AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇದು ನಮ್ಮ ಮನೆಯಲ್ಲ’; ಒಂದೇ ಮೈದಾನದ ಲಾಭ ಪಡೆಯುತ್ತಿದ್ದಾರೆ ಎಂದವರಿಗೆ ರೋಹಿತ್ ಖಡಕ್ ಉತ್ತರ

Champions Trophy 2025: 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡುತ್ತಿರುವುದಕ್ಕೆ ಸಂಬಂಧಿಸಿದಂತೆ ಮಾಜಿ ಆಟಗಾರರ ಆರೋಪಗಳಿಗೆ ರೋಹಿತ್ ಶರ್ಮಾ ಉತ್ತರಿಸಿದ್ದಾರೆ. ದುಬೈ ಮೈದಾನ ಭಾರತಕ್ಕೆ ಅನುಕೂಲಕರವಾಗಿಲ್ಲ ಎಂದು ಹೇಳಿರುವ ಅವರು, ಪಿಚ್‌ಗಳು ಪ್ರತಿ ಪಂದ್ಯದಲ್ಲೂ ಬದಲಾಗುತ್ತಿರುವುದನ್ನು ಉಲ್ಲೇಖಿಸಿದ್ದಾರೆ. ಭಾರತಕ್ಕೆ ಯಾವುದೇ ಅನುಕೂಲವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ಇದು ನಮ್ಮ ಮನೆಯಲ್ಲ’; ಒಂದೇ ಮೈದಾನದ ಲಾಭ ಪಡೆಯುತ್ತಿದ್ದಾರೆ ಎಂದವರಿಗೆ ರೋಹಿತ್ ಖಡಕ್ ಉತ್ತರ
Rohit Sharma
ಪೃಥ್ವಿಶಂಕರ
|

Updated on:Mar 03, 2025 | 9:53 PM

Share

2025 ರ ಚಾಂಪಿಯನ್ಸ್ ಟ್ರೋಫಿಯನ್ನು (Champions Trophy 2025) ಪಾಕಿಸ್ತಾನ ಆಯೋಜಿಸುತ್ತಿದೆಯಾದರೂ, ಟೀಂ ಇಂಡಿಯಾ ಮಾತ್ರ ತನ್ನ ಪಂದ್ಯಗಳನ್ನು ದುಬೈನಲ್ಲಿ ಆಡುತ್ತಿದೆ. ಇದಕ್ಕೆ ಕಾರಣ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಸರಿ ಇಲ್ಲದಿರುವುದು. ಪಾಕಿಸ್ತಾನದಲ್ಲಿ ನಮ್ಮ ತಂಡ ಸುರಕ್ಷಿತವಲ್ಲ ಎಂಬುದನ್ನು ಮನಗಂಡ ಭಾರತ ಸರ್ಕಾರ ಟೀಂ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸದಿರಲು ನಿರ್ಧರಿಸಿತು. ಹೀಗಾಗಿ ಐಸಿಸಿ ಈ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲು ತೀರ್ಮಾನಿಸಿತು. ಅದರಂತೆ ಟೀಂ ಇಂಡಿಯಾ ತನ್ನೇಲ್ಲ ಪಂದ್ಯಗಳನ್ನು ದುಬೈನಲ್ಲಿ ಆಡುತ್ತಿದೆ. ಆದರೆ ಟೀಂ ಇಂಡಿಯಾದ ಅಜೇಯ ಓಟವನ್ನು ಅರಗಿಸಿಕೊಳ್ಳದ, ಪಾಕಿಸ್ತಾನ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾದ ಮಾಜಿ ಆಟಗಾರರು, ಎಲ್ಲಾ ಪಂದ್ಯಗಳು ದುಬೈನಲ್ಲಿ ಆಡುತ್ತಿರುವುದರಿಂದ ಭಾರತ ತಂಡಕ್ಕೆ ಇತರ ತಂಡಗಳಿಗಿಂತ ಹೆಚ್ಚಿನ ಲಾಭವಾಗುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಇದೀಗ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೂ ಮುನ್ನ, ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಈ ವಿವಾದದ ಬಗ್ಗೆ ಮೌನ ಮುರಿದಿದ್ದಾರೆ.

