ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಹಾಗೂ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಜಂ (Babar Azam) ನಡುವೆ ಹೋಲಿಕೆಗಳು ಇಂದು ನಿನ್ನೆ ಶುರುವಾಗಿದ್ದಲ್ಲ. ಮಾಸ್ಟರ್ ಆಫ್ ಕವರ್ ಡ್ರೈವ್ ಎಂದು ಗುರುತಿಸಿಕೊಂಡಿರುವ ಇಬ್ಬರು ಸ್ಥಿರ ಪ್ರದರ್ಶನದ ಮೂಲಕ ಇಡೀ ಕ್ರಿಕೆಟ್ ಪ್ರೇಮಿಗಳ ಮನಗೆದ್ದಿದ್ದರು. ಇದಾಗ್ಯೂ ಬಾಬರ್ ವಿರಾಟ್ ಕೊಹ್ಲಿಗೆ ಸರಿಸಾಟಿಯಲ್ಲ ಎಂಬುದಕ್ಕೆ ಕಾರಣವಾಗಿದ್ದು, ರ್ಯಾಂಕಿಂಗ್ ಪಟ್ಟಿಯಲ್ಲಿ ಕೊಹ್ಲಿ ಅಲಂಕರಿಸಿದ್ದ ಉನ್ನತ ಸ್ಥಾನ. ಆದರೆ ಇದೀಗ ಬಾಬರ್ ಆಜಂ ಕೂಡ ಮೂರು ಮಾದರಿಯ ರ್ಯಾಂಕಿಂಗ್ ಪಟ್ಟಿಯಲ್ಲೂ ಕಿಂಗ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. ಅಲ್ಲದೆ ಟಿ20 ಹಾಗೂ ಏಕದಿನ ಕ್ರಿಕೆಟ್ನಲ್ಲಿ ನಂಬರ್ 1 ಸ್ಥಾನ ಅಲಂಕರಿಸಿದ್ದಾರೆ. ಮತ್ತೊಂದೆಡೆ ಟೆಸ್ಟ್ನಲ್ಲಿ 4ನೇ ಸ್ಥಾನದಲ್ಲಿದ್ದಾರೆ. ಆದರೆ ವಿರಾಟ್ ಕೊಹ್ಲಿ ಟಿ20 ಟಾಪ್ 10 ರ್ಯಾಂಕಿಂಗ್ನಿಂದ ಹೊರಬಿದ್ದಿದ್ದಾರೆ. ಇನ್ನು ಏಕದಿನ ಕ್ರಿಕೆಟ್ನಲ್ಲಿ 2ನೇ ಸ್ಥಾನದಲ್ಲಿದ್ದರೆ, ಟೆಸ್ಟ್ನಲ್ಲಿ 10ನೇ ಸ್ಥಾನದಲ್ಲಿದ್ದಾರೆ.
