- Kannada News Photo gallery Cricket photos IPL 2025: Josh Hazelwood is likely to Join RCB Squad on May 25
IPL 2025: ಜೋಶ್ ಹೇಝಲ್ವುಡ್ ಎಂಟ್ರಿಗೆ ಡೇಟ್ ಫಿಕ್ಸ್
IPL 2025 RCB: ಈ ಬಾರಿಯ ಐಪಿಎಲ್ನಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ಲೇಆಫ್ಗೆ ಪ್ರವೇಶಿಸಿದೆ. ಇದಾಗ್ಯೂ ಆರ್ಸಿಬಿ ತಂಡಕ್ಕೆ ಇನ್ನೂ ಎರಡು ಲೀಗ್ ಪಂದ್ಯಗಳು ಬಾಕಿಯಿದ್ದು, ಈ ಮ್ಯಾಚ್ಗಳಲ್ಲಿ ಜಯ ಸಾಧಿಸಿದರೆ ಅಂಕ ಪಟ್ಟಿಯಲ್ಲಿ ಮೊದಲ ಅಥವಾ ದ್ವಿತೀಯ ಸ್ಥಾನ ಅಲಂಕರಿಸಬಹುದು.
Updated on: May 21, 2025 | 11:04 AM

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪ್ರಮುಖ ವೇಗಿ ಜೋಶ್ ಹೇಝಲ್ವುಡ್ (Josh Hazelwood) ಐಪಿಎಲ್ನ ಉಳಿದ ಪಂದ್ಯಗಳಿಗಾಗಿ ಭಾರತಕ್ಕೆ ಮರಳುವುದು ಖಚಿತವಾಗಿದೆ. ಭಾರತ-ಪಾಕ್ ಯುದ್ಧ ಭೀತಿ ಹಿನ್ನಲೆಯಲ್ಲಿ ಐಪಿಎಲ್ ಸ್ಥಗಿತಗೊಂಡಿದ್ದರಿಂದ ಹೇಝಲ್ವುಡ್ ತವರಿಗೆ ಮರಳಿದ್ದರು.

ಇತ್ತ ಐಪಿಎಲ್ ಮತ್ತೆ ಶುರುವಾದರೂ ಜೋಶ್ ಹೇಝಲ್ವುಡ್ ಆರ್ಸಿಬಿ ತಂಡವನ್ನು ಕೂಡಿಕೊಂಡಿರಲಿಲ್ಲ. ಇದಕ್ಕೆ ಮುಖ್ಯ ಕಾರಣ ಭುಜದ ನೋವಿನ ಸಮಸ್ಯೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ವೇಳೆ ಭುಜದ ನೋವಿಗೆ ತುತ್ತಾಗಿದ್ದ ಹೇಝಲ್ವುಡ್ ಸಿಎಸ್ಕೆ ವಿರುದ್ಧ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ.

ಇದಾದ ಬಳಿಕ ಆಸ್ಟ್ರೇಲಿಯಾಗೆ ಮರಳಿದ್ದ ಜೋಶ್ ಹೇಝಲ್ವುಡ್ ಅಲ್ಲೇ ಚಿಕಿತ್ಸೆ ಮುಂದುವರೆಸಿದ್ದರು. ಇದೀಗ ಸಂಪೂರ್ಣ ಫಿಟ್ನೆಸ್ ಸಾಧಿಸಿರುವ ಆರ್ಸಿಬಿ ವೇಗಿ ಅಭ್ಯಾಸವನ್ನು ಆರಂಭಿಸಿದ್ದಾರೆ. ಅಲ್ಲದೆ ಮುಂದಿನ ಭಾನುವಾರ, ಅಂದರೆ ಮೇ 25 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಅಂದರೆ ಮೆ 23 ರಂದು ನಡೆಯಲಿರುವ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಪಂದ್ಯಕ್ಕೂ ಜೋಶ್ ಹೇಝಲ್ವುಡ್ ಅಲಭ್ಯರಾಗಲಿದ್ದಾರೆ. ಇನ್ನು ಮೇ 25 ರಂದು ಆರ್ಸಿಬಿ ತಂಡವನ್ನು ಸೇರಿಕೊಂಡರೆ, ಮೇ 27 ರಂದು ನಡೆಯಲಿರುವ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಬಹುದು.

ಇತ್ತ ಜೋಶ್ ಹೇಝಲ್ವುಡ್ ರಿಟರ್ನ್ ಸುದ್ದಿಯು ಆರ್ಸಿಬಿ ಪಾಲಿಗೆ ಶುಭ ಸೂಚನೆ ಎನ್ನಬಹುದು. ಏಕೆಂದರೆ ಈ ಬಾರಿ ಆರ್ಸಿಬಿ ಪರ ಅತ್ಯಧಿಕ ವಿಕೆಟ್ ಕಬಳಿಸಿರುವುದು ಹೇಝಲ್ವುಡ್. 10 ಪಂದ್ಯಗಳಲ್ಲಿ 36.5 ಓವರ್ಗಳನ್ನು ಎಸೆದಿರುವ ಆಸೀಸ್ ವೇಗಿ ಒಟ್ಟು 18 ವಿಕೆಟ್ಗಳನ್ನು ಪಡೆದಿದ್ದಾರೆ.

ಹಾಗೆಯೇ ಆರ್ಸಿಬಿ ಪರ ಅತ್ಯಧಿಕ ಡಾಟ್ ಬಾಲ್ಗಳನ್ನು ಎಸೆದಿರುವುದು ಸಹ ಜೋಶ್ ಹೇಝಲ್ವುಡ್. 10 ಪಂದ್ಯಗಳಲ್ಲಿ ಒಟ್ಟು 103 ಡಾಟ್ ಬಾಲ್ಗಳನ್ನು ಎಸೆದಿದ್ದಾರೆ. ಈ ಮೂಲಕ ಆರ್ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಇದೀಗ ಪ್ಲೇಆಫ್ ಹಂತಕ್ಕೂ ಮುನ್ನ ಜೋಶ್ ಹೇಝಲ್ವುಡ್ ಆರ್ಸಿಬಿ ತಂಡವನ್ನು ಕೂಡಿಕೊಳ್ಳುವುದು ಖಚಿತವಾಗಿದ್ದು, ಇದರಿಂದ ರಾಯಲ್ ಪಡೆಯ ಬೌಲಿಂಗ್ ಲೈನಪ್ ಮತ್ತಷ್ಟು ಬಲಿಷ್ಠವಾಗಲಿದೆ.
