ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಫೆಬ್ರವರಿ 19 ರಿಂದ ಶುರುವಾಗಲಿರುವ ಈ ಟೂರ್ನಿಗೂ ಮುನ್ನವೇ ಬಾಂಗ್ಲಾದೇಶ್ ತಂಡದ ಸ್ಟಾರ್ ಆಟಗಾರ ತಮೀಮ್ ಇಕ್ಬಾಲ್ ನಿವೃತ್ತಿ ಘೋಷಿಸಿದ್ದಾರೆ. ಬಾಂಗ್ಲಾದೇಶ್ ಪರ ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿರುವ ದಾಖಲೆ ಹೊಂದಿರುವ ತಮೀಮ್ ಇದೀಗ ಏಕದಿನ ಟೂರ್ನಿ ಆರಂಭಕ್ಕೂ ಮುನ್ನ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ.
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಆಯ್ಕೆ ಸಮಿತಿಯು ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವಂತೆ ತಮೀಮ್ ಅವರ ಮನವೊಲಿಸಲು ಮುಂದಾಗಿತ್ತು. ಆದರೆ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ. ಆ ಬಳಿಕ ಬಾಂಗ್ಲಾದೇಶ್ ತಂಡದ ನಾಯಕ ನಜ್ಮುಲ್ ಹುಸೇನ್ ಶಾಂತೊ ಕೂಡ ಹಿರಿಯ ಆಟಗಾರನಿಗೆ ತಮ್ಮ ನಿರ್ಧಾರವನ್ನು ಮರುಪರಿಶೀಲಿಸುವಂತೆ ವಿನಂತಿಸಿದ್ದರು.
ಈ ಎಲ್ಲಾ ಮನವಿಯನ್ನು ತಿರಸ್ಕರಿಸಿರುವ ತಮೀಮ್, ಶುಕ್ರವಾರ ಸೋಷಿಯಲ್ ಮೀಡಿಯಾ ಮೂಲಕ ತಮ್ಮ ನಿವೃತ್ತಿಯನ್ನು ಘೋಷಿಸಿದ್ದಾರೆ. ಇದರೊಂದಿಗೆ 35 ವರ್ಷದ ತಮೀಮ್ ಇಕ್ಬಾಲ್ ಅವರ 16 ವರ್ಷಗಳ ಕ್ರಿಕೆಟ್ ಕೆರಿಯರ್ ಅಂತ್ಯಗೊಂಡಂತಾಗಿದೆ. ಅದರಲ್ಲೂ ಚಾಂಪಿಯನ್ಸ್ ಟ್ರೋಫಿಯ ಮೂಲಕ ವಿದಾಯ ಹೇಳುವ ಅವಕಾಶ ಹೊಂದಿದ್ದರೂ, ತಮೀಮ್ ಇಕ್ಬಾಲ್ ದಿಢೀರ್ ನಿವೃತ್ತಿ ಘೋಷಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಬಾಂಗ್ಲಾದೇಶ್ ಪರ 70 ಟೆಸ್ಟ್ ಪಂದ್ಯಗಳನ್ನಾಡಿರುವ ತಮೀಮ್ ಇಕ್ಬಾಲ್ 134 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ 1 ದ್ವಿಶತಕ, 10 ಶತಕ ಹಾಗೂ 31 ಅರ್ಧಶತಕಗಳೊಂದಿಗೆ ಒಟ್ಟು 5134 ರನ್ ಕಲೆಹಾಕಿದ್ದಾರೆ.
ಇನ್ನು ಏಕದಿನ ಕ್ರಿಕೆಟ್ನಲ್ಲಿ 243 ಪಂದ್ಯಗಳಲ್ಲಿ 240 ಇನಿಂಗ್ಸ್ ಆಡಿರುವ ತಮೀಮ್ 14 ಶತಕ ಹಾಗೂ 56 ಅರ್ಧಶತಕಗಳೊಂದಿಗೆ 8357 ರನ್ ಬಾರಿಸಿದ್ದಾರೆ. ಈ ಮೂಲಕ ಬಾಂಗ್ಲಾ ಪರ ಒನ್ಡೇ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ: IPL 2025: RCB ತಂಡ ನಾಯಕ ಯಾರು? ಸ್ಪಷ್ಟನೆ ನೀಡಿದ ಕೋಚ್ ಆ್ಯಂಡಿ ಫ್ಲವರ್
ಹಾಗೆಯೇ 78 ಟಿ20 ಪಂದ್ಯಗಳಲ್ಲಿ ಬಾಂಗ್ಲಾದೇಶ್ ತಂಡವನ್ನು ಪ್ರತಿನಿಧಿಸಿರುವ ತಮೀಮ್ ಇಕ್ಬಾಲ್ 1 ಶತಕ ಹಾಗೂ 7 ಅರ್ಧಶತಕಗಳೊಂದಿಗೆ ಒಟ್ಟು 1758 ರನ್ ಕಲೆಹಾಕಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