Asia Cup 2025: 6 ದಿನಗಳ ಮೊದಲೇ ದುಬೈಗೆ ಹಾರಲಿದೆ ಟೀಂ ಇಂಡಿಯಾ

Team India's Asia Cup 2025 Prep: ಭಾರತ ಕ್ರಿಕೆಟ್ ತಂಡವು 2025ರ ಏಷ್ಯಾಕಪ್‌ಗಾಗಿ ಸೆಪ್ಟೆಂಬರ್ 4 ರಂದು ದುಬೈಗೆ ಪ್ರಯಾಣಿಸಲಿದೆ. ಆದರೆ ಈ ಬಾರಿ ಅಚ್ಚರಿಯ ಸಂಗತಿಯೆಂದರೆ, ಎಲ್ಲಾ ಆಟಗಾರರು ಪ್ರತ್ಯೇಕವಾಗಿ ಪ್ರಯಾಣಿಸುತ್ತಿದ್ದಾರೆ. ಸೆಪ್ಟೆಂಬರ್ 10 ರಂದು ಯುಎಇ ವಿರುದ್ಧ ಮೊದಲ ಪಂದ್ಯವಿದೆ. ಲಾಜಿಸ್ಟಿಕ್ಸ್ ಸುಲಭಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿಸಿಸಿಐ ತಿಳಿಸಿದೆ. ತಂಡವು ಸೂರ್ಯಕುಮಾರ್ ಯಾದವ್ ನೇತೃತ್ವದಲ್ಲಿದೆ ಮತ್ತು ಸೆಪ್ಟೆಂಬರ್ 14 ರಂದು ಪಾಕಿಸ್ತಾನ ಮತ್ತು ಸೆಪ್ಟೆಂಬರ್ 19 ರಂದು ಓಮನ್ ವಿರುದ್ಧ ಪಂದ್ಯಗಳನ್ನು ಆಡಲಿದೆ.

Asia Cup 2025: 6 ದಿನಗಳ ಮೊದಲೇ ದುಬೈಗೆ ಹಾರಲಿದೆ ಟೀಂ ಇಂಡಿಯಾ
Team India

Updated on: Sep 04, 2025 | 5:33 PM

2025 ರ ಏಷ್ಯಾಕಪ್‌ನಲ್ಲಿ (Asia Cup 2025) ಟೀಂ ಇಂಡಿಯಾ ಸೆಪ್ಟೆಂಬರ್ 10 ರಂದು ತನ್ನ ಮೊದಲ ಪಂದ್ಯವನ್ನು ಆಡಲಿದೆ. ಆದರೆ ಅದಕ್ಕೂ ಮುನ್ನ ಅಲ್ಲಿನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಸಲುವಾಗಿ ಭಾರತ ತಂಡವು 6 ದಿನಗಳ ಮೊದಲೇ ದುಬೈ ತಲುಪಲಿದೆ. ವರದಿಗಳ ಪ್ರಕಾರ, ಟೀಂ ಇಂಡಿಯಾ (Team India) ಸೆಪ್ಟೆಂಬರ್ 4 ರಂದು ದುಬೈಗೆ ಹಾರಲಿದೆ. ಆಶ್ಚರ್ಯಕರ ಸಂಗತಿಯೆಂದರೆ ಎಲ್ಲಾ ಆಟಗಾರರು ಪ್ರತ್ಯೇಕವಾಗಿ ಪ್ರಯಾಣ ಬೆಳೆಸಲಿದ್ದಾರೆ. ಸಾಮಾನ್ಯವಾಗಿ ಯಾವುದೇ ಪ್ರವಾಸಕ್ಕೂ ಟೀಂ ಇಂಡಿಯಾದ ಎಲ್ಲಾ ಆಟಗಾರರು ಮುಂಬೈನಲ್ಲಿ ಒಟ್ಟುಗೂಡುತ್ತಾರೆ, ಆ ನಂತರ ಅಲ್ಲಿಂದ ಪ್ರಯಾಣ ಬೆಳೆಸುತ್ತಾರೆ. ಆದರೆ ಈ ಬಾರಿ ಎಲ್ಲಾ ಆಟಗಾರರು ವಿಭಿನ್ನ ಸಮಯಗಳಲ್ಲಿ ತಮ್ಮ ತಮ್ಮ ನಗರಗಳಿಂದಲೇ ದುಬೈಗೆ ವಿಮಾನ ಹತ್ತಲಿದ್ದಾರೆ. ಆಟಗಾರರ ಲಾಜಿಸ್ಟಿಕ್ಸ್ ಮತ್ತು ಪ್ರಯಾಣದ ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ (BCCI) ಈ ನಿರ್ಧಾರವನ್ನು ತೆಗೆದುಕೊಂಡಿದೆ.

