Axar Patel: ಕೊನೆಯ ಓವರ್ ವರೆಗೂ ರೋಚಕ ಕಾದಾಟ: ಸಿಕ್ಸ್ ಸಿಡಿಸಿ ಗೆಲುವು ತಂದುಕೊಟ್ಟ ಅಕ್ಷರ್ ಪಟೇಲ್

| Updated By: Vinay Bhat

Updated on: Jul 25, 2022 | 7:56 AM

IND vs WI, 2nd ODI: ಕೊನೆಯ ಓವರ್ ವರೆಗೂ ತುದಿಗಾಲಿನಲ್ಲಿ ನಿಲ್ಲಿಸಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 2 ವಿಕೆಟ್​ಗಳಿಂದ ಗೆದ್ದು 2-0 ಅಂತರದಿಂದ ಸರಣಿ ವಶಪಡಿಸಿಕೊಂಡಿದೆ. ಆಲ್ರೌಂಡರ್ ಅಕ್ಷರ್ ಪಟೇಲ್ (Axar Patel) ಸ್ಫೋಟಕ ಆಟವಾಡಿದರು.

Axar Patel: ಕೊನೆಯ ಓವರ್ ವರೆಗೂ ರೋಚಕ ಕಾದಾಟ: ಸಿಕ್ಸ್ ಸಿಡಿಸಿ ಗೆಲುವು ತಂದುಕೊಟ್ಟ ಅಕ್ಷರ್ ಪಟೇಲ್
Axar Patel IND vs WI 2nd ODI
Follow us on

ಟ್ರಿನಿಡಾಡ್​ನ ಕ್ವೀನ್ಸ್ ಪಾರ್ಕ್​ ಓವಲ್​ನಲ್ಲಿ ನಡೆದ ವೆಸ್ಟ್​ ಇಂಡೀಸ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲೂ ಭಾರತ (India vs West Indies) ರೋಚಕ ಗೆಲುವು ಕಂಡಿದೆ. ಕೊನೆಯ ಓವರ್ ವರೆಗೂ ತುದಿಗಾಲಿನಲ್ಲಿ ನಿಲ್ಲಿಸಿದ್ದ ಕಾದಾಟದಲ್ಲಿ ಟೀಮ್ ಇಂಡಿಯಾ 2 ವಿಕೆಟ್​ಗಳಿಂದ ಗೆದ್ದು 2-0 ಅಂತರದಿಂದ ಸರಣಿ ವಶಪಡಿಸಿಕೊಂಡಿದೆ. ಆಲ್ರೌಂಡರ್ ಅಕ್ಷರ್ ಪಟೇಲ್ (Axar Patel) ಅವರ ಸ್ಫೋಟಕ ಆಟ ಒಂದು ಕಡೆಯಾದರೆ, ಶ್ರೇಯಸ್ ಅಯ್ಯರ್ (Shreyas Iyer) ಹಾಗೂ ಸಂಜು ಸ್ಯಾಮ್ಸನ್ ಅರ್ಧಶತಕ ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿತು. ಟಾರ್ಗೆಟ್ 300ರ ಗಡಿ ದಾಟಿದ್ದರೂ ಭಾರತ ಇನ್ನೆರಡು ಎಸೆತ ಬಾಕಿ ಇರುವಂತೆ ಗೆದ್ದು ಬೀಗಿದೆ. ಇತ್ತ ಕೆರಿಬಿಯನ್ನರಿಗೆ ಭಾರೀ ಹಿನ್ನಡೆಯಾಗಿದೆ. ಆಡಿದ ಎರಡೂ ಪಂದ್ಯಗಳಲ್ಲಿ ಕೊನೆಯ ಹಂತದ ವರೆಗೂ ಬಂದು ಗೆಲುವಿನ ಅಂಚಿನಲ್ಲಿ ಎಡವಿದೆ. ಈ ಮೂಲಕ ವೆಸ್ಟ್​ ಇಂಡೀಸ್ ತವರಿನಲ್ಲೇ ದೊಡ್ಡ ಮುಖಭಂಗ ಅನುಭವಿಸಿದೆ.

