‘ಪೈಪೋಟಿ’ ಬಗ್ಗೆ ಪ್ರಶ್ನೆ ಕೇಳುವುದನ್ನು ನಿಲ್ಲಿಸಬೇಕು: ಪಾಕ್ ತಂಡದ ಮಾನ ಕಳೆದ ಸೂರ್ಯ
India vs Pakistan: ಏಷ್ಯಾಕಪ್ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ಧ ಟೀಮ್ ಇಂಡಿಯಾ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತ್ತು. ಇದೀಗ ದ್ವಿತೀಯ ಸುತ್ತಿನಲ್ಲೂ ಪಾಕ್ ಪಡೆಯನ್ನು ಭಾರತ ತಂಡ ಬಗ್ಗು ಬಡಿದಿದೆ. ಅದು ಕೂಡ 6 ವಿಕೆಟ್‌ಗಳ ವಿಜಯದೊಂದಿಗೆ ಎಂಬುದು ವಿಶೇಷ.

ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 171 ರನ್ ಕಲೆಹಾಕಿತು. ಈ ಗುರಿಯನ್ನು ಟೀಮ್ ಇಂಡಿಯಾ 18.5 ಓವರ್‌ಗಳಲ್ಲಿ ಚೇಸ್ ಮಾಡಿ 6 ವಿಕೆಟ್‌ಗಳ ಜಯ ಸಾಧಿಸಿದೆ.
ಈ ಭರ್ಜರಿ ಗೆಲುವಿನ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ಇನ್ಮುಂದೆ ಉಭಯ ತಂಡಗಳ ನಡುವಣ ಜಿದ್ದಾಜಿದ್ದಿನ ಪೈಪೋಟಿ ಬಗ್ಗೆ ಪ್ರಶ್ನೆ ಕೇಳದಂತೆ ಮನವಿ ಮಾಡಿದರು.
ಏಕೆಂದರೆ ಭಾರತ ತಂಡವು ಪಾಕ್ ವಿರುದ್ಧ ಏಕಪಕ್ಷೀಯವಾಗಿ ಪಂದ್ಯ ಗೆಲ್ಲುತ್ತಿದೆ. ಇಲ್ಲಿ ಪ್ರತಿಸ್ಪರ್ಧೆ ಅಥವಾ ಪೈಪೋಟಿ ಎಂಬುದೇ ಇಲ್ಲ. ಪ್ರತಿ ಸಲ ಏಕಪಕ್ಷೀಯವಾಗಿ ನಾವೇ ಗೆಲ್ಲುತ್ತಿರುವಾಗ, ಪೈಪೋಟಿಯ ಮಾತೇ ಬರಲ್ಲ. ಹೀಗಾಗಿ ನೀವೆಲ್ಲರೂ ಈ ‘ಪೈಪೋಟಿ’ಯ ಬಗ್ಗೆ ಪ್ರಶ್ನೆಗಳನ್ನು ಕೇಳುವುದನ್ನು ನಿಲ್ಲಿಸಬೇಕು ಎಂದು ಸೂರ್ಯಕುಮಾರ್ ಯಾದವ್ ಹೇಳಿದರು.
ಒಂದು ತಂಡವು ಪರಸ್ಪರ 15 ಅಥವಾ 20 ಪಂದ್ಯಗಳನ್ನು ಆಡಿದರೆ, ಅದರಲ್ಲಿ ಉಭಯ ತಂಡಗಳು ಸ್ 7-7 ಅಥವಾ 8-7 ಪಂದ್ಯಗಳನ್ನು ಗೆದ್ದರೆ ಮಾತ್ರ ಅದನ್ನು ಪೈಪೋಟಿ ಎಂದು ಕರೆಯಲಾಗುತ್ತದೆ. ಆದರೆ ನನ್ನ ಊಹೆ ಪ್ರಕಾರ ನಾವು ಪಾಕಿಸ್ತಾನ್ ವಿರುದ್ಧ 13-0, 10-1 ಅಂತರದಿಂದ ಮೇಲುಗೈ ಹೊಂದಿದ್ದೇವೆ. ಹೀಗಾಗಿ ಭಾರತಕ್ಕೆ ಪಾಕಿಸ್ತಾನ್ ಸಾಟಿಯೇ ಅಲ್ಲ. ಇದೇ ಕಾರಣದಿಂದ ಇನ್ಮುಂದೆ ಉಭಯ ತಂಡಗಳ ಪಂದ್ಯವನ್ನು ಪೈಪೋಟಿ ಎಂದು ಬಿಂಬಿಸದಿರಿ ಎಂದು ಟೀಮ್ ಇಂಡಿಯಾ ನಾಯಕ ಹೇಳಿದ್ದಾರೆ.
ಅತ್ತ ಮೊದಲೇ ಸೋತು ಭಾರೀ ಮುಖಭಂಗ ಅನುಭವಿಸಿರುವ ಪಾಕ್ ತಂಡವು ಇದೀಗ ಸೂರ್ಯಕುಮಾರ್ ಯಾದವ್ ಅವರ ಬಹಿರಂಗ ಹೇಳಿಕೆಯಿಂದ ಮತ್ತಷ್ಟು ಅಪಮಾನಕ್ಕೀಡಾಗಿದೆ. ಅಲ್ಲದೆ ಇದೇ ಹೇಳಿಕೆಯೊಂದಿಗೆ ಪಾಕಿಸ್ತಾನ್ ತಂಡವನ್ನು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ.
ಇದನ್ನೂ ಓದಿ: VIDEO: ಬದ್ಧ ವೈರಿಗಳ ಕದನ… ಹಾರಿಸ್ ರೌಫ್ಗೆ ಚಳಿ ಬಿಡಿಸಿದ ಅಭಿಷೇಕ್ ಶರ್ಮಾ
ಸದ್ಯ ಪಾಕಿಸ್ತಾನ್ ವಿರುದ್ಧ ಗೆದ್ದು ಬೀಗಿರುವ ಟೀಮ್ ಇಂಡಿಯಾ ಸೆಪ್ಟೆಂಬರ್ 24 ರಂದು ನಡೆಯಲಿರುವ ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡವನ್ನು ಎದುರಿಸಲಿದೆ. ಈ ಪಂದ್ಯದ ಬಳಿಕ ಸೆಪ್ಟೆಂಬರ್ 26 ರಂದುಶ್ರೀಲಂಕಾ ವಿರುದ್ಧ ಸೆಣಸಲಿದೆ. ಈ ಎರಡು ಮ್ಯಾಚ್ಗಳಲ್ಲಿ ಗೆಲುವು ದಾಖಲಿಸಿದರೆ ಟೀಮ್ ಇಂಡಿಯಾ ನೇರವಾಗಿ ಫೈನಲ್ಗೆ ಎಂಟ್ರಿ ಕೊಡಲಿದೆ.
