IPL 2025: ‘ನನಗೆ ಅವಕಾಶ ಸಿಕ್ಕರೆ’..; ಐಪಿಎಲ್ನ ಅದೊಂದು ನಿಯಮದ ಬಗ್ಗೆ ಸಂಜು ಅಸಮಾಧಾನ
IPL 2025: ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಅವರು ಐಪಿಎಲ್ ಮೆಗಾ ಹರಾಜಿನ ನಿಯಮಗಳ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೆಗಾ ಹರಾಜಿನಲ್ಲಿ ಜೋಸ್ ಬಟ್ಲರ್ ಅವರನ್ನು ಬಿಡುಗಡೆ ಮಾಡಬೇಕಾದ ಅನಿವಾರ್ಯತೆ ಮತ್ತು ಆ ನಿಯಮದಿಂದ ಉಂಟಾಗುವ ವೈಯಕ್ತಿಕ ಸಂಬಂಧಗಳ ನಷ್ಟದ ಬಗ್ಗೆ ಅವರು ತೀವ್ರ ಬೇಸರ ಹೊರಹಾಕಿದ್ದಾರೆ.

ಐಪಿಎಲ್ (IPL 2025) ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಈಗಾಗಲೇ ಎಲ್ಲಾ ತಂಡಗಳು ಕೂಡ ಅಭ್ಯಾಸದಲ್ಲಿ ನಿರತವಾಗಿವೆ. ಈ ನಡುವೆ ಪ್ರಾಯೋಜಕತ್ವದ ಹಕ್ಕನ್ನು ಖರೀದಿಸಿರುವ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯೊಂದಿಗೆ ಮಾತನಾಡಿರುವ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ (Sanju Samson) ಐಪಿಎಲ್ನ ಅದೊಂದು ನಿಯಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಬಹಳ ವರ್ಷಗಳಿಂದ ತಂಡದ ಬ್ಯಾಟಿಂಗ್ ಜೀವಾಳ ಎನಿಸಿಕೊಂಡಿದ್ದ ಜೋಸ್ ಬಟ್ಲರ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲು ಸಾಧ್ಯವಾಗದ ಬಗ್ಗೆಯೂ ಬೇಸರ ಹೊರಹಾಕಿದ್ದಾರೆ.
ಜೋಸ್ ಬಟ್ಲರ್ ಬಗ್ಗೆ ಸಂಜು ಮಾತು
ವಾಸ್ತವವಾಗಿ ಈ ಬಾರಿಯ ಐಪಿಎಲ್ಗೂ ಮುನ್ನ ಮೆಗಾ ಹರಾಜು ನಡೆದಿತ್ತು. ಹೀಗಾಗಿ ಮೆಗಾ ಹರಾಜಿಗೂ ಮುನ್ನ ತಂಡದಲ್ಲಿ ಕೇವಲ ಆರು ಆಟಗಾರರು ಉಳಿಸಿಕೊಂಡು ಉಳಿದವರನ್ನು ತಂಡದಿಂದ ಬಿಡುಗಡೆ ಮಾಡಲಾಗಿತ್ತು. ಆ ಪ್ರಕಾರ ರಾಜಸ್ಥಾನ್ ರಾಯಲ್ಸ್ ತಂಡದಿಂದ ಇಂಗ್ಲೆಂಡ್ನ ಸ್ಫೋಟಕ ಬ್ಯಾಟರ್ ಜೋಸ್ ಬಟ್ಲರ್ ಅವರನ್ನು ಬಿಡುಗಡೆ ಮಾಡಲಾಗಿತ್ತು. ಆ ಬಳಿಕ ಅವರನ್ನು ಮೆಗಾ ಹರಾಜಿನಲ್ಲೂ ಖರೀದಿಸಲು ಸಾಧ್ಯವಾಗಲಿಲ್ಲ. ಇದೀಗ ಈ ಬಗ್ಗೆ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಐಪಿಎಲ್ 2025 ರ ಮೆಗಾ ಹರಾಜಿಗೂ ಮುನ್ನ ಜೋಸ್ ಬಟ್ಲರ್ ಅವರನ್ನು ಬಿಡುಗಡೆ ಮಾಡುವ ನಿರ್ಧಾರ ತುಂಬಾ ಕಷ್ಟಕರವಾಗಿತ್ತು ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ.
Sanju Samson opens up about his deep friendship with Jos Buttler and the emotional decision to part ways at Rajasthan Royals.
