ಬಾಝ್ ಬಾಲ್ ಬೌಲ್ಡ್… ಆ್ಯಶಸ್ ಗೆದ್ದ ಆಸ್ಟ್ರೇಲಿಯಾ
Australia vs England 5th Test: ಆ್ಯಶಸ್ ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡ ಭರ್ಜರಿ ಗೆಲುವು ದಾಖಲಿಸಿತ್ತು. ಆದರೆ ನಾಲ್ಕನೇ ಪಂದ್ಯದಲ್ಲಿ ಆತಿಥೇಯರಿಗೆ ಸೋಲುಣಿಸುವಲ್ಲಿ ಇಂಗ್ಲೆಂಡ್ ತಂಡ ಯಶಸ್ವಿಯಾಗಿದ್ದರು. ಇನ್ನು ಕೊನೆಯ ಪಂದ್ಯದಲ್ಲಿ ಆಂಗ್ಲ ಪಡೆಯನ್ನು ಆಸ್ಟ್ರೇಲಿಯಾ ತಂಡ ಬಗ್ಗು ಬಡಿದು 4-1 ಅಂತರದಿಂದ ಆ್ಯಶಸ್ ಸರಣಿಯನ್ನು ಗೆದ್ದುಕೊಂಡಿದೆ.

ಬಾಝ್ ಬಾಲ್ ತಂತ್ರದೊಂದಿಗೆ 15 ವರ್ಷಗಳ ಬಳಿಕ ಆಸ್ಟ್ರೇಲಿಯಾದಲ್ಲಿ ಆ್ಯಶಸ್ ಸರಣಿ ಗೆಲ್ಲುವ ಧ್ಯೇಯದೊಂದಿಗೆ ಬಂದಿದ್ದ ಇಂಗ್ಲೆಂಡ್ ತಂಡವು 4 ಸೋಲುಗಳೊಂದಿಗೆ ಮತ್ತೊಮ್ಮೆ ಮಂಡಿಯೂರಿದೆ. ಈ ಸರಣಿಯ ಮೊದಲೆರಡು ಪಂದ್ಯಗಳಲ್ಲಿ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದ್ದ ಆಸ್ಟ್ರೇಲಿಯಾ ತಂಡವು ಮೂರನೇ ಪಂದ್ಯದಲ್ಲಿ 82 ರನ್ಗಳ ಜಯ ಸಾಧಿಸಿತ್ತು. ಈ ಮೂಲಕ ಆ್ಯಶಸ್ ಸರಣಿಯನ್ನು ವಶಪಡಿಸಿಕೊಂಡಿದ್ದರು.
ಇದಾಗ್ಯೂ ನಾಲ್ಕನೇ ಮ್ಯಾಚ್ನಲ್ಲಿ ಕಂಬ್ಯಾಕ್ ಮಾಡಿದ್ದ ಇಂಗ್ಲೆಂಡ್ ತಂಡವು ಆತಿಥೇಯರಿಗೆ 4 ವಿಕೆಟ್ಗಳ ಸೋಲುಣಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಐದನೇ ಟೆಸ್ಟ್ ಪಂದ್ಯದಲ್ಲಿ ಮತ್ತೊಮ್ಮೆ ಆಂಗ್ಲ ಪಡೆಗೆ ಸೋಲಿನ ರುಚಿ ತೋರಿಸುವಲ್ಲಿ ಆಸ್ಟ್ರೇಲಿಯನ್ನರು ಯಶಸ್ವಿಯಾಗಿದ್ದಾರೆ.
ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಪ್ರಥಮ ಇನಿಂಗ್ಸ್ನಲ್ಲಿ 384 ರನ್ ಕಲೆಹಾಕಿದ್ದರು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಆಸ್ಟ್ರೇಲಿಯಾ ತಂಡ ಪೇರಿಸಿದ್ದು ಬರೋಬ್ಬರಿ 567 ರನ್ಗಳು.
183 ರನ್ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಶುರು ಮಾಡಿದ ಇಂಗ್ಲೆಂಡ್ ಪರ ಜೇಕಬ್ ಬೆಥೆಲ್ 154 ರನ್ಗಳ ಭರ್ಜರಿ ಇನಿಂಗ್ಸ್ ಆಡಿದ್ದರು. ಇದಾಗ್ಯೂ ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ ಇಂಗ್ಲೆಂಡ್ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ 342 ರನ್ಗಳಿಸಿ ಆಲೌಟ್ ಆಗಿದೆ.
