ಜಯ್ ಶಾ ಐಸಿಸಿ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ನಂತರ ಖಾಲಿಯಾಗಿದ್ದ ಬಿಸಿಸಿಐ ಕಾರ್ಯದರ್ಶಿ ಸ್ಥಾನಕ್ಕೆ ಹಂಗಾಮಿ ಕಾರ್ಯದರ್ಶಿಯನ್ನು ನೇಮಕ ಮಾಡಲಾಗಿದೆ. ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ತಮ್ಮ ಸಾಂವಿಧಾನಿಕ ಅಧಿಕಾರವನ್ನು ಬಳಸಿಕೊಂಡು ದೇವ್‌ಜಿತ್ ಸೈಕಿಯಾ ಅವರನ್ನು ಹಂಗಾಮಿ ಕಾರ್ಯದರ್ಶಿಯಾಗಿ ನೇಮಿಸಿದ್ದಾರೆ. ಇದೀಗ ಜಯ್ ಶಾ ಸ್ಥಾನಕ್ಕೆ ಬಂದಿರುವ ದೇವ್‌ಜಿತ್ ಸೈಕಿಯಾ ಅವರು ಟೀಂ ಇಂಡಿಯಾ ಪರ ಯಾವುದೇ ಪಂದ್ಯವನ್ನಾಡಿಲ್ಲ. ಆದರೆ ಅವರು ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು, ಅಸ್ಸಾಂ ತಂಡದ ಪರ ರಣಜಿ ಆಡಿದ್ದಾರೆ. ಹಂಗಾಮಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ದೇವ್‌ಜಿತ್ ಸೈಕಿಯಾ ಅವರ ಅಧಿಕಾರಾವಧಿ ಮುಂದಿನ ವರ್ಷದ ಸೆಪ್ಟೆಂಬರ್‌ವರೆಗೆ ಇರಲಿದೆ.
2019 ರಂದು ಬಿಸಿಸಿಐ ಕಾರ್ಯದರ್ಶಿ ಸ್ಥಾನವನ್ನು ಅಲಂಕರಿಸಿದ್ದ ಜಯ್ ಶಾ ಐದು ವರ್ಷಗಳ ಕಾಲ ಈ ಹುದ್ದೆಯನ್ನು ಸಮರ್ಥವಾಗಿ ನಿರ್ವಹಿಸಿದ್ದರು. ಇದೀಗ ಐಸಿಸಿಯ ಅಧ್ಯಕ್ಷರಾಗಿ ಜಯ್ ಶಾ ಅಧಿಕಾರ ಸ್ವೀಕರಿಸಿದ ಕೂಡಲೇ ಬಿಸಿಸಿಐ ಕಾರ್ಯದರ್ಶಿ ಹುದ್ದೆಯನ್ನು ತೊರೆಯಬೇಕಾಯಿತು. ಈ ಸಂದರ್ಭದಲ್ಲಿ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ತಮ್ಮ ಸಾಂವಿಧಾನಿಕ ಅಧಿಕಾರವನ್ನು ಬಳಸಿಕೊಂಡು ದೇವಜಿತ್ ಸೈಕಿಯಾ ಅವರನ್ನು ಈ ಹುದ್ದೆಗೆ ನೇಮಿಸಿದ್ದಾರೆ. ಆದರೆ, ದೇವಜಿತ್ ಸೈಕಿಯಾ ಅವರನ್ನು ಹಂಗಾಮಿ ಕಾರ್ಯದರ್ಶಿಯನ್ನಾಗಿ ಮಾಡಲಾಗಿದ್ದು, ಅವರಿಗೆ ಈ ಹುದ್ದೆಯ ಖಾಯಂ ಜವಾಬ್ದಾರಿ ನೀಡಿಲ್ಲ. ಅವರು ಸೆಪ್ಟೆಂಬರ್ 2025 ರವರೆಗೆ ಅಂದರೆ ಸುಮಾರು 10 ತಿಂಗಳವರೆಗೆ ಬಿಸಿಸಿಐ ಕಾರ್ಯದರ್ಶಿ ಹುದ್ದೆಯನ್ನು ನಿರ್ವಹಿಸಲಿದ್ದಾರೆ. ಇದರೊಂದಿಗೆ ಅವರು ಐಸಿಸಿ ಮಂಡಳಿಯಲ್ಲಿ ಬಿಸಿಸಿಐ ಪ್ರತಿನಿಧಿಯಾಗಲಿದ್ದಾರೆ, ಈ ಜವಾಬ್ದಾರಿಯನ್ನು ಇದುವರೆಗೆ ಜಯ್ ಶಾ ನಿರ್ವಹಿಸುತ್ತಿದ್ದರು.
