Axar Patel: ಧೋನಿ ರೆಕಾರ್ಡ್ ಪುಡಿಗಟ್ಟಿದ ಅಕ್ಷರ್: ಪಂದ್ಯ ಮುಗಿದ ಬಳಿಕ ಏನು ಹೇಳಿದ್ರು ನೋಡಿ
IND vs WI 2nd ODI: ಅಕ್ಷರ್ ಪಟೇಲ್ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ 35 ಎಸೆತಗಳಲ್ಲಿ 3 ಫೋರ್ ಹಾಗೂ 5 ಸಿಕ್ಸ್ ಸಿಡಿಸಿ ಅಕ್ಷರ್ ಅಜೇಯ 64 ರನ್ ಚಚ್ಚಿದರು. ಈ ಮೂಲಕ ಎಂಎಸ್ ಧೋನಿ (MS Dhoni) ದಾಖಲೆಯನ್ನೂ ಮುರಿದಿದ್ದಾರೆ.
ತನ್ನ 100ನೇ ಪಂದ್ಯದಲ್ಲಿ ಶಾಯ್ ಹೋಪ್ (Shai Hope) ಶತಕ ಹಾಗೂ ನಿಕೋಲಸ್ ಪೂರನ್ (74 ರನ್) ಅವರ ನಾಯಕನ ಆಟದ ನಡುವೆಯೂ ವೆಸ್ಟ್ ಇಂಡೀಸ್ ಭಾರತ ವಿರುದ್ಧದ ಎರಡನೇ ಪಂದ್ಯದಲ್ಲಿ ಸೋಲು ಕಂಡು ಸರಣಿ ಕಳೆದುಕೊಂಡಿದೆ. ಇತ್ತ ಅಕ್ಷರ್ ಪಟೇಲ್ (Axar Patel) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ಕೊನೆಯ ಓವರ್ನಲ್ಲಿ ರೋಚಕ ಗೆಲುವು ಸಾಧಿಸಿತು. ಕೆರಿಬಿಯನ್ನರು 50 ಓವರ್ಗಳಲ್ಲಿ 311 ರನ್ ಬಾರಿಸಿದರೆ, ಭಾರತ 49.4 ಓವರ್ನಲ್ಲಿ 312 ರನ್ ಸಿಡಿಸಿ 2 ವಿಕೆಟ್ಗಳಿಂದ ಗೆದ್ದು ಬೀಗಿತು. 35 ಎಸೆತಗಳಲ್ಲಿ 3 ಫೋರ್ ಹಾಗೂ 5 ಸಿಕ್ಸ್ ಸಿಡಿಸಿ ಅಕ್ಷರ್ ಅಜೇಯ 64 ರನ್ ಚಚ್ಚಿದರು. ಈ ಮೂಲಕ ವಿಂಡೀಸ್ ವಿರುದ್ಧ ಅತ್ಯಂತ ವೇಗವಾಗಿ ಅರ್ಧಶತಕ ಸಿಡಿಸಿದ ಭಾರತದ ಎರಡನೇ ಬ್ಯಾಟರ್ ಎಂಬ ಸಾಧನೆ ಕೂಡ ಮಾಡಿದರು. ಜೊತೆಗೆ ಎಂಎಸ್ ಧೋನಿ (MS Dhoni) ದಾಖಲೆಯನ್ನೂ ಮುರಿದಿದ್ದಾರೆ.
ಹೌದು, ಕೊನೆಯ ಓವರ್ನಲ್ಲಿ ಸಿಕ್ಸ್ ಸಿಡಿಸಿ ವಿನ್ನಿಂಗ್ ಶಾಟ್ ಹೊಡೆಯುವ ಮೂಲಕ ಅಕ್ಷರ್ ಪಟೇಲ್ ಎಂಎಸ್ ಧೋನಿ ಅವರ 17 ವರ್ಷದ ಹಳೆದ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಏಳನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಚೇಸಿಂಗ್ ಸಮಯದಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟರ್ ಈಗ ಅಕ್ಷರ್ ಆಗಿದ್ದಾರೆ.
ಇದಕ್ಕೂ ಮುನ್ನ ಏಳನೇ ಕ್ರಮಾಂಕದಲ್ಲಿ ಧೋನಿ 3 ಸಿಕ್ಸರ್ ಬಾರಿಸಿದ ದಾಖಲೆ ಹೊಂದಿದ್ದರು. 2005 ರಲ್ಲಿ ಜಿಂಬಾಬ್ವೆ ವಿರುದ್ಧ ಎಂಎಸ್ಡಿ ಈ ಸಾಧನೆ ಮಾಡಿದ್ದರು. ಯೂಸುಫ್ ಪಠಾಣ್ ಕೂಡ ಎರಡು ಬಾರಿ ಏಳನೇ ಕ್ರಮಾಂಕದಲ್ಲಿ ಆಡಿ ಧೋನಿ ಜೊತೆ ಜಂಟಿ ಸ್ಥಾನ ಹಂಚಿಕೊಂಡಿದ್ದರು. ಇದೀಗ ಈ ಎಲ್ಲ ದಾಖಲೆಯನ್ನು ಅಕ್ಷರ್ ಅಳಿಸಿ ಹಾಕಿದ್ದಾರೆ.
Here’s the match-winning knock from @akshar2026. His magical batting earned him the Player of the Match title.
Watch all the action from the India tour of West Indies LIVE, only on #FanCode ? https://t.co/RCdQk1l7GU@BCCI @windiescricket #WIvIND #INDvsWIonFanCode #INDvsWI pic.twitter.com/y8xQeUxtK6
— FanCode (@FanCode) July 24, 2022
ಭಾರತ ಗೆದ್ದ ಬಳಿಕ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸುವ ವೇಳೆ ಮಾತನಾಡಿದ ಅಕ್ಷರ್ ಪಟೇಲ್, “ಇದು ನನಗೆ ತುಂಬಾ ವಿಶೇಷವಾದ ಇನ್ನಿಂಗ್ಸ್. ಸಂಕಷ್ಟದ ಸಮಯದಲ್ಲಿ ಬಂದು ನಮ್ಮ ತಂಡ ಸರಣಿ ವಶಪಡಿಸಿಕೊಳ್ಳಲು ಸಹಾಯ ಮಾಡಿದ್ದು ಸಂತಸ ತಂದಿದೆ. ನಾವು ಇದಕ್ಕೂ ಮುನ್ನ ಐಪಿಎಲ್ನಲ್ಲಿ ಕೂಡ ಇದೇರೀತಿ ಆಟ ಆಡಿದ್ದೆವು. ಅದನ್ನು ನೆನಪಿಸಿ ದುಡುಕದೆ ಶಾಂತವಾಗಿ ಬ್ಯಾಟಿಂಗ್ ಮಾಡಿದೆ. ಸುಮಾರು ಐದು ವರ್ಷಗಳ ಬಳಿಕ ನಾನು ಏಕದಿನ ಕ್ರಿಕೆಟ್ ಆಡುತ್ತಿರುವುದು. ನನ್ನ ತಂಡದ ಪರ ಇದೇ ಪ್ರದರ್ಶನವನ್ನು ಮುಂದುವರೆಸುವ ಇಚ್ಚೆ ನನಗಿದೆ,” ಎಂದು ಹೇಳಿದ್ದಾರೆ.
ಇನ್ನು ಟೀಮ್ ಇಂಡಿಯಾ ನಾಯಕ ಶಿಖರ್ ಧವನ್ ಮಾತನಾಡಿ, “ನಮ್ಮ ತಂಡದ ಇಂದು ಅದ್ಭುತ ಪ್ರದರ್ಶನ ನೀಡಿದೆ. ನಮ್ಮ ಆಟಗಾರರು ಎಲ್ಲೂ ಆತ್ಮವಿಶ್ವಾಸವನ್ನು ಕಳೆದುಕೊಳ್ಳಲಿಲ್ಲ. ಅಯ್ಯರ್, ಸಂಜು, ಅಕ್ಷರ್ ಎಲ್ಲರೂ ಅಮೋಘ ಪ್ರದರ್ಶನ ನೀಡಿದ್ದಾರೆ. ಆವೇಶ್ ಖಾನ್ ಕೂಡ ತಮ್ಮ ಚೊಚ್ಚಲ ಪಂದ್ಯದಲ್ಲೇ 11 ರನ್ ಗಳಿಸಿ ಮುಖ್ಯ ಕಾಣಿಕೆ ನೀಡಿದರು. ಐಪಿಎಲ್ಗೆ ಧನ್ಯವಾದ. ಅಲ್ಲಿ ಈ ರೀತಿಯ ಪರಿಸ್ಥಿತಿ ಬಂದಾಗ ಹೇಗೆ ಆಡಬೇಕು ಎಂದು ಕಲಿತಿದ್ದಾರೆ. ವಿಂಡೀಸ್ ಪರ ಹೋಪ್ ಮತ್ತು ಪೂರನ್ ಚೆನ್ನಾಗಿ ಬ್ಯಾಟಿಂಗ್ ಮಾಡಿದರು. ನಮ್ಮ ಬ್ಯಾಟಿಂಗ್ ಆರಂಭ ಕೊಂಚ ನಿಧಾನವಾಗಿತ್ತು. ಅಯ್ಯರ್–ಸ್ಯಾಮ್ಸನ್ ಜೊತೆಯಾಟ ಮುಖ್ಯ ಪಾತ್ರ ವಹಿಸಿತು. 100ನೇ ಪಂದ್ಯದಲ್ಲಿ ಶತಕ ಸಿಡಿಸಿದ ಶಾಯ್ ಹೋಪ್ ಅವರಿಗೆ ಅಭಿನಂದನೆ,” ಎಂದು ಹೇಳಿ ಮಾತು ಮುಗಿಸಿದರು.