- Kannada News Photo gallery Cricket photos India vs Australia Semifinal: Travis Head's Threat Looms Large
IND vs AUS: 2 ಐಸಿಸಿ ಪ್ರಶಸ್ತಿ, 300 ರನ್..! ಭಾರತಕ್ಕೆ ತಲೆನೋವಾಗಿರುವ ಟ್ರಾವಿಸ್ ಹೆಡ್
India vs Australia Semifinal: ಮಾರ್ಚ್ 4ರಂದು ನಡೆಯುವ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ. ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಭಾರತಕ್ಕೆ ದೊಡ್ಡ ಬೆದರಿಕೆಯಾಗಿದ್ದಾರೆ. ಕಳೆದ ಎರಡು ಐಸಿಸಿ ಟೂರ್ನಿಗಳಲ್ಲಿ ಹೆಡ್ ಭಾರತವನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಸ್ಫೋಟಕ ಬ್ಯಾಟಿಂಗ್ ಶೈಲಿ ಭಾರತೀಯ ಬೌಲರ್‌ಗಳಿಗೆ ದೊಡ್ಡ ಸವಾಲಾಗಿದೆ. ಈ ಪಂದ್ಯದಲ್ಲಿ ಹೆಡ್ ಅವರನ್ನು ಹೇಗೆ ನಿಭಾಯಿಸುವುದು ಎಂಬುದು ಭಾರತಕ್ಕೆ ನಿರ್ಣಾಯಕವಾಗಿದೆ.
Updated on: Mar 03, 2025 | 7:34 PM

ಮಾರ್ಚ್ 4 ರಂದು ದುಬೈನಲ್ಲಿ ನಡೆಯಲ್ಲಿರುವ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೆ ಉಭಯ ತಂಡಗಳಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಆದರೆ ಟೀಂ ಇಂಡಿಯಾ ಎಂದೊಡನೆ ಮೈಕೊಡವಿ ನಿಲ್ಲುವ ಆಸೀಸ್ ಸ್ಫೋಟಕ ಬ್ಯಾಟರ್ ಟ್ರಾವಿಸ್ ಹೆಡ್, ಭಾರತ ತಂಡಕ್ಕೆ ದೊಡ್ಡ ತಲೆನೋವಾಗಿದ್ದಾರೆ.

ಈ ರೀತಿ ಹೇಳುವುದಕ್ಕೆ ಕಾರಣವೂ ಇದ್ದು, ಕಳೆದೆರಡು ಐಸಿಸಿ ಟೂರ್ನಿಗಳಲ್ಲಿ ಭಾರತದ ಗೆಲುವಿನ ಕನಸಿಗೆ ಅಡ್ಡಿಯಾಗಿದ್ದೆ ಈ ಹೆಡ್. ಐಸಿಸಿ ಟೂರ್ನಿ ಎಂದರೆ ಆಸ್ಟ್ರೇಲಿಯಾ ಆಟಗಾರರ ಆಟದ ತಂತ್ರವೇ ಬದಲಾಗಿ ಬಿಡುತ್ತದೆ. ಎಂತದ್ದೇ ಸಂದರ್ಭದಲ್ಲೂ ಗೆಲುವನ್ನು ಬಿಟ್ಟುಕೊಡದ ಸ್ವಭಾವ ಅವರದ್ದು. ಅದರಲ್ಲೂ ಭಾರತವೆಂದರೆ ಮೈಮುರಿದು ಬೀಳುವ ಹೆಡ್ ಬಗ್ಗೆ ರೋಹಿತ್ ಪಡೆ ಕೊಂಚ ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ಟ್ರಾವಿಸ್ ಹೆಡ್ ಯಾವ್ಯಾವಾಗ ಭಾರತಕ್ಕೆ ತಲೆನೋವಾಗಿದ್ದಾರೆ ಎಂಬುದನ್ನು ನೋಡುವುದಾದರೆ... 2023ರ ಡಬ್ಲ್ಯೂಟಿಸಿ ಫೈನಲ್ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ದಿ ಓವಲ್‌ನಲ್ಲಿ ನಡೆದಿತ್ತು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 469 ರನ್ ಗಳಿಸಿತ್ತು. ತಂಡದ ಪರ ಟ್ರಾವಿಸ್ ಹೆಡ್ 174 ಎಸೆತಗಳಲ್ಲಿ 163 ರನ್ ಗಳಿಸಿದರು. ಅಂತಿಮವಾಗಿ ಭಾರತ 163 ರನ್ಗಳಿಂದ ಪಂದ್ಯವನ್ನು ಸೋತು, ಚಾಂಪಿಯನ್ ಪಟ್ಟದಿಂದ ವಂಚಿತವಾಯಿತು.

