AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

AUS vs NZ: ಆಡಿದ್ದು ಕೇವಲ 198 ಎಸೆತ, ಅದರಲ್ಲಿ 146 ಡಾಟ್ ಬಾಲ್! ಹೀನಾಯವಾಗಿ ಸೋಲುಂಡ ಕಿವೀಸ್

AUS vs NZ: ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡ 113 ರನ್‌ಗಳ ಬೃಹತ್ ಸೋಲು ಕಂಡಿದೆ. 196 ರನ್‌ಗಳ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ 82 ರನ್‌ಗಳಿಗೆ ಆಲೌಟ್ ಆಗಿ, ಏಕದಿನ ಸರಣಿಯನ್ನು ಕಳೆದುಕೊಂಡಿದೆ.

AUS vs NZ: ಆಡಿದ್ದು ಕೇವಲ 198 ಎಸೆತ, ಅದರಲ್ಲಿ 146 ಡಾಟ್ ಬಾಲ್! ಹೀನಾಯವಾಗಿ ಸೋಲುಂಡ ಕಿವೀಸ್
TV9 Web
| Updated By: ಪೃಥ್ವಿಶಂಕರ|

Updated on:Sep 08, 2022 | 6:11 PM

Share

ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡ 113 ರನ್‌ಗಳ ಬೃಹತ್ ಸೋಲು ಕಂಡಿದೆ. 196 ರನ್‌ಗಳ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ 82 ರನ್‌ಗಳಿಗೆ ಆಲೌಟ್ ಆಗಿ, ಏಕದಿನ ಸರಣಿಯನ್ನು ಕಳೆದುಕೊಂಡಿದೆ. ಕಾಂಗರೂಗಳ ಗೆಲುವಿನಲ್ಲಿ ಲೆಗ್ ಸ್ಪಿನ್ನರ್ ಆಡಮ್ ಝಂಪಾ (5 ವಿಕೆಟ್) ಪ್ರಮುಖ ಪಾತ್ರವಹಿಸಿದರು. ಈ ಮೂಲಕ ತವರಿನಲ್ಲಿ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯನ್ನೂ ಕಾಂಗರೂ ತಂಡ ಗೆದ್ದುಕೊಂಡಿದೆ. ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಟಾಸ್ ಗೆದ್ದು ಫೀಲ್ಡಿಂಗ್ ಮಾಡಲು ನಿರ್ಧರಿಸಿದರು. ವೇಗಿಗಳಾದ ಮ್ಯಾಟ್ ಹೆನ್ರಿ ಮತ್ತು ಟ್ರೆಂಟ್ ಬೌಲ್ಟ್ ಎದುರು ಆಸೀಸ್ ಬ್ಯಾಟ್ಸ್​ಮನ್​ಗಳು ಹೆಚ್ಚು ಅಬ್ಬರಿಸಲು ಸಾಧ್ಯವಾಗಲಿಲ್ಲ.

ಹೀಗಾಗಿ ಆಸ್ಟ್ರೇಲಿಯಾ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 195 ರನ್ ಗಳಿಸಲಷ್ಟೇ ಶಕ್ತವಾಯಿತು. ಸ್ಟೀವ್ ಸ್ಮಿತ್ ಮತ್ತು ಕೆಳ ಕ್ರಮಾಂಕದ ಮಿಚೆಲ್ ಸ್ಟಾರ್ಕ್, ಝಂಪಾ, ಹ್ಯಾಜಲ್‌ವುಡ್ಸ್ ಹೋರಾಟದ ನೆರವಿನಿಂದ ಆಸೀಸ್ ಈ ಮೊತ್ತ ಕಲೆಹಾಕಿತು. ಅಲೆಕ್ಸ್ ಕ್ಯಾರಿ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರೊಂದಿಗೆ ಸ್ಮಿತ್ 28 ಮತ್ತು 49 ರ ಜೊತೆಯಾಟ ನಡೆಸಿದರು. ಇದರೊಂದಿಗೆ ಆಸೀಸ್ ಪರ ಸ್ಮಿತ್ 94 ಎಸೆತಗಳಲ್ಲಿ 61 ರನ್ ಗಳಿಸಿದರು. ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ 38 ರನ್ ಗಳಿಸಿದರೆ, ಕಾಂಗರೂಗಳ ಇನ್ನಿಂಗ್ಸ್‌ನಲ್ಲಿ ಹ್ಯಾಜಲ್‌ವುಡ್ ಕೂಡ ಪ್ರಮುಖ ಪಾತ್ರ ವಹಿಸಿದ್ದರು. ಮಿಚೆಲ್ ಸ್ಟಾರ್ಕ್ ಜೊತೆ ಕೇವಲ 36 ಎಸೆತಗಳಲ್ಲಿ 47 ರನ್‌ಗಳ ಮುರಿಯದ ಜೊತೆಯಾಟವನ್ನು ಮಾಡಿದರು. ಅಂತಿಮವಾಗಿ ಹ್ಯಾಜಲ್​ವುಡ್ 16 ಎಸೆತಗಳಲ್ಲಿ 23 ರನ್ ಗಳಿಸಿದರು. ಟ್ರೆಂಟ್ ಬೌಲ್ಟ್ 10 ಓವರ್​ಗಳಲ್ಲಿ ಎರಡು ಮೇಡನ್ ಸಹಿತ 38 ರನ್ ನೀಡಿ 4 ವಿಕೆಟ್ ಪಡೆದರೆ, ಮ್ಯಾಟ್ ಹೆನ್ರಿ 10 ಓವರ್‌ಗಳಲ್ಲಿ 33 ರನ್ ನೀಡಿ 3 ವಿಕೆಟ್ ಪಡೆದರು.

