IND vs PAK: ಭಾರತ- ಪಾಕ್ ನಡುವಿನ ಪಂದ್ಯದ ಬಗ್ಗೆ ಅನುರಾಗ್ ಠಾಕೂರ್ ಹೇಳಿದ್ದೇನು? ನೀವೇ ನೋಡಿ
India vs Pakistan Asia Cup Match: ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳು ಏಷ್ಯಾಕಪ್‌ನಲ್ಲಿ ಗೆಲುವಿನ ಆರಂಭ ಪಡೆದಿವೆ. ಆದರೆ, ಭಾರತ-ಪಾಕಿಸ್ತಾನ ಪಂದ್ಯಕ್ಕೆ ದೇಶದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರು ಈ ವಿವಾದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಅವರು, ಎಸಿಸಿ ಪಂದ್ಯಾವಳಿಗಳಲ್ಲಿ ಭಾಗವಹಿಸುವುದು ಕಡ್ಡಾಯ ಎಂದು ಹೇಳಿದ್ದಾರೆ. ಆದರೆ, ಭಾರತ ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಪಂದ್ಯಗಳನ್ನು ಆಡುವುದಿಲ್ಲ ಎಂದೂ ತಿಳಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳು ಏಷ್ಯಾಕಪ್‌ನಲ್ಲಿ ಗೆಲುವಿನ ಶುಭಾರಂಭ ಮಾಡಿದೆ. ಭಾರತ ತನ್ನ ಮೊದಲ ಪಂದ್ಯದಲ್ಲಿ ಯುಎಇ ತಂಡವನ್ನು ಸೋಲಿಸಿದರೆ, ಪಾಕಿಸ್ತಾನ, ಒಮಾನ್ ತಂಡವನ್ನು ಸೋಲಿಸಿದೆ. ಇದೀಗ ಗುಂಪಿನಲ್ಲಿ ಅಗ್ರಸ್ಥಾನ ಪಡೆಯಬೇಕೆಂದರೆ ಎರಡೂ ತಂಡಗಳಿಗೆ ಮುಂದಿನ ಪಂದ್ಯದಲ್ಲಿ ಗೆಲುವು ಮುಖ್ಯವಾಗಿದೆ. ಹೀಗಾಗಿ ಈ ಪಂದ್ಯಕ್ಕೆ ಎರಡೂ ತಂಡಗಳು ಬಲವಾಗಿ ತಯಾರಿ ನಡೆಸಿವೆ. ಆದಾಗ್ಯೂ ಉಭಯ ತಂಡಗಳ ನಡುವಿನ ಈ ಪಂದ್ಯಕ್ಕೆ ಭಾರತದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಂತೂ ನೆಟ್ಟಿಗರು, ಭಾರತ ಸರ್ಕಾರ ಹಾಗೂ ಬಿಸಿಸಿಐಗೆ ಛಿಮಾರಿ ಹಾಕುತ್ತಿದ್ದಾರೆ. ಇದೀಗ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ಬಗ್ಗೆ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಸ್ಪಷ್ಟನೆ ನೀಡಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ಪಂದ್ಯಾವಳಿಯ ಕುರಿತು ಮಾತನಾಡಿರುವ ಬಿಜೆಪಿ ಸಂಸದ ಅನುರಾಗ್ ಠಾಕೂರ್, ‘ಎಸಿಸಿ ಅಥವಾ ಐಸಿಸಿ ಬಹುರಾಷ್ಟ್ರೀಯ ಪಂದ್ಯಾವಳಿಗಳನ್ನು ಆಯೋಜಿಸಿದಾಗ, ರಾಷ್ಟ್ರಗಳು ಭಾಗವಹಿಸುವುದು ಕಡ್ಡಾಯವಾಗುತ್ತದೆ. ಒಂದು ವೇಳೆ ನಮ್ಮ ತಂಡ ಈ ಪಂದ್ಯಾವಳಿಯಲ್ಲಿ ಭಾಗವಹಿಸದಿದ್ದರೆ, ಪಂದ್ಯಾವಳಿಯಿಂದ ಹೊರಗುಳಿಯಬೇಕಾಗುತ್ತದೆ. ಇದರಿಂದಾಗಿ ಇತರ ತಂಡವು ಅಂಕಗಳನ್ನು ಪಡೆಯುತ್ತದೆ ಹೀಗಾಗಿ ಈ ಪಂದ್ಯಾವಳಿಯಲ್ಲಿ ನಮ್ಮ ತಂಡ ಆಡಬೇಕಾಗಿದೆ. ಆದರೆ ಭಾರತ ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಪಂದ್ಯಾವಳಿಗಳನ್ನು ಆಡುವುದಿಲ್ಲ. ಪಾಕಿಸ್ತಾನ ಭಾರತದ ಮೇಲಿನ ಭಯೋತ್ಪಾದಕ ದಾಳಿಯನ್ನು ನಿಲ್ಲಿಸುವವರೆಗೆ ಭಾರತ ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಪಂದ್ಯಾವಳಿಗಳನ್ನು ಆಡುವುದಿಲ್ಲ ಎಂದು ನಾವು ಬಹಳ ಹಿಂದೆಯೇ ನಿರ್ಧಾರ ತೆಗೆದುಕೊಂಡಿದ್ದೇವೆ’ ಎಂದಿದ್ದಾರೆ.

