AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಾಂಗ್ಲಾ ತಂಡದ ಅನುಭವಿ ಆಲ್‌ರೌಂಡರ್

Mahmudullah Riyad Retires: ಬಾಂಗ್ಲಾದೇಶದ ಅನುಭವಿ ಆಲ್‌ರೌಂಡರ್ ಮಹ್ಮದುಲ್ಲಾ ರಿಯಾದ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ ತಮ್ಮ 18 ವರ್ಷಗಳ ಸುದೀರ್ಘ ವೃತ್ತಿಜೀವನಕ್ಕೆ ಅಂತ್ಯ ಹಾಡಿದ್ದಾರೆ. ತಮ್ಮ ವೃತ್ತಿಜೀವನದ ಅವಧಿಯಲ್ಲಿ 430 ಪಂದ್ಯಗಳನ್ನಾಡಿರುವ ಮಹ್ಮದುಲ್ಲಾ 11047 ರನ್ ಕಲೆಹಾಕಿದ್ದು, ಬಾಂಗ್ಲಾದೇಶ ಪರ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಮುಷ್ಫಿಕರ್ ರಹೀಮ್, ಶಕೀಬ್ ಅಲ್ ಹಸನ್ ಮತ್ತು ತಮೀಮ್ ಇಕ್ಬಾಲ್ ನಂತರ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಾಂಗ್ಲಾ ತಂಡದ ಅನುಭವಿ ಆಲ್‌ರೌಂಡರ್
Mahmudullah Riyad
ಪೃಥ್ವಿಶಂಕರ
|

Updated on: Mar 12, 2025 | 10:49 PM

Share

ಬಾಂಗ್ಲಾದೇಶದ ಅನುಭವಿ ಆಲ್‌ರೌಂಡರ್ ಮಹ್ಮದುಲ್ಲಾ ರಿಯಾದ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ 39 ವರ್ಷದ ಈ ಅನುಭವಿ ಆಟಗಾರ ಹಠಾತ್ತನೆ ಕ್ರಿಕೆಟ್‌ಗೆ ವಿದಾಯ ಹೇಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಆಘಾತ ನೀಡಿದ್ದಾರೆ. ಈಗಾಗಲೇ 2021 ರಲ್ಲಿ ಟೆಸ್ಟ್ ಮತ್ತು 2024 ರಲ್ಲಿ ಟಿ20 ಮಾದರಿಗೆ ವಿದಾಯ ಹೇಳಿದ್ದ ಮಹ್ಮದುಲ್ಲಾ ಇದೀಗ ಚಾಂಪಿಯನ್ಸ್ ಟ್ರೋಫಿಯ ನಂತರ, ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಈ ಮೂಲಕ 18 ವರ್ಷಗಳ ನಂತರ ಅವರು ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಅಂತ್ಯ ಹಾಡಿದ್ದಾರೆ. ತಮ್ಮ ವೃತ್ತಿಜೀವನದ ಅವಧಿಯಲ್ಲಿ 430 ಪಂದ್ಯಗಳನ್ನಾಡಿರುವ ಮಹ್ಮದುಲ್ಲಾ 11047 ರನ್ ಕಲೆಹಾಕಿದ್ದು, ಬಾಂಗ್ಲಾದೇಶ ಪರ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಮುಷ್ಫಿಕರ್ ರಹೀಮ್, ಶಕೀಬ್ ಅಲ್ ಹಸನ್ ಮತ್ತು ತಮೀಮ್ ಇಕ್ಬಾಲ್ ನಂತರ ನಾಲ್ಕನೇ ಸ್ಥಾನದಲ್ಲಿದ್ದಾರೆ.

ನಿವೃತ್ತಿಯ ಬಗ್ಗೆ ಮಹಮದುಲ್ಲಾ ಹೇಳಿದ್ದೇನು?