ವೆಸ್ಟ್ ಇಂಡೀಸ್ ನೀಡಿದ್ದ 312 ರನ್​ಗಳ ಕಠಿಣ ಟಾರ್ಗೆಟ್ ಬೆನ್ನಟ್ಟಿದ ಭಾರತಕ್ಕೆ ಕಳೆದ ಪಂದ್ಯದಂತೆ ಉತ್ತಮ ಆರಂಭ ಸಿಗಲಿಲ್ಲ. ಫಾರ್ಮ್​ನಲ್ಲಿದ್ದ ನಾಯಕ ಶಿಖರ್ ಧವನ್ 31 ಎಸೆತಗಳಲ್ಲಿ 13 ರನ್ ಗಳಿಸಿ ಔಟಾದರು. ತಂಡದ ಮೊತ್ತ 66 ಆಗುವ ಹೊತ್ತಿಗೆ ಶುಭ್ಮನ್ ಗಿಲ್ 43 ರನ್ ಗಳಿಸಿ ನಿರ್ಗಮಿಸಿದರು. ಸೂರ್ಯಕುಮಾರ್ ಯಾದವ್ ಕೂಡ ಮತ್ತೊಮ್ಮೆ ವೈಫಲ್ಯ ಅನುಭವಿಸಿ 9 ರನ್​ಗೆ ಬ್ಯಾಟ್ ಕೆಳಗಿಟ್ಟರು. ಈ ಸಂದರ್ಭ ಜೊತೆಯಾದ ಶ್ರೇಯಸ್ ಅಯ್ಯರ್ ಹಾಗೂ ಸಂಜು ಸ್ಯಾಮ್ಸನ್ ಎಚ್ಚರಿಕೆಯ ಆಟವಾಡಿ ತಂಡಕ್ಕೆ ಆಸರೆಯಾದರು.

ವಿಕೆಟ್ ಕಳೆದುಕೊಳ್ಳದಂತೆ ರನ್ ಕಲೆಹಾಕುತ್ತಾ ಸಾಗಿದ ಈ ಜೋಡಿ 99 ರನ್​ಗಳ ಕಾಣಿಕೆ ನೀಡಿದರು. ಇಬ್ಬರೂ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಆದರೆ, ಅರ್ಧಶತಕದ ಬಳಿಕ ಇವರು ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. 71 ಎಸೆತಗಳಲ್ಲಿ 4 ಫೋರ್, 1 ಸಿಕ್ಸರ್​ನೊಂದಿಗೆ ಅಯ್ಯರ್ 63 ರನ್​ಗೆ ಔಟಾದರೆ, ಸಂಜು 51 ಎಸೆತಗಳಲ್ಲಿ ತಲಾ 3 ಫೋರ್ಸಿಕ್ಸರ್ ಬಾರಿಸಿ 54 ರನ್​ ಗಳಿಸಿದರು. ಬಳಿಕ ದೀಪಕ್ ಹೂಡ 36 ಎಸೆತಗಳಲ್ಲಿ 33 ರನ್ ಬಾರಿಸಿ ತಂಡದ ಗೆಲುವಿಗೆ ಕೊಂಚ ಕಾಣಿಕೆ ನೀಡಿದರು.

ಇದನ್ನೂ ಓದಿ
India vs West Indies, 2nd ODI: ಹೋಪ್ ಭರ್ಜರಿ ಶತಕ; ಭಾರತಕ್ಕೆ 312 ರನ್ ಟಾರ್ಗೆಟ್
CWG 2022: ಸ್ಕ್ವಾಷ್‌ ಸ್ಪರ್ಧೆಯಲ್ಲಿ ಭಾರತದ ಪರ ಪದಕ್ಕಾಗಿ ಸೆಣಸಲಿರುವ 9 ಆಟಗಾರರಿವರು!
ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 50 ಸಾವಿರಕ್ಕೂ ಹೆಚ್ಚು ಎಸೆತಗಳನ್ನು ಎಸೆದ ಮೂವರು ದಿಗ್ಗಜ ಬೌಲರ್‌ಗಳು ಯಾರು ಗೊತ್ತಾ?
Virat Kohli: ಧೋನಿಯಲ್ಲ, ವಿರಾಟ್ ಕೊಹ್ಲಿ ಮೊದಲ ಟಿ20 ನಾಯಕ ಯಾರು ಗೊತ್ತಾ?

