ವಿಶ್ವಕಪ್ ನಿಯಮ ಬದಲಾವಣೆ: ಐಸಿಸಿ ವಿರುದ್ಧ ಸಿಡಿದೆದ್ದ 2 ದೇಶಗಳು!
ODI World Cup 2026: ಜಾಗತಿಕ ಮಟ್ಟದಲ್ಲಿ ಕ್ರಿಕೆಟ್ ಕ್ರೀಡೆಯನ್ನು ಮತ್ತಷ್ಟು ವಿಸ್ತರಿಸುವುದಾಗಿ ಭರವಸೆ ನೀಡಿದ್ದ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC), ಇದೀಗ ತನ್ನದೇ ಮಾತಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. 2027ರ ಏಕದಿನ ವಿಶ್ವಕಪ್ ಟೂರ್ನಿಯ ಸ್ವರೂಪದಲ್ಲಿ ಐಸಿಸಿ ತಂದಿರುವ ದಿಢೀರ್ ಬದಲಾವಣೆಗಳು ಈಗ ಜಾಗತಿಕ ಕ್ರಿಕೆಟ್ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ.

2027ರ ಪುರುಷರ ಏಕದಿನ ವಿಶ್ವಕಪ್ (ODI World Cup) ಟೂರ್ನಿಯ ನಿಯಮ ಮತ್ತು ಮಾದರಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಕೊನೆ ಹಂತದಲ್ಲಿ ತಂದಿರುವ ದಿಢೀರ್ ಬದಲಾವಣೆಗಳ ವಿರುದ್ಧ ಕ್ರಿಕೆಟ್ ಸ್ಕಾಟ್‌ಲ್ಯಾಂಡ್ ಮತ್ತು ರಾಯಲ್ ಡಚ್ ಕ್ರಿಕೆಟ್ ಅಸೋಸಿಯೇಷನ್ (KNCB) ಜಂಟಿಯಾಗಿ ತೀವ್ರ ಆಕ್ರೋಶ ಹೊರಹಾಕಿವೆ. 2026ರ ಆಗಸ್ಟ್ 10 ರಂದು ಜಂಟಿ ಹೇಳಿಕೆ ಬಿಡುಗಡೆ ಮಾಡಿರುವ ಈ ಎರಡೂ ಅಸೋಸಿಯೇಟ್ ಸದಸ್ಯ ರಾಷ್ಟ್ರಗಳು, ಐಸಿಸಿಯ ಈ ಏಕಪಕ್ಷೀಯ ನಿರ್ಧಾರವು “ನಿರಾಶಾದಾಯಕ ಮತ್ತು ಗೌರವವಿಲ್ಲದ ನಡವಳಿಕೆ” ಎಂದು ಕಟುವಾಗಿ ಟೀಕಿಸಿವೆ.
ವಿವಾದಕ್ಕೆ ಕಾರಣವಾದ ಹೊಸ ‘ಪ್ಲೇ-ಇನ್’ ಮಾದರಿ!
ಸೌತ್ ಆಫ್ರಿಕಾ, ಝಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆಯೋಜಿಸಲಿರುವ 2027ರ ವಿಶ್ವಕಪ್ ಅನ್ನು ಆರಂಭದಲ್ಲಿ 14 ತಂಡಗಳ ಟೂರ್ನಿಯಾಗಿ ವಿಸ್ತರಿಸಲು ನಿರ್ಧರಿಸಲಾಗಿತ್ತು. ಆದರೆ, ಐಸಿಸಿ ಈಗ ಹೊಸ ನಿಯಮವನ್ನು ಪರಿಚಯಿಸಿದೆ. ಆ ನಿಯಮವೆಂದರೆ…
- ಅರ್ಹತಾ ಸುತ್ತಿನಲ್ಲಿ 12, 13 ಮತ್ತು 14ನೇ ಸ್ಥಾನ ಪಡೆಯುವ ತಂಡಗಳು ಮುಖ್ಯ ಟೂರ್ನಿಗೂ ಮುನ್ನ ತ್ರಿಕೋನ ‘ಸೂಪರ್ ಸಿರೀಸ್’ ಹಂತದಲ್ಲಿ ಪಂದ್ಯಗಳನ್ನಾಡಬೇಕು.
- ಈ ಮೂರು ತಂಡಗಳಲ್ಲಿ ಕೇವಲ ಒಂದು ತಂಡ ಮಾತ್ರ ಏಕದಿನ ವಿಶ್ವಕಪ್‌ನ ಮುಖ್ಯ ಹಂತಕ್ಕೆ ಅರ್ಹತೆ ಪಡೆಯುತ್ತದೆ.
