AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೊಂದು ಅವಮಾನಕ್ಕೂ ಮುನ್ನ ಬಾಬರ್ ಆಝಂ ಎಸ್ಕೇಪ್!

Babar Azam: ಆಸ್ಟ್ರೇಲಿಯಾದ ಟಿ20 ಟೂರ್ನಿ ಬಿಗ್ ಬ್ಯಾಷ್ ಲೀಗ್​ನಲ್ಲಿ ಕಣಕ್ಕಿಳಿದಿದ್ದ ಪಾಕಿಸ್ತಾನ್ ತಂಡದ ಸ್ಟಾರ್ ಬ್ಯಾಟರ್ ಬಾಬರ್ ಆಝಂ ಟೂರ್ನಿ ಮುಗಿಯುವ ಮುನ್ನವೇ ತವರಿಗೆ ಮರಳಿದ್ದಾರೆ. ಅದು ಕೂಡ ಸಿಡ್ನಿ ಸಿಕ್ಸರ್ಸ್ ತಂಡವು ನಾಕೌಟ್ ಹಂತಕ್ಕೇರಿದ ಬಳಿಕ. ಅಂದರೆ ಬಿಬಿಎಲ್​ನ ಕೊನೆಯ 2 ಪಂದ್ಯಗಳು ಮಾತ್ರ ಬಾಕಿ ಇರುವಾಗ ಬಾಬರ್ ಮುಂದಿನ ವಾರದ ಪಂದ್ಯಕ್ಕಾಗಿ ಪಾಕಿಸ್ತಾನಕ್ಕೆ ವಾಪಾಸ್ಸಾಗಿದ್ದಾರೆ.

ಮತ್ತೊಂದು ಅವಮಾನಕ್ಕೂ ಮುನ್ನ ಬಾಬರ್ ಆಝಂ ಎಸ್ಕೇಪ್!
Babar Azam
ಝಾಹಿರ್ ಯೂಸುಫ್
|

Updated on: Jan 22, 2026 | 12:30 PM

Share

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್​ನಿಂದ ಬಾಬರ್ ಆಝಂ ಅರ್ಧದಲ್ಲೇ ಹೊರ ನಡೆದಿದ್ದಾರೆ. ಅದು ಸಹ ಮತ್ತೊಂದು ಅವಮಾನದ ಮುನ್ಸೂಚನೆ ಸಿಗುತ್ತಿದ್ದಂತೆ ಎಂಬುದು ವಿಶೇಷ. ಈ ಬಾರಿಯ ಬಿಬಿಎಲ್​ನಲ್ಲಿ ಸಿಡ್ನಿ ಸಿಕ್ಸರ್ಸ್ ಪರ ಕಣಕ್ಕಿಳಿದಿದ್ದ ಬಾಬರ್ ಆಝಂ ಸುದ್ದಿಯಾಗಿದ್ದು ಮಾತ್ರ ತನ್ನ ಕಳಪೆಯಾಟದಿಂದ. ಅದರಲ್ಲೂ ರನ್​ಗಳಿಸಲು ತಡಕಾಡುತ್ತಿದ್ದ ಬಾಬರ್ ಅವರಿಗೆ ಸ್ಟೀವ್ ಸ್ಮಿತ್ ಸ್ಟ್ರೈಕ್ ನೀಡದಿರುವುದು ಭಾರೀ ಚರ್ಚೆಗೆ ಕಾರಣವಾಗಿತ್ತು.

ಅಷ್ಟೇ ಅಲ್ಲದೆ ಬಾಬರ್ ಆಝಂ ಅವರ ಕಳಪೆ ಫೀಲ್ಡಿಂಗ್ ಕೂಡ ಸಿಡ್ನಿ ಸಿಕ್ಸರ್ಸ್​ ಆಟಗಾರರಲ್ಲಿ ಅಸಮಾಧಾನವನ್ನು ಉಂಟು ಮಾಡಿತ್ತು. ಇದಾಗ್ಯೂ ಕಳೆದ 11 ಪಂದ್ಯಗಳಲ್ಲಿ ಬಾಬರ್ ಆಝಂ ಅವರನ್ನು ಕಣಕ್ಕಿಳಿಸಲಾಗಿತ್ತು.

ಆದರೆ 11 ಪಂದ್ಯಗಳಿಂದ ಬಾಬರ್ ಆಝಂ ಕಲೆಹಾಕಿದ್ದು ಕೇವಲ 202 ರನ್​ಗಳು. ಅಂದರೆ 22.44 ರ ಸರಾಸರಿಯಲ್ಲಿ ಮಾತ್ರ ರನ್​ಗಳಿಸಿದ್ದರು. ಅದು ಕೂಡ 103 ರ ಸ್ಟ್ರೈಕ್ ರೇಟ್​ನಲ್ಲಿ. ಹೀಗಾಗಿಯೇ ಬಾಬರ್ ಆಝಂ ಅವರನ್ನು ಚಾಲೆಂಜರ್ (ನಾಕೌಟ್) ಪಂದ್ಯದಿಂದ ಕೈ ಬಿಡಬೇಕು ಎಂಬ ಮಾತುಗಳು ಕೇಳಿ ಬಂದಿದ್ದವು.

