
ಚಾಂಪಿಯನ್ಸ್ ಟ್ರೋಫಿಯ (Champions Trophy 2025) ಮೊದಲ ಸೆಮಿಫೈನಲ್ ಪಂದ್ಯ ಮಂಗಳವಾರ ದುಬೈನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ (India vs Australia) ನಡುವೆ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಫೈನಲ್‌ಗೆ ಟಿಕೆಟ್ ಸಿಗುತ್ತದೆ. ಹೀಗಾಗಿ ಎರಡೂ ತಂಡಗಳು ಗೆಲುವಿಗಾಗಿ ಸಾಕಷ್ಟು ತಂತ್ರಗಳನ್ನು ರೂಪಿಸಿಕೊಂಡು ಅಖಾಡಕ್ಕಿಳಿಯಲು ಸಜ್ಜಾಗಿವೆ. ಆದರೆ ಅದಕ್ಕೂ ಮುನ್ನ ಭಾರತ ವಿರುದ್ಧದ ಪಂದ್ಯಕ್ಕೆ ಆಸ್ಟ್ರೇಲಿಯಾದ ಆಡುವ ಹನ್ನೊಂದರ ಬಳಗ ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ. ಏಕೆಂದರೆ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ತಂಡದ ಆರಂಭಿಕ ಆಟಗಾರನಿಗೆ ಇಂಜುರಿಯಾಗಿದ್ದು, ಆತ ಟೂರ್ನಿಯಿಂದಲೇ ಹೊರಬಿದ್ದಿದ್ದಾನೆ. ಹಾಗೆಯೇ ದುಬೈನಲ್ಲಿ ಆಡುತ್ತಿರುವ ಕಾರಣ ವೇಗಿಗಳಿಗಿಂತ ತಂಡದಲ್ಲಿ ಸ್ಪಿನ್ನರ್‌ಗಳ ಅವಶ್ಯಕತೆ ಹೆಚ್ಚಿದೆ. ಹೀಗಾಗಿ ಆಸೀಸ್ ತಂಡದಲ್ಲಿ ಸೆಮಿಫೈನಲ್ ಪಂದ್ಯಕ್ಕೆ ಬದಲಾವಣೆಗಳಾಗುವುದು ಖಚಿತ ಎನ್ನಬಹುದು.
ಮೇಲೆ ಹೇಳಿದಂತೆ ಸೆಮಿಫೈನಲ್‌ಗೆ ಮುನ್ನ ಆಸ್ಟ್ರೇಲಿಯಾ ದೊಡ್ಡ ಹಿನ್ನಡೆ ಅನುಭವಿಸಿದೆ. ತಂಡದ ಆರಂಭಿಕ ಆಟಗಾರ ಮ್ಯಾಥ್ಯೂ ಶಾರ್ಟ್ ಗಾಯಗೊಂಡ ಕಾರಣ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಜೇಕ್ ಫ್ರೇಸರ್-ಮೆಕ್‌ಗುರ್ಕ್ ಟ್ರಾವಿಸ್ ಹೆಡ್ ಜೊತೆಗೆ ಆರಂಭಿಕರಾಗಿ ಆಡಬಹುದು. ಇದಾದ ನಂತರ, ನಾಯಕ ಸ್ಟೀವ್ ಸ್ಮಿತ್ ಮತ್ತು ಮಾರ್ನಸ್ ಲಬುಶೇನ್ ಬರಲಿದ್ದಾರೆ. ಜೋಶ್ ಇಂಗ್ಲಿಸ್ ಅಥವಾ ಅಲೆಕ್ಸ್ ಕ್ಯಾರಿ ವಿಕೆಟ್ ಕೀಪರ್ ಆಗಿ ಆಡಬಹುದು.
ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಫಿನಿಷರ್ ಪಾತ್ರದಲ್ಲಿ ಕಾಣಬಹುದು. ವೇಗದ ಬೌಲರ್‌ಗಳಲ್ಲಿ, ಸ್ಪೆನ್ಸರ್ ಜಾನ್ಸನ್ ಮತ್ತು ಬೆನ್ ದ್ವಾರಶುಯಿಸ್ ಆಡುವುದು ಖಚಿತ. ಆದರೆ ನಾಥನ್ ಎಲ್ಲಿಸ್ ಬದಲಿಗೆ ಸೀನ್ ಅಬಾಟ್‌ಗೆ ಅವಕಾಶ ಸಿಗಬಹುದು. ಆಡಮ್ ಜಂಪಾ ಸ್ಪಿನ್ ವಿಭಾಗದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಅವರಿಗೆ ಬೆಂಬಲ ನೀಡಲಿದ್ದಾರೆ.
ದುಬೈ ಮೈದಾನದಲ್ಲಿನ ಒಟ್ಟಾರೆ ದಾಖಲೆಯನ್ನು ನೋಡಿದರೆ, ವೇಗದ ಬೌಲರ್‌ಗಳಿಗಿಂತ ಸ್ಪಿನ್ನರ್‌ಗಳು ಮೇಲುಗೈ ಸಾಧಿಸಿದ್ದಾರೆ. ಭಾರತ-ನ್ಯೂಜಿಲೆಂಡ್ ಪಂದ್ಯದ ಸಮಯದಲ್ಲಿ ಸ್ಪಿನ್ನರ್‌ಗಳು 11 ವಿಕೆಟ್‌ಗಳನ್ನು ಪಡೆದಿದ್ದು ಇದಕ್ಕೆ ಉದಾಹರಣೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಆಸ್ಟ್ರೇಲಿಯಾ ತಂಡದಲ್ಲಿ ಸ್ಪಿನ್ನರ್ ತನ್ವೀರ್ ಸಂಘಾಗೆ ಸ್ಥಾನ ನೀಡಬಹುದು. ತನ್ವೀರ್ ಇದುವರೆಗೆ ಮೂರು ಏಕದಿನ ಪಂದ್ಯಗಳನ್ನು ಆಡಿದ್ದು, ಎರಡು ವಿಕೆಟ್‌ಗಳನ್ನು ಪಡೆದಿದ್ದಾರೆ. ಹೀಗಾಗಿ ಈ ಯುವ ಸ್ಪಿನ್ನರ್ಗೂ ತಂಡದಲ್ಲಿ ಸ್ಥಾನ ಸಿಗಬಹುದು.
ಇದನ್ನೂ ಓದಿ: IND vs AUS: 2 ಐಸಿಸಿ ಪ್ರಶಸ್ತಿ, 300 ರನ್..! ಭಾರತಕ್ಕೆ ತಲೆನೋವಾಗಿರುವ ಟ್ರಾವಿಸ್ ಹೆಡ್
ಆಸ್ಟ್ರೇಲಿಯಾ ಸಂಭಾವ್ಯ ತಂಡ: ಟ್ರಾವಿಸ್ ಹೆಡ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಸ್ಟೀವ್ ಸ್ಮಿತ್ (ನಾಯಕ), ಮಾರ್ನಸ್ ಲಬುಶೇನ್, ಜೋಶ್ ಇಂಗ್ಲಿಸ್/ಅಲೆಕ್ಸ್ ಕ್ಯಾರಿ, ಗ್ಲೆನ್ ಮ್ಯಾಕ್ಸ್‌ವೆಲ್, ಸ್ಪೆನ್ಸರ್ ಜಾನ್ಸನ್, ನಾಥನ್ ಎಲ್ಲಿಸ್, ಸೀನ್ ಅಬಾಟ್, ಆಡಮ್ ಜಂಪಾ ಮತ್ತು ತನ್ವೀರ್ ಸಂಘ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:18 pm, Mon, 3 March 25