ಮೊದಲ ಇನಿಂಗ್ಸ್ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ನಲ್ಲಿ ಕೇವಲ 160 ರನ್ಗಳ ಸುಲಭ ಗುರಿ ಪಡೆದ ಆಸ್ಟ್ರೇಲಿಯಾ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಆಂಗ್ಲ ಬೌಲರ್ಗಳು ಯಶಸ್ವಿಯಾಗಿದ್ದರು. ಇದಾಗ್ಯೂ ಆಸ್ಟ್ರೇಲಿಯಾ ತಂಡ 31.2 ಓವರ್ಗಳಲ್ಲಿ 161 ರನ್ಗಳಿಸಿ 5 ವಿಕೆಟ್ಗಳ ವಿಜಯ ಸಾಧಿಸಿದೆ.
ಈ ಗೆಲುವಿನೊಂದಿಗೆ ಐದು ಪಂದ್ಯಗಳ ಆ್ಯಶಸ್ ಸರಣಿಯನ್ನು ಆಸ್ಟ್ರೇಲಿಯಾ ತಂಡ 4-1 ಅಂತರದಿಂದ ಗೆದ್ದುಕೊಂಡಿದೆ. ಅತ್ತ ಆಕ್ರಮಣಕಾರಿ ಆಟದೊಂದಿಗೆ (ಬಾಝ್ ಬಾಲ್ ಕ್ರಿಕೆಟ್) ಆ್ಯಶಸ್ ಸರಣಿ ಗೆಲ್ಲುವ ತಂತ್ರದೊಂದಿಗೆ ಆಗಮಿಸಿದ್ದ ಇಂಗ್ಲೆಂಡ್ ತಂಡವು ಈ ಬಾರಿ ಒಂದು ಗೆಲುವಿನೊಂದಿಗೆ ಮರಳಿರುವುದು ಸಮಾಧಾನಕರ.
ಏಕೆಂದರೆ ಇದು ಆಸ್ಟ್ರೇಲಿಯಾದಲ್ಲಿ 14 ವರ್ಷಗಳ ಬಳಿಕ ಇಂಗ್ಲೆಂಡ್ ತಂಡ ಸಾಧಿಸಿದ ಮೊದಲ ಗೆಲುವಾಗಿದೆ. ಅಂದರೆ 2011 ರಲ್ಲಿ ನಡೆದ ಆ್ಯಶಸ್ ಸರಣಿಯ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಇನ್ನಿಂಗ್ಸ್ ಮತ್ತು 83 ರನ್‌ಗಳಿಂದ ಸೋಲಿಸಿದ ಬಳಿಕಆಂಗ್ಲ ಪಡೆ ಒಮ್ಮೆಯೂ ಕಾಂಗರೂನಾಡಿನಲ್ಲಿ ಟೆಸ್ಟ್ ಪಂದ್ಯ ಗೆದ್ದಿರಲಿಲ್ಲ. ಆದರೆ ಈ ಬಾರಿ ಒಂದು ಗೆಲುವಿನೋಂದಿಗೆ ಸೋಲಿನ ಸರಪಳಿಯನ್ನು ಕಳಚಿಕೊಂಡಿದೆ.
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಸ್ಟೀವ್ ಸ್ಮಿತ್ (ನಾಯಕ), ಟ್ರಾವಿಸ್ ಹೆಡ್, ಜೇಕ್ ವೆದರಾಲ್ಡ್, ಮಾರ್ನಸ್ ಲ್ಯಾಬುಶೇನ್, ಉಸ್ಮಾನ್ ಖ್ವಾಜಾ, ಅಲೆಕ್ಸ್ ಕ್ಯಾರಿ, ಕ್ಯಾಮರೋನ್ ಗ್ರೀನ್, ಬ್ಯೂ ವೆಬ್‌ಸ್ಟರ್, ಮೈಕೆಲ್ ನೇಸರ್, ಮಿಚೆಲ್ ಸ್ಟಾರ್ಕ್, ಸ್ಕಾಟ್ ಬೋಲ್ಯಾಂಡ್.
ಇದನ್ನೂ ಓದಿ: IPL 2026: ಬೆಂಕಿ ಬೌಲಿಂಗ್ …. ವಿಂಡೀಸ್ ದಿಗ್ಗಜರ ನಡುವೆ ಕನ್ನಡಿಗನ ವಿಶ್ವ ದಾಖಲೆ
ಇಂಗ್ಲೆಂಡ್ ಪ್ಲೇಯಿಂಗ್ 11: ಝಾಕ್ ಕ್ರಾಲಿ, ಬೆನ್ ಡಕೆಟ್, ಜೇಕಬ್ ಬೆಥೆಲ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜೇಮಿ ಸ್ಮಿತ್ (ವಿಕೆಟ್ ಕೀಪರ್), ವಿಲ್ ಜ್ಯಾಕ್ಸ್, ಬ್ರೈಡನ್ ಕಾರ್ಸ್, ಮ್ಯಾಥ್ಯೂ ಪಾಟ್ಸ್, ಜೋಶ್ ಟಂಗ್.
