AUS vs NZ: 12 ವರ್ಷಗಳ ನಂತರ ಹೀಗೊಂದು ಬೇಡದ ದಾಖಲೆ ಬರೆದ ಕೇನ್ ವಿಲಿಯಮ್ಸನ್

|

Updated on: Mar 01, 2024 | 6:58 PM

AUS vs NZ: ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿದ್ದ ಇನ್ ಫಾರ್ಮ್ ಬ್ಯಾಟ್ಸ್‌ಮನ್ ಕೇನ್ ವಿಲಿಯಮ್ಸನ್ ಕೂಡ ಖಾತೆಯನ್ನು ತೆರೆಯದೆ ಪೆವಿಲಿಯನ್‌ಗೆ ಸೇರಿಕೊಂಡರು. ಇದರೊಂದಿಗೆ ಅವರು ತಮ್ಮ 12 ವರ್ಷಗಳ ಟೆಸ್ಟ್ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ರನೌಟ್​ಗೆ ಬಲಿಯಾದ ಬೇಡದ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡರು.

AUS vs NZ: 12 ವರ್ಷಗಳ ನಂತರ ಹೀಗೊಂದು ಬೇಡದ ದಾಖಲೆ ಬರೆದ ಕೇನ್ ವಿಲಿಯಮ್ಸನ್
ಕೇನ್ ವಿಲಿಯಮ್ಸನ್
Follow us on

ಪ್ರಸ್ತುತ ನ್ಯೂಜಿಲೆಂಡ್ ಪ್ರವಾಸ ಮಾಡಿರುವ ಆಸ್ಟ್ರೇಲಿಯಾ ತಂಡ (Australia vs New Zealand) ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನಿರತವಾಗಿದೆ. ಸರಣಿಯಲ್ಲಿ ನಿನ್ನೆಯಿಂದ ಮೊದಲ ಟೆಸ್ಟ್ ಪಂದ್ಯ ಆರಂಭವಾಗಿದ್ದು, ಮೊದಲ ಇನ್ನಿಂಗ್ಸ್​ನಲ್ಲಿ ಆಸ್ಟ್ರೇಲಿಯಾ ತಂಡ 383 ರನ್ ಕಲೆಹಾಕಿದರೆ, ಆತಿಥೇಯ ಕಿವೀಸ್ ತಂಡ ಕೇವಲ 179 ರನ್​ಗಳಿಗೆ ಆಲೌಟ್ ಆಗುವ ಮೂಲಕ 204 ರನ್​ಗಳ ಹಿನ್ನಡೆ ಅನುಭವಿಸಿದೆ. ತಂಡದ ಪರ ಗ್ಲೆನ್ ಫಿಲಿಫ್ಸ್ (Glenn Phillips) ಬಿಟ್ಟರೆ ಉಳಿದವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಹೊರಬರಲಿಲ್ಲ. ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿದ್ದ ಇನ್ ಫಾರ್ಮ್ ಬ್ಯಾಟ್ಸ್‌ಮನ್ ಕೇನ್ ವಿಲಿಯಮ್ಸನ್ (Kane Williamson) ಕೂಡ ಖಾತೆಯನ್ನು ತೆರೆಯದೆ ಪೆವಿಲಿಯನ್‌ಗೆ ಸೇರಿಕೊಂಡರು. ಇದರೊಂದಿಗೆ ಅವರು ತಮ್ಮ 12 ವರ್ಷಗಳ ಟೆಸ್ಟ್ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ರನೌಟ್​ಗೆ ಬಲಿಯಾದ ಬೇಡದ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡರು.

ಟೆಸ್ಟ್​ನಲ್ಲಿ ಮೊದಲ ಬಾರಿಗೆ ರನ್ ಔಟ್

ಕೇನ್ ವಿಲಿಯಮ್ಸನ್ ಆಸ್ಟ್ರೇಲಿಯಾ ಟೆಸ್ಟ್ ಸರಣಿಗೂ ಮುನ್ನ ದಕ್ಷಿಣ ಆಫ್ರಿಕಾ ವಿರುದ್ಧ 4 ಇನ್ನಿಂಗ್ಸ್‌ಗಳಲ್ಲಿ 403 ರನ್ ಗಳಿಸಿದ್ದರು. ಆದರೆ ಆಸ್ಟ್ರೇಲಿಯಾ ವಿರುದ್ಧದ ಮೊದಲ ಇನ್ನಿಂಗ್ಸ್‌ನಲ್ಲಿ ಖಾತೆ ತೆರೆಯಲು ಅವರಿಗೆ ಸಾಧ್ಯವಾಗಲಿಲ್ಲ. ವಾಸ್ತವವಾಗಿ, ನ್ಯೂಜಿಲೆಂಡ್ ಇನ್ನಿಂಗ್ಸ್​ನ ನಾಲ್ಕನೇ ಓವರ್‌ನ ಐದನೇ ಎಸೆತವನ್ನು ಆಡಿದ ವಿಲಿಯಮ್ಸನ್ ರನ್​ಗಾಗಿ ಓಡಲಾರಂಭಿಸಿದರು. ಈ ವೇಳೆ ನಾನ್ ಸ್ಟ್ರೈಕ್​ನಲ್ಲಿದ್ದ ವಿಲ್ ಯಂಗ್ ಕೂಡ ಓಡಲಾರಂಭಿಸಿದರು. ಈ ವೇಳೆ ಇಬ್ಬರು ಆಟಗಾರರ ಅಜಾಗರೂಕತೆಯಿಂದ ಒಬ್ಬೊರಿಗೊಬ್ಬರು ಡಿಕ್ಕಿ ಹೊಡೆದುಕೊಂಡರು.

