೆಂಬರ್ 28 ರಂದು ಮುಗಿಯಲಿದೆ. ಅಂದರೆ ಸೆಪ್ಟೆಂಬರ್ 28 ರಂದು ದುಬೈನಲ್ಲಿ ಫೈನಲ್ ಪಂದ್ಯ ಜರುಗಲಿದೆ.
ಒಟ್ಟು ಎಷ್ಟು ಪಂದ್ಯಗಳು?
ಈ ಬಾರಿಯ ಏಷ್ಯಾಕಪ್ನಲ್ಲಿ ಫೈನಲ್ ಸೇರಿದಂತೆ ಒಟ್ಟು 19 ಪಂದ್ಯಗಳು ನಡೆಯಲಿದೆ. ಇದರಲ್ಲಿ ಮೊದಲ ಸುತ್ತಿನಲ್ಲಿ 12 ಪಂದ್ಯಗಳು ನಡೆದರೆ, ದ್ವಿತೀಯ ಸುತ್ತಿನಲ್ಲಿ 8 ಮ್ಯಾಚ್ಗಳು ಜರುಗಲಿದೆ. ಇದಾದ ಬಳಿಕ ಫೈನಲ್ ಮ್ಯಾಚ್ ನಡೆಯಲಿದೆ.
ಭಾರತ-ಪಾಕಿಸ್ತಾನ್ ಪಂದ್ಯ ಯಾವಾಗ?
ಸೆಪ್ಟೆಂಬರ್ 24 ರಂದು ಭಾರತ-ಪಾಕಿಸ್ತಾನ್ ಮುಖಾಮುಖಿಯಾಗಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ದುಬೈನ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ಆತಿಥ್ಯವಹಿಸಲಿದೆ.
ಎಷ್ಟು ಗಂಟೆಗೆ ಪಂದ್ಯ ಶುರು?
ಏಷ್ಯಾಕಪ್ನ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 8 ಗಂಟೆಯಿಂದ ಶುರುವಾಗಲಿದೆ.
ಇದನ್ನೂ ಓದಿ: Asia Cup 2025: ಏಷ್ಯಾಕಪ್ಗೆ 8 ತಂಡಗಳು ಪ್ರಕಟ
ಯಾವ ಚಾನೆಲ್ನಲ್ಲಿ ನೇರ ಪ್ರಸಾರ ವೀಕ್ಷಿಸಬಹುದು?
ಭಾರತ, ಶ್ರೀಲಂಕಾ ಮತ್ತು ಉಪಖಂಡದ ಇತರ ಕೆಲವು ಭಾಗಗಳಲ್ಲಿದ್ದರೆ ನೀವು ಏಷ್ಯಾಕಪ್ ಅನ್ನು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ವೀಕ್ಷಿಸಬಹುದು.
