ಅಕ್ಟೋಬರ್ 3 ರಿಂದ ಶುರುವಾಗಲಿರುವ ಮಹಿಳಾ ಟಿ20 ವಿಶ್ವಕಪ್ಗಾಗಿ ಆಸ್ಟ್ರೇಲಿಯಾ ಬಲಿಷ್ಠ ತಂಡವನ್ನು ಪ್ರಕಟಿಸಿದೆ. 15 ಸದಸ್ಯರ ಈ ತಂಡವನ್ನು ವಿಕೆಟ್ ಕೀಪರ್ ಬ್ಯಾಟರ್ ಅಲಿಸ್ಸಾ ಹೀಲಿ ಮುನ್ನಡೆಸಲಿದ್ದಾರೆ. ಹಾಗೆಯೇ ಉಪನಾಯಕಿಯಾಗಿ ತಹ್ಲಿಯಾ ಮೆಕ್‌ಗ್ರಾತ್ ಕಾಣಿಸಿಕೊಳ್ಳಲಿದ್ದಾರೆ. ಅಚ್ಚರಿ ಎಂದರೆ ಈ ತಂಡದಲ್ಲಿ ಅನುಭವಿ ಎಡಗೈ ಸ್ಪಿನ್ನರ್ ಜೆಸ್ ಜೊನಾಸೆನ್ಗೆ ಸ್ಥಾನ ನೀಡಲಾಗಿಲ್ಲ.
ಆಸೀಸ್ ಪರ ಅತ್ಯುತ್ತಮ ಪ್ರದರ್ಶನ ನೀಡಿರುವ ಜೊನಾಸೆನ್ ಕಳೆದ ಕೆಲ ತಿಂಗಳಿಂದ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿಲ್ಲ. ಹೀಗಾಗಿ ಅವರನ್ನು ಟಿ20 ವಿಶ್ವಕಪ್ ತಂಡದಿಂದ ಹೊರಗಿಡಲಾಗಿದೆ. ಅದರಂತೆ ಆಸ್ಟ್ರೇಲಿಯಾ ಟಿ20 ವಿಶ್ವಕಪ್ ತಂಡ ಈ ಕೆಳಗಿನಂತಿದೆ…
ಆಸ್ಟ್ರೇಲಿಯಾ ಟಿ20 ತಂಡ: ಅಲಿಸ್ಸಾ ಹೀಲಿ (ನಾಯಕಿ), ಡಾರ್ಸಿ ಬ್ರೌನ್, ಆಶ್ ಗಾರ್ಡ್ನರ್, ಕಿಮ್ ಗಾರ್ತ್, ಗ್ರೇಸ್ ಹ್ಯಾರಿಸ್, ಅಲಾನಾ ಕಿಂಗ್, ಫೋಬೆ ಲಿಚ್‌ಫೀಲ್ಡ್, ತಹ್ಲಿಯಾ ಮೆಕ್‌ಗ್ರಾತ್ (ಉಪನಾಯಕಿ), ಸೋಫಿ ಮೊಲಿನೆಕ್ಸ್, ಬೆತ್ ಮೂನಿ, ಎಲ್ಲಿಸ್ ಪೆರ್ರಿ, ಮೇಗನ್ ಶಟ್, ಅನ್ನಾಬೆಲ್ ಸದರ್‌ಲ್ಯಾಂಡ್, ಜಾರ್ಜಿಯಾ ವೇರ್‌ಹ್ಯಾಮ್, ಟೇಯ್ಲಾ ವ್ಲೇಮಿಂಕ್.
ಬಾಂಗ್ಲಾದೇಶದಲ್ಲಿ ನಡೆಯಬೇಕಿದ್ದ ಮಹಿಳಾ ಟಿ20 ವಿಶ್ವಕಪ್ ಅನ್ನು ಯುಎಇ ಗೆ ಸ್ಥಳಾಂತರಿಸಲಾಗಿದೆ. ಅದರಂತೆ ಈ ಬಾರಿಯ ಮಹಿಳಾ ಟಿ20 ವಿಶ್ವಕಪ್ ಪಂದ್ಯಗಳಿಗೆ ದುಬೈ, ಶಾರ್ಜಾ ಸ್ಟೇಡಿಯಂಗಳು ಆತಿಥ್ಯವಹಿಸಲಿದೆ. 10 ತಂಡಗಳ ನಡುವಣ ಈ ಟೂರ್ನಿಯು ಅಕ್ಟೋಬರ್ 3 ರಿಂದ ಶುರುವಾಗಲಿದ್ದು, ಫೈನಲ್ ಪಂದ್ಯವು ಅಕ್ಟೋಬರ್ 20 ರಂದು ನಡೆಯಲಿದೆ.
ಆಸ್ಟ್ರೇಲಿಯಾ ತಂಡವು ಅಕ್ಟೋಬರ್ 4 ರಂದು ಶ್ರೀಲಂಕಾ ವಿರುದ್ಧ ಕಣಕ್ಕಿಳಿಯುವ ಮೂಲಕ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಅಕ್ಟೋಬರ್ 8 ರಂದು ನಡೆಯಲಿರುವ 2ನೇ ಪಂದ್ಯದಲ್ಲಿ ಪಾಕಿಸ್ತಾನ್ ತಂಡವನ್ನು ಎದುರಿಸಲಿದೆ. ಹಾಗೆಯೇ ಅಕ್ಟೋಬರ್ 11 ರಂದು ನ್ಯೂಝಿಲೆಂಡ್ ತಂಡದ ವಿರುದ್ಧ ಸೆಣಸಲಿದ್ದು, ಅಕ್ಟೋಬರ್ 13 ರಂದು ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿದೆ.
ಇದನ್ನೂ ಓದಿ: IPL 2025: ಧೋನಿ RCB ತಂಡದ ನಾಯಕರಾಗಿದ್ದರೆ 3 ಟ್ರೋಫಿ ಗೆದ್ದಿರುತ್ತಿತ್ತು..!
ಇನ್ನು ಅಕ್ಟೋಬರ್ 17 ರಂದು ಮೊದಲ ಸೆಮಿಫೈನಲ್ ನಡೆಯಲಿದ್ದು, 18 ರಂದು ಎರಡನೇ ಸೆಮಿಫೈನಲ್ ಜರುಗಲಿದೆ. ಹಾಗೆಯೇ ಅಕ್ಟೋಬರ್ 20 ರಂದು ಫೈನಲ್ ಪಂದ್ಯಕ್ಕೆ ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂ ಆತಿಥ್ಯವಹಿಸಲಿದೆ.