Asia Cup 2025: ಪಿಸಿಬಿ ಅಧ್ಯಕ್ಷನ ಹೊಸ ನಾಟಕ; ರೌಫ್ ದಂಡವನ್ನು ನಾನೇ ಕಟ್ಟುತ್ತೇನೆ ಎಂದ ನಖ್ವಿ

Asia Cup 2025: ಪಾಕಿಸ್ತಾನದ ವೇಗದ ಬೌಲರ್ ಹ್ಯಾರಿಸ್ ರೌಫ್‌ಗೆ ವಿಧಿಸಿದ ದಂಡವನ್ನು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ತಾನೇ ಪಾವತಿಸುವುದಾಗಿ ಹೇಳಿದ್ದಾರೆ. ಐಸಿಸಿ ರೌಫ್‌ಗೆ ದಂಡ ವಿಧಿಸಿದರೆ, ಫರ್ಹಾನ್‌ಗೆ ಎಚ್ಚರಿಕೆ ನೀಡಿದೆ. ಫರ್ಹಾನ್‌ಗೆ ಐಸಿಸಿ ನೀಡಿದ್ದ ಎಚ್ಚರಿಕೆಯ ನಿರ್ಧಾರದ ವಿರುದ್ಧ ಬಿಸಿಸಿಐ ಮೇಲ್ಮನವಿ ಸಲ್ಲಿಸಿದೆ.

Asia Cup 2025: ಪಿಸಿಬಿ ಅಧ್ಯಕ್ಷನ ಹೊಸ ನಾಟಕ; ರೌಫ್ ದಂಡವನ್ನು ನಾನೇ ಕಟ್ಟುತ್ತೇನೆ ಎಂದ ನಖ್ವಿ
Mohsin Naqvi

Updated on: Sep 27, 2025 | 8:18 PM

ಏಷ್ಯಾಕಪ್ (Asia Cup) ಆರಂಭಕ್ಕೂ ಮುನ್ನವೇ ಹುಟ್ಟಿಕೊಂಡಿದ್ದ ವಿವಾದಗಳು ಈ ಟೂರ್ನಿ ಮುಗಿಯುವ ಹಂತಕ್ಕೆ ಬಂದರೂ ಅಂತ್ಯಗೊಂಡಿಲ್ಲ. ಇದೆಲ್ಲದರ ನಡುವೆ ಕೆಲವು ದಿನಗಳ ಹಿಂದೆ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವಿವಾದಾತ್ಮಕ ಫೋಟೋ ಪೋಸ್ಟ್ ಮಾಡಿದ್ದಕ್ಕಾಗಿ ಟೀಕೆಗಳನ್ನು ಎದುರಿಸಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ (Mohsin Naqvi) ಮತ್ತೊಮ್ಮೆ ವಿವಾದದಲ್ಲಿ ಸಿಲುಕುವ ಸಾಧ್ಯತೆ ಇದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್​​ನ ಅಧ್ಯಕ್ಷರು ಆಗಿರುವ ನಖ್ವಿ, ಐಸಿಸಿ (ICC) ಪಾಕ್ ಕ್ರಿಕೆಟಿಗನಿಗೆ ವಿಧಿಸಿರುವ ದಂಡವನ್ನು ತಾನು ಪಾವತಿಸುವುದಾಗಿ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.

ಸೆಪ್ಟೆಂಬರ್ 21 ರಂದು ನಡೆದಿದ್ದ ಟೀಂ ಇಂಡಿಯಾ ವಿರುದ್ಧದ ಪಂದ್ಯದ ಸಮಯದಲ್ಲಿ ಪಾಕ್ ವೇಗಿ ಹ್ಯಾರಿಸ್ ರೌಫ್ ಪ್ರಚೋದನಕಾರಿ ಸನ್ನೆಗಳನ್ನು ಮಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಬಿಸಿಸಿಐ, ಇದು ಆಟದ ನಿಯಮಗಳಿಗೆ ವಿರುದ್ಧವಾಗಿ ಎಂದು ಐಸಿಸಿಗೆ ದೂರು ನೀಡಿತ್ತು. ದೂರಿನನ್ವಯ ವಿಚಾರಣೆ ನಡೆಸಿದ್ದ ಐಸಿಸಿ, ಹ್ಯಾರಿಸ್ ರೌಫ್​ಗೆ ಶೇ.30 ರಷ್ಟು ಪಂದ್ಯ ಶುಲ್ಕವನ್ನು ದಂಡವಾಗಿ ವಿಧಿಸಿತ್ತು. ಇದೀಗ ಆ ದಂಡದ ಮೊತ್ತವನ್ನು ನಾನು ಪಾವತಿಸುವುದಾಗಿ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಹೇಳಿದ್ದಾರೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.

