Asia Cup 2025: ಪ್ರಚೋದನಕಾರಿ ಸನ್ನೆ ಮಾಡಿದ ಹ್ಯಾರಿಸ್ ರೌಫ್ ಜೇಬಿಗೆ ಕತ್ತರಿ ಹಾಕಿದ ಐಸಿಸಿ
Asia Cup 2025: 2025ರ ಏಷ್ಯಾಕಪ್‌ನಲ್ಲಿ ಭಾರತ-ಪಾಕಿಸ್ತಾನ ಪಂದ್ಯದ ನಂತರದ ವಿವಾದಕ್ಕೆ ಸಂಬಂಧಿಸಿದಂತೆ ಐಸಿಸಿ ಮಹತ್ವದ ತೀರ್ಪು ಪ್ರಕಟಿಸಿದೆ. ಆಕ್ರಮಣಕಾರಿ ಸನ್ನೆಗಳಿಗಾಗಿ ಪಾಕ್ ವೇಗಿ ಹ್ಯಾರಿಸ್ ರೌಫ್‌ಗೆ ಶೇ. 30 ರಷ್ಟು ಪಂದ್ಯ ಶುಲ್ಕವನ್ನು ದಂಡವಾಗಿ ವಿಧಿಸಲಾಗಿದೆ. ಗನ್ ಸೆಲೆಬ್ರೇಷನ್ ಮಾಡಿದ ಬ್ಯಾಟ್ಸ್‌ಮನ್ ಸಾಹಿಬ್‌ಜಾದಾ ಫರ್ಹಾನ್‌ಗೆ ಎಚ್ಚರಿಕೆ ನೀಡಲಾಗಿದೆ. ಸೂರ್ಯಕುಮಾರ್ ಯಾದವ್‌ಗೂ ದಂಡ ವಿಧಿಸಲಾಗಿದೆ.

2025 ರ ಏಷ್ಯಾಕಪ್‌ನ (Asia Cup 2025) ಸೂಪರ್ ಫೋರ್ ಸುತ್ತಿನಲ್ಲಿ ಭಾರತ-ಪಾಕಿಸ್ತಾನ (India vs Pakistan) ನಡುವಿನ ಪಂದ್ಯದ ಸಮಯದಲ್ಲಿ ಭುಗಿಲೆದ್ದ ವಿವಾದವು ಕ್ರಿಕೆಟ್ ಜಗತ್ತಿನಲ್ಲಿ ಕೋಲಾಹಲಕ್ಕೆ ಕಾರಣವಾಗಿತ್ತು. ಈ ವಿಚಾರವಾಗಿ ಎರಡೂ ಕ್ರಿಕೆಟ್ ಮಂಡಳಿಗಳು ಪರಸ್ಪರರ ಆಟಗಾರರ ವಿರುದ್ಧ ಐಸಿಸಿಗೆ ದೂರು ಸಲ್ಲಿಸಿದ್ದವು. ಪಾಕ್ ಕ್ರಿಕೆಟ್ ಮಂಡಳಿಯ ದೂರಿನನ್ವಯ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಸೆಪ್ಟೆಂಬರ್ 25 ರಂದು ಐಸಿಸಿ ಎದುರು ವಿಚಾರಣೆಗೆ ಹಾಜರಾಗಿದ್ದರು. ಆ ಬಳಿಕ ಸೂರ್ಯಕುಮಾರ್ಗೆ ಶೇ. 30 ರಷ್ಟು ಪಂದ್ಯ ಶುಲ್ಕವನ್ನು ದಂಡವಾಗಿ ವಿಧಿಸಲಾಗಿದೆ. ಇತ್ತ ಬಿಸಿಸಿಐ ಕೂಡ ಪಾಕ್ ಆಟಗಾರರಾದ ಸಾಹಿಬ್ಜಾದಾ ಫರ್ಹಾನ್ ಮತ್ತು ಹ್ಯಾರಿಸ್ ರೌಫ್ ವಿರುದ್ಧ ಐಸಿಸಿಗೆ ದೂರು ನೀಡಿತ್ತು. ಅದರಂತೆ ಇವರಿಬ್ಬರ ತನಿಖೆ ಮಾಡಿರುವ ಐಸಿಸಿ, ಮಹತ್ವದ ತೀರ್ಪು ಪ್ರಕಟಿಸಿದೆ.
