ಬಾಕ್ಸಿಂಗ್ ಡೇ ಟೆಸ್ಟ್ಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಮತ್ತೆ ನಾಯಕ ಬದಲಾವಣೆ
Australia vs England: ಟೆಸ್ಟ್ ಕ್ರಿಕೆಟ್ನ ಮದಗಜಗಳ ಕಾಳಗ ಎಂದೇ ಬಿಂಬಿತವಾಗಿರುವ ಆ್ಯಶಸ್ ಸರಣಿಯನ್ನು ಆಸ್ಟ್ರೇಲಿಯಾ ತಂಡ ವಶಪಡಿಸಿಕೊಂಡಿದೆ. ಇಂಗ್ಲೆಂಡ್ ವಿರುದ್ಧದ ಈ ಸರಣಿಯ ಮೊದಲ ಮೂರು ಮ್ಯಾಚ್ಗಳನ್ನು ಆಸೀಸ್ ಪಡೆ ಗೆದ್ದುಕೊಂಡಿದ್ದು, ಇದೀಗ ಡಿಸೆಂಬರ್ 26 ರಿಂದ ಶುರುವಾಗಲಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕಾಗಿ ಉಭಯ ತಂಡಗಳು ಸಜ್ಜಾಗುತ್ತಿದೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಆ್ಯಶಸ್ ಸರಣಿಯ ಕೊನೆಯ ಎರಡು ಪಂದ್ಯಗಳಿಗೆ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರುಗಳ ಈ ತಂಡದ ನಾಯಕನಾಗಿ ಸ್ಟೀವ್ ಸ್ಮಿತ್ ಆಯ್ಕೆಯಾಗಿದ್ದಾರೆ. ಇದಕ್ಕೂ ಮುನ್ನ ನಡೆದ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಸ್ಮಿತ್ ನಾಯಕನಾಗಿ ಕಾಣಿಸಿಕೊಂಡಿದ್ದರು. ಆದರೆ ಅಡಿಲೇಡ್ ಟೆಸ್ಟ್ ಪಂದ್ಯದ ಮೂಲಕ ಕಂಬ್ಯಾಕ್ ಮಾಡಿದ್ದ ಪ್ಯಾಟ್ ಕಮಿನ್ಸ್ ಮೂರನೇ ಪಂದ್ಯದಲ್ಲಿ ಆಸೀಸ್ ಪಡೆಯನ್ನು ಮುನ್ನಡೆಸಿದ್ದರು. ಇದೀಗ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಂದ ಕಮಿನ್ಸ್ ಹೊರಗುಳಿದಿದ್ದಾರೆ. ಹೀಗಾಗಿ ಮತ್ತೆ ಸ್ಟೀವ್ ಸ್ಮಿತ್ಗೆ ನಾಯಕತ್ವ ನೀಡಲಾಗಿದೆ.
ಪ್ಯಾಟ್ ಕಮಿನ್ಸ್ ಯಾಕಿಲ್ಲ?
ಬೆನ್ನು ನೋವಿನ ಸಮಸ್ಯೆಯಿಂದ ಸಂಪೂರ್ಣ ಚೇತರಿಸಿಕೊಂಡಿರುವ ಪ್ಯಾಟ್ ಕಮಿನ್ಸ್ ಮೂರನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿದ್ದರು. ಇದೀಗ 5 ಪಂದ್ಯಗಳ ಸರಣಿಯನ್ನು ಆಸ್ಟ್ರೇಲಿಯಾ 3-0 ಅಂತರದಿಂದ ವಶಪಡಿಸಿಕೊಂಡಿದೆ. ಹೀಗಾಗಿ ಕೊನೆಯ ಎರಡು ಪಂದ್ಯಗಳು ಆಸ್ಟ್ರೇಲಿಯಾ ಪಾಲಿಗೆ ಅನೌಪಚಾರಿಕ. ಇದೇ ಕಾರಣದಿಂದ ಫಿಟ್ನೆಸ್ನೊಂದಿಗೆ ಮರಳಿರುವ ಕಮಿನ್ಸ್ ಅವರಿಗೆ ಮತ್ತಷ್ಟು ವಿಶ್ರಾಂತಿ ನೀಡಲು ಕ್ರಿಕೆಟ್ ಆಸ್ಟ್ರೇಲಿಯಾ ನಿರ್ಧರಿಸಿದೆ. ಹೀಗಾಗಿ ಕೊನೆಯ ಎರಡು ಪಂದ್ಯಗಳಿಂದ ಅವರು ಹೊರಗುಳಿಯಲಿದ್ದಾರೆ.
