ಐನೂರಲ್ಲ, ಆರು ನೂರಂತು ಅಲ್ಲವೇ ಅಲ್ಲ: ದಾಖಲೆಯ ಮೊತ್ತ ಪೇರಿಸಿದ ಕರ್ನಾಟಕ
Uttarakhand vs Karnataka: ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಉತ್ತರಾಖಂಡ್ ತಂಡವು ಕರ್ನಾಟಕವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ಅದರಂತೆ ಇದೀಗ ಕರ್ನಾಟಕ ತಂಡ ಪ್ರಥಮ ಇನಿಂಗ್ಸ್ ಬೃಹತ್ ಮೊತ್ತ ಕಲೆಹಾಕಿದೆ.

ರಣಜಿ ಟೂರ್ನಿಯಲ್ಲಿ ಕರ್ನಾಟಕ ತಂಡ ಹೊಸ ಇತಿಹಾಸ ನಿರ್ಮಿಸಿದೆ. ಅದು ಕೂಡ ಪ್ರಥಮ ಇನಿಂಗ್ಸ್ನಲ್ಲಿ ಬರೋಬ್ಬರಿ 736 ರನ್ ಕಲೆಹಾಕುವ ಮೂಲಕ. ಇದು ರಣಜಿ ಟೂರ್ನಿ ಇತಿಹಾಸದಲ್ಲೇ ಕರ್ನಾಟಕ ತಂಡ ಕಲೆಹಾಕಿದ ಎರಡನೇ ಗರಿಷ್ಠ ಸ್ಕೋರ್. ಅದರಲ್ಲೂ ಒಂದು ದಶಕದ ಬಳಿಕ ಕರ್ನಾಟಕ ಬ್ಯಾಟರ್ಗಳು ಇನಿಂಗ್ಸ್ವೊಂದರಲ್ಲಿ 700 ಕ್ಕೂ ಅಧಿಕ ರನ್ಗಳಿಸಿದ್ದಾರೆ.
ಇದಕ್ಕೂ ಮುನ್ನ ಕರ್ನಾಟಕ ತಂಡ ಕಲೆಹಾಕಿದ ಗರಿಷ್ಠ ಸ್ಕೋರ್ 762 ರನ್ಗಳು. 2014-15ರ ರಣಜಿ ಸೀಸನ್ ಫೈನಲ್‌ನಲ್ಲಿ ತಮಿಳುನಾಡು ವಿರುದ್ಧ 762 ರನ್ಗಳಿಸುವ ಮೂಲಕ ಇತಿಹಾಸ ನಿರ್ಮಿಸಿದ್ದರು. ಇದಾದ ಬಳಿಕ ಕರುನಾಡ ಪಡೆಗೆ ಏಳು ನೂರಕ್ಕಿಂತ ಅಧಿಕ ಮೊತ್ತ ಗಳಿಸಲು ಸಾಧ್ಯವಾಗಿರಲಿಲ್ಲ.
ಆದರೆ ಈ ಬಾರಿಯ ಸೆಮಿಫೈನಲ್ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಕರ್ನಾಟಕ ತಂಡವು ಬರೋಬ್ಬರಿ 736 ರನ್ ಕಲೆಹಾಕಿದ್ದಾರೆ. ಈ ಮೂಲಕ ನಾಲ್ಕನೇ ಬಾರಿ ರಣಜಿ ಇನಿಂಗ್ಸ್ನಲ್ಲಿ 700+ ರನ್ ಕಲೆಹಾಕಿದ ಐತಿಹಾಸಿಕ ಸಾಧನೆ ಮಾಡಿದೆ.
ರಣಜಿ ಟೂರ್ನಿಯಲ್ಲಿ ಕರ್ನಾಟಕ ತಂಡದ ಗರಿಷ್ಠ ಸ್ಕೋರ್:
- 762 ರನ್ಸ್: 2014-15ರ ರಣಜಿ ಸೀಸನ್ನ ಫೈನಲ್ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಕರ್ನಾಟಕ ತಂಡ ಬರೋಬ್ಬರಿ 762 ರನ್ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನತ್ತಿದ ತಮಿಳುನಾಡು ತಂಡ ಎರಡು ಇನಿಂಗ್ಸ್ಗಳ ಮೂಲಕ ಕಲೆಹಾಕಿದ್ದು 545 ರನ್ಗಳು ಮಾತ್ರ. ಈ ಮೂಲಕ ಕರ್ನಾಟಕ ತಂಡ ಇನಿಂಗ್ಸ್ ಮತ್ತು 217 ರನ್‌ಗಳ ಜಯ ಸಾಧಿಸಿತ್ತು.
- 736 ರನ್ಸ್: 2025-26ರ ರಣಜಿ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಉತ್ತರಾಖಂಡ್ ವಿರುದ್ಧ ಕರ್ನಾಟಕ ತಂಡ ಪ್ರಥಮ ಇನಿಂಗ್ಸ್ನಲ್ಲಿ ಬರೋಬ್ಬರಿ 736 ರನ್ ಕಲೆಹಾಕಿದೆ.