ಪ್ರತ್ಯೇಕವಾಗಿ ದುಬೈಗೆ ಪ್ರಯಾಣ

ಪಿಟಿಐ ವರದಿಯ ಪ್ರಕಾರ, ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು, ‘ಎಲ್ಲಾ ಆಟಗಾರರು ಸೆಪ್ಟೆಂಬರ್ 4 ರ ಸಂಜೆಯೊಳಗೆ ದುಬೈ ತಲುಪಲಿದ್ದಾರೆ. ಆ ಬಳಿಕ ಮೊದಲ ನೆಟ್ ಸೆಷನ್ ಸೆಪ್ಟೆಂಬರ್ 5 ರಂದು ಐಸಿಸಿ ಅಕಾಡೆಮಿಯಲ್ಲಿ ನಡೆಯಲಿದೆ. ಲಾಜಿಸ್ಟಿಕ್ಸ್ ಸೌಲಭ್ಯವನ್ನು ಗಮನದಲ್ಲಿಟ್ಟುಕೊಂಡು, ಆಟಗಾರರು ತಮ್ಮ ನಗರಗಳಿಂದ ದುಬೈಗೆ ಹಾರಲು ಅವಕಾಶ ನೀಡಲಾಗುವುದು’ ಎಂದು ಹೇಳಿದ್ದಾರೆ.

ಭಾರತ ತಂಡ ಮತ್ತು ವೇಳಾಪಟ್ಟಿ

ಏಷ್ಯಾಕಪ್‌ಗಾಗಿ ಭಾರತ 15 ಸದಸ್ಯರ ತಂಡವನ್ನು ಆಯ್ಕೆ ಮಾಡಿದೆ. ಈ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸುತ್ತಿದ್ದಾರೆ. ಶುಭ್​ಮನ್ ಗಿಲ್ ಉಪನಾಯಕ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅವರಲ್ಲದೆ, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ಅರ್ಶ್ದೀಪ್ ಸಿಂಗ್, ಕುಲ್ದೀಪ್ ಯಾದವ್, ಸಂಜು ಸ್ಯಾಮ್ಸನ್, ಹರ್ಷಿತ್ ರಾಣಾ, ರಿಂಕು ಸಿಂಗ್ ಕೂಡ ತಂಡದಲ್ಲಿದ್ದಾರೆ. ಇವರಲ್ಲದೆ, ರಿಯಾನ್ ಪರಾಗ್, ಧ್ರುವ್ ಜುರೆಲ್, ಯಶಸ್ವಿ ಜೈಸ್ವಾಲ್, ಪ್ರಸಿದ್ಧ್ ಕೃಷ್ಣ, ವಾಷಿಂಗ್ಟನ್ ಸುಂದರ್ ಅವರನ್ನು ಸ್ಟ್ಯಾಂಡ್-ಬೈ ಆಟಗಾರರನ್ನಾಗಿ ಆಯ್ಕೆ ಮಾಡಲಾಗಿದೆ. ಆದಾಗ್ಯೂ, ಈ ಆಟಗಾರರು ತಂಡದೊಂದಿಗೆ ದುಬೈಗೆ ಪ್ರಯಾಣಿಸುವುದಿಲ್ಲ.

ಭಾರತದ ವೇಳಾಪಟ್ಟಿಯ ಬಗ್ಗೆ ಹೇಳುವುದಾದರೆ, ಈ ತಂಡವು ಸೆಪ್ಟೆಂಬರ್ 10 ರಂದು ಯುಎಇ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಇದರ ನಂತರ, ಸೆಪ್ಟೆಂಬರ್ 14 ರಂದು ದುಬೈನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಆಡಲಿದೆ. ಆ ಬಳಿಕ ಲೀಗ್​ನ ಕೊನೆಯ ಹಾಗೂ ಮೂರನೇ ಪಂದ್ಯವನ್ನು ಸೆಪ್ಟೆಂಬರ್ 19 ರಂದು ಓಮನ್ ವಿರುದ್ಧ ಆಡಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:36 pm, Thu, 28 August 25