Pak vs Oman: ಒಮಾನ್ ವಿರುದ್ಧ 93 ರನ್ಗಳಿಂದ ಗೆದ್ದ ಪಾಕಿಸ್ತಾನ
Pakistan Crushes Oman by 93 Runs in Asia Cup 2025: ಏಷ್ಯಾಕಪ್ 2025ರ ನಾಲ್ಕನೇ ಪಂದ್ಯದಲ್ಲಿ ಪಾಕಿಸ್ತಾನ ಒಮಾನ್ ವಿರುದ್ಧ 93 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಮೊಹಮ್ಮದ್ ಹ್ಯಾರಿಸ್ ಅವರ ಅರ್ಧಶತಕದ ನೆರವಿನಿಂದ ಪಾಕಿಸ್ತಾನ 160 ರನ್ ಗಳಿಸಿತು. ಒಮಾನ್ ತಂಡ ಕೇವಲ 60 ರನ್‌ಗಳಿಗೆ ಆಲೌಟ್ ಆಯಿತು.

2025 ರ ಏಷ್ಯಾಕಪ್‌ನ (Asia Cup 2025) ನಾಲ್ಕನೇ ಪಂದ್ಯವು ಪಾಕಿಸ್ತಾನ ಮತ್ತು ಓಮನ್ (Pakistan vs Oman) ನಡುವೆ ನಡೆಯಿತು. ಈ ಪಂದ್ಯದಲ್ಲಿ ಪಾಕಿಸ್ತಾನ ತಂಡ ಒಮಾನ್ ತಂಡವನ್ನು 93 ರನ್ಗಳಿಂದ ಸೋಲಿಸಿ ಟೂರ್ನಿಯಲ್ಲಿ ಗೆಲುವಿನ ಆರಂಭ ಮಾಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಸ್ಫೋಟಕ ಬ್ಯಾಟರ್ ಮೊಹಮ್ಮದ್ ಹ್ಯಾರಿಸ್ ಅವರ ಅರ್ಧಶತಕದ ಆಧಾರದ ಮೇಲೆ ಪಾಕ್ ತಂಡ 20 ಓವರ್‌ಗಳಲ್ಲಿ ಏಳು ವಿಕೆಟ್‌ಗಳಿಗೆ 160 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಒಮಾನ್ ತಂಡ ನಿಯಮಿತ ಅಂತರದಲ್ಲಿ ವಿಕೆಟ್ ಕಳೆದುಕೊಂಡು ಕೇವಲ 60 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಪಾಕ್ ತಂಡ ತನ್ನ ಮೊದಲ ಪಂದ್ಯದಲ್ಲಿ 93 ರನ್‌ಗಳ ಭರ್ಜರಿ ಜಯ ದಾಖಲಿಸಿತು.
ಪಾಕಿಸ್ತಾನಕ್ಕೆ ಆರಂಭಿಕ ಆಘಾತ
ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನದ ಆರಂಭ ಕೆಟ್ಟದಾಗಿತ್ತು. ಮೊದಲ ಓವರ್‌ನ ಎರಡನೇ ಎಸೆತದಲ್ಲಿ ಆರಂಭಿಕ ಸೈಮ್ ಅಯೂಬ್ ಎಲ್‌ಬಿಡಬ್ಲ್ಯೂ ಔಟ್ ಆದರು. ಅವರು ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ಇದಾದ ನಂತರ, ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮೊಹಮ್ಮದ್ ಹ್ಯಾರಿಸ್, ಸಾಹಿಬ್‌ಜಾದಾ ಫರ್ಹಾನ್ ಜೊತೆ ಸೇರಿ ಎರಡನೇ ವಿಕೆಟ್‌ಗೆ 63 ಎಸೆತಗಳಲ್ಲಿ 85 ರನ್‌ಗಳ ಜೊತೆಯಾಟ ನಡೆಸಿದರು. ಆದರೆ 29 ಎಸೆತಗಳಲ್ಲಿ 29 ರನ್ ಬಾರಿಸಿದ ಫರ್ಹಾನ್ ಔಟ್ ಆಗುವ ಮೂಲಕ ಈ ಜೊತೆಯಾಟ ಮುರಿದು ಬಿತ್ತು.
