
2025 ರ ಏಷ್ಯಾಕಪ್ನ (Asia Cup 2025) ಕಾಯುವಿಕೆಗೆ ಕೊನೆಗೂ ಅಂತ್ಯ ಸಿಕ್ಕದೆ. ಈ ಪಂದ್ಯಾವಳಿ ಸೆಪ್ಟೆಂಬರ್ 9 ಮಂಗಳವಾರದಿಂದ ಅಂದರೆ ಇಂದಿನಿಂದ 8 ತಂಡಗಳ ನಡುವೆ ಪ್ರಾರಂಭವಾಗುತ್ತಿದೆ. ಈ ಪಂದ್ಯಾವಳಿ ಭಾರತದಲ್ಲಿ ನಡೆಯಬೇಕಿತ್ತು, ಆದರೆ ಪಾಕಿಸ್ತಾನದೊಂದಿಗಿನ ಉದ್ವಿಗ್ನತೆಯಿಂದಾಗಿ, ಇದನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆಯೋಜಿಸಲಾಗುತ್ತಿದೆ. ಪಂದ್ಯಾವಳಿಯು ದುಬೈ ಮತ್ತು ಅಬುಧಾಬಿಯಲ್ಲಿ 20 ದಿನಗಳವರೆಗೆ ನಡೆಯಲಿದೆ, ಇದರ ಫೈನಲ್ ಸೆಪ್ಟೆಂಬರ್ 28 ರಂದು ನಡೆಯಲಿದೆ. ಏಷ್ಯಾಕಪ್‌ನಲ್ಲಿ ಬಹುನಿರೀಕ್ಷಿತ ಪಂದ್ಯ ಭಾರತ-ಪಾಕಿಸ್ತಾನ ನಡುವಿನ ಪಂದ್ಯವಾಗಿದ್ದರೂ, ಈ ಟೂರ್ನಿ ಅಫ್ಘಾನಿಸ್ತಾನ ಮತ್ತು ಹಾಂಗ್ ಕಾಂಗ್ ನಡುವಿನ ಮುಖಾಮುಖಿಯೊಂದಿಗೆ ಪ್ರಾರಂಭವಾಗುತ್ತಿದೆ. ಆದಾಗ್ಯೂ ಈ ಟೂರ್ನಿಯಲ್ಲಿ ಪಂದ್ಯಗಳ ಆರಂಭದ ಸಮಯವನ್ನು ಅರ್ಧ ಗಂಟೆ ಮುಂದಕ್ಕೆ ಹಾಕಲಾಗಿದೆ.
ವಾಸ್ತವವಾಗಿ ಮೊದಲಿಗೆ ಏಷ್ಯಾಕಪ್ ವೇಳಾಪಟ್ಟಿಯನ್ನು ಪ್ರಕಟಿಸಿದ್ದಾಗ ಪಂದ್ಯಗಳನ್ನು ಭಾರತೀಯ ಕಾಲಮಾನ ರಾತ್ರಿ 7:30 ಕ್ಕೆ ಆರಂಭಿಸಲು ತೀರ್ಮಾನಿಸಲಾಗಿತ್ತು. ಆದರೆ ಪಂದ್ಯಾವಳಿಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವಾಗ, ಪಂದ್ಯಗಳ ಆರಂಭದ ಸಮಯದಲ್ಲಿ ಬದಲಾವಣೆ ತಂದಿದ್ದ ಏಷ್ಯನ್ ಕ್ರಿಕೆಟ್ ಕೌನ್ಸಿಲ್, ನಿಗದಿತ ಸಮಯಕ್ಕಿಂತ ಅರ್ಧಗಂಟೆ ತಡವಾಗಿ ಅಂದರೆ ಭಾರತೀಯ ಕಾಲಮಾನ ರಾತ್ರಿ 7:30 ರ ಬದಲಿಗೆ ರಾತ್ರಿ 8 ಗಂಟೆಗೆ ಪಂದ್ಯವನ್ನು ನಡೆಸಲು ತೀರ್ಮಾನಿಸಿತು.
