Aus vs WI: 7 ಎಸೆತಗಳಲ್ಲಿ ಪಂದ್ಯದ ದಿಕ್ಕನ್ನೇ ಬದಲಿಸಿದ ಟಿಮ್ ಡೇವಿಡ್..! ಸರಣಿ ಗೆದ್ದ ಆಸೀಸ್; ವಿಡಿಯೋ
Aus vs WI: ಟಿಮ್ ಡೇವಿಡ್ ಕೇವಲ 20 ಎಸೆತಗಳಲ್ಲಿ 42 ರನ್ ಸಿಡಿಸಿದರು. ಅದರಲ್ಲಿ 34 ರನ್ ಕೇವಲ 7 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಾಯದಿಂದ ಬಂದವು.
ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ (T20 World Cup) ಆರಂಭಕ್ಕೆ ಕೆಲವೇ ದಿನಗಳು ಉಳಿದಿದ್ದು, ಪ್ರತಿ ತಂಡವೂ ತಮ್ಮ ಸಿದ್ಧತೆಗೆ ಅಂತಿಮ ರೂಪ ನೀಡುತ್ತಿದೆ. ಬ್ಯಾಟರ್ಗಳು ತಮ್ಮ ಕೌಶಲ್ಯ ಹೆಚ್ಚಿಸಿಕೊಳ್ಳುತ್ತಿದ್ದರೆ, ಬೌಲರ್ಸ್ಗಳು ತಮ್ಮ ತಾಕತ್ತು ಸಾಭೀತುಪಡಿಸಲು ಕಾತುರರಾಗಿದ್ದಾರೆ. ಏಕೆಂದರೆ ಆಸ್ಟ್ರೇಲಿಯಾದ ಪಿಚ್ಗಳು ಬೌಲರ್ಗಳ ಸ್ವರ್ಗ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕಿದೆ. ಟೂರ್ನಮೆಂಟ್ ಆತಿಥೇಯ ಮತ್ತು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಕೂಡ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ತಮ್ಮನ್ನು ತಾವು ಬಲಪಡಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ಪೂರಕವೆಂಬಂತೆ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯಲ್ಲಿ ಕಾಂಗರೂಗಳು ಅಬ್ಬರಿಸಿದ್ದಾರೆ. ಅದರಲ್ಲೂ ತಂಡದ ಹೊಸ ಅಸ್ತ್ರ ಟಿಮ್ ಡೇವಿಡ್ ಬ್ಯಾಟಿಂಗ್ನಲ್ಲಿ ಸುನಾಮಿ ಎಬ್ಬಿಸಿದ್ದು, ವಿರೋಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ವಿಶ್ವಕಪ್ ಆರಂಭಕ್ಕೂ ಮುನ್ನ ಆಸ್ಟ್ರೇಲಿಯ ತಂಡ ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸುತ್ತಿದೆ. ಆಸ್ಟ್ರೇಲಿಯ ಈಗಾಗಲೇ ಸರಣಿಯ ಮೊದಲ ಪಂದ್ಯವನ್ನು ಗೆದ್ದಿತ್ತು. ಇದರ ನಂತರ, ಶುಕ್ರವಾರ ಅಕ್ಟೋಬರ್ 7 ರಂದು, ಬ್ರಿಸ್ಬೇನ್‌ನಲ್ಲಿ ಎರಡು ತಂಡಗಳ ನಡುವೆ ಎರಡನೇ ಪಂದ್ಯ ನಡೆಯಿತು. ಇಲ್ಲಿ ಡೇವಿಡ್ ವಾರ್ನರ್ ತಂಡದ ಪರ ಉತ್ತಮ ಇನ್ನಿಂಗ್ಸ್ ಆಡಿದರೆ, ಟಿಮ್ ಡೇವಿಡ್ ಮಾತ್ರ ಪಂದ್ಯದ ಹೈಲೇಟ್ಸ್ ಆಗಿದ್ದರು
110 ಮೀಟರ್ ಸಿಕ್ಸ್
ಕೆಲ ದಿನಗಳ ಹಿಂದೆ ಆಸ್ಟ್ರೇಲಿಯಾ ಪರ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಈ ಸ್ಫೋಟಕ ಬಲಗೈ ಬ್ಯಾಟ್ಸ್‌ಮನ್ ವಿಂಡೀಸ್ ಬೌಲರ್ಗಳನ್ನು ಸದೆಬಡಿದು ತಂಡವನ್ನು 178 ರನ್ಗಳಿಗೆ ಕೊಂಡೊಯ್ದರು. ತಮ್ಮ ಇನ್ನಿಂಗ್ಸ್‌ನಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದ ಡೇವಿಡ್, ಬರೋಬ್ಬರಿ 110 ಮೀಟರ್ ಉದ್ದದ ಸಿಕ್ಸರ್ ಸಿಡಿಸಿ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ.