ಮೊಹಮ್ಮದ್ ಹ್ಯಾರಿಸ್ ಅರ್ಧಶತಕ
ಆದಾಗ್ಯೂ ತಂಡದ ಪರ ಸ್ಫೋಟಕ ಬ್ಯಾಟಿಂಗ್ ಮಾಡಿದ ಮೊಹಮ್ಮದ್ ಹ್ಯಾರಿಸ್ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ತಮ್ಮ ಮೊದಲ ಅರ್ಧಶತಕವನ್ನು ಪೂರೈಸಿದರು. 43 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ಸಹಾಯದಿಂದ 66 ರನ್ ಗಳಿಸಿ ಔಟಾದರು. ಆ ನಂತರ ಬಂದ ನಾಯಕ ಸಲ್ಮಾನ್ ಅಗಾ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದರು. ಮೊಹಮ್ಮದ್ ನವಾಜ್ 19 ರನ್ ಗಳಿಸಿ ಔಟಾದರೆ, ಫಹೀಮ್ ಅಶ್ರಫ್ ಎಂಟು ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಫಖರ್ ಜಮಾನ್ 23 ರನ್ ಗಳಿಸಿ ಅಜೇಯರಾಗಿ ಉಳಿದರೆ, ಶಾಹೀನ್ ಶಾ ಅಫ್ರಿದಿ ಎರಡು ರನ್ ಗಳಿಸಿ ಅಜೇಯರಾಗಿ ಉಳಿದರು. ಒಮಾನ್ ಪರ ಶಾ ಫೈಸಲ್ ಮತ್ತು ಆಮಿರ್ ಕಲೀಮ್ ತಲಾ ಮೂರು ವಿಕೆಟ್ ಪಡೆದರೆ, ಮೊಹಮ್ಮದ್ ನದೀಮ್ ಒಂದು ವಿಕೆಟ್ ಪಡೆದರು.
ಸತತ 2 ಎಸೆತಗಳಲ್ಲಿ 2 ವಿಕೆಟ್, ಪಾಕ್ ನಾಯಕ ಸೊನ್ನೆಗೆ ಔಟ್; ವಿಡಿಯೋ ನೋಡಿ
ಪಾಕ್ ಬೌಲಿಂಗ್ಗೆ ತತ್ತರಿಸಿದ ಒಮಾನ್
ಗುರಿ ಬೆನ್ನಟ್ಟಿದ ಒಮಾನ್ ತಂಡ ಕೂಡ ಮೊದಲ ಓವರ್ನಲ್ಲೇ ಆಘಾತ ಎದುರಿಸಿತು. ನಾಯಕ ಜತೀಂದರ್ ಸಿಂಗ್ ಕೇವಲ ಒಂದು ರನ್ ಗಳಿಸಿ ಔಟಾದರು. ಮತ್ತೊಬ್ಬ ಆರಂಭಿಕ ಆಮಿರ್ ಕಲೀಮ್ ಕೂಡ ಕೇವಲ 13 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಮೂರನೇ ಕ್ರಮಾಂಕದಲ್ಲಿ ಬಂದ ಹಮ್ಮದ್ ಮಿರ್ಜಾ ತಂಡದ ಪರ ಅತ್ಯಧಿಕ 27 ರನ್‌ಗಳ ಇನ್ನಿಂಗ್ಸ್ ಆಡಿದನ್ನು ಬಿಟ್ಟರೆ, ಉಳಿದವರಿಗೆ ಒಂದಂಕಿ ಕೂಡ ದಾಟಲು ಸಾಧ್ಯವಾಗಲಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:30 pm, Fri, 12 September 25