- ಉಳಿದ ಎರಡು ತಂಡಗಳು ಕೇವಲ ಎರಡೇ ಪಂದ್ಯಗಳನ್ನಾಡಿ, ಟೂರ್ನಿಯ ಅಧಿಕೃತ ಆರಂಭಕ್ಕೆ ಮುನ್ನವೇ ತವರಿಗೆ ಮರಳಬೇಕಾಗುತ್ತದೆ.
ಅಂದರೆ 2027ರ ವಿಶ್ವಕಪ್‌ಗೆ ಒಟ್ಟು 14 ತಂಡಗಳು ಅರ್ಹತೆ ಪಡೆಯಲಿವೆಯಾದರೂ, ಐಸಿಸಿಯ ಹೊಸ ನಿಯಮದ ಪ್ರಕಾರ ಕೊನೆಯ 3 ತಂಡಗಳು ಸೂಪರ್ ಸಿರೀಸ್ ಹಂತವನ್ನು ಆಡುವುದು ಕಡ್ಡಾಯಗೊಳಿಸಲಾಗಿದೆ. ಅರ್ಹತೆ ಪಡೆದ ಒಟ್ಟು 14 ತಂಡಗಳಲ್ಲಿ ಅಗ್ರ 11 ತಂಡಗಳು ನೇರವಾಗಿ ಮುಖ್ಯ ಹಂತ ಪ್ರವೇಶಿಸಿದರೆ, ಉಳಿದ 3 ತಂಡಗಳ ನಡುವೆ ಮತ್ತೊಮ್ಮೆ ಮಿನಿ ಅರ್ಹತಾ ಸುತ್ತು ನಡೆಯಲಿದೆ.
ಇದರಲ್ಲಿ ಗೆಲ್ಲುವ ಕೇವಲ ಒಂದು ತಂಡ ಮಾತ್ರ ವಿಶ್ವಕಪ್‌ನ ಮುಖ್ಯ ಹಂತಕ್ಕೆ ಲಗ್ಗೆ ಇಡಲಿದೆ. ಅಂದರೆ, ಈ ಬಾರಿಯ ವಿಶ್ವಕಪ್ ಟೂರ್ನಿಗೆ 14 ತಂಡಗಳು ಆಯ್ಕೆಯಾದರೂ, ಲೀಗ್ ಹಂತದ ಮುಖ್ಯ ಭೂಮಿಕೆಯಲ್ಲಿ ಕೇವಲ 12 ತಂಡಗಳು ಮಾತ್ರ ಕಾಣಿಸಿಕೊಳ್ಳಲಿವೆ.
ಅಸೋಸಿಯೇಟ್ ದೇಶಗಳ ಪ್ರಮುಖ ಆಕ್ಷೇಪಗಳು:
ವಿಶ್ವಕಪ್‌ಗೆ ಕೇವಲ 18 ತಿಂಗಳು ಬಾಕಿ ಇರುವಾಗ ಈ ಬದಲಾವಣೆ ತರಲಾಗಿದೆ. ಇದರಿಂದ ಸಣ್ಣ ದೇಶಗಳ ವಾಣಿಜ್ಯ ಒಪ್ಪಂದಗಳು ಮತ್ತು ಸಿದ್ಧತೆಗಳಿಗೆ ಭಾರಿ ಹೊಡೆತ ಬಿದ್ದಿದೆ.
ಈ ಬಗ್ಗೆ ಲಿಖಿತ ಸ್ಪಷ್ಟನೆ ಕೋರಿ ಅಸೋಸಿಯೇಟ್ ಮಂಡಳಿಗಳು ಐಸಿಸಿಯನ್ನು ಸಂಪರ್ಕಿಸಿದ್ದರೂ, ಕಳೆದ ಎರಡು ವಾರಗಳಿಂದ ಐಸಿಸಿ ಯಾವುದೇ ಪ್ರತಿಕ್ರಿಯೆ ನೀಡದೆ ಬೇಜವಾಬ್ದಾರಿತನ ಪ್ರದರ್ಶಿಸಿದೆ ಎಂದು ಅಸೋಸಿಯೇಟ್ ದೇಶಗಳು ಆಕ್ಷೇಪ ವ್ಯಕ್ತಪಡಿಸಿವೆ.