ಪ್ಯಾಟ್ ಕಮಿನ್ಸ್ ಜೊತೆ ಹಿರಿಯ ಸ್ಪಿನ್ನರ್ ನಾಥನ್ ಲಿಯಾನ್ ಕೂಡ ಕೊನೆಯ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಈ ಇಬ್ಬರ ಬದಲಿಗೆ ಟಾಡ್ ಮರ್ಫಿ ಮತ್ತು ಜ್ಯೆ ರಿಚರ್ಡ್ಸನ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಅದರಂತೆ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಗೆ ಆಸ್ಟ್ರೇಲಿಯಾ ತಂಡ ಹೀಗಿದೆ.
ಆಸ್ಟ್ರೇಲಿಯಾ ಟೆಸ್ಟ್ ತಂಡ: ಸ್ಟೀವ್ ಸ್ಮಿತ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ , ಬ್ರೆಂಡನ್ ಡಾಗೆಟ್, ಕ್ಯಾಮರೋನ್ ಗ್ರೀನ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖ್ವಾಜಾ , ಮಾರ್ನಸ್ ಲ್ಯಾಬುಶೇನ್, ಟಾಡ್ ಮರ್ಫಿ, ಮೈಕೆಲ್ ನೇಸರ್, ಜ್ಯೆ ರಿಚರ್ಡ್ಸನ್, ಮಿಚೆಲ್ ಸ್ಟಾರ್ಕ್, ಜೇಕ್ ವೆದರಾಲ್ಡ್, ಬ್ಯೂ ವೆಬ್‌ಸ್ಟರ್.
ಇದನ್ನೂ ಓದಿ: ಟಿ20 ವಿಶ್ವಕಪ್ನಲ್ಲಿ ಕಣಕ್ಕಿಳಿಯುವ ಟಾಪ್-5 ಬ್ಯಾಟರ್ಗಳು ಯಾರೆಲ್ಲಾ?
ಆ್ಯಶಸ್ ಸರಣಿ ವೇಳಾಪಟ್ಟಿ:
- ಮೊದಲ ಟೆಸ್ಟ್: ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ತಂಡಕ್ಕೆ 8 ವಿಕೆಟ್ಗಳ ಜಯ
- ಎರಡನೇ ಟೆಸ್ಟ್: ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ತಂಡಕ್ಕೆ 8 ವಿಕೆಟ್ಗಳ ಜಯ
- ಮೂರನೇ ಟೆಸ್ಟ್: ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ತಂಡಕ್ಕೆ 82 ರನ್ಗಳ ಜಯ
- ನಾಲ್ಕನೇ ಟೆಸ್ಟ್: ಗುರುವಾರ ಡಿಸೆಂಬರ್ 26 – ಡಿಸೆಂಬರ್ 30 – ಮೆಲ್ಬೋರ್ನ್ ಕ್ರಿಕೆಟ್ ಮೈದಾನ
- ಐದನೇ ಟೆಸ್ಟ್: ಜನವರಿ 4 ಭಾನುವಾರ – ಜನವರಿ 8 – ಸಿಡ್ನಿ ಕ್ರಿಕೆಟ್ ಮೈದಾನ.