ಇದು ನಮ್ಮ ಮನೆಯಲ್ಲ- ರೋಹಿತ್

ಮಾಜಿ ಕ್ರಿಕೆಟಿಗರ ಈ ಆರೋಪಕ್ಕೆ ಖಡಕ್ ಆಗಿಯೇ ಉತ್ತರಿಸಿರುವ ರೋಹಿತ್, ‘ದುಬೈನ ಒಂದೇ ಮೈದಾನದಲ್ಲಿ ಎಲ್ಲಾ ಪಂದ್ಯಗಳನ್ನು ಆಡಿದರೂ, ಭಾರತ ತಂಡಕ್ಕೆ ಯಾವುದೇ ಪ್ರಯೋಜನ ಸಿಗುತ್ತಿಲ್ಲ. ದುಬೈ ಮೈದಾನ ಟೀಂ ಇಂಡಿಯಾದ ‘ತವರು ಸ್ಥಳ’ ಅಲ್ಲ. ಇದು ನಮ್ಮ ಆಟಗಾರರಿಗೂ ಹೊಸ ಅನುಭವ. ನಾವು ಇಲ್ಲಿ 3 ಪಂದ್ಯಗಳನ್ನು ಆಡಿದ್ದೇವೆ ಮತ್ತು ಮೂರು ಬಾರಿಯೂ ಪಿಚ್ ವಿಭಿನ್ನವಾಗಿ ವರ್ತಿಸಿದೆ. ಪ್ರತಿ ಬಾರಿಯೂ ನಾನು ಹೊಸ ಸವಾಲನ್ನು ಎದುರಿಸಬೇಕಾಗಿತ್ತು. ಇದು ನಮ್ಮ ಮನೆ ಅಲ್ಲ, ದುಬೈ. ನಾವು ಇಲ್ಲಿ ಹೆಚ್ಚು ಪಂದ್ಯಗಳನ್ನು ಆಡುವುದಿಲ್ಲ, ಇದು ನಮಗೂ ಹೊಸದು.

ಇದನ್ನೂ ಓದಿ: IND vs AUS: 2 ಐಸಿಸಿ ಪ್ರಶಸ್ತಿ, 300 ರನ್..! ಭಾರತಕ್ಕೆ ತಲೆನೋವಾಗಿರುವ ಟ್ರಾವಿಸ್ ಹೆಡ್

ಪ್ರತಿ ಪಂದ್ಯವೂ ಸವಾಲಾಗಿತ್ತು

‘ಇಲ್ಲಿ 4-5 ಪಿಚ್​ಗಳನ್ನು ಬಳಸಲಾಗುತ್ತಿದೆ. ಸೆಮಿಫೈನಲ್ ಪಂದ್ಯ ಯಾವ ಪಿಚ್‌ನಲ್ಲಿ ನಡೆಯುತ್ತದೆ ಎಂದು ನನಗೆ ತಿಳಿದಿಲ್ಲ. ಆದರೆ ಏನಾಗುತ್ತದೆಯೋ ಅದಕ್ಕೆ ಅನುಗುಣವಾಗಿ ನಾವು ನಮ್ಮನ್ನು ಹೊಂದಿಸಿಕೊಳ್ಳಬೇಕಾಗುತ್ತದೆ. ನಾವು ಅದಕ್ಕೆ ತಕ್ಕಂತೆ ಆಡುವ ಗುರಿಯೊಂದಿಗೆ ಕಣಕ್ಕಿಳಿಯುತ್ತಿದ್ದೇವೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ಆರಂಭದಲ್ಲಿ ಚೆಂಡು ಸ್ವಲ್ಪ ಸ್ವಿಂಗ್ ಆಗುತ್ತಿರುವುದನ್ನು ನಾವು ನೋಡಿದ್ದೇವೆ. ಆದರೆ ಮೊದಲ ಎರಡು ಪಂದ್ಯಗಳಲ್ಲಿ ನಮ್ಮ ಬೌಲರ್‌ಗಳು ಬೌಲಿಂಗ್ ಮಾಡುವಾಗ ಇದು ಕಂಡುಬರಲಿಲ್ಲ. ಹಿಂದಿನ ಪಂದ್ಯದಲ್ಲಿ ಹೆಚ್ಚು ಸ್ಪಿನ್ ಇರಲಿಲ್ಲ, ಆದರೆ ನ್ಯೂಜಿಲೆಂಡ್‌ನ ಪಂದ್ಯದಲ್ಲಿ, ಬಹಳಷ್ಟು ಸ್ಪಿನ್ ಕಂಡುಬಂದಿತು. ಇದರರ್ಥ ಪ್ರತಿಯೊಂದು ಪಿಚ್​ ಕೂಡ ವಿಭಿನ್ನವಾಗಿ ವರ್ತಿಸುತ್ತಿದೆ. ಹಾಗಾಗಿ, ಮೈದಾನದಲ್ಲಿ ಏನಾಗುತ್ತದೆ ಮತ್ತು ಏನಾಗುವುದಿಲ್ಲ ಎಂದು ನಮಗೆ ತಿಳಿದಿಲ್ಲ ಎಂದು ರೋಹಿತ್ ಪ್ರತಿಕ್ರಿಯಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:52 pm, Mon, 3 March 25