BBL ಆಡಲು ಆಸ್ಟ್ರೇಲಿಯಾ ಆಟಗಾರರ ಹೊಸ ಡಿಮ್ಯಾಂಡ್..!

ಬಿಗ್ ಬ್ಯಾಷ್ ಲೀಗ್ (BBL) ಅನ್ನು ಖಾಸಗೀಕರಣಗೊಳಿಸಿ ಕೋಟ್ಯಂತರ ರೂಪಾಯಿ ಬಂಡವಾಳ ಹರಿಸಲು ಮುಂದಾಗಿದ್ದ ಕ್ರಿಕೆಟ್ ಆಸ್ಟ್ರೇಲಿಯಾ (CA) ಸಂಸ್ಥೆಗೆ ಈಗ ತನ್ನದೇ ಆಟಗಾರರ ಸಂಘಟನೆಯಿಂದ ಆಘಾತ ಎದುರಾಗಿದೆ. ಅಲ್ಲದೆ ತಮ್ಮ ಡಿಮ್ಯಾಂಡ್​ಗಳನ್ನು ಪೂರೈಸದಿದ್ದರೆ ವಿದೇಶಿ ಲೀಗ್​ನತ್ತ ಮುಖ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ.

BBL ಆಡಲು ಆಸ್ಟ್ರೇಲಿಯಾ ಆಟಗಾರರ ಹೊಸ ಡಿಮ್ಯಾಂಡ್..!
BBL
Image Credit source: BBL

Updated on: Jun 15, 2026 | 10:03 AM

ಆಸ್ಟ್ರೇಲಿಯಾದ ಟಿ20 ಟೂರ್ನಿಯಾದ ಬಿಗ್ ಬ್ಯಾಷ್ ಲೀಗ್ (BBL) ಅನ್ನು ಖಾಸಗೀಕರಣಗೊಳಿಸುವ ಕ್ರಿಕೆಟ್ ಆಸ್ಟ್ರೇಲಿಯಾ (CA) ಯೋಜನೆಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಹೀಗೆ ಬ್ರೇಕ್ ಹಾಕಿರುವುದು ಮತ್ಯಾರೂ ಅಲ್ಲ, ಆಸ್ಟ್ರೇಲಿಯನ್ ಕ್ರಿಕೆಟರ್ಸ್ ಅಸೋಸಿಯೇಷನ್ (ACA).

ಪ್ರಸ್ತುತ ಚಾಲ್ತಿಯಲ್ಲಿರುವ ನಿಯಮಾವಳಿಗಳ ಪ್ರಕಾರ, ಆಟಗಾರರ ಸಂಘಟನೆಯ ಒಪ್ಪಿಗೆಯಿಲ್ಲದೆ ಕ್ರಿಕೆಟ್ ಆಸ್ಟ್ರೇಲಿಯಾ ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳುವಂತಿಲ್ಲ ಎಂದು ತಿಳಿಸಿದೆ. ಈ ಮೂಲಕ ಬಿಗ್ ಬ್ಯಾಷ್ ಲೀಗ್​ ಅನ್ನು ಖಾಸಗೀಕರಣಗೊಳಿಸುವ ಯೋಜನೆಗೆ ತಡೆ ನೀಡಿದೆ.

ಆಸ್ಟ್ರೇಲಿಯನ್ ಕ್ರಿಕೆಟರ್ಸ್ ಅಸೋಸಿಯೇಷನ್​ ನಿರ್ಧಾರಕ್ಕೆ ಮುಖ್ಯ ಕಾರಣ ಆಟಗಾರರ ವೇತನ ತಾರತಮ್ಯ ಮತ್ತು ಜಾಗತಿಕ ಟಿ20 ಮಾರುಕಟ್ಟೆಯಲ್ಲಿನ ಸಂಭಾವನೆ.