17ನೇ ಓವರ್‌ನಲ್ಲಿ ಡೇವಿಡ್ ಒಬೆಡ್ ಮೆಕಾಯ್ ಅವರ ಎರಡನೇ ಮತ್ತು ಮೂರನೇ ಎಸೆತಗಳಲ್ಲಿ ಸತತ ಎರಡು ಸಿಕ್ಸರ್‌ಗಳನ್ನು ಬಾರಿಸಿದರು. ಇದರಲ್ಲಿ, ಎರಡನೇ ಸಿಕ್ಸರ್ ನೇರವಾಗಿ ಕ್ರೀಡಾಂಗಣದ ಸ್ಟ್ಯಾಂಡ್‌ಗಳನ್ನು ತಲುಪಿದಲ್ಲದೆ ಒಟ್ಟು 110 ಮೀಟರ್ ದೂರವನ್ನು ಕ್ರಮಿಸಿತು.
ಇಷ್ಟು ಉದ್ದದ ಸಿಕ್ಸರ್ ನೋಡಿದ ಕಾಮೆಂಟೇಟರ್‌ಗಳಿಂದ ಹಿಡಿದು ಪ್ರೇಕ್ಷಕರವರೆಗೆ ಎಲ್ಲರು ಅಚ್ಚರಿಗೊಂಡರು. ಅಂದಹಾಗೆ, ಈ ಎರಡು ಸಿಕ್ಸರ್‌ಗಳು ಮಾತ್ರವಲ್ಲದೆ, ಈ ಓವರ್‌ನಲ್ಲಿ, ಡೇವಿಡ್ ಸತತ 4 ಎಸೆತಗಳಲ್ಲಿ ಬೌಂಡರಿ ಬಾರಿಸಿದರು. 2 ಮತ್ತು 3ನೇ ಎಸೆತವನ್ನು ಸಿಕ್ಸರ್ ಬಾರಿಸಿದರೆ, ಮೊದಲ ಮತ್ತು ನಾಲ್ಕನೇ ಎಸೆತಗಳಲ್ಲಿ ಎರಡು ಬೌಂಡರಿಗಳನ್ನೂ ಬಾರಿಸಿದರು. ಈ ಮೂಲಕ 4 ಎಸೆತಗಳಲ್ಲಿ 20 ರನ್ ದೋಚಿದರು.
Tim David with the one-two punch! The second six travelled 110m! ?? #AUSvWI #PlayOfTheDay | #Dettol pic.twitter.com/dAgpsoTJV3
— cricket.com.au (@cricketcomau) October 7, 2022
ಡೇವಿಡ್ ಸಿಡಿಲಬ್ಬರದ ಬ್ಯಾಟಿಂಗ್
ಆದರೆ, ಮೆಕಾಯ್ ಐದನೇ ಎಸೆತದಲ್ಲಿ ಡೇವಿಡ್ ಅವರನ್ನು ಎಲ್ಬಿಡಬ್ಲ್ಯೂ ಬಲೆಗೆ ಬೀಳಿಸಿದರು. ಇದರ ಹೊರತಾಗಿಯೂ, ಡೇವಿಡ್ ಆ ಹೊತ್ತಿಗೆ ತನ್ನ ಕೆಲಸವನ್ನು ಮಾಡಿದ್ದರು. ಈ ಬ್ಯಾಟ್ಸ್‌ಮನ್ ಕೇವಲ 20 ಎಸೆತಗಳಲ್ಲಿ 42 ರನ್ ಸಿಡಿಸಿದರು, ಅದರಲ್ಲಿ 34 ರನ್ ಕೇವಲ 7 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಾಯದಿಂದ ಬಂದವು. ಡೇವಿಡ್ ಅವರ ಇನ್ನಿಂಗ್ಸ್ ಮತ್ತು ನಂತರ ಮಿಚೆಲ್ ಸ್ಟಾರ್ಕ್ ಅವರ ಮಾರಕ ಬೌಲಿಂಗ್‌ನ ಆಧಾರದ ಮೇಲೆ ಆಸ್ಟ್ರೇಲಿಯಾ ಪಂದ್ಯ ಮತ್ತು ಸರಣಿಯನ್ನು 31 ರನ್‌ಗಳಿಂದ ಸುಲಭವಾಗಿ ಗೆದ್ದುಕೊಂಡಿತು.