ನಯನತಾರಾ VS ನಯನತಾರಾ; ‘ಟಾಕ್ಸಿಕ್’ ಜೊತೆ ರಿಲೀಸ್ ಆಗಲಿದೆ ನಟಿಯ ಮತ್ತೊಂದು ಸಿನಿಮಾ
ಲೇಡಿ ಸೂಪರ್‌ಸ್ಟಾರ್ ನಯನತಾರಾ ಅಭಿನಯದ 'ಟಾಕ್ಸಿಕ್' ಮತ್ತು 'ಹಾಯ್' ಸಿನಿಮಾಗಳು ಒಂದೇ ವಾರದಲ್ಲಿ ಬಿಡುಗಡೆಯಾಗುತ್ತಿವೆ. ಬಾಕ್ಸ್ ಆಫೀಸ್‌ನಲ್ಲಿ ತಮ್ಮದೇ ಚಿತ್ರಗಳ ನಡುವೆ ಅಪರೂಪದ ಪೈಪೋಟಿ ಏರ್ಪಟ್ಟಿದ್ದು, ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಆಗಸ್ಟ್ ಕೊನೆಯ ವಾರ ನಯನತಾರಾ ಅಭಿಮಾನಿಗಳಿಗೆ ದೊಡ್ಡ ರಸದೌತಣ ಸಿಗಲಿದೆ.

ಮುಖ್ಯಾಂಶಗಳು
- ಒಂದೇ ವಾರದಲ್ಲಿ ಎರಡು ಧಮಾಕಾ
- ಥಿಯೇಟರ್‌ನಲ್ಲಿ ಲೇಡಿ ಸೂಪರ್‌ಸ್ಟಾರ್ ದರ್ಬಾರ್
- ಯಶ್ ‘ಟಾಕ್ಸಿಕ್’ಗೆ ಪೈಪೋಟಿ ನೀಡುತ್ತಾ ‘ಹಾಯ್’?
ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ನಯನತಾರಾ (Nayanthara) ಅಭಿಮಾನಿಗಳಿಗೆ ಆಗಸ್ಟ್ ತಿಂಗಳಲ್ಲಿ ದೊಡ್ಡ ಹಬ್ಬ ಕಾದಿದೆ. ಒಂದೇ ವಾರದಲ್ಲಿ ಅವರ ಎರಡು ವಿಭಿನ್ನ ಸಿನಿಮಾಗಳು ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿವೆ. ಬಾಕ್ಸ್ ಆಫೀಸ್‌ನಲ್ಲಿ ತಮ್ಮದೇ ಚಿತ್ರಗಳ ನಡುವೆ ಪೈಪೋಟಿ ಏರ್ಪಡುತ್ತಿದೆ. ಈ ನಿರ್ಧಾರ ಸಾಕಷ್ಟು ಅಚ್ಚರಿ ಮೂಡಿಸಿದೆ.
ನಟ ಕವಿನ್ ಹಾಗೂ ನಯನತಾರಾ ಜೋಡಿಯಾಗಿ ನಟಿಸಿರುವ ‘ಹಾಯ್’ ಸಿನಿಮಾ ಆಗಸ್ಟ್ 28ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ನವ ನಿರ್ದೇಶಕ ವಿಷ್ಣು ಎಡವನ್ ನಿರ್ದೇಶಿಸಿದ್ದಾರೆ. ಇದೊಂದು ಸರಳ ಪ್ರೇಮಕಥೆಯ ಚಿತ್ರ. ಇದರಲ್ಲಿ ನಯನತಾರಾ ಪೂರ್ಣ ಪ್ರಮಾಣದ ನಾಯಕಿಯಾಗಿ ಮಿಂಚಿದ್ದಾರೆ.
ಇದಕ್ಕೂ ಎರಡು ದಿನ ಮೊದಲು ಅಂದರೆ ಆಗಸ್ಟ್ 26ರಂದು ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ರಿಲೀಸ್ ಆಗಲಿದೆ. ಈ ಬೃಹತ್ ಆಕ್ಷನ್ ಸಿನಿಮಾದಲ್ಲಿ ನಯನತಾರಾ ಗಂಗಾ ಎಂಬ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಹಾಗೂ ತಾರಾ ಸುತಾರಿಯಾ ಅವರ ದೊಡ್ಡ ತಾರಾಗಣವಿದೆ.
ದೊಡ್ಡ ಬಜೆಟ್‌ನ ‘ಟಾಕ್ಸಿಕ್’ ಜೊತೆಗೆ ‘ಹಾಯ್’ ಸಿನಿಮಾ ಬರುವುದು ಕೊಂಚ ಸಾಹಸದ ನಿರ್ಧಾರ ಎಂದೇ ಹೇಳಲಾಗುತ್ತಿದೆ. ಆದರೆ ಉತ್ತಮ ಕಥೆ ಹಾಗೂ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕರೆ ‘ಹಾಯ್’ ಚಿತ್ರವು ಖಂಡಿತ ಗೆಲ್ಲಲಿದೆ ಎಂಬ ಅಭಿಪ್ರಾಯ ಅನೇಕರದ್ದು. ಕುಟುಂಬ ಸಮೇತ ಬರುವ ಪ್ರೇಕ್ಷಕರನ್ನು ಈ ಸಿನಿಮಾ ಸೆಳೆಯುವ ನಿರೀಕ್ಷೆಯಿದೆ.
ಇದನ್ನೂ ಓದಿ: ‘ಟಾಕ್ಸಿಕ್’ ಚಿತ್ರದಲ್ಲಿ ನಟಿಸಲು ನಯನತಾರಾ ಪಡೆದ ಸಂಭಾವನೆ ಬರೋಬ್ಬರಿ 12 ಕೋಟಿ ರೂ.?
ಒಂದೇ ವಾರದಲ್ಲಿ ನಯನತಾರಾ ನಟನೆಯ ಎರಡು ಸಿನಿಮಾಗಳು ತೆರೆಗೆ ಬರುತ್ತಿರುವುದರ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಬಾಕ್ಸ್ ಆಫೀಸ್ ಅಖಾಡದಲ್ಲಿ ಲೇಡಿ ಸೂಪರ್‌ಸ್ಟಾರ್ ಅವರ ಈ ಸಾಹಸಕ್ಕೆ ಜನ ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