- 719 ರನ್ಸ್: 2014-15ರ ಸೀಸನ್ನಲ್ಲೇ ಉತ್ತರ ಪ್ರದೇಶ್ ವಿರುದ್ಧ ಕೂಡ ಕರ್ನಾಟಕ ತಂಡವು ಮೊದಲ ಇನಿಂಗ್ಸ್ನಲ್ಲಿ 719 ರನ್ಗಳಿಸಿ ಡಿಕ್ಲೇರ್ ಘೋಷಿಸಿತ್ತು. ಇದಾಗ್ಯೂ ಈ ಪಂದ್ಯವನ್ನು ಡ್ರಾನಲ್ಲಿ ಅಂತ್ಯಗೊಳಿಸುವಲ್ಲಿ ಉತ್ತರ ಪ್ರದೇಶ ತಂಡ ಯಶಸ್ವಿಯಾಗಿದ್ದರು.
- 705 ರನ್ಸ್: 1981–82 ರಲ್ಲಿ ನಡೆದ ರಣಜಿ ಸೀಸನ್ನಲ್ಲಿ ದೆಹಲಿ ವಿರುದ್ಧ ಕರ್ನಾಟಕ ತಂಡ ಮೊದಲ ಇನ್ನಿಂಗ್ಸ್ನಲ್ಲಿ 705 ರನ್ ಕಲೆಹಾಕಿದ್ದರು. ಆದರೆ ಇದಕ್ಕುತ್ತರವಾಗಿ ದೆಹಲಿ ತಂಡವು ಪ್ರಥಮ ಇನಿಂಗ್ಸ್ನಲ್ಲಿ 707 ರನ್ಗಳಿಸಿತು. ಇದಾಗ್ಯೂ ಮೊದಲ ಇನಿಂಗ್ಸ್ನಲ್ಲಿನ 2 ರನ್‌ಗಳ ಮುನ್ನಡೆಯ ಆಧಾರದ ಮೇಲೆ ಈ ಪಂದ್ಯವನ್ನು ದೆಹಲಿ ಗೆದ್ದುಕೊಂಡಿದ್ದರು.
ಬೃಹತ್ ಮೊತ್ತ ಕಲೆಹಾಕಿದ ಕರ್ನಾಟಕ:
ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಉತ್ತರಾಖಂಡ್ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ಪರ ಕೆಎಲ್ ರಾಹುಲ್ (141) ಶತಕ ಬಾರಿಸಿದರೆ, ನಾಯಕ ದೇವದತ್ ಪಡಿಕ್ಕಲ್ (232) ದ್ವಿಶತಕ ಸಿಡಿಸಿದರು.
ಇನ್ನು ಮಧ್ಯಮ ಕ್ರಮಾಂಕದಲ್ಲಿ ಸ್ಮರಣ್ ರವಿಚಂದ್ರನ್ 135 ರನ್‌ಗಳ ಇನಿಂಗ್ಸ್ ಆಡಿದ್ದಾರೆ. ಹಾಗೆಯೇ ಕೃತಿಕ್ ಕೃಷ್ಣ 60 ರನ್ ಗಳಿಸಿದರೆ, ಕೆಳ ಕ್ರಮಾಂಕದಲ್ಲಿ ವಿದ್ಯಾಧರ್ ಪಾಟೀಲ್ 54 ರನ್‌ಗಳ ಕೊಡುಗೆ ನೀಡಿದ್ದಾರೆ. ಈ ಮೂಲಕ ಕರ್ನಾಟಕ ತಂಡವು 194.4 ಓವರ್ಗಳಲ್ಲಿ ಬರೋಬ್ಬರಿ 736 ರನ್ಗಳಿಸಿ ಆಲೌಟ್ ಆಗಿದೆ.
ಇದನ್ನೂ ಓದಿ: ಅವರು ಗೆದ್ದು, ಇವರು ಸೋತರೂ ಆಸ್ಟ್ರೇಲಿಯಾ ಟಿ20 ವಿಶ್ವಕಪ್ನಿಂದ ಔಟ್!
ಇದೀಗ ಮೂರನೇ ದಿನದಾಟ ನಡೆಯುತ್ತಿದ್ದು, ಇನ್ನೂ ಎರಡು ದಿನದಾಟಗಳು ಬಾಕಿಯಿದೆ. ಹೀಗಾಗಿ ಉತ್ತರಾಖಂಡ್ ತಂಡವು 737 ರನ್‌ಗಳ ಟಾರ್ಗೆಟ್ನೊಂದಿಗೆ ಬ್ಯಾಟಿಂಗ್ ಮುಂದುವರೆಸಲಿದೆ. ಇದರ ನಡುವೆ ಕರ್ನಾಟಕ ತಂಡವು ಉತ್ತರಾಖಂಡ್ ಅನ್ನು ಆಲೌಟ್ ಮಾಡಿದರೆ ಮಾತ್ರ ಫೈನಲ್ಗೇರಬಹುದು.
Published On - 11:12 am, Tue, 17 February 26