Watch Superstars full episode Ft. Sanju Samson here 👉 👉 https://t.co/bAjavaPXga#IPLonJioStar 👉 Tata IPL 2025 | Starts 22nd March, 6:30 PM | LIVE on… pic.twitter.com/0NboNCePEE
— Star Sports (@StarSportsIndia) March 12, 2025
ಅವರು ನನಗೆ ಅಣ್ಣನಂತೆ
ಮೆಗಾ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ಆರು ಆಟಗಾರರನ್ನು ಉಳಿಸಿಕೊಂಡಿತ್ತು. ಹಾಗಾಗಿ, ನಮ್ಮ ಬಳಿ ಕಡಿಮೆ ಹಣ ಉಳಿದಿತ್ತು. 6 ಆಟಗಾರರನ್ನು ಉಳಿಸಿಕೊಂಡಿದ್ದ ಕಾರಣ ನಮಗೆ ಆರ್‌ಟಿಎಂ ಕಾರ್ಡ್ ಬಳಸಲು ಸಹ ಸಾಧ್ಯವಾಗಲಿಲ್ಲ. ಗುಜರಾತ್ ಜೈಂಟ್ಸ್ ಅವರನ್ನು ಹರಾಜಿನಲ್ಲಿ ಬಿಡ್ ಮಾಡಿ ತಂಡಕ್ಕೆ ಸೇರಿಸಿಕೊಂಡಿತು. ಜೋಸ್ ನನ್ನ ಆತ್ಮೀಯ ಸ್ನೇಹಿತರಲ್ಲಿ ಒಬ್ಬರು. ನಾವು ಏಳು ವರ್ಷಗಳ ಕಾಲ ಒಟ್ಟಿಗೆ ಆಡಿದ್ದೇವೆ ಮತ್ತು ನಮ್ಮ ನಡುವೆ ಉತ್ತಮ ಬ್ಯಾಟಿಂಗ್ ಪಾಲುದಾರಿಕೆಯೂ ಇತ್ತು. ಅವರು ನನಗೆ ಅಣ್ಣನಂತೆ. ನನಗೆ ಏನಾದರೂ ಸಮಸ್ಯೆ ಬಂದಾಗಲೆಲ್ಲಾ ಅವರ ಸಲಹೆ ಪಡೆಯುತ್ತಿದ್ದೆ. ನಾನು ನಾಯಕನಾದಾಗ, ಅವರು ಉಪನಾಯಕರಾಗಿದ್ದರು. ಅವರು ನನಗೆ ಉತ್ತಮ ನಾಯಕನಾಗಲು ತುಂಬಾ ಸಹಾಯ ಮಾಡಿದರು.
ಇದನ್ನೂ ಓದಿ: IPL 2025: ಲಕ್ಷ ಮುಟ್ಟಿದ ಚೆನ್ನೈ vs ಮುಂಬೈ ಪಂದ್ಯದ ಟಿಕೆಟ್ ಬೆಲೆ..!
ನನಗೆ ಅವಕಾಶ ಸಿಕ್ಕಿದ್ದರೆ
ಇಂಗ್ಲೆಂಡ್ ವಿರುದ್ಧದ ಸರಣಿಯ ಸಮಯದಲ್ಲಿ ನಾನು ಜೊಸ್ ಜೊತೆ ರಾಜಸ್ಥಾನ್ ತಂಡದಿಂದ ಬಿಡುಗಡೆ ಮಾಡಿದ ಬಗ್ಗೆ ಮಾತನಾಡಿದೆ. ತಂಡದಿಂದ ಬಿಡುಗಡೆ ಮಾಡುವ ನಿರ್ಧಾರದಿಂದ ಅವರು ಇನ್ನೂ ಚೇತರಿಸಿಕೊಂಡಿಲ್ಲ ಎಂದೂ ಜೊಸ್ ನನ್ನ ಬಳಿ ಹೇಳಿದರು. ಐಪಿಎಲ್‌ನಲ್ಲಿ ಒಂದು ವಿಷಯವನ್ನು ಬದಲಾಯಿಸಲು ನನಗೆ ಅವಕಾಶ ಸಿಕ್ಕಿದ್ದರೆ, ಪ್ರತಿ ಮೂರು ವರ್ಷಗಳಿಗೊಮ್ಮೆ ಆಟಗಾರರನ್ನು ಬಿಡುಗಡೆ ಮಾಡುವ ನಿಯಮವನ್ನು ನಾನು ಬದಲಾಯಿಸುತ್ತೇನೆ. ಈ ನಿಯಮದಿಂದ ನೀವು ವೈಯಕ್ತಿಕ ಮಟ್ಟದಲ್ಲಿ ವರ್ಷಗಳಿಂದ ನಿರ್ಮಿಸಲಾದ ಸಂಬಂಧವನ್ನು ಕಳೆದುಕೊಳ್ಳುತ್ತೀರಿ. ಜೋಸ್ ನಮ್ಮ ಕುಟುಂಬದ ಭಾಗವಾಗಿದ್ದರು. ಆದರೆ ಆ ನಿಯಮದಿಂದಾಗಿ ನಾವು ಅವರನ್ನು ಕಳೆದುಕೊಳ್ಳಬೇಕಾಯಿತು ಎಂದು ಸಂಜು ಸ್ಯಾಮ್ಸನ್ ಭಾವುಕರಾಗಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:57 pm, Wed, 12 March 25