
2025 ರ ಏಷ್ಯಾಕಪ್ನ (Asia Cup 2025) ಅತಿ ದೊಡ್ಡ ಪಂದ್ಯ ಸೆಪ್ಟೆಂಬರ್ 14 ರಂದು ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವೆ ನಡೆಯಲಿದೆ. ಎರಡೂ ತಂಡಗಳು ಒಂದೇ ಗುಂಪಿನಲ್ಲಿದ್ದು, ಮೊದಲ ಪಂದ್ಯವನ್ನು ಗೆದ್ದಿರುವ ಈ ಎರಡೂ ತಂಡಗಳಿಗೆ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಟಿ20 ಪಂದ್ಯಕ್ಕೂ ಮುನ್ನ, ಟೀಂ ಇಂಡಿಯಾದ ಆಡುವ ಹನ್ನೊಂದರ ಬಳಗದ ಬಗ್ಗೆ ದೊಡ್ಡ ಅಪ್‌ಡೇಟ್ ಹೊರಬಿದ್ದಿದೆ. ಪಂದ್ಯಕ್ಕೂ ಒಂದು ದಿನ ಮೊದಲು, ಟೀಂ ಇಂಡಿಯಾದ ಸಹಾಯಕ ಕೋಚ್ ರಯಾನ್ ಟೆನ್ ಡೋಸ್ಚೇಟ್ ಪತ್ರಿಕಾಗೋಷ್ಠಿ ನಡೆಸಿ ತಂಡದ ಸಂಭಾವ್ಯ ಪ್ಲೇಯಿಂಗ್ 11 ಅನ್ನು ಬಹಿರಂಗಪಡಿಸಿದ್ದಾರೆ.
ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾರತದ ಸಹಾಯಕ ಕೋಚ್ ರಯಾನ್ ಟೆನ್ ಡೋಸ್ಚೇಟ್, ‘ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಟೀಂ ಇಂಡಿಯಾದ ಪ್ಲೇಯಿಂಗ್ 11 ಬದಲಾಯಿಸುವ ಯಾವುದೇ ಯೋಜನೆ ಇಲ್ಲ ಎಂದು ಹೇಳಿದ್ದಾರೆ. ಅಂದರೆ ಸೆಪ್ಟೆಂಬರ್ 10 ರಂದು ಆತಿಥೇಯ ಯುನೈಟೆಡ್ ಅರಬ್ ಎಮಿರೇಟ್ಸ್ ವಿರುದ್ಧ ಕಣಕ್ಕಿಳಿದಿದ್ದ ಭಾರತ ತಂಡವೇ ಕಣಕ್ಕಿಳಿಯಲಿದೆ ಎಂಬುದು ಕೋಚ್ ಸ್ಪಷ್ಟಪಡಿಸಿದ್ದಾರೆ.ಇದರರ್ಥ ತಂಡದ ಯುವ ವೇಗದ ಬೌಲರ್ ಅರ್ಷದೀಪ್ ಸಿಂಗ್‌ಗೆ ಈ ಪಂದ್ಯದಲ್ಲೂ ಅವಕಾಶ ಸಿಗುವುದು ಕಷ್ಟಕರವೆಂದು ತೋರುತ್ತದೆ. ವಾಸ್ತವವಾಗಿ ಕಳೆದ ಪಂದ್ಯದಲ್ಲಿ ಅವರಿಗೆ ಪ್ಲೇಯಿಂಗ್ 11 ರಲ್ಲಿ ಸ್ಥಾನ ಸಿಕ್ಕಿರಲಿಲ್ಲ.
ಭಾರತದ ಸಂಭಾವ್ಯ ಪ್ಲೇಯಿಂಗ್ 11: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಶುಭ್ಮನ್ ಗಿಲ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ.
ಭಾರತ- ಪಾಕ್ ಪಂದ್ಯಕ್ಕೂ ಮುನ್ನ ಐಪಿಎಲ್- ಪಿಎಸ್ಎಲ್ ತಂಡಗಳ ನಡುವೆ ಪೋಸ್ಟರ್ ವಾರ್
ಇತ್ತ ಪಾಕಿಸ್ತಾನ ತಂಡದ ಪ್ಲೇಯಿಂಗ್ ಹೇಗಿರಲಿದೆ ಎಂಬುದನ್ನು ನೋಡುವುದಾದರೆ.. ಪಾಕ್ ತಂಡದಲ್ಲೂ ಬದಲಾವಣೆಗಳಾಗುವ ಸಾಧ್ಯತೆಗಳಿಲ್ಲ. ಏಕೆಂದರೆ ಒಮಾನ್ ವಿರುದ್ಧ 93 ರನ್ಗಳ ಜಯ ಸಾಧಿಸಿರುವ ಪಾಕ್ ತಂಡದ ಗೆಲುವಿನ ಸಂಯೋಜನೆಯನ್ನು ಹಾಳು ಮಾಡುವುದಕ್ಕೆ ಆಯ್ಕೆ ಮಂಡಳಿ ಮುಂದಾಗುವುದಿಲ್ಲ. ಹೀಗಾಗಿ ಒಮಾನ್ ವಿರುದ್ಧ ಕಣಕ್ಕಿಳಿದ ತಂಡವೇ ಟೀಂ ಇಂಡಿಯಾ ವಿರುದ್ಧ ಆಡುವುದನ್ನು ನಾವು ಕಾಣಬಹುದು. ಇದರರ್ಥ ಪಾಕ್ ತಂಡದ ಅನುಭವಿ ವೇಗಿ ಹ್ಯಾರಿಸ್ ರೌಫ್ ಈ ಪಂದ್ಯದಲ್ಲೂ ಬೆಂಚ್ ಕಾಯುವುದು ಖಚಿತ ಎನ್ನಬಹುದು.
ಪಾಕಿಸ್ತಾನ ಸಂಭಾವ್ಯ ಪ್ಲೇಯಿಂಗ್ 11: ಸೈಮ್ ಅಯೂಬ್, ಸಾಹಿಬ್‌ಜಾದಾ ಫರ್ಹಾನ್, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಫಖರ್ ಜಮಾನ್, ಸಲ್ಮಾನ್ ಆಘಾ (ನಾಯಕ), ಹಸನ್ ನವಾಜ್, ಮೊಹಮ್ಮದ್ ನವಾಜ್, ಫಹೀಮ್ ಅಶ್ರಫ್, ಶಾಹೀನ್ ಅಫ್ರಿದಿ, ಸುಫಿಯಾನ್ ಮುಕೀಮ್, ಅಬ್ರಾರ್ ಅಹ್ಮದ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