ENG vs AUS: ಇಂಗ್ಲೆಂಡ್ನ ಬಗ್ಗು ಬಡಿದ ಆಸೀಸ್ ಪಡೆ
Australia vs England: 180 ರನ್ಗಳ ಗುರಿ ಪಡೆದ ಇಂಗ್ಲೆಂಡ್ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ವಿಲ್ ಜಾಕ್ಸ್ ಕೇವಲ 6 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ಚೊಚ್ಚಲ ಪಂದ್ಯವಾಡಿದ ಜೋರ್ಡನ್ ಕಾಕ್ಸ್ ಅವರ ಇನಿಂಗ್ಸ್ 17 ರನ್ಗಳಿಗೆ ಸೀಮಿತವಾಗಿತ್ತು. ಹಾಗೆಯೇ ನಾಯಕ ಫಿಲ್ ಸಾಲ್ಟ್ 20 ರನ್ಗಳೊಂದಿಗೆ ಪೆವಿಲಿಯನ್ಗೆ ಮರಳಿದ್ದರು.
![ENG vs AUS: ಇಂಗ್ಲೆಂಡ್ನ ಬಗ್ಗು ಬಡಿದ ಆಸೀಸ್ ಪಡೆ](https://images.tv9kannada.com/wp-content/uploads/2024/09/eng-vs-aus-5.jpg?w=1280)
ಸೌಥಾಂಪ್ಟನ್ ರೋಸ್ ಬೌಲ್ ಸ್ಟೇಡಿಯಂನಲ್ಲಿ ನಡೆದ ಆತಿಥೇಯ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಭರ್ಜರಿ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಫಿಲ್ ಸಾಲ್ಟ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಮ್ಯಾಥ್ಯೂ ಶಾರ್ಟ್ ಹಾಗೂ ಟ್ರಾವಿಸ್ ಹೆಡ್ ಸ್ಪೋಟಕ ಆರಂಭ ಒದಗಿಸಿದ್ದರು.
ಮೊದಲ ವಿಕೆಟ್ಗೆ 86 ರನ್ ಪೇರಿಸಿದ ಬಳಿಕ ಪವರ್ಪ್ಲೇನ ಕೊನೆಯ ಎಸೆತದಲ್ಲಿ ಟ್ರಾವಿಸ್ ಹೆಡ್ ಔಟಾದರು. ಔಟಾಗುವ ಮುನ್ನ ಹೆಡ್ ಕೇವಲ 23 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ 53 ರನ್ ಚಚ್ಚಿದ್ದರು. ಆ ಬಳಿಕ ಬಂದ ನಾಯಕ ಮಿಚೆಲ್ ಮಾರ್ಷ್ ಕೇವಲ 2 ರನ್ ಗಳಿಸಿ ನಿರ್ಗಮಿಸಿದರೆ, ಇದರ ಬೆನ್ನಲ್ಲೇ ಮ್ಯಾಥ್ಯೂ ಶಾರ್ಟ್ (41) ಕೂಡ ವಿಕೆಟ್ ಒಪ್ಪಿಸಿದರು.
ಆದರೆ ಅದಾಗಲೇ 10.2 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 118 ರನ್ ಪೇರಿಸಿ ಸುಸ್ಥಿತಿಯಲ್ಲಿದ್ದ ಆಸ್ಟ್ರೇಲಿಯಾ ತಂಡವು ದಿಢೀರ್ ಕುಸಿತಕ್ಕೊಳಗಾಯಿತು. ಪರಿಣಾಮ 17ನೇ ಓವರ್ ವೇಳೆಗೆ ಆಸೀಸ್ ಪಡೆಯು 6 ವಿಕೆಟ್ ಕಳೆದುಕೊಂಡಿತು. ಇದರ ನಡುವೆ ಜೋಶ್ ಇಂಗ್ಲಿಸ್ 37 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ಆಸ್ಟ್ರೇಲಿಯಾ ತಂಡವು 19.3 ಓವರ್ಗಳಲ್ಲಿ 179 ರನ್ ಕಲೆಹಾಕಿ ಸರ್ವಪತನ ಕಂಡಿತು. ಇಂಗ್ಲೆಂಡ್ ಪರ ಲಿಯಾಮ್ ಲಿವಿಂಗ್ಸ್ಟೋನ್ 3 ವಿಕೆಟ್ ಕಬಳಿಸಿದರೆ, ಜೋಫ್ರಾ ಆರ್ಚರ್ ಹಾಗೂ ಸಾಕಿಬ್ ಮಹಮೂದ್ ತಲಾ 2 ವಿಕೆಟ್ ಪಡೆದರು.
180 ರನ್ಗಳ ಗುರಿ:
180 ರನ್ಗಳ ಗುರಿ ಪಡೆದ ಇಂಗ್ಲೆಂಡ್ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ವಿಲ್ ಜಾಕ್ಸ್ ಕೇವಲ 6 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ಚೊಚ್ಚಲ ಪಂದ್ಯವಾಡಿದ ಜೋರ್ಡನ್ ಕಾಕ್ಸ್ ಅವರ ಇನಿಂಗ್ಸ್ 17 ರನ್ಗಳಿಗೆ ಸೀಮಿತವಾಗಿತ್ತು. ಹಾಗೆಯೇ ನಾಯಕ ಫಿಲ್ ಸಾಲ್ಟ್ 20 ರನ್ಗಳೊಂದಿಗೆ ಪೆವಿಲಿಯನ್ಗೆ ಮರಳಿದ್ದರು.
ಇನ್ನು ಮಧ್ಯಮ ಕ್ರಮಾಂಕದಲ್ಲಿ ಲಿಯಾಮ್ ಲಿವಿಂಗ್ಸ್ಟೋನ್ (37) ಒಂದಷ್ಟು ಹೊತ್ತು ಅಬ್ಬರಿಸಿದರೂ, ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಸಾಥ್ ಸಿಕ್ಕಿರಲಿಲ್ಲ. ಪರಿಣಾಮ 19.2 ಓವರ್ಗಳಲ್ಲಿ 151 ರನ್ಗಳಿಸಿ ಇಂಗ್ಲೆಂಡ್ ತಂಡವು ಆಲೌಟ್ ಆಗಿದೆ. ಈ ಮೂಲಕ ಆಸ್ಟ್ರೇಲಿಯಾ ತಂಡವು ಮೊದಲ ಪಂದ್ಯದಲ್ಲಿ 28 ರನ್ಗಳ ಭರ್ಜರಿ ಜಯ ಸಾಧಿಸಿದೆ. ಇನ್ನು ಆಸೀಸ್ ಪಡೆ ಶಾನ್ ಅಬಾಟ್ 3 ವಿಕೆಟ್ ಕಬಳಿಸಿ ಮಿಂಚಿದರೆ, ಆ್ಯಡಂ ಝಂಪಾ ಹಾಗೂ ಜೋಶ್ ಹ್ಯಾಝಲ್ವುಡ್ ತಲಾ 2 ವಿಕೆಟ್ ಪಡೆದರು.
ಇಂಗ್ಲೆಂಡ್ ಪ್ಲೇಯಿಂಗ್ 11: ಫಿಲಿಪ್ ಸಾಲ್ಟ್ (ನಾಯಕ) , ವಿಲ್ ಜ್ಯಾಕ್ಸ್ , ಜೋರ್ಡನ್ ಕಾಕ್ಸ್ , ಲಿಯಾಮ್ ಲಿವಿಂಗ್ಸ್ಟೋನ್ , ಜೆಕೋಬ್ ಬೆಥೆಲ್ , ಸ್ಯಾಮ್ ಕರನ್ , ಜೇಮೀ ಓವರ್ಟನ್ , ಜೋಫ್ರಾ ಆರ್ಚರ್ , ಆದಿಲ್ ರಶೀದ್ , ಸಾಕಿಬ್ ಮಹಮೂದ್ , ರೀಸ್ ಟೋಪ್ಲಿ.
ಇದನ್ನೂ ಓದಿ: CSK ಪರ ಆಡಬೇಕು… RCB ಆಟಗಾರನ ಹೇಳಿಕೆ..!
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಟ್ರಾವಿಸ್ ಹೆಡ್ , ಮ್ಯಾಥ್ಯೂ ಶಾರ್ಟ್ , ಮಿಚೆಲ್ ಮಾರ್ಷ್ (ನಾಯಕ) , ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್) , ಮಾರ್ಕಸ್ ಸ್ಟೊಯಿನಿಸ್ , ಟಿಮ್ ಡೇವಿಡ್ , ಕ್ಯಾಮೆರೋನ್ ಗ್ರೀನ್ , ಶಾನ್ ಅಬಾಟ್ , ಕ್ಸೇವಿಯರ್ ಬಾರ್ಟ್ಲೆಟ್ , ಆ್ಯಡಂ ಝಂಪಾ , ಜೋಶ್ ಹ್ಯಾಝಲ್ವುಡ್.