ಚಾಲೆಂಜರ್ ಪಂದ್ಯವು ಸಿಡ್ನಿ ಸಿಕ್ಸರ್ಸ್ ತಂಡದ ಪಾಲಿಗೆ ನಿರ್ಣಾಯಕ. ಈ ಮ್ಯಾಚ್​ನಲ್ಲಿ ಗೆಲ್ಲುವ ತಂಡ ಫೈನಲ್​ಗೇರುತ್ತದೆ. ಅತ್ತ ಪರ್ತ್​ ಸ್ಕಾಚರ್ಸ್​ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ಬಾಬರ್ ಮೊದಲ ಓವರ್​ನಲ್ಲೇ ಸ್ಟಂಪ್ ಔಟ್ ಆಗಿದ್ದರು.

ಹೀಗಾಗಿಯೇ ಚಾಲೆಂಜರ್ ಪಂದ್ಯದಲ್ಲಿ ಬಾಬರ್ ಆಝಂ ಅವರ ಬದಲಿಗೆ ಬೇರೊಬ್ಬ ಆರಂಭಿಕನನ್ನು ಕಣಕ್ಕಿಳಿಸಬೇಕೆಂದು ಆಸ್ಟ್ರೇಲಿಯಾದ ಮಾಜಿ ಆಟಗಾರರು ಅಭಿಪ್ರಾಯಪಟ್ಟಿದ್ದರು. ಅತ್ತ ಸಿಡ್ನಿ ಸಿಕ್ಸರ್ಸ್ ಮ್ಯಾನೇಜ್ಮೆಂಟ್ ಕೂಡ ಬಾಬರ್ ಅವರನ್ನು ನಿರ್ಣಾಯಕ ಪಂದ್ಯದಿಂದ ಕೈ ಬಿಡಲು ಯೋಜನೆ ರೂಪಿಸಿದ್ದರು.

ಈ ಸೂಚನೆ ಸಿಕ್ಕ ಬೆನ್ನಲ್ಲೇ ಬಾಬರ್ ಆಝಂ ಬಿಗ್ ಬ್ಯಾಷ್ ಲೀಗ್​ನಿಂದ ಹೊರ ನಡೆದಿದ್ದಾರೆ. ಅದು ಕೂಡ ರಾಷ್ಟ್ರೀಯ ತಂಡದ ಪರ ಆಡುವ ನೆಪದೊಂದಿಗೆ. ಅಂದರೆ ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಸಜ್ಜಾಗಲು ತವರಿಗೆ ಹಿಂತಿರುಗುತ್ತಿರುವುದಾಗಿ ಬಾಬರ್ ಆಝಂ ತಿಳಿಸಿದ್ದಾರೆ.

ಆದರೆ ಇಂಟ್ರೆಸ್ಟಿಂಗ್ ವಿಷಯ ಎಂದರೆ, ಪಾಕಿಸ್ತಾನ್ ಹಾಗೂ ಆಸ್ಟ್ರೇಲಿಯಾ ನಡುವಣ ಟಿ20 ಸರಣಿ ಶುರುವಾಗುವುದು ಜನವರಿ 29 ರಿಂದ ಎಂಬುದು. ಅಂದರೆ ಮುಂದಿನ ಸರಣಿಗೆ ಇನ್ನೂ ಒಂದು ವಾರವಿದೆ. ಇತ್ತ ಬಿಗ್ ಬ್ಯಾಷ್ ಲೀಗ್​ನಲ್ಲಿ ಉಳಿದಿರುವುದು ಕೇವಲ 2 ಮ್ಯಾಚ್​ಗಳು ಮಾತ್ರ.

ಅಂದರೆ ಜನವರಿ 23 ರಂದು ಸಿಡ್ನಿ ಸಿಕ್ಸರ್ಸ್ ಹಾಗೂ ಹೋಬಾರ್ಟ್ ಹರಿಕೇನ್ಸ್ ನಡುವೆ ಚಾಲೆಂಜರ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಜನವರಿ 25 ರಂದು ಪರ್ತ್ ಸ್ಕಾಚರ್ಸ್ ವಿರುದ್ಧ ಫೈನಲ್ ಪಂದ್ಯವಾಡಲಿದೆ.

ಆದರೆ ಬಿಗ್ ಬ್ಯಾಷ್ ಲೀಗ್​ ಮುಗಿಯಲು ಕೇವಲ ಮೂರು ದಿನಗಳಿರುವಾಗ ಬಾಬರ್ ಆಝಂ ಟೂರ್ನಿಯಿಂದ ಹೊರ ನಡೆದಿದ್ದಾರೆ. ಅದು ಸಹ ಮುಂದಿನ ವಾರ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ನೆನಪೊಡ್ಡಿ.

ಇದರಾರ್ಥ ಬಾಬರ್ ಆಝಂ ಅವರನ್ನು ಚಾಲೆಂಜರ್ ಪಂದ್ಯದಿಂದ ಸಿಡ್ನಿ ಸಿಕ್ಸರ್ಸ್ ಕೈ ಬಿಡುವುದು ಖಚಿತವಾಗಿತ್ತು. ಅಲ್ಲದೆ ಸಿಡ್ನಿ ತಂಡವು ಪೈನಲ್​ಗೇರಿದರೂ ಬಾಬರ್​ನನ್ನು ಕಣಕ್ಕಿಳಿಸದಿರಲು ನಿರ್ಧರಿಸಿತ್ತು. ಹೀಗಾಗಿಯೇ ಮತ್ತೊಂದು ಅವಮಾನ ಎದುರಾಗುವ ಮುನ್ನವೇ ಬಾಬರ್ ಆಝಂ ಬಿಗ್ ಬ್ಯಾಷ್ ಲೀಗ್​ನಿಂದ ಎಸ್ಕೇಪ್ ಆಗಿದ್ದಾರೆ.