Bangladesh vs India, 1st ODI: ಢಾಕಾದ ಶೇರೆ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಬಾಂಗ್ಲಾದೇಶ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ಅತ್ಯಾದ್ಭುತ ಕ್ಯಾಚ್ ಹಿಡಿದು ಎಲ್ಲರನ್ನು ದಂಗಾಗಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕರಾದ ರೋಹಿತ್ ಶರ್ಮಾ (27) ಹಾಗೂ ಶಿಖರ್ ಧವನ್ (7) ಬೇಗನೆ ನಿರ್ಗಮಿಸಿದರು. ಇನ್ನು ಆ ಬಳಿಕ ಬಂದ ವಿರಾಟ್ ಕೊಹ್ಲಿ (9) ಲಿಟನ್ ದಾಸ್ ಹಿಡಿದ ಅದ್ಭುತ ಕ್ಯಾಚ್ನಿಂದಾಗಿ ಹೊರನಡೆಯಬೇಕಾಯಿತು. ಇನ್ನು ಶ್ರೇಯಸ್ ಅಯ್ಯರ್ 24 ರನ್ಗಳಿಸಿ ಔಟಾಗಿ ನಿರಾಸೆ ಮೂಡಿಸಿದರು.
ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಟೀಮ್ ಇಂಡಿಯಾ ಉಪನಾಯಕ ಕೆಎಲ್ ರಾಹುಲ್ ಅತ್ಯುತ್ತಮ ಇನಿಂಗ್ಸ್ ಆಡಿದರು. ಏಕಾಂಗಿಯಾಗಿ ಇನಿಂಗ್ಸ್ ಕಟ್ಟಿದ ಕೆಎಲ್ಆರ್ 70 ಎಸೆತಗಳಲ್ಲಿ 5 ಫೋರ್ ಹಾಗೂ 4 ಸಿಕ್ಸ್ನೊಂದಿಗೆ 73 ರನ್ ಚಚ್ಚಿದರು. ಈ ಹಂತದಲ್ಲಿ ಇಬಾದತ್ ಹೊಸೇನ್ ಎಸೆತದಲ್ಲಿ ಕ್ಯಾಚ್ ನೀಡುವ ರಾಹುಲ್ ನಿರ್ಗಮಿಸಿದರು.
ಈ ವೇಳೆ ದಾಳಿಗಿಳಿದ ಶಕೀಬ್ ಅಲ್ ಹಸನ್ ಟೀಮ್ ಇಂಡಿಯಾದ ಕೆಳ ಕ್ರಮಾಂಕದ ಆಟಗಾರರನ್ನು ಒಬ್ಬರ ಹಿಂದೆ ಒಬ್ಬರಂತೆ ಔಟ್ ಮಾಡಿದರು. ಪರಿಣಾಮ ಟೀಮ್ ಇಂಡಿಯಾ 41.2 ಓವರ್ಗಳಲ್ಲಿ 186 ರನ್ಗಳಿಗೆ ಸರ್ವಪತನ ಕಂಡಿತು. ಬಾಂಗ್ಲಾ ಪರ ಶಕೀಬ್ 10 ಓವರ್ಗಳಲ್ಲಿ 36 ರನ್ ನೀಡಿ 5 ವಿಕೆಟ್ ಪಡೆದರೆ, ಇಬಾದತ್ 4 ವಿಕೆಟ್ ಕಬಳಿಸಿ ಮಿಂಚಿದರು.
187 ರನ್ಗಳ ಗುರಿ ಪಡೆದ ಬಾಂಗ್ಲಾದೇಶ್ ತಂಡಕ್ಕೂ ಉತ್ತಮ ಆರಂಭ ದಕ್ಕಿರಲಿಲ್ಲ. ಮೊದಲ ಓವರ್ನ ಮೊದಲ ಎಸೆತದಲ್ಲೇ ನಜ್ಮುಲ್ (0) ವಿಕೆಟ್ ಪಡೆಯುವ ಮೂಲಕ ದೀಪಕ್ ಚಹರ್ ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಅನಾಮುಲ್ ಹಕ್ (14) ಕೂಡ ಸಿರಾಜ್ ಎಸೆತದಲ್ಲಿ ಔಟಾದರು.
