ಫೈನಲ್ ಪಂದ್ಯಕ್ಕೂ ಮುನ್ನ ಅರ್ಷದೀಪ್ ಸಿಂಗ್ ವಿರುದ್ಧ ದೂರು ನೀಡಿದ ಪಾಕ್

Asia Cup 2025 Final, India vs Pakistan: ಭಾರತ ಮತ್ತು ಪಾಕಿಸ್ತಾನ್ ನಡುವಣ ಮತ್ತೊಂದು ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಈ ಬಾರಿ ವೇದಿಕೆ ರೂಪುಗೊಂಡಿರುವುದು ಏಷ್ಯಾಕಪ್​ ಫೈನಲ್​ನಲ್ಲಿ. ಅಂದರೆ ಇದೇ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಏಷ್ಯಾಕಪ್ ಫೈನಲ್​ನಲ್ಲಿ ಮುಖಾಮುಖಿಯಾಗುತ್ತಿದೆ.

ಫೈನಲ್ ಪಂದ್ಯಕ್ಕೂ ಮುನ್ನ ಅರ್ಷದೀಪ್ ಸಿಂಗ್ ವಿರುದ್ಧ ದೂರು ನೀಡಿದ ಪಾಕ್
Arshdeep Singh

Updated on: Sep 28, 2025 | 1:32 PM

ಏಷ್ಯಾಕಪ್ 2025ರ ಫೈನಲ್ ಪಂದ್ಯದ ಆರಂಭಕ್ಕೆ ಗಂಟೆಗಳು ಮಾತ್ರ ಉಳಿದಿರುವಾಗ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಟೀಮ್ ಇಂಡಿಯಾ ವೇಗಿ ಅರ್ಷದೀಪ್ ಸಿಂಗ್ ವಿರುದ್ಧ ಐಸಿಸಿಗೆ ದೂರು ಸಲ್ಲಿಸಿದೆ. ಭಾರತ ಮತ್ತು ಪಾಕ್ ಪಂದ್ಯದ ವೇಳೆ ಭಾರತೀಯ ವೇಗಿ ಅಶ್ಲೀಲ ಸನ್ನೆಗಳನ್ನು ಮಾಡಿದ್ದಾರೆ ಎಂದು ಪಿಸಿಬಿ ತನ್ನ ದೂರಿನಲ್ಲಿ ಆರೋಪಿಸಿದೆ. ಇದಕ್ಕೂ ಮುನ್ನ ಪಿಸಿಬಿ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ವಿರುದ್ಧವೂ ದೂರು ದಾಖಲಿಸಿತ್ತು.

ಅರ್ಷದೀಪ್ ಸಿಂಗ್ ವಿರುದ್ಧ ಗಂಭೀರ ಆರೋಪ:

ಸೆಪ್ಟೆಂಬರ್ 21 ರಂದು ಭಾರತ ಮತ್ತು ಪಾಕಿಸ್ತಾನ್ ನಡುವಣ ಸೂಪರ್-4 ಪಂದ್ಯ ನಡೆದಿತ್ತು. ಈ ಪಂದ್ಯದ ವೇಳೆ ಟೀಮ್ ಇಂಡಿಯಾ ವೇಗಿ ಅರ್ಷದೀಪ್ ಸಿಂಗ್  ಪ್ರೇಕ್ಷಕರ ಕಡೆಗೆ ಅಶ್ಲೀಲ ಕೈ ಸನ್ನೆಗಳನ್ನು ಮಾಡಿದ್ದಾರೆ ಎಂದು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಇಂತಹ ಅನುಚಿತ ವರ್ತನೆಯೊಂದಿಗೆ ಅರ್ಷ್‌ದೀಪ್ ಸಿಂಗ್ ಐಸಿಸಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದು, ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪಿಸಿಬಿ ಆಗ್ರಹಿಸಿದೆ.

ಸೂರ್ಯಕುಮಾರ್ ವಿರುದ್ಧ ದೂರು:

ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯು ಕೆಲ ದಿನಗಳ ಹಿಂದೆ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ವಿರುದ್ಧ ಐಸಿಸಿಗೆ ದೂರು ನೀಡಿತ್ತು. ಭಾರತ ತಂಡದ ನಾಯಕ  ಕ್ರಿಕೆಟ್ ಅನ್ನು ರಾಜಕೀಯಗೊಳಿಸುತ್ತಿದ್ದಾರೆ ಮತ್ತು ಐಸಿಸಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿತ್ತು.