ಅಷ್ಟಕ್ಕೂ ಪಂದ್ಯಗಳ ಆರಂಭದ ಸಮಯದಲ್ಲಿ ಬದಲಾವಣೆ ತರಲು ಕಾರಣ ಏನೆಂಬುದನ್ನು ಎಸಿಸಿ ಬಹಿರಂಗಪಡಿಸದಿದ್ದರೂ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿನ ಬಿಸಿಲಿನ ವಾತಾವರಣವನ್ನು ಗಮನದಲ್ಲಿಟ್ಟುಕೊಂಡು ಈ ಬದಲಾವಣೆಯನ್ನು ಮಾಡಲಾಗಿದೆ. ಈ ಬದಲಾವಣೆಯ ಬಗ್ಗೆ ಪ್ರಸಾರಕರ ಬಳಿ ವಿನಂತಿಸಲಾಗಿದ್ದು, ಅವರೂ ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ವರದಿಯಾಗಿತ್ತು.
ಯುಎಇಯಲ್ಲಿ ಬಿಸಿಲು ಮತ್ತು ತೇವಾಂಶದ ಮಟ್ಟವು ಕ್ರಿಕೆಟ್ ಪಂದ್ಯಗಳಿಗೆ, ವಿಶೇಷವಾಗಿ ಆಟಗಾರರು ಮತ್ತು ಅಭಿಮಾನಿಗಳಿಗೆ ಸವಾಲಿನದ್ದಾಗಿರುತ್ತದೆ. ಹಗಲಿನಲ್ಲಿ ತಾಪಮಾನವು ತುಂಬಾ ಹೆಚ್ಚಾಗಿರುತ್ತದೆ, ಇದರಿಂದಾಗಿ ಸಂಜೆಯೂ ಸಹ ಒಣ ಹವೆಯ ಪರಿಣಾಮ ಇರುತ್ತದೆ. ಈ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪಂದ್ಯಗಳ ಆರಂಭದ ಸಮಯವನ್ನು ಅರ್ಧ ಗಂಟೆ ವಿಸ್ತರಿಸಲು ಸಂಘಟಕರು ನಿರ್ಧರಿಸಿದ್ದಾರೆ.
Asia Cup 2025: ಏಷ್ಯಾಕಪ್ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ 8 ಕುತೂಹಲಕಾರಿ ಸಂಗತಿಗಳಿವು
ಈ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ ಸೆಪ್ಟೆಂಬರ್ 10 ರಂದು ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ತನ್ನ ಮೊದಲ ಪಂದ್ಯದಲ್ಲಿ ಯುಎಇ ತಂಡವನ್ನು ಎದುರಿಸಲಿದೆ. ನಂತರ ಟೀಂ ಇಂಡಿಯಾ ತನ್ನ ಮುಂದಿನ ಪಂದ್ಯವನ್ನು ಪಾಕಿಸ್ತಾನ ವಿರುದ್ಧ ಆಡಲಿದ್ದು, ಈ ಪಂದ್ಯ ಸೆಪ್ಟೆಂಬರ್ 14 ರಂದು ನಡೆಯಲಿದೆ. ಇದರ ನಂತರ ಸೆಪ್ಟೆಂಬರ್ 19 ರಂದು ಓಮನ್ ವಿರುದ್ಧ ತನ್ನ ಗುಂಪು ಹಂತದ ಕೊನೆಯ ಪಂದ್ಯವನ್ನು ಆಡಲಿದೆ. ಆ ಬಳಿಕ ಸೂಪರ್ -4 ಪಂದ್ಯಗಳು ಸೆಪ್ಟೆಂಬರ್ 20 ರಿಂದ ನಡೆಯಲಿದ್ದು, ಫೈನಲ್ ಪಂದ್ಯ ಸೆಪ್ಟೆಂಬರ್ 28 ರಂದು ನಡೆಯಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