ಇನ್ನು ಅದೇ ವರ್ಷ ಅಂದರೆ 2023 ರಲ್ಲಿ ನಡೆದ ಏಕದಿನ ವಿಶ್ವಕಪ್‌ನ ಫೈನಲ್ ಪಂದ್ಯವು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಕೇವಲ 240 ರನ್ ಗಳಿಸಿತ್ತು. ಆಸ್ಟ್ರೇಲಿಯಾ ಕೂಡ 47 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಇಲ್ಲಿಂದ ಟೀಂ ಇಂಡಿಯಾ ಪ್ರಶಸ್ತಿ ಗೆಲ್ಲುವ ಭರವಸೆಯಲ್ಲಿತ್ತು. ಆದರೆ ಟ್ರಾವಿಸ್ ಹೆಡ್ 120 ಎಸೆತಗಳಲ್ಲಿ 137 ರನ್ ಗಳಿಸುವ ಮೂಲಕ ಆಸ್ಟ್ರೇಲಿಯಾವನ್ನು ಚಾಂಪಿಯನ್ ಆಗಿ ಮಾಡಿದರು.

2024 ರಲ್ಲಿ ನಡೆದ ಟಿ20 ವಿಶ್ವಕಪ್‌ನ ಸೂಪರ್ 8 ಸುತ್ತಿಲ್ಲಿ ಈ ಎರಡೂ ತಂಡಗಳು ಮುಖಾಮುಖಿಯಾದಾಗ, ಭಾರತ ಪಂದ್ಯವನ್ನು ಗೆದ್ದಿತ್ತಾದರೂ ಈ ಪಂದ್ಯದಲ್ಲಿಯೂ ಟ್ರಾವಿಸ್ ಹೆಡ್ 43 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳ ಸಹಾಯದಿಂದ 76 ರನ್ ಬಾರಿಸಿದರು. ಆದರೆ ಭಾರತ ನೀಡಿದ 205 ರನ್ಗಳ ಗುರಿಯನ್ನು ಬೆನ್ನಟ್ಟಲು ಆಸ್ಟ್ರೇಲಿಯಾಕ್ಕೆ ಸಾಧ್ಯವಾಗಿರಲಿಲ್ಲ.

ಭಾರತ ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ 2024-25ರ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲೂ ಹೀನಾಯವಾಗಿ ಸೋತಿತು. ಇದಕ್ಕೆ ದೊಡ್ಡ ಕಾರಣ ಕೂಡ ಟ್ರಾವಿಸ್ ಹೆಡ್. ಐದು ಪಂದ್ಯಗಳ ಸರಣಿಯಲ್ಲಿ ಹೆಡ್ 448 ರನ್ ಬಾರಿಸಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ಅಲ್ಲದೆ ಹೆಡ್ ಅಡಿಲೇಡ್ ಮತ್ತು ಗಬ್ಬಾ ಟೆಸ್ಟ್‌ಗಳಲ್ಲಿ ಶತಕಗಳನ್ನು ಬಾರಿಸಿದ್ದರು. ಹೀಗಾಗಿ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಹೆಡ್ರನ್ನು ಬೇಗ ಕಟ್ಟಿಹಾಕದಿದ್ದರೆ ಭಾರತಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.



















