
ಬಾಂಗ್ಲಾದೇಶ್ ವಿರುದ್ಧದ ಸರಣಿಗಾಗಿ ಪಾಕಿಸ್ತಾನ್ (Pakistan) ಟಿ20 ತಂಡ ಪ್ರಕಟವಾಗಿದೆ. 16 ಸದಸ್ಯರ ಈ ತಂಡದಲ್ಲಿ ಪಾಕ್ ತಂಡದ ಸ್ಟಾರ್ ಆಟಗಾರರಾದ ಬಾಬರ್ ಆಝಂ, ಮೊಹಮ್ಮದ್ ರಿಝ್ವಾನ್ ಹಾಗೂ ಶಾಹೀನ್ ಅಫ್ರಿದಿ ಕಾಣಿಸಿಕೊಂಡಿಲ್ಲ ಎಂಬುದೇ ವಿಶೇಷ. ಈ ಮೂವರು ಈ ಹಿಂದೆ ಪಾಕ್ ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದರು. ಇದೀಗ ಮೂವರನ್ನು ಸಹ ತಂಡದಿಂದ ಕೈ ಬಿಡಲಾಗಿದೆ.
ಪಾಕಿಸ್ತಾನ್ – ಬಾಂಗ್ಲಾದೇಶ್ ನಡುವಣ ಟಿ20 ಸರಣಿಯು ಮೇ 27 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ 3 ಟಿ20 ಪಂದ್ಯಗಳನ್ನಾಡಲಾಗುತ್ತದೆ. ಆದರೆ ಈ ಪಂದ್ಯಗಳಿಂದ ಪ್ರಮುಖ ಆಟಗಾರರನ್ನೇ ಕೈ ಬಿಡುವ ಮೂಲಕ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಮಹತ್ವದ ಹೆಜ್ಜೆಯನ್ನಿಟ್ಟಿದೆ.
ಬಾಬರ್ ಆಝಂ, ಮೊಹಮ್ಮದ್ ರಿಝ್ವಾನ್ ಹಾಗೂ ಶಾಹೀನ್ ಅಫ್ರಿದಿ ಅವರನ್ನು ಕೈ ಬಿಟ್ಟಿರುವ ಪಿಸಿಬಿ ತಂಡದ ನಾಯಕತ್ವವನ್ನು ಸಲ್ಮಾನ್ ಅಲಿ ಅಘಾಗೆ ವಹಿಸಿದ್ದಾರೆ. ಹಾಗೆಯೇ ಉಪನಾಯಕನಾಗಿ ಶಾದಾಬ್ ಖಾನ್ ಆಯ್ಕೆಯಾಗಿದ್ದಾರೆ.
ಇನ್ನು ತಂಡದ ಮುಖ್ಯ ಕೋಚ್ ಆಗಿ ಮೈಕ್ ಹೆಸ್ಸನ್ ಕಾಣಿಸಿಕೊಂಡಿದ್ದಾರೆ. ಮೈಕ್ ಹೆಸ್ಸನ್ ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಡೈರೆಕ್ಟರ್ ಆಗಿ ಕಾಣಿಸಿಕೊಂಡಿದ್ದರು. ಇದೀಗ ಪಾಕ್ ತಂಡದ ಕೋಚ್ ಆಗಿ ಹೊಸ ಇನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ.
ಬಾಬರ್ ಆಝಂ ಈ ಬಾರಿಯ ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ 10 ಪಂದ್ಯಗಳಲ್ಲಿ 3 ಅರ್ಧಶತಕ ಬಾರಿಸಿದ್ದಾರೆ. ಅಲ್ಲದೆ ಒಟ್ಟು 288 ರನ್ ಕಲೆಹಾಕಿದ್ದಾರೆ.
ಮತ್ತೊಂದೆಡೆ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಝ್ವಾನ್ 10 ಪಂದ್ಯಗಳಲ್ಲಿ 1 ಶತಕದೊಂದಿಗೆ ಒಟ್ಟು 367 ರನ್ಗಳಿಸಿ ಮಿಂಚಿದ್ದಾರೆ.
ಹಾಗೆಯೇ ಶಾಹೀನ್ ಅಫ್ರಿದಿ 10 ಪಂದ್ಯಗಳಿಂದ 11 ವಿಕೆಟ್ ಕಬಳಿಸಲಷ್ಟೇ ಶಕ್ತರಾಗಿದ್ದಾರೆ. ಹೀಗಾಗಿ ಕಳಪೆ ಫಾರ್ಮ್ನಲ್ಲಿರುವ ಎಡಗೈ ವೇಗಿಯನ್ನು ಪಾಕ್ ತಂಡದಿಂದ ಕೈ ಬಿಡಲಾಗಿದೆ.
ಇನ್ನು ಬಾಬರ್ ಆಝಂ ಹಾಗೂ ಮೊಹಮ್ಮದ್ ರಿಝ್ವಾನ್ ನಿಧಾನಗತಿಯ ಇನಿಂಗ್ಸ್ಗೆ ಹೆಸರುವಾಸಿ. ಇದೇ ಕಾರಣದಿಂದಾಗಿ ಇಬ್ಬರನ್ನು ಟಿ20 ಸರಣಿಗೆ ಆಯ್ಕೆ ಮಾಡಲಾಗಿಲ್ಲ ಎಂದು ತಿಳಿದು ಬಂದಿದೆ.
ಶಾಹೀನ್ ಅಫ್ರಿದಿ, ಮೊಹಮ್ಮದ್ ರಿಝ್ವಾನ್, ಬಾಬರ್ ಆಝಂ
ಇದನ್ನೂ ಓದಿ: IPL 2025: ಜೋಶ್ ಹೇಝಲ್ವುಡ್ ಎಂಟ್ರಿಗೆ ಡೇಟ್ ಫಿಕ್ಸ್
ಪಾಕಿಸ್ತಾನ್ ಟಿ20 ತಂಡ: ಸಲ್ಮಾನ್ ಅಲಿ ಅಘಾ (ನಾಯಕ), ಶಾದಾಬ್ ಖಾನ್ (ಉಪನಾಯಕ), ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಫಖರ್ ಝಮಾನ್, ಹಾರಿಸ್ ರೌಫ್, ಹಸನ್ ಅಲಿ, ಹಸನ್ ನವಾಝ್, ಹುಸೇನ್ ತಲತ್, ಖುಷ್ದಿಲ್ ಶಾ, ಮೊಹಮ್ಮದ್ ಹ್ಯಾರಿಸ್, ಮೊಹಮ್ಮದ್ ವಾಸಿಮ್ ಜೂನಿಯರ್, ಮೊಹಮ್ಮದ್ ಇರ್ಫಾನ್ ಖಾನ್, ನಸೀಮ್ ಶಾ, ಶಾಹಿಬ್ಝಾದ ಫರ್ಹಾನ್, ಸೈಮ್ ಅಯ್ಯೂಬ್.