ಒಂದು ಕಡೆ ಕ್ರಿಕೆಟ್ ಕ್ರೀಡೆಯನ್ನು ಜಾಗತಿಕವಾಗಿ ವಿಸ್ತರಿಸುವುದಾಗಿ ಜಪಿಸುವ ಐಸಿಸಿ, ಮತ್ತೊಂದೆಡೆ ಉದಯೋನ್ಮುಖ ತಂಡಗಳ ಜಾಗತಿಕ ವೇದಿಕೆಯ ಅವಕಾಶಗಳನ್ನು ಕಡಿತಗೊಳಿಸುತ್ತಿರುವುದು ಅದರ ದ್ವಂದ್ವ ನೀತಿಯನ್ನು ಎತ್ತಿ ತೋರಿಸುತ್ತದೆ ಎಂದು ಅಸೋಸಿಯೇಟ್ ಕ್ರಿಕೆಟ್ ಮಂಡಳಿಗಳು ತೀವ್ರವಾಗಿ ಆಕ್ಷೇಪಿಸಿವೆ.
ಆಟಗಾರರ ವಲಯದಲ್ಲೂ ಭುಗಿಲೆದ್ದ ಆಕ್ರೋಶ:
ವಿಶ್ವ ಕ್ರಿಕೆಟಿಗರ ಸಂಘಟನೆ (WCA) ಈಗಾಗಲೇ ಈ ನಿರ್ಧಾರವನ್ನು ಖಂಡಿಸಿದೆ. ನೆದರ್ಲ್ಯಾಂಡ್ಸ್ ನಾಯಕ ಸ್ಕಾಟ್ ಎಡ್ವರ್ಡ್ಸ್, ಸ್ಕಾಟ್‌ಲ್ಯಾಂಡ್‌ನ ಜಾರ್ಜ್ ಮುನ್ಸೆ ಮತ್ತು ಐರ್ಲೆಂಡ್ ನಾಯಕ ಪಾಲ್ ಸ್ಟಿರ್ಲಿಂಗ್ ಮುಂತಾದ ಪ್ರಮುಖ ಆಟಗಾರರು ಐಸಿಸಿ ಕೇವಲ ಶ್ರೀಮಂತ ಪೂರ್ಣಾವಧಿ ಸದಸ್ಯ ರಾಷ್ಟ್ರಗಳನ್ನು ರಕ್ಷಿಸಲು ಇಂತಹ ನಿರ್ಧಾರ ಕೈಗೊಳ್ಳುತ್ತಿದೆ ಎಂದು ನೇರವಾಗಿ ಕಿಡಿಕಾರಿದ್ದಾರೆ. ಫಿಫಾ ವಿಶ್ವಕಪ್ ತನ್ನ ತಂಡಗಳ ಸಂಖ್ಯೆಯನ್ನು 48ಕ್ಕೆ ಏರಿಸುತ್ತಿದ್ದರೆ, ಐಸಿಸಿ ಮಾತ್ರ ಕ್ರಿಕೆಟ್‌ನ ಬಾಗಿಲುಗಳನ್ನು ಮುಚ್ಚುತ್ತಿದೆ ಎಂದು ಆಟಗಾರರು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: 11+3 ತಂಡಗಳು, ಸೂಪರ್-7: ಏಕದಿನ ವಿಶ್ವಕಪ್ ಸ್ವರೂಪ ಬದಲು
ಒಟ್ಟಾರೆಯಾಗಿ, ಐಸಿಸಿಯ ಏಕಪಕ್ಷೀಯ ನಿರ್ಧಾರಗಳು ಜಾಗತಿಕ ಕ್ರಿಕೆಟ್‌ನಲ್ಲಿ ಸಮಾನತೆಯನ್ನು ಪ್ರಶ್ನಿಸುತ್ತಿದ್ದು, ಉದಯೋನ್ಮುಖ ತಂಡಗಳ ಅವಕಾಶಗಳಿಗೆ ಕತ್ತರಿ ಹಾಕುತ್ತಿದೆ ಎಂದು ವಿಶ್ಲೇಷಿಸಲಾಗಿದೆ. ಶ್ರೀಮಂತ ಕ್ರಿಕೆಟ್ ಮಂಡಳಿಗಳ ಹಿತಾಸಕ್ತಿ ಮತ್ತು ಅಸೋಸಿಯೇಟ್ ಸದಸ್ಯರ ಅಸಮಾಧಾನದ ನಡುವೆ 2027ರ ವಿಶ್ವಕಪ್‌ಗೆ ಮುನ್ನ ಉದ್ಭವಿಸಿರುವ ಈ ಬಿಕ್ಕಟ್ಟು, ಕ್ರೀಡೆಯ ಭವಿಷ್ಯದ ಮೇಲೆ ಮಹತ್ವದ ಪರಿಣಾಮ ಬೀರಲಿದೆ.




