100 ಓವರ್, 600 ಎಸೆತಗಳು: ವೈಭವ್ ಸೂರ್ಯವಂಶಿ ಸಿಕ್ರೇಟ್ ಬಹಿರಂಗ!
Vaibhav Sooryavanshi: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಹೊಸ ಇತಿಹಾಸ ನಿರ್ಮಿಸಿರುವ ವೈಭವ್ ಸೂರ್ಯವಂಶಿ ಇದೀಗ ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಅದು ಸಹ 15ನೇ ವಯಸ್ಸಿನಲ್ಲಿ. ಈ ಮೂಲಕ ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ಅತ್ಯಂತ ಕಿರಿಯ ಆಟಗಾರ ಎಂಬ ಸಾಧನೆ ಮಾಡಲಿದ್ದಾರೆ. ಆದರೆ ಈ ಸಾಧನೆ ಹಿಂದಿರುವ ಕಠಿಣ ಪರಿಶ್ರಮವನ್ನು ಅವರ ಬಾಲ್ಯದ ಕೋಚ್ ಬಹಿರಂಗಪಡಿಸಿದ್ದಾರೆ.

ವಿಶ್ವ ಕ್ರಿಕೆಟ್‌ನ ಹೊಸ ಸೆನ್ಸೇಷನ್ ವೈಭವ್ ಸೂರ್ಯವಂಶಿ (Vaibhav Sooryavanshi) ಯಶಸ್ಸಿನ ಹಿಂದಿರುವ ರೋಚಕ ರಹಸ್ಯವನ್ನು ಅವರ ಬಾಲ್ಯದ ಕೋಚ್ ಮನೀಶ್ ಓಜಾ ಬಹಿರಂಗಪಡಿಸಿದ್ದಾರೆ. ಕೇವಲ 15ನೇ ವಯಸ್ಸಿಗೆ ವಿಶ್ವ ಕ್ರಿಕೆಟ್‌ನ ದೈತ್ಯ ಬೌಲರ್‌ಗಳನ್ನು ನಡುಗಿಸುತ್ತಿರುವ ಯುವ ದಾಂಡಿಗನ ಈ ಯಶಸ್ಸಿಗೆ ಕಾರಣ ಕಠಿಣ ಪರಿಶ್ರಮ. ಅದು ಅಂತಿಂಥ ಪರಿಶ್ರಮವಲ್ಲ ಎಂಬುದನ್ನೂ ಕೂಡ ಓಜಾ ಅಂಕಿ-ಸಂಖ್ಯೆಗಳ ಮೂಲಕ ತೆರೆದಿಟ್ಟಿದ್ದಾರೆ.
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಪಿಎಲ್ 2026 ಸೀಸನ್‌ನಲ್ಲಿ 776 ರನ್ ಬಾರಿಸಿ ಅತ್ಯಂತ ಕಿರಿಯ ವಯಸ್ಸಿನ ಆರೆಂಜ್ ಕ್ಯಾಪ್ ಹಾಗೂ ಟೂರ್ನಿಯ ಮೂವಿಂಗ್ ಪ್ಲೇಯರ್ ಪ್ರಶಸ್ತಿ ಗೆದ್ದ ವೈಭವ್ ಸೂರ್ಯವಂಶಿ, ಸದ್ಯ ಇಂಗ್ಲೆಂಡ್ ಪ್ರವಾಸದ ಭಾರತ ಹಿರಿಯರ ಟಿ20 ತಂಡಕ್ಕೂ ಆಯ್ಕೆಯಾಗಿದ್ದಾರೆ. ಈ ಅಸಾಧಾರಣ ಯಶಸ್ಸಿಗೆ ವರ್ಷಗಳ ಕಾಲ ನಡೆದ “ಕಠಿಣ” ತರಬೇತಿಯೇ ಕಾರಣ ಎಂದು ಓಜಾ ಹೇಳಿದ್ದಾರೆ.
ವೈಭವ್ ಸೂರ್ಯವಂಶಿ ಪ್ರತಿ ದಿನ 8 ಗಂಟೆಗಳ ಕಾಲ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದ. ಈ ವೇಳೆ ಬರೋಬ್ಬರಿ 100 ಓವರ್ಗಳನ್ನು ಎದುರಿಸುತ್ತಿದ್ದ. ಅಂದರೆ ಬರೋಬ್ಬರಿ 600 ಎಸೆತಗಳು.
