Asia Cup 2022: ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಸ್ಥಳಾಂತರ ಸಾಧ್ಯತೆ..!

| Updated By: ಝಾಹಿರ್ ಯೂಸುಫ್

Updated on: Jul 17, 2022 | 1:40 PM

Asia Cup 2022: ಏಷ್ಯಾಕಪ್ ದಾಖಲೆಯನ್ನು ನೋಡಿದರೆ ಭಾರತ ತಂಡವೇ ಅತ್ಯಂತ ಯಶಸ್ವಿ ತಂಡವಾಗಿದೆ. ಟೀಮ್ ಇಂಡಿಯಾ 7 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.

Asia Cup 2022: ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಸ್ಥಳಾಂತರ ಸಾಧ್ಯತೆ..!
Asia Cup 2022
Follow us on

ಶ್ರೀಲಂಕಾ ರಾಜಕೀಯ ಅಸ್ಥಿರತೆಯು ಇದೀಗ ಏಷ್ಯಾಕಪ್ (Asia Cup 2022) ಆಯೋಜನೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಏಕೆಂದರೆ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಶ್ರೀಲಂಕಾದಲ್ಲಿ ತೀವ್ರ ಪ್ರತಿಭಟನೆ ಭುಗಿಲೆಳುತ್ತಿದ್ದು, ಹೀಗಾಗಿ ಏಷ್ಯಾಕಪ್​ ಅನ್ನು ಸ್ಥಳಾಂತರ ಮಾಡುವ ಬಗ್ಗೆ ಚಿಂತಿಸಲಾಗಿದೆ. ಈ ಹಿಂದೆ ಟೂರ್ನಿಯನ್ನು ಲಂಕಾದಲ್ಲೇ ನಡೆಸಲು ಪ್ರಯತ್ನಿಸಲಾಗಿತ್ತು. ಆದರೀಗ 16 ದಿನಗಳ ಸುದೀರ್ಘ ಪಂದ್ಯಾವಳಿಯನ್ನು ಯುಎಇಯಲ್ಲಿ ಆಯೋಜಿಸುವ ಸಾಧ್ಯತೆಯಿದೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿ ಮೋಹನ್ ಡಿ ಸಿಲ್ವಾ ತಿಳಿಸಿದ್ದಾರೆ. ಈ ಬಗ್ಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಶ್ರೀಲಂಕಾ ಕ್ರಿಕೆಟ್ ಮಂಡಳಿ ಜೊತೆ ಚರ್ಚಿಸಿದ್ದು, ಇದೇ ವೇಳೆ ಸ್ಥಳ ಬದಲಾವಣೆ ಪ್ರಸ್ತಾಪವನ್ನು ಮುಂದಿಡಲಾಗಿದೆ.

ಈ ಬಾರಿ ಏಷ್ಯಾ ಕಪ್ ಶ್ರೀಲಂಕಾದಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಇದೀಗ ಶ್ರೀಲಂಕಾ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಹೀಗಾಗಿ ಟೂರ್ನಿಯನ್ನು ಯುಎಇಗೆ ಸ್ಥಳಾಂತರ ಮಾಡುವ ಸಾಧ್ಯತೆ ಇದೆ. ಇದಾಗ್ಯೂ ಪಾಕಿಸ್ತಾನ್ ತಂಡವು ಶ್ರೀಲಂಕಾದಲ್ಲಿ ಟೆಸ್ಟ್ ಸರಣಿ ಆಡುತ್ತಿದ್ದು, ಈ ಮೂಲಕ ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ಬೆಂಬಲ ವ್ಯಕ್ತಪಡಿಸಿದೆ. ಹೀಗಾಗಿ ಆಗಸ್ಟ್​​ವರೆಗೂ ಕಾದು ನೋಡುವ ತಂತ್ರಕ್ಕೆ ಲಂಕಾ ಕ್ರಿಕೆಟ್ ಮಂಡಳಿ ಮುಂದಾಗಲಿದೆ. ಇದಾಗ್ಯೂ ಪರಿಸ್ಥಿತಿ ನಿಯಂತ್ರಣಕ್ಕೆ ಬರದಿದ್ದರೆ ಯುಎಇನಲ್ಲಿ ಏಷ್ಯಾಕಪ್ ನಡೆಯಲಿದೆ ಎಂದು ತಿಳಿದು ಬಂದಿದೆ.

