Asia Cup 2025: ಸೆ.28 ರಂದು ನಡೆಯಲಿರುವ ಫೈನಲ್‌ನಲ್ಲಿ ಭಾರತ ಗೆಲ್ಲುವುದು ಖಚಿತ; ಇಲ್ಲಿದೆ ಪುರಾವೆ
Asia Cup 2025 Final: 2025 ರ ಏಷ್ಯಾಕಪ್ ಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಸೆಪ್ಟೆಂಬರ್ 28 ರಂದು ದುಬೈನಲ್ಲಿ ಮುಖಾಮುಖಿಯಾಗಲಿವೆ. 28ರಂದು ಭಾರತ ಪಾಕ್ ವಿರುದ್ಧ ಹಿಂದಿನ ಪಂದ್ಯಗಳನ್ನು ಗೆದ್ದ ಇತಿಹಾಸವಿದೆ. ಟೀಂ ಇಂಡಿಯಾ ಈವರೆಗೆ 8 ಏಷ್ಯಾಕಪ್ ಪ್ರಶಸ್ತಿಗಳನ್ನು ಗೆದ್ದಿದ್ದು, 9ನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ. ಈ ಐತಿಹಾಸಿಕ ದಿನಾಂಕ ಭಾರತಕ್ಕೆ ಮತ್ತೊಂದು ಗೆಲುವು ತರುತ್ತದೆಯೇ ಕಾದು ನೋಡಬೇಕು.

2025 ರ ಏಷ್ಯಾಕಪ್ (Asia Cup 2025) ಫೈನಲ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಭಾರತ ಮತ್ತು ಪಾಕಿಸ್ತಾನ (India vs Pakistan) ತಂಡಗಳು ಸೆಪ್ಟೆಂಬರ್ 28, 2025 ರಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಪಂದ್ಯಾವಳಿಯ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಅಂತಿಮ ಪಂದ್ಯ ನಡೆಯುತ್ತಿರುವುದು ಇದೇ ಮೊದಲು. ಈ ಟೂರ್ನಿಯಲ್ಲಿ ಈಗಾಗಲೇ ಎರಡು ಬಾರಿ ಪಾಕಿಸ್ತಾನವನ್ನು ಏಕಪಕ್ಷೀಯವಾಗಿ ಸೋಲಿಸಿರುವ ಟೀಂ ಇಂಡಿಯಾ ಮೂರನೇ ಮುಖಾಮುಖಿಯಲ್ಲೂ ಗೆಲುವು ಸಾಧಿಸುವ ವಿಶ್ವಾಸ ಹೊಂದಿದೆ. ಇದೆಲ್ಲದರ ನಡುವೆ ಈ ಏಷ್ಯಾಕಪ್ ಫೈನಲ್ ಪಂದ್ಯ ನಡೆಯುವ ದಿನಾಂಕ ಕೂಡ ಟೀಂ ಇಂಡಿಯಾದ್ದೇ ಗೆಲುವು ಎಂಬುದನ್ನು ಖಚಿತಪಡಿಸುತ್ತಿದೆ. ಹಾಗಿದ್ದರೆ ಏನಿದು ಟೀಂ ಇಂಡಿಯಾದ 28 ರ ನಂಟು ಎಂಬುದು ನೋಡೋಣ ಬನ್ನಿ..
ಗೆಲುವು ನೀಡುತ್ತಾ 28 ರ ನಂಟು?
ವಾಸ್ತವವಾಗಿ 28 ನೇ ದಿನಾಂಕದಂದು ನಡೆದಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ಪಂದ್ಯಗಳಲ್ಲಿ ಟೀಂ ಇಂಡಿಯಾ ಯಾವಾಗಲೂ ವಿಜಯಶಾಲಿಯಾಗಿ ಹೊರಹೊಮ್ಮಿದೆ. ಈ ದಿನಾಂಕದಂದು ಇದುವರೆಗೆ ಉಭಯ ತಂಡಗಳ ನಡುವೆ ಎರಡು ಟಿ20 ಪಂದ್ಯಗಳು ನಡೆದಿವೆ. ಈ ಎರಡೂ ಪಂದ್ಯಗಳನ್ನು ಭಾರತ ಗೆದ್ದುಕೊಂಡಿದೆ. ಮೊದಲ ಬಾರಿಗೆ 2012 ರ ಡಿಸೆಂಬರ್ 28 ರಂದು ನಡೆದಿದ್ದ ಟಿ20 ಪಂದ್ಯದಲ್ಲಿ ಭಾರತ, ಪಾಕಿಸ್ತಾನವನ್ನು 11 ರನ್‌ಗಳಿಂದ ಸೋಲಿಸಿತ್ತು.