ಅಂದರೆ ಕಳೆದೊಂದು ವರ್ಷದಿಂದ ವಿರಾಟ್ ಕೊಹ್ಲಿ ಬ್ಯಾಟಿಂಗ್ನಲ್ಲಿ ಹಳಿ ತಪ್ಪಿದ್ದರೆ, ಇತ್ತ ಬಾಬರ್ ಆಜಂ ಅತ್ಯುತ್ತಮ ಫಾರ್ಮ್ ಅನ್ನು ಮುಂದುವರೆಸಿದ್ದಾರೆ. ಇದಕ್ಕೆ ಸಾಕ್ಷಿಯೇ ಬಾಬರ್ ಇದೀಗ ಬ್ಯಾಕ್ ಟು ಬ್ಯಾಕ್ 3 ಶತಕ ಬಾರಿಸಿ ವಿರಾಟ್ ಕೊಹ್ಲಿಯ ದಾಖಲೆಯನ್ನು ಮುರಿದಿರುವುದು. ಇದಾಗ್ಯೂ ಬಾಬರ್ ಜಿಂಬಾಬ್ವೆ, ಬಾಂಗ್ಲಾದೇಶ, ಅಫ್ಘಾನಿಸ್ತಾನ್ನಂತಹ ತಂಡಗಳ ವಿರುದ್ದ ಅಬ್ಬರಿಸುವ ಬ್ಯಾಟ್ಸ್‌ಮನ್ ಎಂದು ವ್ಯಂಗ್ಯವಾಡಲಾಗುತ್ತದೆ. ಆದರೆ ಬಾಬರ್ ಆಜಂ ಈ ಬಾರಿ ಬಾರಿಸಿರುವ ಹ್ಯಾಟ್ರಿಕ್ ಶತಕ ಮೂಡಿಬಂದಿದ್ದು ಆಸ್ಟ್ರೇಲಿಯಾ (2) ಹಾಗೂ ವೆಸ್ಟ್ ಇಂಡೀಸ್ (1) ವಿರುದ್ದ ಎಂಬುದು ವಿಶೇಷ. ಅಲ್ಲದೆ ಕೊನೆಯ ಐದು ಏಕದಿನ ಇನಿಂಗ್ಸ್ನಲ್ಲಿ ಇಂಗ್ಲೆಂಡ್ ವಿರುದ್ದ 158 ರನ್ ಬಾರಿಸಿದ್ದರೆ, ಆಸ್ಟ್ರೇಲಿಯಾ ವಿರುದ್ದ 114, 105 ಮತ್ತು 57 ರನ್ ಸಿಡಿಸಿದ್ದಾರೆ. ಹಾಗೆಯೇ ವೆಸ್ಟ್ ಇಂಡೀಸ್ ವಿರುದ್ದ 103 ರನ್ ಬಾರಿಸಿ ಮಿಂಚಿದ್ದಾರೆ.
ಇತ್ತ ವಿರಾಟ್ ಕೊಹ್ಲಿ ಕಳೆದ 2 ವರ್ಷಗಳಿಂದ ಒಂದೇ ಒಂದು ಶತಕ ಬಾರಿಸಿಲ್ಲ ಎಂಬುದೇ ಅಚ್ಚರಿ. ಅಂದರೆ ಇಲ್ಲಿ ವಿರಾಟ್ ಕೊಹ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವುತ್ತಿದ್ದಾರೆ. ಆದರೆ ಅತ್ತ ಭರ್ಜರಿ ಬ್ಯಾಟಿಂಗ್ ಮೂಲಕ ಬಾಬರ್ ಆಜಂ ತಾನೇ ಬೆಸ್ಟ್ ಎಂಬುದನ್ನು ನಿರೂಪಿಸಲು ಹೊರಟಿದ್ದಾರೆ. ಇದಕ್ಕೆ ಸಾಕ್ಷಿಯೇ ಕಳೆದ 3 ವರ್ಷಗಳ ಅಂಕಿ ಅಂಶಗಳು.
ನವೆಂಬರ್ 2019 ರಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಮೂರು ಸ್ವರೂಪಗಳ ಅಂಕಿ ಅಂಶಗಳನ್ನು ನೋಡುವುದಾದರೆ, ಬಾಬರ್ ಆಜಮ್ ಒಟ್ಟು 11 ಶತಕಗಳನ್ನು ಬಾರಿಸಿದ್ದಾರೆ. ಆದರೆ ವಿರಾಟ್ ಕೊಹ್ಲಿ ಒಮ್ಮೆಯೂ ಮೂರಂಕಿ ರನ್ಗಳಿಸಲು ಸಾಧ್ಯವಾಗಿಲ್ಲ. ಇನ್ನು ಈ ಅವಧಿಯಲ್ಲಿ ಸರಾಸರಿ ಸ್ಟ್ರೈಕ್ ರೇಟ್‌ನಲ್ಲಿ ಬಾಬರ್ ತುಂಬಾ ಮುಂದಿದ್ದಾರೆ. ಕೊಹ್ಲಿ 72 ಸ್ಟ್ರೈಕ್ ರೇಟ್ ಹೊಂದಿದ್ದರೆ, ಬಾಬರ್ 81 ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ.