ಈ ಅಭ್ಯಾಸ ಇಂದು ನಿನ್ನೆ ಶುರುವಾಗಿದ್ದಲ್ಲ, ಕೇವಲ 10 ವರ್ಷದವರಾಗಿದ್ದಾಗಿನಿಂದಲೇ ವೈಭಯ್ ಇಂತಹದೊಂದು ಅತ್ಯಂತ ಕಠಿಣ ದಿನಚರಿಯನ್ನು ಪಾಲಿಸುತ್ತಿದ್ದ. ಅದರ ಫಲವೇ ಇದೀಗ ಅಬ್ಬರಿಸುತ್ತಿರುವುದು ಎಂದು ಮನೀಶ್ ಓಜಾ ತಿಳಿಸಿದ್ದಾರೆ. ವೈಭವ್ ಸೂರ್ಯವಂಶಿಯ ದಿನಚರಿ ಈ ಕೆಳಗಿನಂತಿದೆ…
- ಪ್ರತಿ ದಿನ ಬೆಳಿಗ್ಗೆ 7:30 ಕ್ಕೆ ಆರಂಭವಾಗುತ್ತಿದ್ದ ನೆಟ್ ಪ್ರಾಕ್ಟೀಸ್, ಸಂಜೆ 4:00 ರವರೆಗೆ ಸಾಗುತ್ತಿತ್ತು.
- ವೈಭವ್ ಪ್ರತಿದಿನ ಕನಿಷ್ಠ 100 ಓವರ್‌ಗಳಷ್ಟು (600ಕ್ಕೂ ಹೆಚ್ಚು ಎಸೆತಗಳು) ಬ್ಯಾಟಿಂಗ್ ಮಾಡುತ್ತಿದ್ದರು.
ಮೊದಲು ಕೋಚ್ ಮನೀಶ್ ಓಜಾ, ಸ್ವತಃ 200 ರಿಂದ 300 ಥ್ರೋ-ಡೌನ್ ಎಸೆತಗಳನ್ನು ಹಾಕುತ್ತಿದ್ದರು. ಅವರು ಸುಸ್ತಾದಾಗ ಅಕಾಡೆಮಿಯ ಸಹಾಯಕ ಸಿಬ್ಬಂದಿ ಹಾಗೂ ನೆಟ್ ಬೌಲರ್‌ಗಳು ಗುಂಪು ಗುಂಪಾಗಿ ಬೌಲಿಂಗ್ ಮಾಡುತ್ತಿದ್ದರು. ಆದರೂ ವೈಭವ್ ಬ್ಯಾಟಿಂಗ್ ಹಸಿವು ತೀರುತ್ತಿರಲಿಲ್ಲ.
ಅಭ್ಯಾಸದ ವೇಳೆಯೇ ವೈಭವ್ ಸೂರ್ಯವಂಶಿ ಅವರ ಆಕ್ರಮಣಕಾರಿ ಪವರ್-ಹಿಟ್ಟಿಂಗ್ ಎಷ್ಟಿತ್ತೆಂದರೆ, ಯಾವುದೇ ಕ್ರಿಕೆಟ್ ಬ್ಯಾಟ್ ಒಂದು ತಿಂಗಳಿಗಿಂತ ಹೆಚ್ಚು ಕಾಲ ಉಳಿಯುತ್ತಿರಲಿಲ್ಲ.
ಕೇವಲ 11-12ನೇ ವಯಸ್ಸಿನಲ್ಲೇ ವೈಭವ್ ಅವರು ಗಂಟೆಗೆ 125-130 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುವ ಹಿರಿಯ ವೇಗದ ಬೌಲರ್‌ಗಳನ್ನು ಲೀಲಾಜಾಲವಾಗಿ ಎದುರಿಸುತ್ತಿದ್ದರು. ಇವೆಲ್ಲದರ ಫಲವಾಗಿ ಇಂದು ವಿಶ್ವದ ಪ್ರಮುಖ ಬೌಲರ್‌ಗಳನ್ನು ನಿರಾಯಾಸವಾಗಿ ಎದುರಿಸುತ್ತಿದ್ದಾರೆ ಎಂದು ಮನೀಶ್ ಓಜಾ ತಿಳಿಸಿದ್ದಾರೆ.
ಹೆತ್ತವರ ತ್ಯಾಗ!
ವೈಭವ್ ಸೂರ್ಯವಂಶಿ ಈ ಮಟ್ಟಕ್ಕೆ ಬೆಳೆಯಲು ಅವರ ಹೆತ್ತವರ ತ್ಯಾಗ ಅಪಾರವಾಗಿದೆ. ಬಿಹಾರದ ಸಮಸ್ತಿಪುರದ ತಾಜ್‌ಪುರ ಗ್ರಾಮದವರಾದ ಇವರು ವೈಭವ್ ಕ್ರಿಕೆಟ್‌ಗಾಗಿ ಪಾಟ್ನಾಗೆ ವಲಸೆ ಬಂದವರು.
