ಬೂಮ್ ಬೂಮ್… 4116 ಎಸೆತಗಳಲ್ಲಿ ಸಿಕ್ಸ್ ಹೊಡೆಸಿಕೊಳ್ಳದ ಬುಮ್ರಾ
India vs Australia: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 4ನೇ ಪಂದ್ಯವು ಡಿಸೆಂಬರ್ 26 ರಿಂದ ಶುರುವಾಗಲಿದೆ. ಮೆಲ್ಬೋರ್ನ್ನ ಎಂಸಿಜಿ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಬುಮ್ರಾ ಓವರ್ನಲ್ಲಿ ಯಾರು ಸಿಕ್ಸ್ ಬಾರಿಸುತ್ತಾರೆ ಎಂಬುದೇ ಈಗ ಕುತೂಹಲ. ಏಕೆಂದರೆ ಜಸ್ಪ್ರೀತ್ ಓವರ್ನಲ್ಲಿ ಸಿಕ್ಸ್ ಮೂಡಿಬಂದು ಬರೋಬ್ಬರಿ 3 ವರ್ಷಗಳೇ ಕಳೆದಿವೆ.
ಟೀಮ್ ಇಂಡಿಯಾದ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ಆಸ್ಟ್ರೇಲಿಯಾ ಅಂಗಳದಲ್ಲಿ ಕರಾರುವಾಕ್ ದಾಳಿ ಸಂಘಟಿಸುತ್ತಿದ್ದಾರೆ. ಅದರಲ್ಲೂ ಕಳೆದ ಮೂರು ಪಂದ್ಯಗಳಲ್ಲೂ ಆಸ್ಟ್ರೇಲಿಯಾ ಬ್ಯಾಟರ್ಗಳನ್ನು ಇನ್ನಿಲ್ಲದಂತೆ ಕಾಡಿ ಒಟ್ಟು 21 ವಿಕೆಟ್ ಕಬಳಿಸಿದ್ದಾರೆ. ಅದು ಕೂಡ 10.90 ಸರಾಸರಿಯಲ್ಲಿ ಎಂಬುದು ವಿಶೇಷ.
ಇತ್ತ ಜಸ್ಪ್ರೀತ್ ಬುಮ್ರಾ ಅವರ ನಿಖರ ದಾಳಿಯೇ ಈಗ ಆಸ್ಟ್ರೇಲಿಯನ್ನರ ಚಿಂತೆಗೆ ಕಾರಣವಾಗಿದೆ. ಏಕೆಂದರೆ ಬುಮ್ರಾ ಬೌಲಿಂಗ್ನಲ್ಲಿ ರನ್ಗಳಿಸುವುದಿರಲಿ. ಕ್ರೀಸ್ ಕಚ್ಚಿ ನಿಲ್ಲುವುದು ಕೂಡ ಕಷ್ಟಕರವಾಗುತ್ತಿದೆ. ಅದರಲ್ಲೂ ಬುಮ್ರಾ ಬೌಲಿಂಗ್ನಲ್ಲಿ ಬೌಂಡರಿಗಳು ಮೂಡಿಬರುತ್ತಿರುವುದು ಅಪರೂಪವಾಗಿದೆ. ಇನ್ನು ಸಿಕ್ಸ್ಗಳ ಮಾತೇ ಇಲ್ಲ. ಏಕೆಂದರೆ ಜಸ್ಪ್ರೀತ್ ಟೆಸ್ಟ್ನಲ್ಲಿ ಕೊನೆಯ ಬಾರಿಗೆ ಸಿಕ್ಸ್ ಹೊಡೆಸಿಕೊಂಡದ್ದು 2021 ರಲ್ಲಿ ಎಂದರೆ ನಂಬಲೇಬೇಕು.
2021 ರಲ್ಲಿ ಸಿಡ್ನಿಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಬುಮ್ರಾ ಎಸೆತದಲ್ಲಿ ಆಸ್ಟ್ರೇಲಿಯಾ ಬ್ಯಾಟರ್ ಕ್ಯಾಮರೋನ್ ಗ್ರೀನ್ ಸಿಕ್ಸ್ ಬಾರಿಸಿದ್ದರು. ಇದುವೇ ಕೊನೆ. ಆಂದಿನಿಂದ ಈವರೆಗೆ ಟೆಸ್ಟ್ನಲ್ಲಿ ಜಸ್ಪ್ರೀತ್ ಸಿಕ್ಸ್ ಹೊಡೆಸಿಕೊಳ್ಳದೇ ಸತತ ಬೌಲಿಂಗ್ ಮಾಡಿದ್ದಾರೆ.
ಅಂದರೆ ಸಿಕ್ಸ್ ಚಚ್ಚಿಸಿಕೊಳ್ಳದೇ ಜಸ್ಪ್ರೀತ್ ಬುಮ್ರಾ ಬರೋಬ್ಬರಿ 4116 ಎಸೆತಗಳನ್ನು ಎಸೆದಿದ್ದಾರೆ. ಇದೀಗ ಟೆಸ್ಟ್ನಲ್ಲಿ ಬುಮ್ರಾ ಎಸೆತದಲ್ಲಿ ಸಿಕ್ಸ್ ಮೂಡಿಬಂದು 47 ತಿಂಗಳುಗಳೇ ಕಳೆದಿವೆ. ಈ ಮೂಲಕ ಟೆಸ್ಟ್ನಲ್ಲಿ ಸಿಕ್ಸ್ ಹೊಡೆಸಿಕೊಳ್ಳದೇ ಅತೀ ಹೆಚ್ಚು ಎಸೆತಗಳನ್ನು ಎಸೆದ ದಾಖಲೆ ಬರೆಯುವತ್ತ ಟೀಮ್ ಇಂಡಿಯಾ ವೇಗಿ ದಾಪುಗಾಲಿಟ್ಟಿದ್ದಾರೆ.
ಪ್ರಸ್ತುತ ಈ ದಾಖಲೆ ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ಹೆಸರಿನಲ್ಲಿದೆ. ಸ್ಟಾರ್ಕ್ ಸತತ 5585 ಎಸೆತಗಳಲ್ಲಿ ಸಿಕ್ಸ್ ಹೊಡೆಸಿಕೊಂಡಿರಲಿಲ್ಲ. ಇದೀಗ 4116 ಎಸೆತಗಳೊಂದಿಗೆ ಜಸ್ಪ್ರೀತ್ ಬುಮ್ರಾ ಈ ವಿಶೇಷ ದಾಖಲೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ: ಭಾರತ vs ಪಾಕಿಸ್ತಾನ್ ಮುಖಾಮುಖಿಗೆ ಮುಹೂರ್ತ ಫಿಕ್ಸ್
ಇನ್ನು ಟೆಸ್ಟ್ ಕ್ರಿಕೆಟ್ನಲ್ಲಿ ಬುಮ್ರಾಗೆ ಸಿಕ್ಸ್ ಹೊಡೆದಿರುವುದು ಕೇವಲ 7 ಬ್ಯಾಟರ್ಗಳು ಮಾತ್ರ. ಅವರೆಂದರೆ….ಜೋಸ್ ಬಟ್ಲರ್ (2 ಬಾರಿ), ಎಬಿ ಡಿವಿಲಿಯರ್ಸ್, ಆದಿಲ್ ರಶೀದ್, ಮೊಯೀನ್ ಅಲಿ, ನಾಥನ್ ಲಿಯಾನ್ ಮತ್ತು ಕ್ಯಾಮರೋನ್ ಗ್ರೀನ್.