ಇನ್ನು ಬಾಬರ್ ಕಳೆದ 3 ವರ್ಷಗಳಲ್ಲಿ ಟೆಸ್ಟ್, ಏಕದಿನ ಮತ್ತು ಟಿ20 ಕ್ರಿಕೆಟ್ನಲ್ಲಿನ 69 ಪಂದ್ಯಗಳಲ್ಲಿ 57 ರ ಸರಾಸರಿಯಲ್ಲಿ 3797 ರನ್ ಗಳಿಸಿದ್ದಾರೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಈ ಅವಧಿಯಲ್ಲಿ ವಿಶ್ವದ ಯಾವುದೇ ಬ್ಯಾಟ್ಸ್‌ಮನ್ ಇಷ್ಟೊಂದು ರನ್ ಗಳಿಸಲು ಸಾಧ್ಯವಾಗಿಲ್ಲ ಎಂಬುದು. ಈ ವೇಳೆ 11 ಶತಕ ಮತ್ತು 27 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಅಂದರೆ 38 ಬಾರಿ 50ಕ್ಕೂ ಹೆಚ್ಚು ರನ್ಗಳ ಇನ್ನಿಂಗ್ಸ್ ಆಡಿದ್ದಾರೆ. ಈ ಅವಧಿಯಲ್ಲಿ ವಿರಾಟ್ ಕೊಹ್ಲಿಯ ಪ್ರದರ್ಶನವನ್ನು ಗಮನಿಸಿದರೆ, 63 ಪಂದ್ಯಗಳಲ್ಲಿ 38 ರ ಸರಾಸರಿಯಲ್ಲಿ 2478 ರನ್ ಗಳಿಸಿದ್ದಾರೆ. ಈ ವೇಳೆ ಕೊಹ್ಲಿ 24 ಅರ್ಧಶತಕಗಳನ್ನು ಮಾತ್ರ ಬಾರಿಸಿದ್ದಾರೆ.
ಅಂದರೆ ವಿರಾಟ್ ಕೊಹ್ಲಿ ಕಳೆದ ಮೂರು ವರ್ಷಗಳಲ್ಲಿ ಒಂದು ಶತಕವನ್ನು ಎದುರು ನೋಡುತ್ತಿದ್ದರೆ, ಬಾಬರ್ ಆಜಂ 11 ಶತಕ ಹಾಗೂ 27 ಅರ್ಧಶತಕಗಳನ್ನು ಬಾರಿಸಿ ಮಿಂಚಿದ್ದಾರೆ. ಅಷ್ಟೇ ಅಲ್ಲದೆ ಟಿ20 ಹಾಗೂ ಏಕದಿನ ಕ್ರಿಕೆಟ್ ರ್ಯಾಂಕಿಂಗ್ನಲ್ಲಿ ನಂಬರ್ 1 ಸ್ಥಾನ ಅಲಂಕರಿಸಿದ್ದಾರೆ. ಹೀಗಾಗಿಯೇ ಟಿ20, ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನ ಅಲಂಕರಿಸುವ ಮೊದಲ ಆಟಗಾರನಾಗಿ ಬಾಬರ್ ಆಜಂ ಹೊರಹೊಮ್ಮಲಿದ್ದಾರೆ ಎಂದು ಟೀಮ್ ಇಂಡಿಯಾ ಆಟಗಾರ ದಿನೇಶ್ ಕಾರ್ತಿಕ್ ಭವಿಷ್ಯ ನುಡಿದಿದ್ದರು. ಪ್ರಸ್ತುತ ಬಾಬರ್ ಆಜಂ ಫಾರ್ಮ್ ಗಮನಿಸಿದರೆ ದಿನೇಶ್ ಕಾರ್ತಿಕ್ ಅವರ ಭವಿಷ್ಯ ನಿಜವಾದರೂ ಅಚ್ಚರಿಪಡಬೇಕಿಲ್ಲ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:32 pm, Thu, 9 June 22