ಹೂಡ ಔಟಾದ ಸಂದರ್ಭ ಭಾರತದ ಗೆಲುವಿನ ಆಸೆ ಕಮರಿ ಹೋಯಿತು. ಆದರೆ, ಈ ಸಂದರ್ಭ ಮತ್ತೆ ಗೆಲುವಿನ ಭರವಸೆ ಮೂಡಿಸಿದ್ದು ಅಕ್ಷರ್ ಪಟೇಲ್. 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ಪಟೇಲ್ ವಿಂಡೀಸ್ ಲೆಕ್ಕಚಾರವನ್ನು ತಲೆಕೆಳಗಾಗಿಸಿದರು. ಕ್ರೀಸ್​ಗೆ ಬಂದಾಗಿನಿಂದ ಸ್ಫೋಟಕ ಆಟವಾಡಿದ ಇವರು ಕೇವಲ 35 ಎಸೆತಗಳಲ್ಲಿ 3 ಫೋರ್ ಹಾಗೂ ಬರೋಬ್ಬರಿ 5 ಸಿಕ್ಸರ್ ಸಿಡಿಸಿ ಅಜೇಯ 64 ರನ್ ಚಚ್ಚಿದರು.

ಕೊನೆಯ ಓವರ್​ನಲ್ಲಿ ಭಾರತಕ್ಕೆ ಗೆಲ್ಲಲು 8 ರನ್​ಗಳ ಅವಶ್ಯಕತೆಯಿತ್ತು. ಮೊದಲ ಎಸೆತ ಡಾಟ್ ಆದರೆ, ಎರಡನೇ ಬಾಲ್​ನಲ್ಲಿ ಹಾಗೂ ಮೂರನೇ ಬಾಲ್​ನಲ್ಲಿ ತಲಾ 1 ರನ್ ಮೂಡಿಬಂತು. ಕೊನೆಯ 3 ಬಾಲ್​ನಲ್ಲಿ ಗೆಲುವಿಗೆ 6 ರನ್ ಬೇಕಿದ್ದಾಗ 4ನೇ ಎಸೆತದಲ್ಲಿ ಅಕ್ಷರ್ ಚೆಂಡನ್ನು ಸಿಕ್ಸ್​ಗೆ ಅಟ್ಟುವ ಮೂಲಕ ರೋಚಕ ಜಯ ತಂದುಕೊಟ್ಟರು. ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಬಾಜಿಕೊಂಡರು. ಈ ಮೂಲಕ ಭಾರತ 49.4 ಓವರ್​ನಲ್ಲಿ 312 ರನ್ ಗಳಿಸಿ ಜಯ ಸಾಧಿಸಿತು.

ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡಕ್ಕೆ ಶಾಯ್ ಹೋ‍ಪ್ 115 ರನ್‌ಗಳ ಅಮೂಲ್ಯ ಕೊಡುಗೆ ನೀಡಿದರು. 74 ರನ್ ಗಳಿಸಿದ ನಾಯಕ ನಿಕೊಲಸ್ ಪೂರನ್ ತಂಡದ ಉತ್ತಮ ಮೊತ್ತಕ್ಕೆ ಅಡಿಪಾಯ ಹಾಕಿದರು. 50 ಓವರ್ ಅಂತ್ಯಕ್ಕೆ ವೆಸ್ಟ್ ಇಂಡೀಸ್ 6 ವಿಕೆಟ್ ಕಳೆದುಕೊಂಡು 311 ರನ್ ಗಳಿಸಿತ್ತು. ಭಾರತ ಪರ ಶಾರ್ದೂಲ್ ಠಾಕೂರ್ 3 ವಿಕೆಟ್ ಕಿತ್ತು ಮಿಂಚಿದರು.

Published On - 7:55 am, Mon, 25 July 22