IND vs ENG: ಅಂತಿಮ ಟೆಸ್ಟ್ ಪಂದ್ಯದಿಂದಲೂ ಹೊರಬಿದ್ದ ಕನ್ನಡಿಗ ಕೆಎಲ್ ರಾಹುಲ್..!

ಅಷ್ಟರಲ್ಲಾಗಲೆ ಮಾರ್ನಸ್ ಲಬುಶೇನ್ ಚೆಂಡನ್ನು ಹಿಡಿದು ನಾನ್ ಸ್ಟ್ರೈಕ್​ ವಿಕೆಟ್​ಗೆ ನೇರವಾಗಿ ಹೊಡೆದರು. ಇದರಿಂದಾಗಿ ವಿಲಿಯಮ್ಸನ್ ಯಾವುದೇ ರನ್ ಗಳಿಸದೇ ರನೌಟ್ ಆಗಿ ಪೆವಿಲಿಯನ್​ಗೆ ಮರಳಬೇಕಾಯಿತು. ಇದರೊಂದಿಗೆ ತಮ್ಮ 12 ವರ್ಷದ ಟೆಸ್ಟ್ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ರನೌಟ್​ಗೆ ಬಲಿಯಾದರು. ಇದಕ್ಕೂ ಮೊದಲು ಅವರು ಈ ಮಾದರಿಯಲ್ಲಿ ರನ್ ಔಟ್ ಆಗಿರಲಿಲ್ಲ.

ಸಂಕಷ್ಟದಲ್ಲಿ ನ್ಯೂಜಿಲೆಂಡ್

ಮೇಲೆ ಹೇಳಿದಂತೆ ಆಸ್ಟ್ರೇಲಿಯಾ ವಿರುದ್ಧದ ಮೊದಲ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್‌ ಬ್ಯಾಟ್ಸ್‌ಮನ್‌ಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಆಸ್ಟ್ರೇಲಿಯಾದ 383 ರನ್‌ಗಳಿಗೆ ಉತ್ತರವಾಗಿ ಇಡೀ ತಂಡ ಕೇವಲ 179 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರಲ್ಲಿ ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ ತಂಡದ ನಾಲ್ವರು ಬ್ಯಾಟ್ಸ್‌ಮನ್‌ಗಳಿಗೆ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ಹಾಗೆಯೇ ಅಗ್ರ ಕ್ರಮಾಂಕದ ನಾಲ್ಕು ಬ್ಯಾಟ್ಸ್‌ಮನ್‌ಗಳಲ್ಲಿ ಯಾರೂ ಎರಡಂಕಿ ದಾಟಲು ಸಾಧ್ಯವಾಗಲಿಲ್ಲ. ಒಂದು ಹಂತದಲ್ಲಿ ನ್ಯೂಜಿಲೆಂಡ್ ತನ್ನ 7 ವಿಕೆಟ್‌ಗಳನ್ನು ಕೇವಲ 113 ರನ್‌ಗಳಿಗೆ ಕಳೆದುಕೊಂಡಿತ್ತು.

ಆದರೆ, ಅಂತಿಮವಾಗಿ ಗ್ಲೆನ್ ಫಿಲಿಪ್ಸ್ ಅವರ 70 ಎಸೆತಗಳಲ್ಲಿ 71 ರನ್ ಮತ್ತು ಮ್ಯಾಟ್ ಹೆನ್ರಿ ಅವರ 34 ಎಸೆತಗಳಲ್ಲಿ 42 ರನ್‌ಗಳ ಸಹಾಯಕ ಇನ್ನಿಂಗ್ಸ್‌ನ ಆಧಾರದ ಮೇಲೆ ಕಿವೀಸ್ ತಂಡವು ಮೊದಲ ಇನಿಂಗ್ಸ್‌ನಲ್ಲಿ 179 ರನ್ ಗಳಿಸುವಲ್ಲಿ ಯಶಸ್ವಿಯಾಗಿದೆ. ಈ ಪಂದ್ಯದಲ್ಲಿ ನಾಥನ್ ಲಿಯಾನ್ ಗರಿಷ್ಠ 4 ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:45 pm, Fri, 1 March 24