ಈ ಹಂತದಲ್ಲಿ ಜೊತೆಗೂಡಿದ ಲಿಟನ್ ದಾಸ್ ಹಾಗೂ ಶಕೀಬ್ ಅಲ್ ಹಸನ್ ಅತ್ಯುತ್ತಮ ಜೊತೆಯಾಟವಾಡಿದರು. 3ನೇ ವಿಕೆಟ್ಗೆ 48 ರನ್ಗಳ ಜೊತೆಯಾಟವಾಡುವ ಮೂಲಕ ಈ ಜೋಡಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಈ ವೇಳೆ 41 ರನ್ಗಳಿಸಿದ್ದ ಲಿಟನ್ ದಾಸ್ ವಾಷಿಂಗ್ಟನ್ ಸುಂದರ್ ಎಸೆತದಲ್ಲಿ ಕ್ಯಾಚ್ ನೀಡಿದರು. ಇದಾಗ್ಯೂ ಮತ್ತೊಂದೆಡೆ ಶಕೀಬ್ ಅಲ್ ಹಸನ್ ಅಪಾಯಕಾರಿಯಾಗುವ ಸೂಚನೆ ನೀಡಿದ್ದರು.
ವಾಷಿಂಗ್ಟನ್ ಸುಂದರ್ ಎಸೆದ 24ನೇ ಓವರ್ನ 3ನೇ ಎಸೆತವನ್ನು ಶಕೀಬ್ ಡೀಪ್ ಕವರ್ನತ್ತ ಭರ್ಜರಿಯಾಗಿ ಬಾರಿಸಿದ್ದರು. ಚೆಂಡು ಗಾಳಿಯಲ್ಲಿ ಹಾರುತ್ತಿದ್ದಂತೆ ಇತ್ತ ಫ್ರಂಟ್ ಫೀಲ್ಡಿಂಗ್ನಲ್ಲಿದ್ದ ವಿರಾಟ್ ಕೊಹ್ಲಿ ಬಲಭಾಗದತ್ತ ಜಿಗಿದರು. ಅಲ್ಲದೆ ಒಂದೇ ಕೈನಲ್ಲಿ ಚೆಂಡನ್ನು ಹಿಡಿಯುವ ಮೂಲಕ ಅತ್ಯಾದ್ಭುತ ಫೀಲ್ಡಿಂಗ್ ಪ್ರದರ್ಶಿಸಿದರು.
VIRAT KOHLI STUNNING CATCH #viratKohli#Banvsind pic.twitter.com/XlD1Mm5LLP
— Aman shrivastava ???? (@im___Aman) December 4, 2022
ವಿರಾಟ್ ಕೊಹ್ಲಿಯ ಈ ಅದ್ಭುತ ಕ್ಯಾಚ್ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ ಕಿಂಗ್ ಕೊಹ್ಲಿಯ ಗ್ರೇಟ್ ಕ್ಯಾಚ್ಗೆ ಅಭಿಮಾನಿಗಳು ಬಹುಪರಾಕ್ ಅನ್ನುತ್ತಿದ್ದಾರೆ.
Stunning catch from Virat Kohli ??#ViratKohlipic.twitter.com/gGPZZMukPr
— Vardhan? (@VVK_09) December 4, 2022
ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ (ನಾಯಕ) , ಶಿಖರ್ ಧವನ್ , ವಿರಾಟ್ ಕೊಹ್ಲಿ , ಶ್ರೇಯಸ್ ಅಯ್ಯರ್ , ಕೆಎಲ್ ರಾಹುಲ್ (ವಿಕೆಟ್ ಕೀಪರ್ ) , ವಾಷಿಂಗ್ಟನ್ ಸುಂದರ್ , ಶಹಬಾಜ್ ಅಹ್ಮದ್ , ದೀಪಕ್ ಚಹಾರ್ , ಶಾರ್ದೂಲ್ ಠಾಕೂರ್ , ಮೊಹಮ್ಮದ್ ಸಿರಾಜ್ , ಕುಲದೀಪ್ ಸೇನ್
Published On - 5:54 pm, Sun, 4 December 22