ಮೇಲೆ ಹೇಳಿದಂತೆ ದೇವಜಿತ್ ಭಾರತದ ಪರ ಕ್ರಿಕೆಟ್ ಆಡಿಲ್ಲ, ಆದರೆ ಅವರು ಪ್ರಥಮ ದರ್ಜೆ ಕ್ರಿಕೆಟಿಗನಾಗಿ ಅಸ್ಸಾಂ ಪರ ರಣಜಿ ಟ್ರೋಫಿ ಕ್ರಿಕೆಟ್ ಆಡಿದ್ದಾರೆ. ಅಲ್ಲಿ ಅವರು ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಪಾತ್ರವನ್ನು ನಿರ್ವಹಿಸಿದ್ದರು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದ ದೇವಜಿತ್ ಪ್ರಸ್ತುತ ಬಿಸಿಸಿಐನಲ್ಲಿ ಜಂಟಿ ಕಾರ್ಯದರ್ಶಿಯಾಗಿದ್ದಾರೆ. ದೇವ್‌ಜಿತ್ ಕ್ರಿಕೆಟ್ ನಿರ್ವಾಹಕರಲ್ಲದೆ ವೃತ್ತಿಯಲ್ಲಿ ವಕೀಲರೂ ಆಗಿದ್ದಾರೆ. ಬಿಸಿಸಿಐಗೆ ಸೇರುವ ಮುನ್ನ ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್‌ನ ಕಾರ್ಯದರ್ಶಿಯಾಗಿಯೂ ನೇಮಕಗೊಂಡಿದ್ದರು.
ಬಿಸಿಸಿಐ ಕಾರ್ಯದರ್ಶಿ ಹುದ್ದೆಯಲ್ಲಿದ್ದಾಗ, ಜಯ್ ಶಾ ಅವರು ಕ್ರಿಕೆಟ್ ಹಿತಾಸಕ್ತಿಗಾಗಿ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದರು. ಇದೀಗ ವಿಶ್ವ ಕ್ರಿಕೆಟ್ ಮುನ್ನಡೆಸಲಿರುವ ಜಯ್ ಶಾ ಇದೇ ಡಿಸೆಂಬರ್ 1 ರಂದು ಈ ಹುದ್ದೆಗೇರಿದ್ದರು. ಐಸಿಸಿಯ 16ನೇ ಮುಖ್ಯಸ್ಥರನ್ನಾಗಿ ನೇಮಕಗೊಂಡಿರುವ ಜಯ್ ಶಾ ಈ ಹುದ್ದೆಗೇರಿದ ಅತ್ಯಂತ ಕಿರಿಯ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇದಲ್ಲದೆ ಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಐದನೇ ಭಾರತೀಯ ಎಂಬ ಹೆಗ್ಗಳಿಕೆಗೂ ಜಯ್ ಶಾ ಪಾತ್ರರಾಗಿದ್ದಾರೆ. ಜಯ್ ಶಾ ಅವರಿಗೂ ಮುನ್ನ ಜಗಮೋಹನ್ ದಾಲ್ಮಿಯಾ, ಶರದ್ ಪವಾರ್, ಎನ್. ಶ್ರೀನಿವಾಸನ್, ಶಶಾಂಕ್ ಮನೋಹರ್ ಈ ಹುದ್ದೆಯನ್ನು ನಿರ್ವಹಿಸಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:17 pm, Sun, 8 December 24