ಪಿಸಿಬಿ ಅಧ್ಯಕ್ಷರ ಹೊಸ ನಾಟಕ

ಮೇಲೆ ಹೇಳಿದಂತೆ ಐಸಿಸಿ, ಹ್ಯಾರಿಸ್ ರೌಫ್ ಅವರಿಗೆ ಪಂದ್ಯ ಶುಲ್ಕದ ಶೇಕಡಾ 30 ರಷ್ಟು ದಂಡ ವಿಧಿಸಿದರೆ, ಅದೇ ಪಂದ್ಯದಲ್ಲಿ ಗನ್ ಸೆಲೆಬ್ರೇಷನ್‌ ಮಾಡಿದ್ದ ಪಾಕಿಸ್ತಾನದ ಆರಂಭಿಕ ಆಟಗಾರ ಸಾಹಿಬ್ಜಾದಾ ಫರ್ಹಾನ್ ಅವರಿಗೆ ಕೇವಲ ಎಚ್ಚರಿಕೆ ನೀಡಿದೆ. ಇದೀಗ ಪಾಕಿಸ್ತಾನಿ ಮಾಧ್ಯಮಗಳ ಪ್ರಕಾರ, ಪಿಸಿಬಿ ಅಧ್ಯಕ್ಷರು ಹ್ಯಾರಿಸ್ ರೌಫ್ ಅವರಿಗೆ ವಿಧಿಸಲಾದ ಸಂಪೂರ್ಣ ದಂಡವನ್ನು ಪಾವತಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ನಖ್ವಿ ಅವರ ಈ ನಡೆ ರೌಫ್ ಮಾಡಿದ ಫೈಟರ್ ಜೆಟ್ ಅನ್ನು ಹೊಡೆದುರುಳಿಸುವ ಸನ್ನೆಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತಾರೆ ಎಂಬುದನ್ನು ಸ್ಪಷ್ಟಪಡಿಸಿದೆ.

Asia Cup 2025: ಭಾರತ- ಪಾಕ್ ಫೈನಲ್ ಪಂದ್ಯಕ್ಕೆ ಮೀಸಲು ದಿನವಿದೆಯೇ? ದುಬೈ ಹವಾಮಾನ ಹೇಗಿರಲಿದೆ?

ಐಸಿಸಿ ನಿರ್ಧಾರದ ವಿರುದ್ಧ ಬಿಸಿಸಿಐ ಮೇಲ್ಮನವಿ

ಗನ್ ಸೆಲೆಬ್ರೇಷನ್‌ ಮಾಡಿದ್ದ ಸಾಹಿಬ್‌ಜಾದಾ ಫರ್ಹಾನ್ ಅವರಿಗೆ ಐಸಿಸಿ ಕೇವಲ ಎಚ್ಚರಿಕೆ ನೀಡಿತ್ತು. ಏತನ್ಮಧ್ಯೆ, ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ಐಸಿಸಿ ಶೇಕಡಾ 30 ರಷ್ಟು ದಂಡ ವಿಧಿಸಿತ್ತು. ಇದೀಗ ಐಸಿಸಿಯ ಈ ನಿರ್ಧಾರದ ವಿರುದ್ಧ ಬಿಸಿಸಿಐ ಮೇಲ್ಮನವಿ ಸಲ್ಲಿಸಲಿದೆ.

ಸೆಪ್ಟೆಂಬರ್ 14 ರಂದು ಪಾಕಿಸ್ತಾನದ ವಿರುದ್ಧ ಭಾರತ ಜಯಗಳಿಸಿದ ನಂತರ ಸೂರ್ಯಕುಮಾರ್ ಯಾದವ್ ರಾಜಕೀಯ ಪ್ರೇರಿತ ಹೇಳಿಕೆ ನೀಡಿದ್ದಾರೆ ಎಂದು ಪಿಸಿಬಿ ಆರೋಪಿಸಿತ್ತು. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಲಿಪಶುಗಳಿಗೆ ಸಂತಾಪ ಸೂಚಿಸಿ ಮತ್ತು ಆಪರೇಷನ್ ಸಿಂಧೂರ್‌ನಲ್ಲಿ ಭಾಗಿಯಾಗಿರುವ ಭಾರತೀಯ ಸೇನೆಗೆ ವಿಜಯವನ್ನು ಅರ್ಪಿಸುವುದಾಗಿ ಸೂರ್ಯಕುಮಾರ್ ಯಾದವ್ ಹೇಳಿಕೆ ನೀಡಿದ್ದರು. ಪಿಸಿಬಿ ಈ ಬಗ್ಗೆ ಐಸಿಸಿಗೆ ದೂರು ನೀಡಿತ್ತು. ಇದೀಗ ಸೆಪ್ಟೆಂಬರ್ 28 ರಂದು ನಡೆಯುವ ಅಂತಿಮ ಪಂದ್ಯದ ನಂತರ ಬಿಸಿಸಿಐ ಈ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆಯಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:15 pm, Sat, 27 September 25