ಏಷ್ಯಾ ಕಪ್ ಆಗಸ್ಟ್ 26 ರಿಂದ ಏಷ್ಯಾಕಪ್ ಟಿ20 ಟೂರ್ನಿ ಶುರುವಾಗಲಿದ್ದು, ಸೆಪ್ಟೆಂಬರ್ 11 ರವರೆಗೆ ನಡೆಯಲಿದೆ. ವಿಶೇಷ ಎಂದರೆ ಈ ಬಾರಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನಲ್ಲಿ ಭಾರತ-ಪಾಕಿಸ್ತಾನ್ ಮುಖಾಮುಖಿಯಾಗಲಿದೆ. ಆದರೆ ಅದಕ್ಕೂ ಮುನ್ನ ಉಭಯ ತಂಡಗಳು ಏಷ್ಯಾ ಕಪ್​ನಲ್ಲೂ ಸೆಣಸಾಡಲಿದೆ. ಈ ಬಾರಿ ಏಷ್ಯಾ ಕಪ್​ನಲ್ಲಿ ಒಟ್ಟು 6 ತಂಡಗಳು ಭಾಗವಹಿಸಲಿದ್ದು, ಈಗಾಗಲೇ 5 ತಂಡಗಳು ಅರ್ಹತೆ ಪಡೆದುಕೊಂಡಿದೆ. ಇನ್ನು ಒಂದು ತಂಡವು ಅಂತಿಮವಾಗಬೇಕಿದೆ.

ಇದನ್ನೂ ಓದಿ
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್
Steve Smith: ಬರೋಬ್ಬರಿ 30 ಕೋಟಿ ಲಾಭ ಪಡೆದ ಸ್ಟೀವ್ ಸ್ಮಿತ್..!
Cricket Records: ಕ್ರಿಕೆಟ್ ಇತಿಹಾಸದ ಈ ಅದ್ಭುತ ದಾಖಲೆಗಳನ್ನು ಎಂದಿಗೂ ಮುರಿಯಲಾಗುವುದಿಲ್ಲ!
Team India: 1 ವರ್ಷದೊಳಗೆ 8 ನಾಯಕರನ್ನು ಕಣಕ್ಕಿಳಿಸಿದ ಟೀಮ್ ಇಂಡಿಯಾ..!

ಏಷ್ಯಾಕಪ್ 2022 ಕ್ಕೆ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ತಂಡಗಳು ಅರ್ಹತೆ ಪಡೆದಿವೆ. ಆರನೇ ತಂಡವನ್ನು ಅರ್ಹತಾ ಸುತ್ತಿನಲ್ಲಿ ನಿರ್ಧರಿಸಲಾಗುತ್ತದೆ. ಹಾಂಗ್ ಕಾಂಗ್, ಕುವೈತ್, ಸಿಂಗಾಪುರ ಮತ್ತು ಯುಎಇ ತಂಡಗಳು ಅರ್ಹತಾ ಸುತ್ತಿಗೆ ಪ್ರವೇಶಿಸಿವೆ. ಹೀಗಾಗಿ ಈ ತಂಡಗಳಲ್ಲಿ ಒಂದು ತಂಡವು ಈ ಬಾರಿ ಏಷ್ಯಾ ಕಪ್​ನಲ್ಲಿ ಕಾಣಿಸಿಕೊಳ್ಳಲಿದೆ.

ಅಂದಹಾಗೆ ಈ ಬಾರಿ ಆಯೋಜನೆಗೊಳ್ಳುತ್ತಿರುವುದು 15ನೇ ಸೀಸನ್ ಏಷ್ಯಾ ಕಪ್. 1984 ರಲ್ಲಿ ಯುಎಇನಲ್ಲಿ ಶುರುವಾದ ಏಷ್ಯಾ ಕಪ್​ಗೆ ಈ ಬಾರಿ ಮತ್ತೆ ಯುಎಇ ಆತಿಥ್ಯವಹಿಸುವ ಸಾಧ್ಯತೆಯಿದೆ. ಇನ್ನು ಕಳೆದ ವರ್ಷ ಕೊರೋನಾ ಕಾರಣದಿಂದ ಟೂರ್ನಿಯನ್ನು ನಡೆಸಿರಲಿಲ್ಲ. ಇದೀಗ ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್​ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ಗೂ ಮುನ್ನ ಟೂರ್ನಿಯನ್ನು ಆಯೋಜಿಸಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ನಿರ್ಧರಿಸಿದೆ.

ಏಷ್ಯಾ ಕಪ್ ದಾಖಲೆ: ಇದುವರೆಗೆ ಏಷ್ಯಾಕಪ್ ಅನ್ನು ಏಕದಿನ ಮಾದರಿಯಲ್ಲಿ ಆಡಿಸಲಾಗುತ್ತಿತ್ತು. ಇದೀಗ ಟಿ20 ಸ್ವರೂಪದಲ್ಲಿ ಟೂರ್ನಿ ನಡೆಸಲು ನಿರ್ಧರಿಸಲಾಗಿದೆ. ಇನ್ನು ಒಟ್ಟಾರೆ ಏಷ್ಯಾಕಪ್ ದಾಖಲೆಯನ್ನು ನೋಡಿದರೆ ಭಾರತ ತಂಡವೇ ಅತ್ಯಂತ ಯಶಸ್ವಿ ತಂಡವಾಗಿದೆ. ಟೀಮ್ ಇಂಡಿಯಾ 7 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದಲ್ಲದೇ ಶ್ರೀಲಂಕಾ ತಂಡ 5 ಬಾರಿ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಪಾಕಿಸ್ತಾನ ಎರಡು ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ.