IND vs BAN: ಗಬ್ಬರ್ ವೃತ್ತಿಜೀವನಕ್ಕೆ ಕುತ್ತು..! ಬಾಂಗ್ಲಾ ಪ್ರವಾಸದಲ್ಲೂ ಸಿಂಗಲ್ ಡಿಜಿಟ್​ಗೆ ಸುಸ್ತಾದ ಧವನ್

TV9kannada Web Team

TV9kannada Web Team | Edited By: pruthvi Shankar

Updated on: Dec 04, 2022 | 12:54 PM

Shikhar Dhawan: ನ್ಯೂಜಿಲೆಂಡ್ ವಿರುದ್ಧ ಆಡಿದ 3 ಏಕದಿನ ಪಂದ್ಯಗಳಲ್ಲಿ ಧವನ್ ಒಮ್ಮೆ ಮಾತ್ರ 72 ರನ್‌ಗಳ ಅತ್ಯುತ್ತಮ ಇನ್ನಿಂಗ್ಸ್ ಆಡಿದ್ದರು. ಅಲ್ಲದೆ ಧವನ್ ಆಡಿರುವ ಕೊನೆಯ 10 ಏಕದಿನ ಇನ್ನಿಂಗ್ಸ್‌ಗಳಲ್ಲಿ ಅವರ ಬ್ಯಾಟ್‌ನಿಂದ ಕೇವಲ 2 ಅರ್ಧಶತಕಗಳು ಮಾತ್ರ ಹೊರಬಂದಿವೆ.

IND vs BAN: ಗಬ್ಬರ್ ವೃತ್ತಿಜೀವನಕ್ಕೆ ಕುತ್ತು..! ಬಾಂಗ್ಲಾ ಪ್ರವಾಸದಲ್ಲೂ ಸಿಂಗಲ್ ಡಿಜಿಟ್​ಗೆ ಸುಸ್ತಾದ ಧವನ್
Shikhar Dhawan

ವೃತ್ತಿ ಜೀವನದ ಕೊನೆಯ ಹಂತದಲ್ಲಿರುವ ಶಿಖರ್ ಧವನ್ (Shikhar Dhawan) ತಂಡದಲ್ಲಿ ಇನ್ನು ಸ್ವಲ್ಪ ದಿನ ಆಡಬೇಕೆಂದರೆ ಅವರ ಬ್ಯಾಟ್​ನಿಂದ ಸರಾಗವಾಗಿ ರನ್​ಗಳು ಹೊರಬರಬೇಕಿದೆ. ಆದರೆ ಕಿವೀಸ್ ಸರಣಿಯಲ್ಲಿ ಮೊದಲ ಪಂದ್ಯವನ್ನು ಬಿಟ್ಟರೆ ಮಿಕ್ಕ ಪಂದ್ಯಗಳಲ್ಲಿ ಫ್ಲಾಪ್ ಆಗಿದ್ದ ಧವನ್ ಬ್ಯಾಟ್ ಬಾಂಗ್ಲಾ (India Vs Bangladesh) ಸರಣಿಯಲ್ಲೂ ರನ್ ಬರ ಎದುರಿಸುತ್ತಿದೆ. ಬಾಂಗ್ಲಾದೇಶ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 17 ಎಸೆತಗಳನ್ನು ಎದುರಿಸಿದ ಧವನ್ ಕೇವಲ 7 ರನ್ ಗಳಿಸಿ ಪೆವಿಲಿಯನ್​ಗೆ ಮರಳಿದರು. ಡಿಸೆಂಬರ್ 5 ರಂದು 37 ನೇ ವರ್ಷಕ್ಕೆ ಕಾಲಿಡಲಿರುವ ಧವನ್, ಇಂದಿನ ಪಂದ್ಯದಲ್ಲಿ ಮಿಂಚಿ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುವ ಯೋಜನೆಯಲ್ಲಿದ್ದರು. ಆದರೆ ಇದಕ್ಕೆ ಬಾಂಗ್ಲಾ ಬೌಲರ್​ಗಳು ಅವಕಾಶ ನೀಡಲಿಲ್ಲ. ಮೆಹದಿ ಹಸನ್ ಮಿರಾಜ್ (Mehdi Hasan Miraj) ಎಸೆತದಲ್ಲಿ ಬೌಲ್ಡ್ ಆಗುವ ಮೂಲಕ ಧವನ್ ಮೊದಲ ಏಕದಿನ ಪಂದ್ಯದ ಇನ್ನಿಂಗ್ಸ್ ಮುಗಿಸಿದ್ದಾರೆ.

ಮೀರಜ್‌ ಅವರ ಆರಂಭಿಕ ಓವರ್‌ಗಳಲ್ಲಿ ಧವನ್ ಮತ್ತು ನಾಯಕ ರೋಹಿತ್ ಶರ್ಮಾ ರನ್​ಗಳಿಸಲು ಸಾಕಷ್ಟು ಕಷ್ಟಪಡುತ್ತಿದ್ದರು. ಮೊದಲ ಓವರ್‌ನಲ್ಲಿ ಕೇವಲ 1 ರನ್ ನೀಡಿದ ಮೀರಜ್ ನಂತರ ಎರಡನೇ ಓವರ್‌ನ ಎರಡನೇ ಎಸೆತದಲ್ಲಿ ಧವನ್ ಅವರನ್ನು ಬಲಿಪಡೆಯುವಲ್ಲಿ ಯಶಸ್ವಿಯಾದರು.