ಪಾಕ್ ಆಟಗಾರರ ವಿರುದ್ಧ ಐಸಿಸಿ ಕ್ರಮ
ಭಾರತ ವಿರುದ್ಧದ ಸೂಪರ್ 4 ಪಂದ್ಯದ ವೇಳೆ ಸಾಹಿಬ್‌ಜಾದಾ ಫರ್ಹಾನ್ ಮತ್ತು ಹ್ಯಾರಿಸ್ ರೌಫ್ ಪ್ರಚೋದನಕಾರಿ ಸನ್ನೆಗಳನ್ನು ಮಾಡಿದ್ದರು. ಫರ್ಹಾನ್ ಅರ್ಧಶತಕ ಬಾರಿಸಿದ ಬಳಿಕ ಗನ್ ಸೆಲೆಬ್ರೇಷನ್ ಮಾಡಿದರೆ, ಹ್ಯಾರಿಸ್ ರೌಫ್ ಫೈಟರ್ ಜೆಟ್ ಅನ್ನು ಹೊಡೆದುರುಳಿಸುವಂತೆ ಸನ್ನೆ ಮಾಡಿದ್ದರು. ಇವರಿಬ್ಬರ ನಡೆಯ ವಿರುದ್ಧ ಬಿಸಿಸಿಐ, ಐಸಿಸಿಗೆ ದೂರು ನೀಡಿತ್ತು. ಆ ಪ್ರಕಾರ ವಿಚಾರಣೆ ನಡೆಸಿರುವ ಐಸಿಸಿ, ಇವರಿಬ್ಬರ ಆಕ್ರಮಣಕಾರಿ ಸನ್ನೆಗಳು ಮತ್ತು ಅನುಚಿತ ವರ್ತನೆಗಾಗಿ ಹ್ಯಾರಿಸ್ ರೌಫ್‌ಗೆ ಪಂದ್ಯ ಶುಲ್ಕದ 30 ಪ್ರತಿಶತ ದಂಡ ವಿಧಿಸಿದೆ. ಇತ್ತ ಬ್ಯಾಟ್ಸ್‌ಮನ್ ಸಾಹಿಬ್‌ಜಾದಾ ಫರ್ಹಾನ್ ಅವರ ಗನ್ ಸೆಲೆಬ್ರೇಷನ್ಗೆ ಕೇವಲ ಎಚ್ಚರಿಕೆ ನೀಡಿ ಕಳುಹಿಸಿದೆ.
ಫಿಲ್ಡಿಂಗ್ ಮಾಡುವ ವೇಳೆ ಪಾಕ್ ವೇಗಿ ಹ್ಯಾರಿಸ್ ರೌಫ್ ಮಾಡಿದ ಕೈ ಸನ್ನೆಗಳು ಆಟದ ಉತ್ಸಾಹಕ್ಕೆ ವಿರುದ್ಧವಾಗಿರುವುದರಿಂದ ದಂಡ ವಿಧಿಸಲಾಗಿದೆ. ವಾಸ್ತವವಾಗಿ ಟೀಂ ಇಂಡಿಯಾದ ಬ್ಯಾಟಿಂಗ್ ಸಮಯದಲ್ಲಿ ಬೌಂಡರಿ ಲೈನ್ ಬಳಿ ಫಿಲ್ಡಿಂಗ್ ಮಾಡುತ್ತಿದ್ದ ರೌಫ್ 6 ಫೈಟರ್ ಜೆಟ್ ಅನ್ನು ಹೊಡೆದುರುಳಿಸಿದಂತೆ ಸನ್ನೆ ಮಾಡಿದ್ದರು. ಇದರ ವಿರುದ್ಧ ಬಿಸಿಸಿಐ, ಐಸಿಸಿಗೆ ದೂರು ನೀಡಿತ್ತು. ಈ ಬಗ್ಗೆ ತನಿಖೆ ಮಾಡಿರುವ ಐಸಿಸಿ, ರೌಫ್ ಅವರ ವರ್ತನೆಗೆ ದಂಡದ ರೂಪದಲ್ಲಿ ಶಿಕ್ಷೆ ವಿಧಿಸಲಾಗಿದೆ. ಆದಾಗ್ಯೂ, ಹ್ಯಾರಿಸ್ ರೌಫ್ ಅವರನ್ನು ಪಂದ್ಯದಿಂದ ನಿಷೇಧಿಸಲಾಗಿಲ್ಲ. ಪರಿಣಾಮವಾಗಿ, ಅವರು ಭಾರತ ಮತ್ತು ಪಾಕಿಸ್ತಾನ ನಡುವಿನ ಅಂತಿಮ ಪಂದ್ಯದಲ್ಲಿ ಆಡಲಿದ್ದಾರೆ.
ಸಾಹಿಬ್ಜಾದಾ ಫರ್ಹಾನ್ ಮಾಡಿದ್ದೇನು?
ಭಾರತ ವಿರುದ್ಧದ ಪಂದ್ಯದಲ್ಲಿ ಸಾಹಿಬ್‌ಜಾದಾ ಫರ್ಹಾನ್ ಅದ್ಭುತ ಇನ್ನಿಂಗ್ಸ್ ಆಡಿ 45 ಎಸೆತಗಳಲ್ಲಿ 58 ರನ್ ಗಳಿಸಿದರು. ಆದಾಗ್ಯೂ, ಅರ್ಧಶತಕ ಬಾರಿಸಿದ ನಂತರ ಮೈದಾನದಲ್ಲಿ ಗನ್ ಸೆಲೆಬ್ರೇಷನ್ ಮಾಡಿದರು. ಪಹಲ್ಗಾಮ್ ದಾಳಿ ಮತ್ತು ಭಾರತದ ಆಪರೇಷನ್ ಸಿಂಧೂರ್ಗೆ ವಿರುದ್ಧವಾಗಿ ಈ ಆಚರಣೆ ಮಾಡಿದ್ದಾರೆಂಬುದು ಬಿಸಿಸಿಐ ಆರೋಪವಾಗಿತ್ತು. ಪರಿಣಾಮವಾಗಿ, ಅಂತಹ ಆಚರಣೆಗಳನ್ನು ಪುನರಾವರ್ತಿಸದಂತೆ ಐಸಿಸಿ ಅವರಿಗೆ ಎಚ್ಚರಿಕೆ ನೀಡಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:26 pm, Fri, 26 September 25