ಆಸೀಸ್ ಆಟಗಾರರ ಅಸಮಾಧಾನ:

ಬಿಬಿಎಲ್ ಟೂರ್ನಿಯಲ್ಲಿ ಆಡುತ್ತಿರುವ ಆಸ್ಟ್ರೇಲಿಯಾದ ಸ್ಟಾರ್ ಆಟಗಾರರು ತಮ್ಮ ವೇತನ ವಿಷಯದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರಮುಖ ಕಾರಣಗಳು ಈ ಕೆಳಗಿನಂತಿವೆ…

  • ವೇತನ ವ್ಯತ್ಯಾಸ: ಬಿಬಿಎಲ್ ಡ್ರಾಫ್ಟ್ ಮೂಲಕ ಬರುವ ವಿದೇಶಿ ಆಟಗಾರರಿಗೆ ಗರಿಷ್ಠ ಅಂದಾಜು 4.20 ಲಕ್ಷ ಆಸ್ಟ್ರೇಲಿಯನ್ ಡಾಲರ್ (AU$) ವರೆಗೆ ವೇತನ ಸಿಗುತ್ತಿದೆ. ಆದರೆ, ಅದೇ ತಂಡವನ್ನು ಮುನ್ನಡೆಸುವ ಹಾಗೂ ಪಂದ್ಯ ಗೆಲ್ಲಿಸಿಕೊಡುವ ಆಸ್ಟ್ರೇಲಿಯಾದ ಪ್ರಮುಖ ದೇಶಿ ಆಟಗಾರರ ಗರಿಷ್ಠ ವೇತನ ಕೇವಲ 2 ಲಕ್ಷ ಆಸ್ಟ್ರೇಲಿಯನ್ ಡಾಲರ್ ಆಸುಪಾಸಿನಲ್ಲಿದೆ.
  • ಜಾಗತಿಕ ಲೀಗ್‌ಗಳ ಪೈಪೋಟಿ: ಸೌತ್ ಆಫ್ರಿಕಾ ಟಿ20 ಲೀಗ್ ಮತ್ತು ಯುಎಇಯ ಇಂಟರ್​ನ್ಯಾಷನಲ್ ಲೀಗ್ ಟಿ20 ಟೂರ್ನಿಗಳಲ್ಲಿ ಆಟಗಾರರಿಗೆ ಭಾರಿ ಪ್ರಮಾಣದ ಹಣವನ್ನು ಆಫರ್ ಮಾಡುತ್ತಿವೆ. ಉದಾಹರಣೆಗೆ, SA20 ಲೀಗ್‌ನಲ್ಲಿ ಆಡುವ ಪ್ರಮುಖ ಆಟಗಾರರು 13 ಲಕ್ಷ ಆಸ್ಟ್ರೇಲಿಯನ್ ಡಾಲರ್ ವರೆಗೆ ಸಂಪಾದಿಸುತ್ತಿದ್ದಾರೆ. ಇದು ಬಿಬಿಎಲ್‌ನಲ್ಲಿ ಸಿಗುವ ವೇತನಕ್ಕಿಂತ 4 ರಿಂದ 5 ಪಟ್ಟು ಹೆಚ್ಚಾಗಿದೆ.

ಆಸ್ಟ್ರೇಲಿಯನ್ನರ ಡಿಮ್ಯಾಂಡ್:

ಬಿಗ್ ಬ್ಯಾಷ್ ಲೀಗ್​ನ ವೇತನದ ಮಿತಿಯನ್ನು ಹೆಚ್ಚಿಸದಿದ್ದರೆ, ಆಸ್ಟ್ರೇಲಿಯಾದ ಯುವ ಮತ್ತು ಅನುಭವಿ ಆಟಗಾರರು ಡಿಸೆಂಬರ್-ಜನವರಿ ಅವಧಿಯಲ್ಲಿ ಬಿಬಿಎಲ್ ಬಿಟ್ಟು ವಿದೇಶಿ ಲೀಗ್‌ಗಳ ಕಡೆ ಮುಖ ಮಾಡಲಿದ್ದಾರೆ. ಹೀಗಾಗಿ ಬಿಬಿಎಲ್​ ಖಾಸಗೀಕರಣಕ್ಕೂ ಮುನ್ನವೇ ಆಟಗಾರರ ವೇತನದ ಬಗ್ಗೆ ಸ್ಪಷ್ಟತೆ ನೀಡಬೇಕೆಂದು ಆಸ್ಟ್ರೇಲಿಯನ್ ಕ್ರಿಕೆಟರ್ಸ್ ಅಸೋಸಿಯೇಷನ್​ ಆಗ್ರಹಿಸಿದೆ.