ಧವನ್‌ರಿಂದ ಕೆಟ್ಟ ಹೊಡೆತ

ಮೀರಜ್ ಎಸೆದ ಎರಡನೇ ಓವರ್​ನ ಎರಡನೇ ಎಸೆತದಲ್ಲಿ ಧವನ್ ರಿವರ್ಸ್ ಸ್ವೀಪ್ ಮಾಡಲು ಪ್ರಯತ್ನಿಸಿದರು, ಆದರೆ ಶಾಟ್ ಆಡುವಲ್ಲಿ ವಿಫಲರಾದರು. ಧವನ್ ಎದೆಗೆ ಬಡಿದ ಚೆಂಡು ನಂತರ ಅವರ ಕೈ ಸವರಿ ಸೀದಾ ಸ್ಟಂಪ್‌ಗೆ ಬಡಿಯಿತು. ಹೀಗಾಗಿ ಧವನ್ ಅವರ ಕಳಪೆ ಬ್ಯಾಟಿಂಗ್​ನಿಂದ ಅಭಿಮಾನಿಗಳು ಕೂಡ ನಿರಾಸೆಗೊಂಡಿದ್ದು, ಅವರನ್ನು ತಂಡದಿಂದ ಕೈಬಿಡುವಂತೆ ಒತ್ತಾಯಿಸಲು ಆರಂಭಿಸಿದ್ದಾರೆ.

ಇದನ್ನೂ ಓದಿ: India Vs Bangladesh, 1st ODI, Live Score: ಭಾರತದ 3ನೇ ವಿಕೆಟ್ ಪತನ; ಕೊಹ್ಲಿ ಔಟ್

ಕಳಪೆ ಫಾರ್ಮ್ ಮುಂದುವರೆಸಿದ ಧವನ್

ನ್ಯೂಜಿಲೆಂಡ್ ವಿರುದ್ಧವೂ ಧವನ್ ಅವರ ಬ್ಯಾಟ್ ಕೆಲಸ ಮಾಡಲಿಲ್ಲ. ನ್ಯೂಜಿಲೆಂಡ್ ವಿರುದ್ಧ ಆಡಿದ 3 ಏಕದಿನ ಪಂದ್ಯಗಳಲ್ಲಿ ಧವನ್ ಒಮ್ಮೆ ಮಾತ್ರ 72 ರನ್‌ಗಳ ಅತ್ಯುತ್ತಮ ಇನ್ನಿಂಗ್ಸ್ ಆಡಿದ್ದರು. ಅಲ್ಲದೆ ಧವನ್ ಆಡಿರುವ ಕೊನೆಯ 10 ಏಕದಿನ ಇನ್ನಿಂಗ್ಸ್‌ಗಳಲ್ಲಿ ಅವರ ಬ್ಯಾಟ್‌ನಿಂದ ಕೇವಲ 2 ಅರ್ಧಶತಕಗಳು ಮಾತ್ರ ಹೊರಬಂದಿವೆ. ಅಲ್ಲದೆ 4 ಇನ್ನಿಂಗ್ಸ್​ಗಳಲ್ಲಿ ಧವನ್ ಕೇವಲ ಒಂದಂಕ್ಕಿಗೆ ವಿಕೆಟ್ ಒಪ್ಪಿಸಿದ್ದಾರೆ.

ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ

ಈ ಪಂದ್ಯದಲ್ಲಿ ತಮ್ಮ ನೆಚ್ಚಿನ ಜೊತೆಗಾರ ರೋಹಿತ್ ಜೊತೆ ಮೈದಾನಕ್ಕೆ ಇಳಿದಿದ್ದ ಧವನ್ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ಜೊತೆಗೆ ಭಾರತಕ್ಕೆ ವೇಗದ ಆರಂಭವನ್ನು ನೀಡಲು ಸಾಧ್ಯವಾಗಲಿಲ್ಲ. 5 ತಿಂಗಳ ನಂತರ, ಈ ಜೋಡಿ ಏಕದಿನ ಪಂದ್ಯದಲ್ಲಿ ಒಟ್ಟಿಗೆ ಕಾಣಿಸಿಕೊಂಡಿತು, ಆದರೆ ರೋಹಿತ್ ಜೊತೆ ಧವನ್ ಬಿಗ್ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಇದಕ್ಕೂ ಮುನ್ನ ಧವನ್ ಮತ್ತು ರೋಹಿತ್ ಜೋಡಿ ಏಕದಿನ ಪಂದ್ಯಗಳಲ್ಲಿ ಇದುವರೆಗೆ 114 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 5 ಸಾವಿರದ 125 ರನ್ ಗಳಿಸಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada