Virat Kohli: ಧೋನಿಯಲ್ಲ, ವಿರಾಟ್ ಕೊಹ್ಲಿ ಮೊದಲ ಟಿ20 ನಾಯಕ ಯಾರು ಗೊತ್ತಾ?
Virat Kohli: ಟೀಮ್ ಇಂಡಿಯಾದಲ್ಲಿ ಹೊರಗುಳಿದಿರುವ ವಿರಾಟ್ ಕೊಹ್ಲಿ ಇದೀಗ ಮತ್ತೆ ಜಿಂಬಾಬ್ವೆ ವಿರುದ್ದದ ಸರಣಿಯೊಂದಿಗೆ ಕಂಬ್ಯಾಕ್ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಕ್ರಿಕೆಟ್ ಅಂಗಳದ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿರುವ ಟೀಮ್ ಇಂಡಿಯಾ (Team India) ಅನೇಕ ದಾಖಲೆಗಳನ್ನು ನಿರ್ಮಿಸಿದೆ. ಅದರಲ್ಲೂ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಹೆಸರಿನಲ್ಲಿ ಹಲವು ದಾಖಲೆಗಳಿವೆ. ಅಂಡರ್ 19 ವಿಶ್ವಕಪ್ನಲ್ಲಿ ನಾಯಕನಾಗಿ ಮಿಂಚುವ ಮೂಲಕ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದ ಕೊಹ್ಲಿ ಮೊದಲ ಪಂದ್ಯವಾಡಿದ್ದು ಶ್ರೀಲಂಕಾ ವಿರುದ್ದ ಎಂಬುದು ವಿಶೇಷ. ಅದು ಕೂಡ ಆರಂಭಿಕನಾಗಿ ಎಂಬುದು ಅನೇಕರಿಗೆ ಗೊತ್ತಿಲ್ಲ. ವೀರೇಂದ್ರ ಸೆಹ್ವಾಗ್ ಅನುಪಸ್ಥಿತಿಯಲ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದ ಕೊಹ್ಲಿ ಗೌತಮ್ ಗಂಭೀರ್ ಜೊತೆ ಇನಿಂಗ್ಸ್ ಆರಂಭಿಸಿದ್ದರು. ಅಲ್ಲದೆ ಮೊದಲ ಏಕದಿನ ಪಂದ್ಯದಲ್ಲಿ 22 ಎಸೆತಗಳಲ್ಲಿ 1 ಫೋರ್ನೊಂದಿಗೆ 17 ರನ್ಗಳಿಸಿ ಕುಲಸೇಖರಗೆ ವಿಕೆಟ್ ಒಪ್ಪಿಸಿದ್ದರು. ಅಂದರೆ ವಿರಾಟ್ ಕೊಹ್ಲಿ ತನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ಆರಂಭಿಸಿದ್ದು ಲೆಜೆಂಡ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದಲ್ಲಿ. ಆದರೆ ಟಿ20 ಕೆರಿಯರ್ ಆರಂಭಿಸಿದ್ದು ಮಾತ್ರ ಮತ್ತೋರ್ವ ನಾಯಕನ ಅಡಿಯಲ್ಲಿ ಎಂಬುದು ವಿಶೇಷ.
2010 ರಲ್ಲಿ ಟೀಮ್ ಇಂಡಿಯಾ ಜಿಂಬಾಬ್ವೆ ಪ್ರವಾಸ ಕೈಗೊಂಡಿತ್ತು. ಈ ವೇಳೆ ತಂಡದ ಪ್ರಮುಖ ಆಟಗಾರರು ಹೊರಗುಳಿದಿದ್ದರು. ಹೀಗಾಗಿ ಯುವ ಆಟಗಾರನಾಗಿದ್ದ ಕೊಹ್ಲಿಗೆ ತಂಡದಲ್ಲಿ ಚಾನ್ಸ್ ಲಭಿಸಿತು. ಅದರಂತೆ ಹರಾರೆಯಲ್ಲಿ ನಡೆದ ಜಿಂಬಾಬ್ವೆ ವಿರುದ್ದದ ಟಿ20 ಪಂದ್ಯದ ಮೂಲಕ ವಿರಾಟ್ ಕೊಹ್ಲಿ ಚುಟುಕು ಕ್ರಿಕೆಟ್ ಕೆರಿಯರ್ ಆರಂಭಿಸಿದ್ದರು. ಇಲ್ಲಿ ವಿಶೇಷ ಎಂದರೆ ವಿರಾಟ್ ಕೊಹ್ಲಿ ಅಂದು ಕಣಕ್ಕಿಳಿದಿದ್ದು 5ನೇ ಕ್ರಮಾಂಕದಲ್ಲಿ. ಅದೇ ವೇಳೆ ರೋಹಿತ್ ಶರ್ಮಾ 4ನೇ ಕ್ರಮಾಂಕದಲ್ಲಿ ಆಡುತ್ತಿದ್ದರು.