ಬಿಬಿಎಲ್​ ಖಾಸಗೀಕರಣದ ಯೋಜನೆ ಏನು?

ಬಿಗ್ ಬ್ಯಾಷ್ ಲೀಗ್​ನ ತಂಡಗಳನ್ನು ಇಷ್ಟು ವರ್ಷ ಆಯಾ ಕ್ರಿಕೆಟ್ ಮಂಡಳಿಗಳು ನಡೆಸುತ್ತಿಸುತ್ತಿದ್ದರು. ಉದಾಹರಣೆಗೆ, ಮೆಲ್ಬೋರ್ನ್​​ ಸ್ಟಾರ್ಸ್ ಫ್ರಾಂಚೈಸಿಯ ಮಾಲೀಕರು ಕ್ರಿಕೆಟ್ ವಿಕ್ಟೋರಿಯಾ. ಇದು ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದ ಅಧಿಕೃತ ಕ್ರಿಕೆಟ್ ಮಂಡಳಿಯಾಗಿದೆ.

ಇದೀಗ ಮಂಡಳಿಗಳು ತಮ್ಮ ಫ್ರಾಂಚೈಸಿಗಳನ್ನು ಖಾಸಗಿ ಹೂಡಿಕೆದಾರರಿಗೆ ಮಾರಾಟ ಮಾಡಲು ಮುಂದಾಗಿದ್ದಾರೆ. ಅದರಂತೆ ಇದೀಗ ಕ್ರಿಕೆಟ್ ಆಸ್ಟ್ರೇಲಿಯಾ ಎಲ್ಲಾ ತಂಡಗಳ ಮಾರಾಟಕ್ಕೆ ಸಿದ್ಧತೆಗಳನ್ನು ಆರಂಭಿಸಿದೆ.

ಬಿಬಿಎಲ್ ಫ್ರಾಂಚೈಸಿಗಳ ಮಾಲೀಕತ್ವದ ಪಾಲನ್ನು ಖಾಸಗಿ ಹೂಡಿಕೆದಾರರಿಗೆ ಮಾರಾಟ ಮಾಡುವ ಮೂಲಕ 60 ರಿಂದ 80 ಕೋಟಿ ಆಸ್ಟ್ರೇಲಿಯನ್ ಡಾಲರ್ ಬಂಡವಾಳ ಸಂಗ್ರಹಿಸುವುದು ಕ್ರಿಕೆಟ್ ಆಸ್ಟ್ರೇಲಿಯಾದ ಯೋಜನೆಯಾಗಿದೆ.

ಖಾಸಗಿ ಹೂಡಿಕೆ ಬಂದರೆ, ಬಿಬಿಎಲ್ ಮತ್ತು ಡಬ್ಲ್ಯೂಬಿಬಿಎಲ್ (WBBL) ತಂಡಗಳ ಒಟ್ಟು ವೇತನ ಮಿತಿಯನ್ನು ತಲಾ 20 ಲಕ್ಷ ಆಸ್ಟ್ರೇಲಿಯನ್ ಡಾಲರ್ ಹೆಚ್ಚಿಸುವುದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಭರವಸೆ ನೀಡಿದೆ.

ಮುಂದಿನ ದಿನಗಳಲ್ಲಿ ವೇತನ ಜಾಸ್ತಿ ಮಾಡುವ ಭರವಸೆ ಸಿಕ್ಕಿದ್ದರೂ, ಆಸ್ಟ್ರೇಲಿಯಾ ಆಟಗಾರರ ಸಂಘಟನೆ (ACA) ಮತ್ತು ಪ್ರಮುಖ ರಾಜ್ಯ ಕ್ರಿಕೆಟ್ ಮಂಡಳಿಗಳು ಈ ಯೋಜನೆಯನ್ನು ಒಪ್ಪುತ್ತಿಲ್ಲ.