ಏಕದಿನ ಕ್ರಿಕೆಟ್‌ನಲ್ಲಿ ಈ ಗುರಿ ದೊಡ್ಡದೆನಲ್ಲ. ಆದರೆ ಆಸೀಸ್ ಬೌಲಿಂಗ್ ಲೈನ್-ಅಪ್ ಕಿವೀಸ್ ಬ್ಯಾಟ್ಸ್‌ಮನ್‌ಗಳನ್ನು ತಡವರಿಸುವಂತೆ ಮಾಡಿತು. ಹೀಗಾಗಿ ನ್ಯೂಜಿಲೆಂಡ್ ಇನ್ನಿಂಗ್ಸ್ ಕೇವಲ 198 ಎಸೆತಗಳಲ್ಲಿ ಕೊನೆಗೊಂಡಿತು. ಅವುಗಳಲ್ಲಿ, ಡಾಟ್ ಬಾಲ್‌ಗಳ ಸಂಖ್ಯೆ 146!. ಗುರಿ ಬೆನ್ನತ್ತಿದ್ದ ಕಿವೀಸ್​ಗೆ ಸ್ಟಾರ್ಕ್ ಮೊದಲ ಓವರ್‌ನಲ್ಲಿ ಶಾಕ್ ನೀಡಿ ಮಾರ್ಟಿನ್ ಗಪ್ಟಿಲ್ ಅವರನ್ನು ಬಲಿ ಪಡೆದರು. ಇನಿಂಗ್ಸ್‌ನ ಒಂಬತ್ತನೇ ಓವರ್‌ನಲ್ಲಿ ವೇಗಿ ಸೀನ್ ಅಬಾಟ್ ಎರಡನೇ ವಿಕೆಟ್ ಪಡೆದರು. ಇದರ ನಂತರ ಲೆಗ್ ಸ್ಪಿನ್ನರ್ ಆಡಮ್ ಝಂಪಾ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್​ರನ್ನು ಪೆವಿಲಿಯನ್​ಗಟ್ಟಿದರು.

ಈ ವಿಕೆಟ್ ಬಳಿಕ ಮಧ್ಯಮ ಮತ್ತು ಕೆಳ ಕ್ರಮಾಂಕ ಕುಸಿಯಲಾರಂಭಿಸಿತು. ಅಂತಿಮವಾಗಿ ಝಂಪಾ 9 ಓವರ್​ಗಳಲ್ಲಿ 35 ರನ್ ನೀಡಿ 5 ವಿಕೆಟ್ ಪಡೆದರು. ಮೊದಲ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ 4 ವಿಕೆಟ್ ಪಡೆದರೆ, ಈ ಪಂದ್ಯದಲ್ಲಿ ಜಂಪ 5 ವಿಕೆಟ್ ಪಡೆದು ಮಿಂಚಿದರು. ಆದರೆ ಕಳೆದ ಪಂದ್ಯದಲ್ಲಿ ಜಂಪ 10 ಓವರ್‌ಗಳಲ್ಲಿ 38 ರನ್ ನೀಡಿ ಕೇವಲ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆಸ್ಟ್ರೇಲಿಯಾದ ಪಿಚ್‌ಗಳು ಪೇಸ್-ಬೌನ್ಸ್‌ಗೆ ಹೆಸರುವಾಸಿಯಾಗಿದ್ದು, ಎರಡು ಪಂದ್ಯಗಳಲ್ಲಿ ಮ್ಯಾಕ್ಸ್‌ವೆಲ್-ಜಂಪ ನೀಡಿದ ಪ್ರದರ್ಶನ ಎಲ್ಲರಲ್ಲೂ ಅಚ್ಚರಿ ಮೂಡಿಸಿತು.

Published On - 6:11 pm, Thu, 8 September 22