ಹೀಗೆ ಐದನೇ ಕ್ರಮಾಂಕದ ಮೂಲಕ ಚೊಚ್ಚಲ ಟಿ20 ಪಂದ್ಯವಾಡಿದ ವಿರಾಟ್ ಕೊಹ್ಲಿ 21 ಎಸೆತಗಳಲ್ಲಿ 3 ಫೋರ್ ಹಾಗೂ 1 ಸಿಕ್ಸ್ನೊಂದಿಗೆ ಅಜೇಯ 26 ರನ್ ಬಾರಿಸಿದ್ದರು. ಏಕದಿನ ಕ್ರಿಕೆಟ್ನಲ್ಲಿ ಮಹೇಂದ್ರ ಸಿಂಗ್ ಧೋನಿಯ ನಾಯಕತ್ವದಲ್ಲಿ ಪದಾರ್ಪಣೆ ಮಾಡಿದ್ದರೂ, ಟಿ20 ಕ್ರಿಕೆಟ್ನಲ್ಲಿ ಕೊಹ್ಲಿಯ ಮೊದಲ ಕ್ಯಾಪ್ಟನ್ ಸುರೇಶ್ ರೈನಾ.
ಹೌದು, ಜಿಂಬಾಬ್ವೆ ವಿರುದ್ದದ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಸುರೇಶ್ ರೈನಾ ಮುನ್ನಡೆಸಿದ್ದರು. ಇದೇ ವೇಳೆ ಕೊಹ್ಲಿಗೆ ಪದಾರ್ಪಣೆ ಮಾಡುವ ಅವಕಾಶ ಲಭಿಸಿತ್ತು. ಆದರೆ ವಿರಾಟ್ ಕೊಹ್ಲಿಯ ಮೊದಲ ಟಿ20 ಕ್ಯಾಪ್ಟನ್ ಸುರೇಶ್ ರೈನಾ ಎಂಬುದು ಹೆಚ್ಚಿನವರಿಗೆ ಗೊತ್ತಿರದ ವಿಷಯ.
ಸದ್ಯ ಟೀಮ್ ಇಂಡಿಯಾದಿಂದ ಹೊರಗುಳಿದಿರುವ ವಿರಾಟ್ ಕೊಹ್ಲಿ ಇದೀಗ ಮತ್ತೆ ಜಿಂಬಾಬ್ವೆ ವಿರುದ್ದದ ಸರಣಿಯೊಂದಿಗೆ ಕಂಬ್ಯಾಕ್ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಏಕೆಂದರೆ ವೆಸ್ಟ್ ಇಂಡೀಸ್ ವಿರುದ್ದದ ಸರಣಿಯಿಂದ ಹೊರುಗಳಿದಿರುವ ಕೊಹ್ಲಿ ಕಳಪೆ ಫಾರ್ಮ್ ನಿಂದ ಬಳಲುತ್ತಿದ್ದಾರೆ. ಹೀಗಾಗಿ ಜಿಂಬಾಬ್ವೆ ವಿರುದ್ದದ ಏಕದಿನ ಸರಣಿಯ ಮೂಲಕ ಫಾರ್ಮ್ ಕಂಡುಕೊಳ್ಳಲು ಕೊಹ್ಲಿಗೆ ವೇದಿಕೆ ರೂಪಿಸಲು ಬಿಸಿಸಿಐ ಆಯ್ಕೆ ಸಮಿತಿ ಪ್ಲ್ಯಾನ್ ರೂಪಿಸಿದೆ.
ಏಕೆಂದರೆ ಜಿಂಬಾಬ್ವೆ ಸರಣಿಯ ಬಳಿಕ ಟೀಮ್ ಇಂಡಿಯಾ ಏಷ್ಯಾಕಪ್ ಆಡಲಿದ್ದು, ಈ ಟೂರ್ನಿಯು ಭಾರತದ ಪಾಲಿಗೆ ಮಹತ್ವದ್ದಾಗಿದೆ. ಹೀಗಾಗಿ ಈ ಟೂರ್ನಿಗೂ ಮುನ್ನವೇ ಫಾರ್ಮ್ಗೆ ಮರಳುವಂತೆ ಮಾಡಲು ಜಿಂಬಾಬ್ವೆ ವಿರುದ್ದದ ಸರಣಿಗೆ ವಿರಾಟ್ ಕೊಹ್ಲಿಯನ್ನು ಆಯ್ಕೆ ಮಾಡಲಿದೆ ಎಂದು ವರದಿಯಾಗಿದೆ.
ಒಟ್ಟಿನಲ್ಲಿ ಜಿಂಬಾಬ್ವೆ ವಿರುದ್ದದ ಪಂದ್ಯದ ಮೂಲಕವೇ ಟಿ20 ಕೆರಿಯರ್ ಆರಂಭಿಸಿದ್ದ ಕಿಂಗ್ ಕೊಹ್ಲಿ ಆ ಬಳಿಕ ರನ್ ಸರದಾರರಾಗಿ ಮೆರೆದಿದ್ದರು. ಇದೀಗ ಫಾರ್ಮ್ ಕಂಡುಕೊಳ್ಳುವ ಪ್ರಯತ್ನದಲ್ಲಿರುವ ಕೊಹ್ಲಿ ಜಿಂಬಾಬ್ವೆ ವಿರುದ್ದ ಅಬ್ಬರಿಸುವ ಮೂಲಕ ಮತ್ತೆ ಹಳೆಯ ಖದರ್ ತೋರಿಸಲಿದ್ದಾರಾ ಕಾದು ನೋಡಬೇಕಿದೆ.