ಇದಕ್ಕೆ ಮುಖ್ಯ ಕಾರಣ, ಒಮ್ಮೆ ತಂಡದ ಮಾಲೀಕತ್ವವನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡಿದರೆ ಅದನ್ನು ಮತ್ತೆ ಮರಳಿ ಪಡೆಯಲು ಸಾಧ್ಯವಿಲ್ಲ. ವಿದೇಶಿ ಅಥವಾ ಖಾಸಗಿ ಮಾಲೀಕರು ಸ್ಥಳೀಯ ಕ್ರಿಕೆಟ್‌ನ ಅಭಿವೃದ್ಧಿಗಿಂತ ತಮ್ಮ ಲಾಭಕ್ಕಷ್ಟೇ ಆದ್ಯತೆ ನೀಡಬಹುದು ಎಂಬ ಆತಂಕ ಆಟಗಾರರದ್ದಾಗಿದೆ.

ಇನ್ನು ನ್ಯೂ ಸೌತ್ ವೇಲ್ಸ್ ಮತ್ತು ಕ್ವೀನ್ಸ್‌ಲ್ಯಾಂಡ್ ಕ್ರಿಕೆಟ್ ಮಂಡಳಿಗಳು ಈ ಸಂಪೂರ್ಣ ಮಾರಾಟ ಪ್ರಕ್ರಿಯೆಯನ್ನು ಬಲವಾಗಿ ವಿರೋಧಿಸಿವೆ. ಕೇವಲ ವಿಕ್ಟೋರಿಯಾದಂತಹ ಕೆಲವು ರಾಜ್ಯಗಳು ಮಾತ್ರ ಆಸಕ್ತಿ ತೋರಿಸಿರುವುದರಿಂದ ಇಡೀ ಯೋಜನೆ ಗೊಂದಲದಲ್ಲಿದೆ.

ಮುಂದಿನ ನಡೆಯೇನು?

ಆಸ್ಟ್ರೇಲಿಯಾ ಆಟಗಾರರ ಸಂಘಟನೆಯು ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ವಿವಿಧ ರಾಜ್ಯಗಳ ಕ್ರಿಕೆಟ್ ಮಂಡಳಿಗಳೊಂದಿಗೆ ಮಾತುಕತೆಯನ್ನು ಮುಂದುವರಿಸಲು ನಿರ್ಧರಿಸಿದೆ. ಮುಂದಿನ ಬಿಬಿಎಲ್ ಸೀಸನ್ ಆರಂಭವಾಗುವ ಮೊದಲು ಆಟಗಾರರ ವೇತನ ಮತ್ತು ಹಕ್ಕುಗಳನ್ನು ರಕ್ಷಿಸುವ ಹೊಸ ಒಪ್ಪಂದಕ್ಕೆ ಬರಲು ಪ್ರಯತ್ನಗಳು ನಡೆಯುತ್ತಿವೆ.

ಇದನ್ನೂ ಓದಿ: 100 ಓವರ್​, 600 ಎಸೆತಗಳು: ವೈಭವ್ ಸೂರ್ಯವಂಶಿ ಸಿಕ್ರೇಟ್ ಬಹಿರಂಗ!

ಜಾಗತಿಕ ಕ್ರಿಕೆಟ್ ಮಾರುಕಟ್ಟೆಯಲ್ಲಿ ಬಿಬಿಎಲ್ ತನ್ನ ಮೌಲ್ಯವನ್ನು ಉಳಿಸಿಕೊಳ್ಳಬೇಕಾದರೆ, ಸ್ಥಳೀಯ ಆಟಗಾರರ ಬೇಡಿಕೆಗಳನ್ನು ಈಡೇರಿಸುವುದು ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ಅನಿವಾರ್ಯವಾಗಿದೆ. ಹೀಗಾಗಿ ಬಿಬಿಎಲ್ ಆರಂಭಕ್ಕೂ ಮುನ್ನ ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಆಸ್ಟ್ರೇಲಿಯನ್ ಕ್ರಿಕೆಟರ್ಸ್ ಅಸೋಸಿಯೇಷನ್ ಹೊಸ ಒಪ್ಪಂದಕ್ಕೆ ಬರುವ ಸಾಧ್ಯತೆಯಿದೆ.

 

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us