ತಮ್ಮ ನಿವೃತ್ತಿಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಮಹಮದುಲ್ಲಾ, ‘ನಾನು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ಪ್ರತಿಯೊಂದು ಕಷ್ಟದ ಸಮಯದಲ್ಲೂ ನನ್ನನ್ನು ಬೆಂಬಲಿಸಿದ ನನ್ನ ಹೆಂಡತಿ ಮತ್ತು ಮಕ್ಕಳಿಗೆ ಧನ್ಯವಾದಗಳು. ಕೆಂಪು ಮತ್ತು ಹಸಿರು ಜೆರ್ಸಿಯಲ್ಲಿ ರೇದ್ (ಮಗ) ನನ್ನನ್ನು ಮಿಸ್ ಮಾಡಿಕೊಳ್ಳುತ್ತಾನೆಂದು ನನಗೆ ತಿಳಿದಿದೆ. ಎಲ್ಲವೂ ಪರಿಪೂರ್ಣವಾಗಿ ಕೊನೆಗೊಳ್ಳುವುದಿಲ್ಲ, ಆದರೆ ನೀವು ಅದನ್ನು ಮಾಡಿ ಮುಂದುವರಿಯಬೇಕು ಎಂದು ಬರೆದುಕೊಂಡಿದ್ದಾರೆ.

2007 ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಮಹಮದುಲ್ಲಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಇದಾದ ನಂತರ, ಅದೇ ವರ್ಷ, ಅವರು ಕೀನ್ಯಾ ವಿರುದ್ಧ ಟಿ20ಗೆ ಪಾದಾರ್ಪಣೆ ಮಾಡಿದರು. ನಂತರ ಎರಡು ವರ್ಷಗಳ ನಂತರ 2009 ರಲ್ಲಿ, ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ಆಡುವ ಅವಕಾಶ ಅವರಿಗೆ ಸಿಕ್ಕಿತು. ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ವಿರುದ್ಧದ ಮೊದಲ ಪಂದ್ಯದ ವೇಳೆ ಬಾಂಗ್ಲಾದೇಶ ತಂಡ ಮಹ್ಮದುಲ್ಲಾ ಅವರನ್ನು ಆಡುವ ಹನ್ನೊಂದರ ಬಳಗದಿಂದ ಹೊರಗಿಟ್ಟಿತ್ತು. ಆದರೆ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಆಡಲು ಅವಕಾಶ ಪಡೆದಿದ್ದ ಅವರು ಈ ಪಂದ್ಯದಲ್ಲಿ 4 ರನ್ ಕಲೆಹಾಕಿದ್ದರು. ಇದಾದ ನಂತರ, ಮಳೆಯಿಂದಾಗಿ ಪಾಕಿಸ್ತಾನ ವಿರುದ್ಧದ ಪಂದ್ಯ ರದ್ದಾಗಿತ್ತು.

ಮಹಮದುಲ್ಲಾ ಅವರ ವೃತ್ತಿಜೀವನ

ಮಹಮದುಲ್ಲಾ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ 50 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 33.49 ಸರಾಸರಿಯಲ್ಲಿ 2914 ರನ್ ಗಳಿಸಿದ್ದಾರೆ. ಇದರಲ್ಲಿ 5 ಶತಕಗಳು ಮತ್ತು 16 ಅರ್ಧಶತಕಗಳು ಸೇರಿವೆ. ಇಷ್ಟೇ ಅಲ್ಲ, ಬೌಲಿಂಗ್‌ನಲ್ಲಿಯೂ ಕೊಡುಗೆ ನೀಡಿರುವ ಅವರು 43 ವಿಕೆಟ್‌ಗಳನ್ನು ಪಡೆದಿದ್ದಾರೆ. ಏಕದಿನ ಮಾದರಿಯಲ್ಲಿ 239 ಪಂದ್ಯಗಳನ್ನು ಆಡಿರುವ ಮಹ್ಮದುಲ್ಲಾ, 36.46 ಸರಾಸರಿಯಲ್ಲಿ 5689 ರನ್ ಗಳಿಸಿದ್ದಾರೆ ಮತ್ತು 82 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದಲ್ಲದೆ, 141 ಟಿ20 ಪಂದ್ಯಗಳಲ್ಲಿ 23.50 ಸರಾಸರಿ ಮತ್ತು 117 ಸ್ಟ್ರೈಕ್ ರೇಟ್‌ನಲ್ಲಿ 2444 ರನ್ ಗಳಿಸಿರುವ ಮಹಮದುಲ್ಲಾ ಬೌಲಿಂಗ್‌ನಲ್ಲಿ 41 ವಿಕೆಟ್‌ಗಳನ್ನು ಪಡೆದಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