ತರುವಾಯ 2022 ರ ಆಗಸ್ಟ್ 28 ರಂದು ನಡೆದಿದ್ದ ಏಷ್ಯಾಕಪ್‌ನ ಟಿ20 ಪಂದ್ಯದಲ್ಲಿ ಭಾರತ ಮತ್ತೆ 4 ವಿಕೆಟ್‌ಗಳಿಂದ ಜಯಗಳಿಸಿತು. ಈ ಎರಡು ಗೆಲುವುಗಳು 28 ನೇ ತಾರೀಖನ್ನು ಭಾರತೀಯ ಅಭಿಮಾನಿಗಳಿಗೆ ಶುಭ ದಿನಾಂಕವನ್ನಾಗಿ ಮಾಡಿವೆ. ಈಗ, ಸೆಪ್ಟೆಂಬರ್ 28, 2025 ರಂದು ನಡೆಯಲಿರುವ ಫೈನಲ್‌ನಲ್ಲಿಯೂ ಟೀಂ ಇಂಡಿಯಾ ಗೆಲ್ಲಲಿದೆ ಎಂಬುದು ಅಭಿಮಾನಿಗಳ ಅಭಿಪ್ರಾಯವಾಗಿದೆ.
ಭಾರತಕ್ಕೆ ಏಕಪಕ್ಷೀಯ ಗೆಲುವು
ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯವು ಕೇವಲ ಆಟವಲ್ಲ, ಭಾವನೆಗಳ ಸುಳಿಗಾಳಿ. ಈ ಪಂದ್ಯಕ್ಕಾಗಿ ಎರಡೂ ದೇಶಗಳ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಆವೃತ್ತಿಯಲ್ಲಿ ಉಭಯ ತಂಡಗಳ ನಡುವಿನ ಮೂರನೇ ಮುಖಾಮುಖಿ ಇದಾಗಿದೆ. ಈ ಹಿಂದೆ, ಉಭಯ ತಂಡಗಳು ಗುಂಪು ಹಂತ ಮತ್ತು ಸೂಪರ್ ಫೋರ್ ಸುತ್ತಿನಲ್ಲಿ ಪರಸ್ಪರ ಮುಖಾಮುಖಿಯಾಗಿದ್ದವು. ಎರಡೂ ಸಂದರ್ಭಗಳಲ್ಲಿ ಟೀಂ ಇಂಡಿಯಾ, ಪಾಕಿಸ್ತಾನವನ್ನು ಸೋಲಿಸಿತು. ಆದ್ದರಿಂದ, ಟೀಂ ಇಂಡಿಯಾ ಹ್ಯಾಟ್ರಿಕ್ ಗೆಲುವು ಸಾಧಿಸುವ ಅವಕಾಶವನ್ನು ಹೊಂದಿದೆ.
Asia Cup 2025: ಪಿಸಿಬಿ ಅಧ್ಯಕ್ಷನ ಹೊಸ ನಾಟಕ; ರೌಫ್ ದಂಡವನ್ನು ನಾನೇ ಕಟ್ಟುತ್ತೇನೆ ಎಂದ ನಖ್ವಿ
9ನೇ ಪ್ರಶಸ್ತಿಯ ಮೇಲೆ ಭಾರತ ಕಣ್ಣು
ಟೀಂ ಇಂಡಿಯಾ ತನ್ನ ಹಾಲಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವುದರ ಜೊತೆಗೆ ಒಂಬತ್ತನೇ ಪ್ರಶಸ್ತಿಯನ್ನು ಗೆಲ್ಲುವ ಇರಾದೆಯಲ್ಲಿದೆ. ಈ ಪಂದ್ಯಾವಳಿಯಲ್ಲಿ ಅತ್ಯಂತ ಯಶಸ್ವಿ ತಂಡವಾಗಿರುವ ಭಾರತ 1984, 1988, 1990-91, 1995, 2010, 2016, 2018, ಮತ್ತು 2023 ರಲ್ಲಿ ಪ್ರಶಸ್ತಿಯನ್ನು ಗೆದ್ದಿದೆ. ಇತ್ತ ಪಾಕಿಸ್ತಾನ ಕೇವಲ ಎರಡು ಬಾರಿ (2000, 2012) ಮಾತ್ರ ಪ್ರಶಸ್ತಿಯನ್ನು ಗೆದ್ದಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
