IND vs PAK: ಭಾರತದ ತೂಫಾನ್ಗೆ ತತ್ತರಿಸಿದ ಪಾಕಿಸ್ತಾನ್
Asia cup 2025 India vs Pakistan: ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಈವರೆಗೆ 21 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಭಾರತ ತಂಡ 12 ಮ್ಯಾಚ್ಗಳಲ್ಲಿ ಜಯ ಸಾಧಿಸಿದರೆ, ಪಾಕಿಸ್ತಾನ್ ತಂಡ ಗೆದ್ದಿರುವುದು ಕೇವಲ 6 ಪಂದ್ಯಗಳಲ್ಲಿ ಮಾತ್ರ. ಇನ್ನು ಮೂರು ಮ್ಯಾಚ್ಗಳು ಕಾರಣಾಂತರಗಳಿಂದ ರದ್ದಾಗಿದ್ದವು.

ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್ನ 14ನೇ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. ಅದು ಕೂಡ ಬದ್ಧವೈರಿ ಪಾಕಿಸ್ತಾನ್ ತಂಡವನ್ನು ಹೀನಾಯವಾಗಿ ಬಗ್ಗು ಬಡಿಯುವ ಮೂಲಕ ಎಂಬುದು ವಿಶೇಷ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ಪರ ಆರಂಭಿಕ ದಾಂಡಿಗ ಸಾಹಿಬ್ಝಾದ ಫರ್ಹಾನ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. 45 ಎಸೆತಗಳನ್ನು ಎದುರಿಸಿದ ಫರ್ಹಾನ್ 3 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 58 ರನ್ ಬಾರಿಸಿ ಔಟಾದರು. ಇನ್ನು ಸೈಮ್ ಅಯ್ಯೂಬ್ 21 ರನ್ಗಳ ಕೊಡುಗೆ ನೀಡಿದರೆ, ಕೊನೆಯ ಹಂತದಲ್ಲಿ ಫಹೀಮ್ ಅಶ್ರಫ್ 20 ರನ್ ಬಾರಿಸಿದರು. ಈ ಮೂಲಕ ಪಾಕಿಸ್ತಾನ್ ತಂಡ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 171 ರನ್ ಕಲೆಹಾಕಿತು.
ಟೀಮ್ ಇಂಡಿಯಾ ಆರಂಭಿಕರ ಆರ್ಭಟ:
172 ರನ್ಗಳ ಗುರಿ ಪಡೆದ ಟೀಮ್ ಇಂಡಿಯಾಗೆ ಶುಭ್ಮನ್ ಗಿಲ್ ಹಾಗೂ ಅಭಿಷೇಕ್ ಶರ್ಮಾ ಸ್ಫೋಟಕ ಆರಂಭ ಒದಗಿಸಿದ್ದರು. ಮೊದಲ ಓವರ್ನ ಮೊದಲ ಎಸೆತದಲ್ಲೇ ಸಿಕ್ಸ್ ಸಿಡಿಸಿ ಶುಭಾರಂಭ ಮಾಡಿದ ಅಭಿಷೇಕ್ ಕೇವಲ 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ಅತ್ತ ಶುಭ್ಮನ್ ಗಿಲ್ ಕೂಡ ಬಿರುಸಿನ ಬ್ಯಾಟಿಂಗ್ನೊಂದಿಗೆ ಗಮನ ಸೆಳೆದರು. ಈ ಮೂಲಕ ಗಿಲ್ ಕೂಡ 28 ಎಸೆತಗಳಲ್ಲಿ 47 ರನ್ ಬಾರಿಸಿದರು. ಆರಂಭಿಕರಿಬ್ಬರ ತೂಫಾನ್ ಬ್ಯಾಟಿಂಗ್ನೊಂದಿಗೆ ಟೀಮ್ ಇಂಡಿಯಾ ಕೇವಲ 10 ಓವರ್ಗಳಲ್ಲಿ 109 ರನ್ ಕಲೆಹಾಕಿತು.
ಅತ್ತ ಶುಭ್ಮನ್ ಗಿಲ್ (47) ಔಟಾದ ಬೆನ್ನಲ್ಲೇ ಸೂರ್ಯಕುಮಾರ್ ಯಾದವ್ (0) ಕೂಡ ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ ಆರ್ಭಟ ಮುಂದುವರೆಸಿದ ಅಭಿಷೇಕ್ ಶರ್ಮಾ 39 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 74 ರನ್ ಚಚ್ಚಿದರು. ಈ ಹಂತದಲ್ಲಿ ಬಿರುಸಿನ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿದರು.
ಆ ಬಳಿಕ ಬಂದ ಸಂಜು ಸ್ಯಾಮ್ಸನ್ 13 ರನ್ಗಳಿಸಿ ಔಟಾದರು. ಈ ಹಂತದಲ್ಲಿ ಜೊತೆಗೂಡಿದ ತಿಲಕ್ ವರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ಉತ್ತಮ ಜೊತೆಯಾಟದೊಂದಿಗೆ ಭಾರತ ತಂಡವನ್ನು 18.5 ಓವರ್ಗಳಲ್ಲಿ ಗುರಿ ಮುಟ್ಟಿಸಿದರು. ಈ ಮೂಲಕ ಪಾಕಿಸ್ತಾನ್ ವಿರುದ್ಧ ಟೀಮ್ ಇಂಡಿಯಾ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಭಾರತ ಪ್ಲೇಯಿಂಗ್ ಇಲೆವೆನ್: ಅಭಿಷೇಕ್ ಶರ್ಮಾ, ಶುಭ್ಮನ್ ಗಿಲ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ.
ಇದನ್ನೂ ಓದಿ: Asia Cup 2025: ಫೈನಲ್ಗೇರಲು ಟೀಮ್ ಇಂಡಿಯಾ ಎಷ್ಟು ಪಂದ್ಯ ಗೆಲ್ಲಬೇಕು?
ಪಾಕಿಸ್ತಾನ್ ಪ್ಲೇಯಿಂಗ್ ಇಲೆವೆನ್: ಸಾಹಿಬ್ಝಾದ ಫರ್ಹಾನ್, ಸೈಮ್ ಅಯೂಬ್, ಫಖರ್ ಝಮಾನ್, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಸಲ್ಮಾನ್ ಅಲಿ ಅಘಾ (ನಾಯಕ), ಮೊಹಮ್ಮದ್ ನವಾಝ್, ಹುಸೈನ್ ತಲಾತ್, ಶಾಹೀನ್ ಶಾ ಆಫ್ರಿದಿ, ಫಹೀಮ್ ಅಶ್ರಫ್, ಅಬ್ರಾರ್ ಅಹ್ಮದ್, ಹ್ಯಾರಿಸ್ ರೌಫ್.