ಮಗನಿಗೆ ಅಕಾಡೆಮಿಯಲ್ಲಿ ನೆಟ್ಸ್ ಬೌಲಿಂಗ್ ಮಾಡುವ ಬೌಲರ್‌ಗಳಿಗೂ ಸೇರಿಸಿ ದಿನಕ್ಕೆ 10-15 ಜನರಿಗೆ ಅಡುಗೆ ಮಾಡಲು ತಾಯಿ ಆರತಿ ಪ್ರತಿದಿನ ನಡುರಾತ್ರಿ 2:00 ಗಂಟೆಗೆ ಏಳುತ್ತಿದ್ದರು. ಮುಂಜಾನೆ 4:00 ಗಂಟೆಗೆ ಅಡುಗೆ ಮುಗಿಸಿ ಪಾಟ್ನಾ ಅಕಾಡೆಮಿಗೆ ಕರೆದೊಯ್ಯುತ್ತಿದ್ದರು.
ಕೃಷಿಕರಾಗಿದ್ದ ತಂದೆ ಸಂಜೀವ್ ಸೂರ್ಯವಂಶಿ, ಮಗನ ಕ್ರಿಕೆಟ್ ಕಿಟ್, ತರಬೇತಿ ವೆಚ್ಚ ಹಾಗೂ ನೆಟ್ಸ್ ಬೌಲರ್‌ಗಳ ಊಟದ ಖರ್ಚನ್ನು ಸರಿದೂಗಿಸಲು ತಮ್ಮ ಜಮೀನನ್ನೇ ಮಾರಾಟ ಮಾಡಿದ್ದರು.
ಇದೀಗ ಐಪಿಎಲ್ ಮೂಲಕ ವೈಭವ್ ಸೂರ್ಯವಂಶಿ ಪೋಷಕರು ಕಳೆದುಕೊಂಡಿದ್ದೆಲ್ಲವನ್ನೂ ಮರಳಿ ಪಡೆಯುವ ಯತ್ನದಲ್ಲಿದ್ದಾರೆ. ಅಷ್ಟೇ ಅಲ್ಲದೆ ಪೋಷಕರಿಗಾಗಿ ಮತ್ತಷ್ಟು ಸಾಧನೆ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ.
ಸ್ನಾಯು ಗ್ರಹಿಕೆ!
ವೈಭವ್ ಸೂರ್ಯವಂಶಿ ಆರು ವರ್ಷಗಳ ಕಾಲ ನಿರಂತರವಾಗಿ ಪ್ರತಿದಿನ 100 ಓವರ್‌ಗಳ ಕಾಲ ಬ್ಯಾಟಿಂಗ್ ಮಾಡಿದ್ದರಿಂದಲೇ ಅವರ ಸ್ನಾಯುಗಳ ಗ್ರಹಿಕೆ ಹಾಗೂ ಅದ್ಭುತ ಬ್ಯಾಟ್ ಸ್ವಿಂಗ್ ರೂಪುಗೊಂಡಿದೆ. ಇಲ್ಲಿ ಸ್ನಾಯು ಗ್ರಹಿಕೆ ಎಂದರೆ, ಒಂದು ಕೆಲಸವನ್ನು ಪದೇ ಪದೇ ಮಾಡಿ ರೂಢಿಸಿಕೊಂಡಾಗ, ದೇಹವು ಅದನ್ನು ಯೋಚಿಸದೆಯೇ ಸ್ವಯಂಚಾಲಿತವಾಗಿ ಮಾಡುವ ಶಕ್ತಿ.
ಇದನ್ನೂ ಓದಿ: ಸಿಕ್ಸ್ ಸಿಡಿಸಿಯೇ ಹೊಸ ಇತಿಹಾಸ ನಿರ್ಮಿಸಿದ ಸ್ಮೃತಿ ಮಂಧಾನ
ವೈಭವ್ ಸೂರ್ಯವಂಶಿ ನಿರಂತರವಾಗಿ 100 ಓವರ್‌ಗಳ ಕಾಲ ಬ್ಯಾಟಿಂಗ್ ಅಭ್ಯಾಸ ಮಾಡಿರುವುದರಿಂದ ಅವರ ಸ್ನಾಯು ಗ್ರಹಿಕೆ ಬಲಗೊಂಡಿದೆ. ಇದರಿಂದ ಅವರ ಮೆದಳು ಯೋಚಿಸುವ ವೇಗದಲ್ಲೇ ಸ್ನಾಯುಗಳು ಕಾರ್ಯನಿರ್ವಹಿಸುತ್ತವೆ. ಇದರಿಂದಾಗಿಯೇ ಇಂದು ವೈಭವ್ ಸೂರ್ಯವಂಶಿಯ ಶಾಟ್ಗಳನ್ನು ನೋಡಿ ಇಡೀ ಜಗತ್ತೇ ಆಶ್ಚರ್ಯಪಡುತ್ತಿದೆ ಎಂದು ಬಾಲ್ಯದ ಕೋಚ್ ಮನೀಶ್ ಓಜಾ ಹೇಳಿದ್ದಾರೆ.
Published On - 8:13 am, Mon, 15 June 26