ಪಿಸಿಬಿ ಇಂತಹದೊಂದು ಆರೋಪ ಮಾಡಲು ಮುಖ್ಯ ಕಾರಣ, ಸೂರ್ಯಕುಮಾರ್ ಯಾದವ್ ಪಾಕಿಸ್ತಾನ್ ವಿರುದ್ಧದ ಗೆಲುವನ್ನು ಆಪರೇಷನ್ ಸಿಂಧೂರ್‌ನಲ್ಲಿ ಭಾಗಿಯಾಗಿದ್ದ ಭಾರತೀಯ ಸೇನೆಗೆ ಅರ್ಪಿಸಿದ್ದು. ಅಲ್ಲದೆ ಈ ಗೆಲುವಿನ ಬಳಿಕ ಪಹಲ್ಗಾಮ್ ದಾಳಿಯನ್ನು ಸಾವನ್ನಪ್ಪಿದವರಿಗೆ ಸಂತಾಪ ಸೂಚಿಸಿ, ಟೀಮ್ ಇಂಡಿಯಾ ಅವರೊಂದಿಗೆ ಇರಲಿದೆ ಎಂಬ ಹೇಳಿಕೆ ನೀಡಿದ್ದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಪಾಕ್ ಕ್ರಿಕೆಟ್ ಮಂಡಳಿ ಐಸಿಸಿಗೆ ದೂರು ಸಲ್ಲಿಸಿದ್ದರು. ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಐಸಿಸಿ ಸೂರ್ಯಕುಮಾರ್ ಯಾದವ್​​ಗೆ ಪಂದ್ಯ ಶುಲ್ಕದ ಶೇ.30 ರಷ್ಟು ದಂಡ ವಿಧಿಸಿತ್ತು.

ರೌಫ್, ಫರ್ಹಾನ್​ಗೂ ದಂಡ:

ಅತ್ತ ಪಿಸಿಬಿ ದೂರು ನೀಡಿದರೆ, ಇತ್ತ ಬಿಸಿಸಿಐ ಪಾಕಿಸ್ತಾನ್ ತಂಡದ ಹಾರಿಸ್ ರೌಫ್ ಹಾಗೂ ಸಾಹಿಬ್​ಝಾದ ಫರ್ಹಾನ್ ವಿರುದ್ಧ ಐಸಿಸಿಗೆ ದೂರು ಸಲ್ಲಿಸಿತ್ತು. ಪಂದ್ಯದ ನಡುವೆ ದುರ್ವತನೆ ತೋರಿದ್ದಾರೆ ಎಂಬ ಬಿಸಿಸಿಐನ ಗಂಭೀರ ಆರೋಪವನ್ನು ಪರಿಗಣಿಸಿ ಹಾರಿಸ್ ರೌಫ್​ಗೆ ಪಂದ್ಯ ಶುಲ್ಕದ 30 ಪ್ರತಿಶತವನ್ನು ದಂಡ ವಿಧಿಸಿದ್ದರು. ಅಲ್ಲದೆ ಸಾಹಿಬ್​ಝಾದ ಫರ್ಹಾನ್​ಗೆ ಎಚ್ಚರಿಕೆ ನೀಡಲಾಗಿತ್ತು.

ಇದನ್ನೂ ಓದಿ: ಭಾರತ vs ಪಾಕಿಸ್ತಾನ್ ನಡುವೆ 5 ಬಾರಿ ಫೈನಲ್​: 3 ಬಾರಿ ಪಾಕ್ ಚಾಂಪಿಯನ್

ಇದೀಗ ಪಾಕ್ ಕ್ರಿಕೆಟ್ ಮಂಡಳಿ ಟೀಮ್ ಇಂಡಿಯಾ ವೇಗಿ ಅರ್ಷದೀಪ್ ಸಿಂಗ್ ಪಾಕಿಸ್ತಾನ್ ಪ್ರೇಕ್ಷಕರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಈ ದೂರಿನ ಬಗ್ಗೆ ಐಸಿಸಿ ಪರಿಶೀಲನೆ ನಡೆಸಲಿದ್ದು, ಈ ಆರೋಪ ಕಂಡು ಬಂದಲ್ಲಿ ಅರ್ಷದೀಪ್ ಸಿಂಗ್​ಗೆ ದಂಡ ವಿಧಿಸುವ ಸಾಧ್ಯತೆಯಿದೆ.