ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಮಹಿಳಾ ಟಿ20 ಪಂದ್ಯದಲ್ಲಿ ಹಾಂಗ್ಕಾಂಗ್ ತಂಡವು ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಮಂಗೋಲಿಯಾ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಹಾಂಗ್ಕಾಂಗ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ.
ಕೇವಲ 10 ರನ್ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ನಾಯಕಿ ಕ್ಯಾರಿ ಚಾನ್ ಆಸರೆಯಾದರು. ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಕ್ಯಾರಿ ಚಾನ್ 39 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 11 ಫೋರ್ಗಳೊಂದಿಗೆ 70 ರನ್ ಚಚ್ಚಿದರು.
ಇನ್ನು ಯೀ ಶಾನ್ ತೊ ಅಜೇಯ 34 ರನ್ ಬಾರಿಸಿದರೆ, ಮರ್ಯಮ್ ಬೀಬಿ ಅಜೇಯ 30 ರನ್ಗಳ ಕೊಡುಗೆ ನೀಡಿದರು. ಇದರ ಜೊತೆಗೆ ಮಂಗೋಲಿಯಾ ತಂಡವು ಎಕ್ಸ್ಟ್ರಾ ರೂಪದಲ್ಲಿ 36 ರನ್ಗಳನ್ನು ಬಿಟ್ಟುಕೊಟ್ಟಿದ್ದರು. ಪರಿಣಾಮ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಹಾಂಗ್ಕಾಂಗ್ ತಂಡವು 202 ರನ್ ಕಲೆಹಾಕಿತು.
203 ರನ್ಗಳ ಕಠಿಣ ಗುರಿ ಬೆನ್ನತ್ತಿದ ಮಂಗೋಲಿಯಾ 21 ರನ್ಗಳಿಸುಷ್ಟರಲ್ಲಿ 6 ವಿಕೆಟ್ ಕಳೆದುಕೊಂಡಿತು. ಅಚ್ಚರಿ ಎಂದರೆ ತಂಡದ ಮೊತ್ತಕ್ಕೆ ಒಂದು ರನ್ ಸೇರ್ಪಡೆಯಾಗುವಷ್ಟರಲ್ಲಿ ಉಳಿದ ನಾಲ್ವರು ಕೂಡ ವಿಕೆಟ್ ಒಪ್ಪಿಸಿದ್ದರು. ಇದರೊಂದಿಗೆ 12.4 ಓವರ್ಗಳಲ್ಲಿ ಮಂಗೋಲಿಯಾ ತಂಡವು 22 ರನ್ಗಳಿಗೆ ಸರ್ಪಪತನ ಕಂಡಿತು. ಅತ್ತ ಹಾಂಗ್ಕಾಂಗ್ ತಂಡವು 180 ರನ್ಗಳಿಂದ ಜಯಭೇರಿ ಬಾರಿಸಿತು.
ಇದಕ್ಕೂ ಮುನ್ನ ಇಂಡೋನೇಷ್ಯಾ ವಿರುದ್ಧದ ಪಂದ್ಯದಲ್ಲೂ ಮಂಗೋಲಿಯಾ ತಂಡ ಕೇವಲ 15 ರನ್ಗಳಿಗೆ ಆಲೌಟ್ ಆಗಿತ್ತು. ಇದರೊಂದಿಗೆ ಏಷ್ಯನ್ ಗೇಮ್ಸ್ನಲ್ಲಿ ಅತೀ ಕಡಿಮೆ ಮೊತ್ತಕ್ಕೆ ಆಲೌಟ್ ಆದ ತಂಡ ಎಂಬ ಹೀನಾಯ ದಾಖಲೆ ಮಂಗೋಲಿಯಾ ತಂಡದ ಹೆಸರಿಗೆ ಸೇರ್ಪಡೆಯಾಗಿತ್ತು. ಇದೀಗ 2ನೇ ಪಂದ್ಯದಲ್ಲಿ 22 ರನ್ಗಳಿಗೆ ಇನಿಂಗ್ಸ್ ಅಂತ್ಯಗೊಳಿಸಿ ನಿರಾಸೆ ಮೂಡಿಸಿದೆ.
ಏಷ್ಯನ್ ಗೇಮ್ಸ್ನಲ್ಲಿ ಭಾರತ ಮಹಿಳಾ ತಂಡವು ಗುರುವಾರದಿಂದ ಅಭಿಯಾನ ಆರಂಭಿಸಲಿದೆ. ತನ್ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮಲೇಷ್ಯಾ ತಂಡವನ್ನು ಎದುರಿಸಲಿದ್ದು, ಈ ಮೂಲಕ ಶುಭಾರಂಭ ಮಾಡುವ ಇರಾದೆಯಲ್ಲಿದೆ.
Here are the fixtures of the quarter draw. The next leg of Women’s Cricket in Asian Games is promising to be super exciting! #AsianGames pic.twitter.com/nodvJGBQs4
— AsianCricketCouncil (@ACCMedia1) September 20, 2023
ಇನ್ನು ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಪಾಕಿಸ್ತಾನ್ ತಂಡವು ಇಂಡೋನೇಷ್ಯಾ ತಂಡವನ್ನು ಎದುರಿಸಲಿದೆ. ಹೀಗಾಗಿ ಸೆಮಿಫೈನಲ್ನಲ್ಲಿ ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗುವ ಸಾಧ್ಯತೆಯಿದೆ.